ಬಿಗ್ ಬಾಸ್ 5ರಲ್ಲೂ ಸಲ್ಮಾನ್ ಮೋಡಿ?
ವಿವಾದದ ಗೂಡಾಗಿದ್ದ ಬಿಗ್ ಬಾಸ್ 4 ನ ರಾಣಿಯಾಗಿ ಶ್ವೇತಾ ತಿವಾರಿ ಆಯ್ಕೆಯಾಗಿ 1 ಕೋಟಿ ರು ಹಾಗೂ ಐಷಾರಾಮಿ ಕಾರು ಗಳಿಸಿದ್ದು ಈಗ ಇತಿಹಾಸ. ಅನೇಕ ಅಡೆತಡೆಗಳ ನಡುವೆ ಷೋ ಅನ್ನು ನಡೆಸಿಕೊಂಡು ಬಂದ ಸಲ್ಮಾನ್ ಗೆ ಎಲ್ಲರೂ ಬಹುಪರಾಕ್ ಎಂದಿದ್ದಾರೆ. ಬಿಗ್ ಬಾಸ್ 5 ರಲ್ಲೂ ಸಲ್ಮಾನ್ ಖಾನ್ ಹೋಸ್ಟ್ ಆಗಿ ಮುಂದುವರೆಯಲಿದ್ದಾರೆ ಎಂದು ಖ್ಯಾತ ಜ್ಯೋತಿಷಿ ಬೇಜಾನ್ ದಾರುವಾಲಾ ಭವಿಷ್ಯ ನುಡಿದಿದ್ದಾರೆ.
ಬಿಗ್ ಬಾಸ್ 4 ಯಶಸ್ಸಿನಿಂದ ಬಾಲಿವುಡ್ ನ ಬ್ಯಾಡ್ ಬಾಯ್ ಸಲ್ಮಾನ್ ಕೂಡಾ ಸಹಜವಾಗಿ ಖುಷಿಯಾಗಿದ್ದಾರೆ. ದಸ್ ಕ ದಮ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಸಲ್ಮಾನ್, ಬಿಗ್ ಬಾಸ್ ನಲ್ಲಿ ಫ್ಲಾಪ್ ಆಗುತ್ತಾರೆ ಎಂದು ಎಲ್ಲರು ಟೀಕಿಸಿದ್ದರು. ವೇದಿಕೆ ಮೇಲೆ ನಿಂತಾಗ ಆತನಿಗೆ ಮೈ ಮೇಲೆ ಹಿಡಿತವೇ ಇರುವುದಿಲ್ಲ. ಬೇಕಾಬಿಟ್ಟಿ ಕುಣಿಯುವುದು, ಸ್ಪರ್ಧಿಗಳನ್ನು ಹಾಸ್ಯ ಮಾಡಿ ಕೆಣಕುವುದು ಆತನ ಮಾಮೂಲಿ ವಿದ್ಯೆ ಎಂದೆಲ್ಲಾ ಟೀಕಿಸಲಾಗಿತ್ತು.
ವಿಡಿಯೋ: ಕೋಟಿ ಗೆದ್ದ ಕಿರುತೆರೆ ತಾರೆ ಶ್ವೇತಾ
ಆದರೆ, ಟೀಕಾಕಾರರ ಬಾಯಿಗೆ ಬೀಗ ಜಡಿದಿರುವ ಸಲ್ಲೂ ಮಿಯಾ, ಬಿಗ್ ಬಾಸ್ 5ನೇ ಆವೃತ್ತಿಯಲ್ಲೂ ಕಾಣಿಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ 4 ರಲ್ಲಿ ನಡೆದ ಕಲಹ, ಕೋಲಾಹಲದಿಂದ ಸಲ್ಮಾನ್ ಬೇಸತ್ತಿದ್ದಾರೆ. ಇನ್ಮುಂದೆ ಬಿಗ್ ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ಸುದ್ದಿ ಹಬ್ಬಿತ್ತು.
ಬಿಗ್ ಬಾಸ್ ಎಂಬ ವಿವಾದದ ಮನೆ: ಲೋನಾವಾಲದ ಬಂಗಲೆಯಲ್ಲಿ ನಡೆದ ಬಿಗ್ ಬಾಸ್ 4ನೇ ಆವೃತ್ತಿಯ ರಿಯಾಲಿಟಿ ಷೋನಲ್ಲಿ ಕೊನೆ ಹಂತದಲ್ಲಿ ಉಳಿದವರು ಶ್ವೇತಾ ತಿವಾರಿ, ಅಶ್ಮಿತ್ ಪಟೇಲ್, ಡಾಲಿ ಬಿಂದ್ರಾ ಹಾಗೂ ಗ್ರೇಟ್ ಖಲಿ ಇದಕ್ಕೂ ಮುನ್ನ ವೋಟ್ ಔಟ್ ಆಗಿದ್ದವರು ವೀಣಾ ಮಲ್ಲಿಕ್, ಆಂಚಲ್ ಕುಮಾರ್, ಹೃಷಮ್ತ್ ಗೋಸ್ವಾಮಿ, ಮನೋಜ್ ತಿವಾರಿ, ಬೇಗಂ ನಾವಾಜಿಶ್ ಅಲಿ ಹಾಗೂ ಸಾರಾ ಖಾನ್.
ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್'ಮೇಲೆ ಶಿವಸೇನೆಯ ವಕ್ರದೃಷ್ಟಿ ಬಿದ್ದಿತ್ತು. ಹಾಲಿವುಡ್ ನ ಬಾಂಬ್‌ಶೆಲ್ ಪಮೇಲಾ ಅಂಡರ್‌ಸನ್ ಪ್ರವೇಶ ಹಾಗೂ ಆಕೆಯ ದಿರಿಸಿನ ಬಗ್ಗೆ ಕೂಡಾ ಅಪಸ್ವರ ಕೇಳಿ ಬಂದಿತ್ತು. ಬಾಸ್ ಮನೆಯಲ್ಲಿನ ಮಿತಿ ಮೀರಿದ ಪ್ರೀತಿ, ರೀಲೋ, ರಿಯಲ್ಲೋ ಎಂದು ಕನ್ ಫ್ಯೂಸ್ ಆಗುವಂತೆ ಮದುವೆ, ಹಬ್ಬ ಆಚರಣೆ, ರೋಮ್ಯಾನ್ಸ್ ಎಲ್ಲವೂ ಆಕ್ಷೇಪಣೆಗೆ ಒಳಪಟ್ಟಿತ್ತು. ಆದರೆ, ಈ ರಿಯಾಲಿಟಿ ಷೋ ನಿಂದ ಕಲರ್ಸ್ ವಾಹಿನಿಯ ಟಿಆರ್ ಪಿ ಗಗನಕ್ಕೇರಿದ್ದಂತೂ ನಿಜ. ಸಲ್ಮಾನ್ ಖಾನ್ ಒಟ್ಟಿನಲ್ಲಿ ಕಿರುತೆರೆಯಲ್ಲಿ ಮತ್ತೊಮ್ಮೆ ಯಶ ಪಡೆದಿದ್ದಾರೆ. [ಬಿಗ್ ಬಾಸ್]


Click it and Unblock the Notifications











