ಜೀ ಕನ್ನಡದಲ್ಲಿ ಹ್ಯಾಟ್ರಿಕ್ ಹೀರೋ ರಿಯಾಲಿಟಿ ಶೋ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇದೇ ಮೊದಲ ಬಾರಿಗೆ ಕಿರುತೆರೆಗೆ ಲಗ್ಗೆ ಇಡಲಿದ್ದಾರೆ. ಜೀ ಕನ್ನಡದ ಹೊಸ ರಿಯಾಲಿಟಿ ಶೋ 'ನಾನಿರುವುದೆ ನಿಮಗಾಗಿ' ನಿರೂಪಕರಾಗಿ ಶಿವಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಶ್ರೀ ಸಾಮಾನ್ಯರ ಕನಸುಗಳು ಮತ್ತು ಮನದಾಸೆಗಳನ್ನು ಪೂರೈಸುವ ಮೂಲಕ ಜೀವನೋತ್ಸಾಹ ಉತ್ತೇಜಿಸುವ ಈ ಕಾರ್ಯಕ್ರಮದ ಮೂಲಕ ಶಿವರಾಜ್‌ಕುಮಾರ್ ಜನರಿಗೆ ಮತ್ತಷ್ಟು ಹತ್ತಿರವಾಗಲಿದ್ದಾರೆ. ಸಾಮಾನ್ಯ ಜನರ ಆಶಯಗಳಿಗೆ ಕನ್ನಡಿ ಹಿಡಿಯುವುದೇ ಕಾರ್ಯಕ್ರಮದ ತಿರುಳು.
ಹೊಸತನಕ್ಕೆ ಸದಾ ಹೆಸರಾಗಿರುವ ಜೀ ಕನ್ನಡ ವಾಹಿನಿಯ ಅತ್ಯಂತ ಮಹತ್ವದ ರಿಯಾಲಿಟಿ ಶೋ ಆಗಿರುವ ನಾನಿರುವುದೆ ನಿಮಗಾಗಿ. ಡಾ. ರಾಜ್‌ಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರ 'ಮಯೂರ'ದ ಜನಪ್ರಿಯ ಗೀತೆ ನಾನಿರುವುದೆ ನಿಮಗಾಗಿ.., ಪಲ್ಲವಿಯೇ ಈ ರಿಯಾಲಿಟಿ ಶೋ ಟೈಟಲ್.
ಜೀವನದಲ್ಲಿ ಪ್ರತಿಯೊಬ್ಬರಿಗೂ ನೂರಾರು ಆಸೆ ಆಕಾಂಕ್ಷೆಗಳು ಹಾಗೂ ಕನಸುಗಳಿರುತ್ತವೆ. ಆದರೆ ಎಲ್ಲರಿಗೂ ಎಲ್ಲಾ ಆಸೆ ಕನಸುಗಳನ್ನು ಈಡೇರಿಸಿಕೊಳ್ಳಲು ಆಗುವುದಿಲ್ಲ. ಆದರೆ ಈ ಕಾರ್ಯಕ್ರಮದ ಮೂಲಕ ಜೀ ಕನ್ನಡ ವಾಹಿನಿಯು ವಯಸ್ಸು, ಅಂತಸ್ತು, ಜಾತಿ ವರ್ಗ ಭೇಧವಿಲ್ಲದೆ ಶ್ರೀಸಾಮಾನ್ಯರ ಕೈಗೆಟುಕದ ಮನದಾಸೆಗಳನ್ನು ಈಡೇರಿಸುವ ಪ್ರಯತ್ನ ಮಾಡಲಿದೆ.
ಚಲನಚಿತ್ರಗಳ ಸೆಂಚುರಿ ಬಾರಿಸುವ ಮೂಲಕ ಕನ್ನಡಿಗರ ಕಣ್ಮಣಿಯಾಗಿರುವ ಶಿವರಾಜ್‌ಕುಮಾರ್ ಈ ಪ್ರಯತ್ನಕ್ಕೆ ಕೈ ಜೋಡಿಸಿರುವುದು ಹೆಮ್ಮೆಯ ವಿಷಯ. ಜೀವನದಲ್ಲಿ ನೊಂದು ಬೆಂದು ಉತ್ಸಾಹ ಕಳೆದುಕೊಂಡ ಜನರಿಗೆ ಈ ಕಾರ್ಯಕ್ರಮ ಸಂಜೀವಿನಿಯಂತೆ ಕೆಲಸ ಮಾಡಲಿದೆ.
ಅಪ್ರತಿಮ ಸಾಧನೆಯ ನಡುವೆಯೂ ಡಾ. ರಾಜ್‌ಕುಮಾರ್ ಸಾಮಾನ್ಯರಲ್ಲಿ ಸಾಮಾನ್ಯರಂತೆಯೇ ಜೀವನ ನಡೆಸಿದವರು. ಸಮಾಜ ಹಾಗೂ ಬಡಜನತೆಯ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ರಾಜ್ ಸಮಾಜದಲ್ಲಿನ ಅಸಹಾಯಕರಿಗೆ ಸದಾ ನೆರವಿನ ಹಸ್ತ ಚಾಚುತ್ತಿದ್ದರು.
ಈ ಕಾರ್ಯಕ್ರಮದ ಮೂಲಕ ನಾನು ಕೂಡಾ ಅಪ್ಪಾಜಿ ಆಸೆಯಂತೆ ಅವರು ಹಾಕಿಕೊಟ್ಟ ದಾರಿಯಲ್ಲಿಯೇ ಸಾಗುವ ಪ್ರಯತ್ನ ಮಾಡಲಿದ್ದೇನೆ ಎಂದು ಶಿವರಾಜ್‌ಕುಮಾರ್ ಹೇಳಿದರು. ನಮ್ಮ ತಂದೆಯವರ ಆಶಯವನ್ನು ಈಡೇರಿಸಲು ಅಪರೂಪದ ಅವಕಾಶವನ್ನು ನೀಡಿದ ಜೀ ಕನ್ನಡ ವಾಹಿನಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಶಿವಣ್ಣ ತಿಳಿಸಿದರು.
ಈ ವಿನೂತನ ಕಾರ್ಯಕ್ರಮ ಸುಲಭವೇನು ಅಲ್ಲ ಎಂದ ಅವರು ಸಿನಿಮಾಗಳಲ್ಲಿನ ನಟನೆಗಿಂತಲೂ ಕಿರುತೆರೆಯಲ್ಲಿನ ನಿರೂಪಣೆ ಬಹಳ ಸವಾಲಿನ ಕೆಲಸ ಎಂದು ಶಿವಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮೂಹದ ದಕ್ಷಿಣ ಭಾರತದ ಮುಖ್ಯಸ್ಥರಾದ ಡಾ. ಗೌತಮ್ ಮಾಚಯ್ಯ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕನ್ನಡ ಕಿರುತೆರೆಗೆ ಪದಾರ್ಪಣೆ ಮಾಡುವ ಮೂಲಕ ಕನ್ನಡ ಕಿರುತೆರೆ ರಂಗದಲ್ಲಿ ಹೊಸತನ ಮೂಡಿಸಲಿದ್ದಾರೆ ಎಂದರು.
ಈ ಕಾರ್ಯಕ್ರಮ ನಾಡಿನ ಜನತೆಯ ಹೃದಯಕ್ಕೆ ಹತ್ತಿರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಸ್ಪರ್ಧಾತ್ಮಕ ಯುಗದಲ್ಲಿಯೂ ಸಾಮಾಜಿಕ ಕಳಕಳಿಯನ್ನೊಳಗೊಂಡಿರುವಂತಹ ಕಾರ್ಯಕ್ರಮವನ್ನು ಶಿವಣ್ಣ ಆಯ್ಕೆ ಮಾಸಿಕೊಂಡಿರುವುದಕ್ಕಾಗಿ ಅವರನ್ನು ಅಭಿನಂದಿಸಿದರು.
ಜೀ ಕನ್ನಡದ ವ್ಯವಹಾರಗಳ ಮುಖ್ಯಸ್ಥರಾದ ಜೆ. ಶೇಖರ್ ಮಾತನಾಡಿ ನಾಲ್ಕು ವರ್ಷಗಳಹಿಂದೆ ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳನ್ನು ಆರಂಭಿಸಿದ ಜೀ ಕನ್ನಡ ಈಗ ನಾನಿರುವುದೇ ನಿಮಗಾಗಿ ಕಾರ್ಯಕ್ರಮದ ಮೂಲಕ ರಿಯಾಲಿಟಿ ಶೋಗಳಲ್ಲಿ ಮತ್ತೆ ಸಂಚಲನ ಉಂಟುಮಾಡಲಿದೆ ಎಂಬ ಆಶಯ ವ್ಯಕ್ತಪಡಿಸಿದರು. ನಾನಿರುವುದೇ ನಿಮಗಾಗಿ.. ಕಾರ್ಯಕ್ರಮ ಜೀ ಕನ್ನಡದಲ್ಲಿ ಆಗಸ್ಟ್ 30 ರಿಂದ ಪ್ರತಿ ಸೋಮವಾರ ಹಾಗೂ ಮಂಗಳವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.


Click it and Unblock the Notifications











