twitter
    For Quick Alerts
    ALLOW NOTIFICATIONS  
    For Daily Alerts

    ನಾಗವಲ್ಲಿ ಮಲ್ಲಿಗೆ 'ಪಂಚರಂಗಿ ಶ್ವೇತಾ' ಸಂದರ್ಶನ

    By * ಶ್ರೀರಾಮ್ ಭಟ್
    |

    ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ '10-30'ಕ್ಕೆ ಪ್ರಸಾರವಾಗುತ್ತಿರುವ, ಫೈನಲ್ ಕಟ್ ಪ್ರೊಡಕ್ಷನ್ ನ, 'ಪಾರ್ವತಿ ಪರಮೇಶ್ವರ' ಧಾರಾವಾಹಿ ಎಲ್ಲೆಲ್ಲೂ ಮನೆಮಾತು. ಅದರಲ್ಲಿ 'ನಾಗವಲ್ಲಿ' ಪಾತ್ರದಲ್ಲಿ ಗಮನಾರ್ಹವಾಗಿ ನಟಿಸಿ ಅತೀ ಕಡಿಮೆ ಅವಧಿಯಲ್ಲಿಯೇ ಪ್ರಸಿದ್ಧರಾಗಿರುವ ನಟಿ ಶ್ವೇತಾ ಎಸ್.

    ಸಿನಿಮಾ ಹಾಗೂ ಸೀರಿಯಲ್ ಎರಡೂ ಕಡೆ ಸಲ್ಲುವ ಈ ಪ್ರತಿಭೆ, ಯೋಗರಾಜ್ ಭಟ್ ನಿರ್ದೇಶನದ 'ಪಂಚರಂಗಿ' ಚಿತ್ರದಲ್ಲಿ 'ಲಕ್ಷ್ಮೀ' ಎಂಬ ಮನೆಗೆಲಸದವಳ ಪಾತ್ರದಲ್ಲಿ ಪ್ರೇಕ್ಷಕರ ಗಮನ ಸೆಳೆದವರು. ಅದರಲ್ಲಿ 'ನೀನಾಸಂ ಸತೀಶ್' ಹಾಗೂ 'ಶ್ವೇತಾ' ಜೋಡಿ ಅದೆಷ್ಟು ಮೋಡಿ ಮಾಡಿದೆಯೆಂದರೆ ಈಗ ಶ್ವೇತಾರನ್ನು ಜನರೆಲ್ಲಾ 'ಪಂಚರಂಗಿ ಶ್ವೇತಾ' ಎಂದೇ ಗುರುತಿಸುತ್ತಾರೆ.

    ಇವರು ಒನ್ ಇಂಡಿಯಾ ಕನ್ನಡಕ್ಕೆ ನೀಡಿದ ವಿಶೇಷ ಸಂದರ್ಶನ ಇಲ್ಲಿದೆ, ಓದಿ...

    ಪ್ರಶ್ನೆ: ನಿಮ್ಮ ಸ್ವಂತ ಊರು, ಮೂಲ ಹೆಸರು, ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ನೀಡಿ......

    ಉತ್ತರ: ನಾನು ಹುಟ್ಟಿ ಬೆಳೆದದ್ದು, ವಿದ್ಯಾಭ್ಯಾಸ ಎಲ್ಲವೂ ಬೆಂಗಳೂರಿನಲ್ಲಿಯೇ.

    ಪ್ರಶ್ನೆ: ಬಣ್ಣದ ಬದುಕಿಗೆ ಬಂದಿದ್ದು ಹೇಗೆ? ನಿಮಗೆ ಈ ಕ್ಷೇತ್ರದಲ್ಲಿ ಯಾರಾದರೂ ಗಾಡ್ ಫಾದರ್?

    ಉತ್ತರ: ನನಗೆ ಮೊದಲಿನಿಂದಲೂ ನಟನೆ ಹಾಗೂ ಕಲೆಗಳ ಬಗ್ಗೆ ಒಲವು, ಮೋಹ ಇತ್ತು. ಟಿ ಎನ್ ಸೀತಾರಾಮ್ ಅವರ 'ಮಿಂಚು' ದಾರಾವಾಹಿಯ ಮೂಲಕ ನನ್ನ ಬಣ್ಣದ ಬದುಕು ಪ್ರಾರಂಭವಾಯ್ತು. ಅದೇನು ಅದೃಷ್ಟವೋ, ಪ್ರತಿಭೆಗೆ ಸಿಕ್ಕ ಬಹುಮಾನವೋ, ಒಟ್ಟಿನಲ್ಲಿ ಒಂದಾದಮೇಲೊಂದು ಅವಕಾಶಗಳು ದೊರೆತವು.

    ಕಾಲದ ಕಡಲು, ಅಗ್ನಿಶಿಖೆ, ಮುಂಬೆಳಗು, ಸುಕನ್ಯಾ, ದಿಬ್ಬಣ, ಮಳೆಬಿಲ್ಲು, ನಾಕುತಂತಿ ಹೀಗೆ ಬಹಳಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿದ್ದೇನೆ. ಸುವರ್ಣ ವಾಹಿನಿಯ ಕ್ರೈಂ ಸಂಬಂಧಿತ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದೇನೆ. ಕಿರುತೆರೆಯ ಬಹಳಷ್ಟು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದೇನೆ.

    2010ರಲ್ಲಿ ಬಿಡುಗಡೆಯಾಗಿದ್ದ ಯೋಗರಾಜ್ ಭಟ್ ನಿರ್ದೇಶನದ 'ಪಂಚರಂಗಿ' ಚಿತ್ರದ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟೆ. ನೀನಾಸಂ ಸತೀಶ್ ಎದುರು ನಟಿಸಿದ 'ಲಕ್ಷ್ಮೀ' ಹೆಸರಿನ ಮನೆಗೆಲಸದವಳ ಆ ಪಾತ್ರ ನನ್ನನ್ನು ಹಿರಿತೆರೆಯ ಪ್ರೇಕ್ಷಕವರ್ಗವೂ ಕೂಡ ಗುರುತಿಸುವಂತೆ ಮಾಡಿದೆ. ನಂತರ ಹಿರಿತೆರೆ ಹಾಗೂ ಕಿರುತೆರೆ ಎರಡರಲ್ಲೂ ಬಂದ ಸಾಕಷ್ಟು ಅವಕಾಶಗಳಲ್ಲಿ ಅಭಿನಯಿಸಿದ್ದೇನೆ.

    ನನಗೆ ಇಲ್ಲಿ 'ಗಾಡ್ ಫಾದರ್' ಅಂತ ಯಾರೂ ಇಲ್ಲ. ಆದರೆ ನನಗೆ ಅವಕಾಶ ಕೊಟ್ಟ ಎಲ್ಲರೂ ನನಗೆ 'ಗಾಡ್ ಫಾದರ್'ಗೆ ಸಮ. ನನಗೆ ಈಗಲೂ ಪ್ರತಿಪಾತ್ರವೂ ಹೊಸತು ಹಾಗೂ ಚಾಲೆಂಜಿಂಗ್ ಅನ್ನಿಸುತ್ತದೆ. ಕ್ಯಾಮರಾ ಎದುರು ನಿಂತಾಗ ಈಗಲೂ ಕೆಲವೊಮ್ಮೆ ಭಯವಾಗುತ್ತದೆ. ಆದರೂ ನಂತರ ಎಲ್ಲರೂ 'ಚೆನ್ನಾಗಿ ನಟಿಸಿದ್ದೀರಾ' ಎಂದಾಗ ಭಯ ಮಾಯವಾಗಿ ಖುಷಿಯ ಅನುಭವವಾಗುತ್ತದೆ.

    ಹೇಳಲೇಬೇಕಾದ ಸಂಗತಿಯೆಂದರೆ, ನನ್ನ ಈ ಎಲ್ಲಾ ಸಾಧನೆಗೆ ಸಪೋರ್ಟ್ ಹಾಗೂ ಸ್ಪೂರ್ತಿಯೆಂದರೆ ನನ್ನ 'ಅಮ್ಮ' ಹಾಗೂ ಪತಿ 'ಮೌನೇಶ್'. ರೀಲ್ ಹಾಗೂ ರಿಯಲ್ ಮಧ್ಯೆ ನಡೆಸಬೇಕಾದ ನನ್ನ ಜೀವನದ ಸಮತೋಲನ ಕಾಯ್ದುಕೊಳ್ಳಲು ಹಾಗೂ ಬಣ್ಣದ ಬದುಕಿನ 'ಸೂಕ್ಷ್ಮ ಸಂಗತಿ'ಗಳನ್ನು ಸರಿಯಾಗಿ ಅರ್ಥೈಸಿಕೊಂಡು ಸದಾ ನನ್ನ ಸಾಧನೆಗೆ, ಒಳಿತಿಗೆ ಬದ್ಧರಾಗಿ ಅವರು ನೀಡುವ ಸಹಕಾರವೇ ನನ್ನ ಪಾಲಿನ ಅಳೆಯಲಾಗದ ಆಸ್ತಿ.

    ಜೊತೆಗೆ ಕಲಾಭಿಮಾನಿಗಳು ಅಥವಾ ಪ್ರೇಕ್ಷಕವೃಂದ ನನಗೆ ಯಾವುದೇ ಗಾಡ್ ಫಾದರ್ ಗಳಿಗಿಂತ ಮಿಗಿಲಾಗಿ ಅವಕಾಶಗಳು ಆತ್ಮವಿಶ್ವಾಸಕ್ಕೆ ಕಾರಣರಾಗಿದ್ದಾರೆ ಎನ್ನಬಹುದು.

    ಈಗ 'ಪಾರ್ವತಿ ಪರಮೇಶ್ವರ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರ 'ನಾಗವಲ್ಲಿ'ಯಾಗಿ ಅಭಿನಯಿಸುತ್ತಿದ್ದೇನೆ. ಸತತ 750 ಸಂಚಿಕೆಗಳನ್ನು ದಾಟಿ ಸಾಗುತ್ತಿರುವ ಈ ಧಾರಾವಾಹಿ ಪಾತ್ರದ ಮೂಲಕವೂ ಜನರು ನನ್ನನ್ನು ಗುರುತಿಸುತ್ತಾರೆ. ಕಲಾವಿದೆಯಾಸ ನನಗೆ ಸಹಜವಾಗಿ ಇದರಿಂದ ಖುಷಿಯಾಗುತ್ತದೆ.

    ಪ್ರಶ್ನೆ: ವೃತ್ತಿಜೀವನದ ಮರೆಯಲಾಗದ ಅನುಭವ?

    ಉತ್ತರ: ಬಹಳಷ್ಟು ಅನುಭವಗಳಾಗಿವೆ. ಅದನ್ನು ಕೆಟ್ಟದ್ದು ಒಳ್ಳೆಯದು ಎಂದು ವಿಭಾಗಿಸುವುದು ನನಗಿಷ್ಟವಿಲ್ಲ. ಎಲ್ಲವೂ ನನಗೆ ಕಲಿಕೆಗೆ ಅವಕಾಶಗಳು ಅಂದುಕೊಳ್ಳುತ್ತೇನೆ. ಮರೆಯಲಾಗದ, ಮರೆಯಬಾರದ ಅನುಭವಗಳವು. ಪ್ರಾರಂಭದಲ್ಲಿ ಕ್ಯಾಮರಾ ಮುಂದೆ ನಿಂತಾಗ 'ಲುಕ್' ಕೊಡು ಎಂದರೆ ಅದೇನೆಂದು ತಿಳಿಯದೇ ಒದ್ದಾಡುತ್ತಿದೆ. ಈಗ ಸಾಕಷ್ಟು ತಿಳಿದುಕೊಂಡಿದ್ದೇನೆ.

    ಇನ್ನು ನನಗೆ ಕೆಲವೊಮ್ಮೆ ಗೊಂದಲ ಕಾಡಿದ್ದಿದೆ. ಕಾರಣ ನಾನು ವಿಭಿನ್ನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು. ಟಿವಿ ನಿರೂಪಣೆ ಮಾಡುವಾಗ ಕ್ಯಾಮರಾ ಲೆನ್ಸ್ ನೋಡಿ ಅನ್ನುತ್ತಾರೆ. ಆದರೆ ಸೀರಿಯಲ್ ಮಾಡುವಾಗ ಕ್ಯಾಮೆರಾ ಕಡೆ ಕಣ್ಣೆತ್ತಿಯೂ ನೋಡಬೇಡಿ ಅನ್ನುತ್ತಾರೆ. ಅವೆಲ್ಲ ಕೆಲವೊಮ್ಮೆ ಗೊಂದಲದ ಗೂಡಿನಲ್ಲಿ ಸಿಕ್ಕಂತೆ ಅನ್ನಿಸಿದ್ದಿದೆ. ಆದರೆ ಈಗ ಅಲ್ಲವೂ ಸರಾಗ, ಸಂತೋಷ ಎನಿಸುತ್ತವೆ.

    ಪ್ರಶ್ನೆ: ಪಾರ್ವತಿ ಪರಮೇಶ್ವರ ಧಾರಾವಾಹಿಯ ಹೊರತಾಗಿ ಸದ್ಯಕ್ಕೆ ಬೇರೇನು ಮಾಡುತ್ತಿದ್ದೀರಿ?

    ಉತ್ತರ: ಬೇರೆ ಧಾರಾವಾಹಿ ಹಾಗೂ ಸಿನಿಮಾಗಳಿಂದ ಸಾಕಷ್ಟು ಅವಕಾಶಗಳ ಕರೆಗಳು ಬರುತ್ತವೆ. ಆದರೆ ಈ ಧಾರಾವಾಹಿಯ ಪ್ರಮುಖ ಪಾತ್ರಧಾರಿಗಳಲ್ಲೊಬ್ಬಳು ನಾನು. ಸತತ ಚಿತ್ರೀಕರಣದ ನಡುವೆ ವೇಳೆ ಹೊಂದಿಸಲು ಸಾಧ್ಯವಾಗುವುದಿಲ್ಲ. ಸೂರಿ ಸರ್, 'ಅಣ್ಣಾ ಬಾಂಡ್; ಚಿತ್ರದಲ್ಲಿ ಪಾತ್ರವೊಂದನ್ನು ಮಾಡಲು ಕರೆದಿದ್ದರು. ಆದರೆ ಹೋಗಲು ಸಾಧ್ಯವಾಗಲಿಲ್ಲ. ನನಗೆ ಅವಕಾಶಗಳ ಜೊತೆ ಕಮಿಟ್ ಮೆಂಟ್ ಕೂಡ ಅಷ್ಟೇ ಮುಖ್ಯ. ಅವರು ಅಥವಾ ನಾನು ಯಾರಾದರೊಬ್ಬರು ಸಮಸ್ಯೆಗೆ ಸಿಲುಕುವುದು ಬೇಡ ಎಂದು ಹೋಗಲಿಲ್ಲ. ಇದ್ದಲೇ ನೆಮ್ಮದಿ ಪಡುತ್ತೇನೆ.

    ಫೈನಲ್ ಕಟ್ ಪ್ರೊಡಕ್ಷನ್ ಬ್ಯಾನರ್ ನ ಸಿಹಿಕಹಿ ಚಂದ್ರು-ಗೀತಾ ದಂಪತಿ, ಸಂಚಿಕೆ ನಿರ್ದೇಶಕರಾದ ಫ್ರಥ್ವಿರಾಜ್ ಕುಲಕರ್ಣಿ ಹಾಗೂ ಕಥೆ, ಸಂಭಾಷಣೆಕಾರರಾದ ಎಂ ಎಸ್ ನರಸಿಂಹಮೂರ್ತಿ ಹಾಗೂ ಇಡೀ ತಂಡ ನನಗೆ 'ಜೊತೆಯಾಗಿ-ಹಿತವಾಗಿ' ಇದೆ. ಹಾಗಾಗಿ ಈ ಧಾರಾವಾಹಿಗೇ ನನ್ನ ಮೊದಲ ಆದ್ಯತೆ.

    ಪ್ರಶ್ನೆ: ಇಷ್ಟವಾದ ತಿಂಡಿ, ಡ್ರೆಸ್, ಹಾಗೂ ಹವ್ಯಾಸಗಳು?

    ಉತ್ತರ: ಚಪಾತಿ ಮತ್ತು ಟೊಮ್ಯಾಟೋ ಗೊಜ್ಜು ಅಂದ್ರೆ ನನಗೆ ಪಂಚಪ್ರಾಣ. ಉಳಿದಂತೆ ಎಲ್ಲವೂ ಓಕೆ. ಬಟ್ಟೆ, ಬ್ಯಾಗ್, ಸ್ಯಾಂಡಲ್ಸ್ ಮತ್ತು ಕುರ್ತಾಸ್ ಬಗ್ಗೆ ತಕ್ಕಮಟ್ಟಿಗೆ ಕ್ರೇಜ್ ಇದೆ. ಶಾಪಿಂಗ್ ಹೋದಾಗ ಅವುಗಳನ್ನು ತಂದು ಕಬೋರ್ಡ್ ತುಂಬಿಸಿಕೊಳ್ಳುವ ಹವ್ಯಾಸವಿದೆ.

    ಸಾರಿ ಉಡೋದು ನನಗಿಷ್ಟ. ಅದರಲ್ಲೂ ಉದ್ದ ತೋಳಿನ ರವಿಕೆ ನನ್ನ ಆಯ್ಕೆ, ಆದ್ಯತೆ. ಹೊರಗಡೆ ಉದ್ದ ತೋಳಿನ ಬ್ಲೌಸ್ ಜೊತೆ ಸೀರೆ ಉಟ್ಟು ನಡೆಯುವುದೆಂದರೆ ನನಗೆ ಎಲ್ಲಿಲ್ಲದ ಉತ್ಸಾಹ, ಆನಂದ...

    ಹೀಗೆ ತಮ್ಮ ಇಷ್ಟ, ಕಷ್ಟಗಳ ಪಟ್ಟಿಯೊಂದಿಗೆ ವೈಯಕ್ತಿಕ ಹಾಗೂ ವೃತ್ತಿಜೀವನವನ್ನು ಹಂಚಿಕೊಂಡರು ನಾಗವಲ್ಲಿ (ಪಂಚರಂಗಿ) ಶ್ವೇತಾ. ಸದ್ಯಕ್ಕೆ ನಾಗವಲ್ಲಿ ಪಾತ್ರದ ಮೂಲಕ ಪ್ರೇಕ್ಷಕರನ್ನು ಸಿಕ್ಕಾಪಟ್ಟೆ ನಗೆಗಡಲಿನಲ್ಲಿ ತೇಲಿಸುವ ಇವರು ಯಾವುದೇ ಪಾತ್ರ ಬಂದರೂ ಜೀವತುಂಬಿ ತನ್ಮಯರಾಗಿ ನಟಿಸಿ ಪಾತ್ರಕ್ಕೆ 'ಘನತೆ' ತಂದುಕೊಡುವುದರ ಜೊತೆ ಕಲಾವಿದೆಯಾಗಿ ಎತ್ತರೆತ್ತರಕ್ಕೆ ಬೆಳೆಯುವ ಬಯಕೆಯುಳ್ಳವರು.

    ಇದು ಒನ್ ಇಂಡಿಯಾ ಕನ್ನಡ' ಓದುಗರಿಗೆ ನಾಗವಲ್ಲಿ ಶ್ವೇತಾ 'ಬಯೋಡಾಟ' ಹೊಂದಿದ 'ಬೊಂಬಾಟ್' ಸಂದರ್ಶನ...

    English summary
    Actress Shwetha S is acting Nagavalli role at 'Zee Kannada' Serial 'Parvati Parameshwara'. She acted in many Serials as well as Yograj Bhat's movie Pancharangi in 2010. This is the exclusive interview of actress Shwetha S.
 
    Wednesday, February 15, 2012, 13:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X