ಬದುಕು ಜಟಕಾ ಬಂಡಿಗೆ ಮರಳಿದ ಮಾಳವಿಕಾ
ಜೀ ಕನ್ನಡ ವಾಹಿನಿಯಲ್ಲಿ ಈ ಹಿಂದೆ ಅಪಾರ ಜನಪ್ರಿಯತೆಗಳಿಸಿಕೊಂಡಿದ್ದ 'ಬದುಕು ಜಟಕಾಬಂಡಿ' ರಿಯಾಲಿಟಿ ಶೋ ಇದೀಗ ಪುನಃ ಪ್ರಾರಂಭವಾಗಲಿದೆ. ನೈಜ ಘಟನೆಗಳನ್ನು ಆಧರಿಸಿದ ಈ ಕಾರ್ಯಕ್ರಮ ಸೋಮವಾರ ದಿನಾಂಕ 03.01.11 ರಿಂದ ಮಧ್ಯಾಹ್ನ 2.30 ಗಂಟೆಗೆ ಪ್ರಸಾರ ಪ್ರಾರಂಭಿಸಿದೆ.
'ಬದುಕು ಜಟಕಾಬಂಡಿ' ಇದೀಗ ಹೊಸತನದೊಂದಿಗೆ ತನ್ನ ವೀಕ್ಷಕರಿಗೆ ತಲುಪುತ್ತಿದ್ದು ಖ್ಯಾತ ನಟಿ ಮಾಳವಿಕಾ ಈ ರಿಯಾಲಿಟಿ ಶೋನ ನಿರೂಪಣೆ ಮಾಡುತ್ತಿದ್ದಾರೆ. ವೈಯಕ್ತಿಕ, ಸಾಮಾಜಿಕ, ನಾಗರಿಕ, ರಾಜಕೀಯ ಹಾಗೂ ಮುಂತಾದ ಸಮಸ್ಯೆಗಳ ಮೇಲೆ ಈ ಕಾರ್ಯಕ್ರಮ ಬೆಳಕು ಚೆಲ್ಲುತ್ತಿದೆ.
ಈ ಕಾರ್ಯಕ್ರಮದಲ್ಲಿ ಯಾವುದೇ ವಿಧದ ಸಮಸ್ಯೆಗಳಿಗೆ ವೈಜ್ಞಾನಿಕವಾದ ಪರಿಹಾರ ದೊರಕಿಸುವ ಪ್ರಯತ್ನ ಮಾಡಲಾಗಿದೆ ಎಂದು ಕಾರ್ಯಕ್ರಮ ನಿರ್ವಾಹಕ ಶ್ರೇಯಸ್ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ಹೆಸರಾಂತ ಕಾನೂನು ಸಲಹೆಗಾರರು, ವೈದ್ಯರು, ಚಳುವಳಿಗಾರರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಅತಿಥಿಗಳಾಗಿ ಆಗಮಿಸಲಿದ್ದಾರೆ.
ಈ ಹಿಂದೆಯೂ ಸಹ 'ಬದುಕು ಜಟಕಾಬಂಡಿ' ಕಾರ್ಯಕ್ರಮ ರಾಜ್ಯದ ವಿವಿಧ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಅನೇಕ ಸಮಸ್ಯೆಗಳನ್ನು ಪರಿಹರಿಸಿತ್ತು. ಬಹುಮುಖ್ಯವಾಗಿ ನೂರಾರು ಒಡೆದ ಸಂಸಾರಗಳನ್ನು ಒಂದುಗೂಡಿಸುವಲ್ಲಿ ಈ ಕಾರ್ಯಕ್ರಮ ಪ್ರಮುಖ ಪಾತ್ರವಹಿಸಿತ್ತು. ಪ್ರಚಲಿತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹೊಸ ಟ್ರೆಂಡ್ ಶುರು ಮಾಡಿದ್ದ 'ಬದುಕು ಜಟಕಾಬಂಡಿ' ರಾಜ್ಯದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಸ್ಥಳದಲ್ಲಿಯೇ ಪರಿಹಾರ ದೊರಕಿಸಿಕೊಟ್ಟಿತ್ತು.
ಈ ಸರದಿಯಲ್ಲಿಯೂ ಸಹ 'ಬದುಕು ಜಟಕಾಬಂಡಿ' ವಿವಿಧ ಸ್ಥಳಗಳಿಗೆ ಭೇಟಿ ನೀಡುವ ಉದ್ದೇಶಹೊಂದಿದ್ದು, ತೀವ್ರ ಸಮಸ್ಯೆಗಳಿದ್ದರೆ ಅದನ್ನು 'ಬದುಕು ಜಟಕಾಬಂಡಿ' ತಂಡದ ಗಮನಕ್ಕೆ ವೀಕ್ಷಕರು ತರಬಹುದು. ವೀಕ್ಷಕರು ಸಂಪರ್ಕಿಸಬೇಕಾದ ಸಂಖ್ಯೆ: 91 93436 37842. [ರಿಯಾಲಿಟಿ ಶೋ]


Click it and Unblock the Notifications











