For Quick Alerts
  ALLOW NOTIFICATIONS  
  For Daily Alerts

  ರಾಧಿಕಾಗಾಗಿ 'ಸಮಯ' ಕೊಂಡ ಕುಮಾರಸ್ವಾಮಿ

  By Prasad
  |

  ದಿ ಕ್ಯಾಟ್ ಈಸ್ ಔಟ್ ಆಫ್ ದಿ ಬ್ಯಾಗ್! ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಅವರ ಮಾಲಿಕತ್ವಕ್ಕೆ ಸೇರಿದ್ದ ಸಮಯ ಟಿವಿ ಚಾನಲ್ ಕೊಂಡುಕೊಳ್ಳಲು ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಕೈಹಾಕಿದ್ದಾರೆ.

  'ಈ ಸಮಯ ನನ್ನ ಸಮಯ' ಎಂದು ಚಾನಲ್ ಶುರು ಮಾಡಿದಾಗ ಹೇಳಿದ್ದ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ, ಈಗಿನ ಸಮಯ ನನ್ನದಲ್ಲ ಎಂದು ಅರಿವಿಗೆ ಬರುತ್ತಿದ್ದಂತೆ ಕುಮಾರ್ ತೆಕ್ಕೆಗೆ ಚಾನಲ್ಲನ್ನು ಜಾರಿಸಲು ವಿಧ್ಯುಕ್ತರಾಗಿದ್ದಾರೆ. ಹಾಗೆ ನೋಡಿದರೆ, ಜಾರಕಿಹೊಳಿ ಅವರು ಸಮಯವನ್ನು ತಮ್ಮ ಕೈಯಲ್ಲಿ ಇಟ್ಟುಕೊಳ್ಳುವುದಿಲ್ಲ, ಮಾರಾಟಕ್ಕೆ ನಿರ್ಧರಿಸಿದ್ದಾರೆ ಎಂದು ಸುದ್ದಿ ಸಾಕಷ್ಟು ಹಾರಾಟ ನಡೆಸಿತ್ತು. ಆದರೆ, ಈ ಸಮಯ ಯಾರ ತೆಕ್ಕೆಗೆ ಜಾರುತ್ತೆ ಎಂಬ ಬಗ್ಗೆ ಪ್ರಶ್ನೆಗಳೂ ಮೂಡಿದ್ದವು.

  ಆ ಗಾಳಿ ಮಾತು ಈಗ ನಿಜವಾಗಿದೆ. ತಮ್ಮ ಪತ್ನಿ, ಮಧುಗಿರಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ಕಸ್ತೂರಿ ಟಿವಿ ಚಾನಲ್ ಅನ್ನು ನೀಡಿರುವ ಕುಮಾರಸ್ವಾಮಿ ಅವರು, ಎರಡನೇ ನ್ಯೂಸ್ ಚಾನಲ್ ಅನ್ನು ತಮ್ಮ ಎರಡನೇ ಪತ್ನಿ ಮಾಜಿ ಚಿತ್ರನಟಿ ರಾಧಿಕಾ ಕುಮಾರಸ್ವಾಮಿ ಅವರ ತೆಕ್ಕೆಗೆ ಹಾಕುತ್ತಾರೆ ಎಂಬ ಸುದ್ದಿಗೆ ರೆಕ್ಕೆಪುಕ್ಕ ಗರಿಗೆದರಿದೆ.

  ಬೆಂಗಳೂರು ಮಿರರ್ ಪತ್ರಿಕೆಗೆ ನೀಡಿರುವ ಕಿರು ಸಂದರ್ಶನದಲ್ಲಿ ಈ ಕುರಿತಂತೆ ಸತೀಶ್ ಜಾರಕಿಹೊಳಿ ಅವರೊಂದಿಗೆ ಮಾತುಕತೆ ನಡೆಸಿದ್ದಾಗಿ ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ. ಸುಮಾರು 60 ಕೋಟಿ ರು.ಗೆ 24 ಗಂಟೆಗಳ ಸುದ್ದಿವಾಹಿನಿ ಬಿಕರಿಯಾಗಿದೆ ಎನ್ನಲಾಗಿದೆ. ಆದರೆ, ಈ ಚಾನಲ್ಲನ್ನು ರಾಧಿಕಾಗಾಗಿಯೇ ಕಾಣಿಕೆಯಾಗಿ ನೀಡುತ್ತಿದ್ದಾರೆ ಎಂಬ ಮಾತು ಬಂದಾಗ, ಕುಮಾರಸ್ವಾಮಿ ಬಾಯಿಗೆ ಬೀಗ ಹಾಕಿಕೊಳ್ಳುತ್ತಿದ್ದಾರೆ.

  ಮತ್ತೊಂದು ವಿಷಯವೆಂದರೆ, ಕಸ್ತೂರಬಾ ರಸ್ತೆಯಲ್ಲಿಯೇ ಎರಡೂ ಚಾನಲ್ಲುಗಳು ಅಕ್ಕ ತಂಗಿಯರಂತೆ ಕಾರ್ಯ ನಿರ್ವಹಿಸಲಿವೆ. ಮಧ್ಯ ಇರುವುದು ಒಂದು ಪೆಟ್ರೋಲ್ ಬಂಕ್ ಮಾತ್ರ. ಬಲ್ಲ ಮೂಲಗಳ ಪ್ರಕಾರ, ರಾಧಿಕಾ ಮೇಡಂ ಅವರು ನಿಪುಣ ಮತ್ತು ಹಿರಿಯ ಪತ್ರಕರ್ತರ ಬೇಟೆಯಲ್ಲಿ ತೊಡಗಿದ್ದಾರೆ. ಸುದ್ದಿಯಲ್ಲಿರುವ ಅನೇಕ ಪತ್ರಕರ್ತರ ಹೆಸರುಗಳೂ ಕೇಳಿಬರುತ್ತಿವೆ.

  ಕುಮಾರಸ್ವಾಮಿ ಅವರ ಬದ್ಧ ವೈರಿ ರೆಡ್ಡಿ ಸಹೋದರರ ಮಾಲಿಕತ್ವದಲ್ಲಿ ಜನಶ್ರೀ ಸುದ್ದಿವಾಹಿನಿ ಆರಂಭವಾಗಿರುವುದರಿಂದ, ಕುಮಾರಸ್ವಾಮಿ ಅವರಿಗೆ ದಿನಪೂರ್ತಿ ಸುದ್ದಿ ಬಿತ್ತರಿಸುವ ಟಿವಿ ಚಾನಲ್ಲಿನ ಅವಶ್ಯಕತೆಯಿತ್ತು. ಸಮಯ ಜಾರಕಿಹೊಳಿ ಅವರಿಗೆ ಕೈಕೊಟ್ಟರೆ, ಕುಮಾರಸ್ವಾಮಿ ಅವರಿಗೆ ಸಮಯ ಕೂಡಿ ಬಂದಿದೆ. ರಾಧಿಕಾ ಕುಮಾರಸ್ವಾಮಿ ಅವರ ಹೊಸ ಸಾಹಸಕ್ಕೆ ಶುಭ ಹಾರೈಕೆಗಳು.

  English summary
  Former Chief Minister of Karnataka HD Kumaraswamy is buying Samay TV channel from Congress MLA Satish Jarkiholi. It is also learnt that Kumaraswmy is buying this 24/7 news TV channel for his second wife, former film actress Radhika.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X