ಟಿವಿ9 ಕ್ಯಾಮರಾ ಕಣ್ಣೆದುರೇ ಮಹಡಿಯಿಂದ ಜಿಗಿದ ಪಾಗಲ್ ಪ್ರೇಮಿ

ಆಸ್ಟಿನ್ ಟೌನಿನ ಜಾಫರ್ ಈ ದುಸ್ಸಾಹಸ ಮಾಡಿದ ಯುವಕ. ಮಹಡಿಯಿಂದ ಹಾರಿದ ಪರಿಣಾಮ ಆತ ತೀವ್ರವಾಗಿ ಗಾಯಗೊಂಡಿದ್ದಾನೆ. ಟಿವಿ9 ನಲ್ಲಿ ಈ ದೃಶ್ಯ ನೇರವಾಗಿ ಪ್ರಸಾರವಾಗಿದೆ.
ಎಂಜಿನಿಯರ್ ಪದವಿ ಓದುತ್ತಿದ್ದ ಜಾಫರ್, ಫ್ರೇಜರ್ ಟೌನಿನ ಯುವತಿಯೊಬ್ಬಳನ್ನು ಗಾಢವಾಗಿ ಪ್ರೀತಿಸುತ್ತಿದ್ದ. ಆದರೆ ಪ್ರೇಮ ಏಕಮುಖವಾಗಿತ್ತು. ಇದರಿಂದ ಮಾನಸಿಕ ಕ್ಷೋಭೆಗೀಡಾಗಿದ್ದ ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ 10 ಗಂಟೆ ವೇಳೆಗೆ ಈ ಕಟ್ಟಡದ ಮಹಡಿಯೇರಿದ ಜಾಫರ್ ಹುಚ್ಚನಂತೆ ಅಲ್ಲೆಲ್ಲ ಓಡಾಡತೊಡಗಿದ. ಸುಮಾರು ಎರಡು ಗಂಟೆ ಕಾಲ ಈ ನಾಟಕ ನಡೆದಿದೆ.
ಆ ವೇಳೆಗೆ ಅಗ್ನಿಶಾಮಕ ದಳ, ಕಬ್ಬನ್ ಪಾರ್ಕ್ ಪೊಲೀಸರು ಮತ್ತು ಸಾರ್ವಜನಿಕರು ಸ್ಥಳಕ್ಕೆ ಧಾವಿಸಿದ್ದರು. ಇದರಿಂದ ಜಾಫರ್ ಮತ್ತಷ್ಟು ವಿಚಲಿತನಾದ. ಪೊಲೀಸ್ ಪೇದೆಯೊಬ್ಬರು ತನ್ನನ್ನು ಹಿಡಿಯಲು ಬರುತ್ತಿದ್ದಾನೆ ಎಂಬುದನ್ನು ಅರಿತ ಈತ ಮಹಡಿಯಿಂದ ನೇರವಾಗಿ ಹಾರಿದ್ದಾನೆ.
ಇಡೀ ಘಟನಾವಳಿಯ ದೃಶ್ಯಗಳು ಟಿವಿ9 ಚಾನೆಲಿನಲ್ಲಿ ಪ್ರಸಾರವಾಗುತ್ತಿದೆ. ನೀಲಿ ಬಣ್ಣದ ಜೀನ್ಸ್ ಮತ್ತು ಕೆಂಪು ಬಿಳಿ ಮಿಶ್ರಿತ ಟಿ ಶರ್ಟ್ ಧರಿಸಿದ್ದ ಜಾಫರ್ ಕೆಳಗೆ ಬಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.


Click it and Unblock the Notifications











