For Quick Alerts
  ALLOW NOTIFICATIONS  
  For Daily Alerts

  ನಿರ್ದೇಶಕ ಪೃಥ್ವಿರಾಜ್ ಕುಲಕರ್ಣಿ ವಿಶೇಷ ಸಂದರ್ಶನ

  By * ಶ್ರೀರಾಮ್ ಭಟ್
  |

  ಪೃಥ್ವಿರಾಜ್ 'ಪಾರ್ವತಿ ಪರಮೇಶ್ವರ'ರಿಗೇ ಸೂತ್ರಧಾರರು. ಪೂರ್ಣ ಹೆಸರು ಪೃಥ್ವಿರಾಜ್ ಮ ಕುಲಕರ್ಣಿ. ಎಲ್ಲರೂ ಇವರನ್ನು ಶಾರ್ಟ್ ಮತ್ತು ಸ್ವೀಟ್ ಆಗಿ 'ಪೃಥ್ವಿ' ಎಂದು ಕರೆಯುತ್ತಾರೆ. ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ '10-30'ಕ್ಕೆ ಪ್ರಸಾರವಾಗುತ್ತಿರುವ, 750 ಎಪಿಸೋಡ್ ದಾಟಿಯೂ ನಾಟ್ ಔಟ್ ಆಗಿ ಜನಪ್ರಿಯತೆಯ ಉತ್ತುಂಗದಲ್ಲಿ ಸಾಗುತ್ತಿರುವ ಧಾರಾವಾಹಿ 'ಪಾರ್ವತಿ ಪರಮೇಶ್ವರ'ದ ನಿರ್ದೇಶಕರಿವರು.

  ಫೈನಲ್ ಕಟ್ ಪ್ರೊಡಕ್ಷನ್ ನ, ಸಿಹಿಕಹಿ ಚಂದ್ರು ಪ್ರಧಾನ ನಿರ್ದೇಶನದ ಈ ಧಾರಾವಾಹಿಗೆ ಸಂಚಿಕೆ ನಿರ್ದೇಶಕರಾಗಿ ಚಿರಪರಿಚಿತರಾಗಿರುವ ಪೃಥ್ವಿರಾಜ್ ಕುಲಕರ್ಣಿ, ಒನ್ ಇಂಡಿಯಾ ಕನ್ನಡಕ್ಕೆ ನೀಡಿದ ವಿಶೇಷ ಸಂದರ್ಶನ ಇಲ್ಲಿದೆ, ಓದಿ...

  ಪ್ರಶ್ನೆ: ನಿಮ್ಮ ಮೂಲ ಹೆಸರು, ಊರು, ವಿದ್ಯಾಭ್ಯಾಸ ಹಾಗೂ ಫ್ಯಾಮಿಲಿ ಬಗ್ಗೆ ತಿಳಿಸಿ...

  ಉತ್ತರ: ಧಾರವಾಡ ಜಿಲ್ಲೆ, ಕಲಘಟಗಿ ತಾಲೂಕಿನ ಮಿಶ್ರಿಕೋಟೆ ನನ್ನ ಹುಟ್ಟೂರು. ಪ್ರಾಥಮಿಕ ವಿದ್ಯಾಭ್ಯಾಸದಿಂದ ಪದವಿ 'ಬಿ ಕಾಂ'ವರೆಗೂ ಓದಿದ್ದು ಹುಬ್ಬಳ್ಳಿಯಲ್ಲಿ. ಪತ್ನಿ ರಾಜಲಕ್ಷ್ಮಿ, ಪ್ರತೀಕ್ಷಾ ಮತ್ತು ಪ್ರೇಕ್ಷಾ ಎಂಬಿಬ್ಬರು ಮಕ್ಕಳ ಕುಟುಂಬ ನನ್ನದು.

  ಪ್ರಶ್ನೆ: ನಿರ್ದೇಶನ ಕ್ಷೇತ್ರಕ್ಕೆ ಬಂದಿದ್ದು ಹೇಗೆ? ಈ ಕ್ಷೇತ್ರದಲ್ಲಿ ನಿಮಗೆ ಯಾರಾದರೂ ಗಾಡ್ ಫಾದರ್?

  ಉತ್ತರ: ನನ್ನಣ್ಣ ಗುರುರಾಜ್ ಕುಲಕರ್ಣಿ ಹದಿನೈದು ವರ್ಷದಿಂದ ಇದೇ ಕ್ಷೇತ್ರದಲ್ಲಿದ್ದಾರೆ. ಬಿ ಕಾಂ ಮುಗಿಸಿದ ನಾನು ಕೆಲಸ ಹುಡುಕಿಕೊಂಡು ಹುಬ್ಬಳ್ಳಿಯಲ್ಲಿ ಬಸ್ಸು ಹತ್ತಿ ಸೀದಾ ಬೆಂಗಳೂರಿಗೆ ಬಂದೆ. ತಕ್ಷಣ ಅಣ್ಣನ ಪರಿಚಯದ ಮೇಲೆ ಮಲ್ಟಿ ಚಾನೆಲ್ ಪ್ರೊಡಕ್ಷನ್ ಮ್ಯಾನೇಜರ್ ಅವರಿಗೆ ಅಸಿಸ್ಟಂಟ್ ಆಗಿ ಕೆಲಸ ಪ್ರಾರಂಭಿಸಿದೆ. ಬಿಕಾಂ ಮಾಡಿದ್ದ ನನಗೆ ಪಕ್ಕಾ ಪ್ಲಾನಿಂಗ್ ಮಾಡುವ ಕಲೆ ಅದ್ಯಾಗೋ ಸಿದ್ಧಿಸಿತ್ತು. ಅದೇ ಯೋಗ್ಯತೆ ಮೇಲೆ ಸುಶೀಲ್ ಮೊಕಾಶಿ ನಿರ್ದೇಶನದ 'ಆಸರೆ' ಧಾರಾವಾಹಿ ತಂಡದಲ್ಲಿ ಕೆಲಸ ಗಿಟ್ಟಿಸಿದೆ.

  ನಿರ್ಮಾಣದ ಜೊತೆ ನಿರ್ದೇಶನವನ್ನೂ ಕಲಿಯುತ್ತಾ, ಮಾಡುತ್ತಾ ಕಾವೇರಿ ವಾಹಿನಿಯಲ್ಲಿ ಪ್ರಸಾರವಾದ ಸುಶಿಲ್ ಮೊಕಾಶಿ ನಿರ್ದೇಶನದ ಧಾರಾವಾಹಿ 'ಹೊಸ ಮನೆತನ' ತಂಡದಲ್ಲೂ ಕೆಲಸ ಮಾಡಿದೆ. ಮೋಹನ್ ಸಿಂಗ್-ರವಿಗರಣಿ ನಿರ್ದೇಶನದ 'ಮಹಾಯಜ್ಞ' ಮೆಗಾ ಸೀರಿಯಲ್ ನನ್ನ ವೃತ್ತಿಜೀವನಕ್ಕೆ ವರದಾನವಾಯಿತು. ಹೇಗೆಂದರೆ, ಆ ಕಾಲದಲ್ಲೇ ಬಂದ ಈ ಮೆಗಾ ಸೀರಿಯಲ್ ನಿಂದ ನಾನು ಸಾಕಷ್ಟು ಕಲಿತು ಈ ಕ್ಷೇತ್ರದಲ್ಲಿ ಭವಿಷ್ಯ ಕಂಡುಕೊಳ್ಳಲು ನೆರವಾಯಿತು.

  ನಂತರ, ವೃತ್ತಿಜೀವನದಲ್ಲಿ ನನ್ನ ಪ್ರಯಾಣ 'ಮನೆಯೊಂದು ಮೂರು ಬಾಗಿಲು', 'ಆನಂದ ಸಾಗರ', 'ಆಸೆಗಳು' ಹಾಗೂ 'ಪ್ರೀತಿಯಿಂದ (ಹಂಸಲೇಖ ನಿರ್ಮಾಣ)' ಮೂಲಕ ಸಾಗುತ್ತಿರುವಾಗ, ಆನಂದ ತೀರ್ಥ ನಿರ್ಮಾಣ ಹಾಗೂ ವಿಜಯಪ್ರಸಾದ್ ನಿರ್ದೇಶನದ 'ಸಿಲ್ಲಿ ಲಲ್ಲಿ' ಸೀರಿಯಲ್ ನಿರ್ದೇಶನದ ತಂಡಕ್ಕೆ ಸೇರ್ಪಡೆಗೊಂಡೆ. ಸಿಲ್ಲಿ ಲಲ್ಲಿ ಧಾರಾವಾಹಿಯ ನಿರ್ದೇಶಕ ವಿಜಯ್ ಪ್ರಸಾದ್ ಅವರಿಂದ ನಿರ್ದೇಶನದ ಜೊತೆ ನಡವಳಿಕೆ, ಗೌರವಗಳಿಗೆ ವಿಶೇಷ ಮಹತ್ವ ಕೊಡುವುದನ್ನೂ ಕಲಿತೆ. ಆಗೊಂದು ಘಟನೆ ನಡೆದಿತ್ತು. 6 ವರ್ಷಗಳಷ್ಟು ಸುದೀರ್ಘ ಕಾಲ 'ಹಾಸ್ಯ ಧಾರಾವಾಹಿ' ತಂಡದಲ್ಲಿದ್ದ ನಾನು ಅದು ನನಗೆ ಒಗ್ಗಿಬರಲ್ಲ ಎನ್ನುತ್ತಾ ಅಲ್ಲಿಂದ ಹೊರಗೆ ಬರಲು ಸಿದ್ಧವಾಗಿದ್ದೆ.

  ಆದರೆ, ಆಗ ನನ್ನನ್ನು ತಡೆದು, ಇದರಲ್ಲೇ ನನಗೆ ಪ್ರತಿಭೆ ಹಾಗೂ ಭವಿಷ್ಯವೆರಡೂ ಇದೆ ಎಂದು ತಡೆದು ನಿಲ್ಲಿಸಿದ್ದು ಮ್ಯಾನೇಜರ್ ವಿಜಯಕುಮಾರ್ ಹಾಗೂ ನಿರ್ದೇಶಕ ವಿಜಯಪ್ರಸಾದ್. ಅವರು ಅಂದು ಹಾಗೆ ಹೇಳಿ ನನ್ನನ್ನು ತಡೆದಿರದಿದ್ದರೆ ಇಂದು ನಾನು ಪಾರ್ವತಿ ಪರಮೇಶ್ವರ ನಿರ್ದೇಶಕನಾಗಿರುತ್ತಿರಲಿಲ್ಲ. ಅಲ್ಲಿಂದ ಮುಂದೆ ಸಾಗಿಬಂದಿರುವ ನನಗೆ ಇಂದು 'ಎಲ್ಲವೂ'ಆಗಿರುವುದು' ಈಗ ಕೆಲಸ ಮಾಡುತ್ತಿರುವ ಫೈನಲ್ ಕಟ್ ಪ್ರೊಡಕ್ಷನ್ ನ ಪಾರ್ವತಿ ಪರಮೇಶ್ವರ ಧಾರಾವಾಹಿ.

  ಪ್ರಶ್ನೆ: ವೃತ್ತಿಜೀವನದ ಮರೆಯಲಾಗದ ಅನುಭವ?

  ಉತ್ತರ: ನನ್ನ ವೃತ್ತಿಜೀವನದ ಜರ್ನಿಯಲ್ಲಿ ಬಂದ 'ಸಿಹಿಕಹಿ' ಘಟನೆಗಳೆಲ್ಲವೂ ಮರೆಯಲಾಗದ್ದೇ. ಆದರೆ ಸಹಾಯಕನಾಗಿದ್ದ ನನ್ನನ್ನೇ 'ಬಾಸ್' ಎಂದು ಸಂಬೋಧಿಸುತ್ತಾ ಕೆಲಸ ಕಲಿಸುತ್ತಾ ಮಾಡಿಸುತ್ತಾ ಬೆಳೆಸಿದ ವಿಜಯಪ್ರಸಾದ್ ಅವರೊಂದಿಗೆ ಕಳೆದ ಕ್ಷಣಗಳು ನನಗೆ ಅವಿಸ್ಮರಣೀಯ. ಜೊತೆಗೆ 'ಸಿಲ್ಲಿ ಲಲ್ಲಿ' ಮ್ಯಾನೇಜರ್ ಟಿಕೆ ವಿಜಯಕುಮಾರ್ ಅವರನ್ನೂ ನಾನು ನೆನಪಿಸಿಕೊಳ್ಳದ ದಿನವಿಲ್ಲ.

  ಪ್ರಶ್ನೆ: ಪಾರ್ವತಿ ಪರಮೇಶ್ವರ ಧಾರಾವಾಹಿಯ ಹೊರತಾಗಿ ಸದ್ಯಕ್ಕೆ ಬೇರೇನು ಮಾಡುತ್ತಿದ್ದೀರಿ?

  ಉತ್ತರ: ಬೇರೇನೂ ಇಲ್ಲ, ಸದ್ಯಕ್ಕೆ ನನಗೆ '24x7' ಕೂಡ ಪಾರ್ವತಿ ಪರಮೇಶ್ವರ ಧಾರಾವಾಹಿಯೇ. ನಮ್ಮ ಇಡೀ ತಂಡ ನನಗೆ ಬೆನ್ನೆಲುಬಾಗಿ, ಬೆಂಬಲವಾಗಿ ನಿಂತಿದೆ. ಹಾಗಾಗಿ ಈ ಧಾರಾವಾಹಿಗೇ ನನ್ನ ಸಂಪೂರ್ಣ ಆದ್ಯತೆ.

  ಪ್ರಶ್ನೆ: ಬೇರೇನಾದರೂ ನಿಮ್ಮಿಷ್ಟದ ಹವ್ಯಾಸಗಳು?

  ಉತ್ತರ: ಈ ವೃತ್ತಿಗೆ ಹೊರತಾದ ಹಾಗೂ ವಿರುದ್ಧವಾದ ಯಾವ ಹವ್ಯಾಸವೂ ನನಗಿಲ್ಲ. ಎಲ್ಲೇ ಇದ್ದರೂ, ಎಲ್ಲೇ ಹೋದರೂ, ಅಲ್ಲಿಯೇ ಹಾಸ್ಯ ಸನ್ನಿವೇಶಗಳನ್ನು ಹುಡುಕುವುದು, ಸೃಷ್ಟಿಸುವುದು ನನ್ನ ಜೀವನಶೈಲಿಯೇ ಆಗಿದೆ. ಪಾರ್ವತಿ ಪರಮೇಶ್ವರ ನೋಡಿದ ಪ್ರೇಕ್ಷಕರು, ದಿನದ ಜಂಜಾಟವನ್ನು ಮರೆತು, ಮನಸಾರೆ ನಕ್ಕು ಹಗುರಾಗಿ, ಹಾಯಾಗಿ ನಿದ್ದೆ ಮಾಡಿದರೆ, ಮರುದಿನ ಎದ್ದು ಒಳ್ಳೆ ಮೂಡ್ ನಿಂದ ಕೆಲಸ ಪ್ರಾರಂಭಿಸಿದರೆ ನನಗೆ ನನ್ನ ಜೀವನ ಸಾರ್ಥಕ ಎನಿಸುತ್ತದೆ. ಈ ನಿಟ್ಟಿನಲ್ಲಿ ಪಾರ್ವತಿ ಪರಮೇಶ್ವರ ಪ್ರೇಕ್ಷಕರಿಗೆ ಸಹಾಯಕವಾಗಿದೆ ಎಂಬ ಬಲವಾದ ನಂಬಿಕೆ ನನ್ನದು. ಪ್ರೇಕ್ಷಕರ ಜೊತೆ ಸಾಕಷ್ಟು ಬಾರಿ ನಡೆಸಿದ ಚರ್ಚೆ, ಸಂವಾದಗಳು ನನ್ನ ಈ ನಂಬಿಕೆಯನ್ನು ಸಾಕ್ಷಿ ಸಮೇತ ಸರಿಯೆಂದು ದೃಢೀಕರಿಸಿವೆ.

  ಇವೆಲ್ಲ ವೃತ್ತಿಪರತೆ ಮೈವೆತ್ತಂತಿರುವ ನಿರ್ದೇಶಕ ಪೃಥ್ವಿರಾಜ್ ರ ಮನದಾಳದ ಮಾತು. ತಮ್ಮ ಹಾಗೂ ಪ್ರೇಕ್ಷಕರ ನಗುವಿಗೆ ಆಸರೆಯಾದ ಅಣ್ಣ ಗುರುರಾಜ್ ಕುಲಕರ್ಣಿ, ವಿಜಯಪ್ರಸಾದ್, ಮೋಹನ್ ಸಿಂಗ್, ರವಿ ಗರಣಿ, ಸಿಹಿಕಹಿ ಚಂದ್ರು ದಂಪತಿಗಳು ಹಾಗೂ ಸಂಭಾಷಣೆಕಾರರಾದ ಎಂ ಎಸ್ ನರಸಿಂಹಮೂರ್ತಿ, ಜೊತೆಗೆ ತಮ್ಮ ಪರಿಶ್ರಮವನ್ನು ತೆರೆಯಲ್ಲಿ 'ಫಲಿತಾಂಶ'ವಾಗಿಸಿ ಪ್ರಚಾರ, ಪ್ರಸಿದ್ಧಿಗೆ ಕಾರಣಕರ್ತರಾದ ಕಲಾವಿದರು, ಇವರೆಲ್ಲರ ಜೊತೆ ಕಳೆದ, ಕಳೆಯುತ್ತಿರುವ ಕ್ಷಣಗಳೂ ಅಪೂರ್ವ ಎಂದಿದ್ದಾರೆ ಪೃಥ್ವಿ. ತಮ್ಮ ಧಾರಾವಾಹಿ ಪ್ರಸಾರಮಾಡುತ್ತಿರುವ 'ಜೀ ಕನ್ನಡ ವಾಹಿನಿ'ಗೆ ಕೃತಜ್ಞತೆ ಹೇಳುವ ಮೂಲಕ ಸಂದರ್ಶನಕ್ಕೆ 'ಸೂಕ್ತ ವಿರಾಮ' ನೀಡಿದ್ದಾರೆ ಪಾರ್ವತಿ ಪರಮೇಶ್ವರ ರೂವಾರಿ ಪೃಥ್ವಿರಾಜ್ ಕುಲಕರ್ಣಿ.

  English summary
  This is the exclusive interview of director Prithviraj Kulkarni, who is directing serial 'Parvati Parameshwara. This serial is telecasting in Zee Kannada, at 10.30pm from Monday to Friday. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X