ಗ್ರಾಮೀಣ ಪ್ರದೇಶಕ್ಕೆ ಹೊಸ ಟಿವಿ ಚಾನೆಲ್
ನವದೆಹಲಿ, ಜು. 28: ಕೇಂದ್ರ ಗ್ರಾಮೀಣಾಭಿವೃದ್ದಿ ಇಲಾಖೆ ದೇಶದ ಗ್ರಾಮೀಣ ಭಾಗದ ಜನತೆಗೆ ಸರ್ಕಾರದ ನೀತಿಗಳು ಹಾಗೂ ಕಾರ್ಯಕ್ರಮಗಳನ್ನು ತಲುಪಿಸುವ ಸಲುವಾಗಿ ಪ್ರತ್ಯೇಕ ಟಿವಿ ಚಾನೆಲ್ ಒಂದನ್ನು ಆರಂಭಿಸಲು ಯೋಜನೆ ಹಾಕಿಕೊಂಡಿದೆ.
ಈ ಕುರಿತು ಗ್ರಾಮೀಣಾಭಿವೃದ್ದಿ ಸಚಿವ ಸಿಪಿ ಜೋಶಿ ಅವರು ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಂಪರ್ಕದಲ್ಲಿ ರೂಪು ರೇಷೆಗಳನ್ನು ಸಿದ್ದಪಡಿಸುತ್ತಿದ್ದಾರೆ. ಲೋಕ ಸಭಾ ಟಿವಿ ಮಾದರಿಯಲ್ಲೇ ಈ ಚಾನೆಲ್ ಆರಂಭಕ್ಕೆ ಯೋಜನೆ ಹಾಕಿಕೊಂಡಿದ್ದು ಮುಂದಿನ ಕೆಲ ತಿಂಗಳುಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ.
ಈ ಗ್ರಾಮೀಣ ಚಾನೆಲ್ ನಲ್ಲಿ ಕೌನ್ ಬನೇಗಾ ಕ್ರೋರೊಡ್ ಪತಿ ರೀತಿಯ ಕ್ವಿಜ್ ಇರಲಿದ್ದು, ಗ್ರಾಮೀಣ ಪ್ರದೇಶದ ಜನತೆ ಇದರಲ್ಲಿ ಪಾಲ್ಗೊಂಡು ಒಂದು ಕೋಟಿ ರೂಪಾಯಿ ಬಹುಮಾನ ಗೆಲ್ಲಬಹುದಾಗಿದೆ. ಈ ಕ್ವಿಜ್ ನಲ್ಲಿ ಹಳ್ಳಿ ಜೀವನ, ಮಾಹಿತಿ ಹಕ್ಕು ಹಾಗೂ ಸರ್ಕಾರದ ನೀತಿ ಮತ್ತು ಕಾರ್ಯಕ್ರಮಗಳ ಕುರಿತ ಪ್ರಶ್ನೆಗಳಿರುತ್ತವೆ.
ಈ ಚಾನೆಲ್ ನಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ, ಅಲ್ಲದೆ ಪ್ರಗತಿಪರ ರೈತರು ಮತ್ತು ಯಶಸ್ಸನ್ನು ಸಾಧಿಸಿದ ಗ್ರಾಮೀಣರ ಸಂದರ್ಶನವೂ ಇರುತ್ತದೆ.
ಕಳೆದ 60 ವರ್ಷಗಳಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಗ್ರಾಮೀಣ ಜನತೆಗೆ ವ್ಯಯ ಮಾಡಿದ್ದರೂ ಅವು ಈಗಲೂ ಸರಿಯಾಗಿ ತಲುಪುತ್ತಿಲ್ಲ ಎಂದ ಸಚಿವರು ,ಗ್ರಾಮೀಣ ಜನತೆಯಲ್ಲಿ ತಮ್ಮ ಹಕ್ಕುಗಳು ಹಾಗೂ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಜಾಗೃತಿ ಮೂಡಿಸುವುದೇ ಈ ಚಾನೆಲ್ ನ ಮುಖ್ಯ ಉದ್ದೇಶ ಎಂದರು.
ಇದರಿಂದ ಕಾರ್ಯಕ್ರಮಗಳ ಅನುಷ್ಠಾನವೂ ಸಮರ್ಪಕವಾಗಿ ಆಗಲಿದೆ ಎಂದರು. ಮಾಹಿತಿ ಕೊರತೆಯಿಂದ ಸುಮಾರು 70,000 ಕೋಟಿ ರೂಪಾಯಿಗಳಷ್ಟು ಯೋಜನೆಗಳು ಜನರಿಗೆ ತಲುಪಿಲ್ಲ ಎಂದರು.
ಗ್ರಾಮ ಪಂಚಾಯ್ತಿಗಳ ಮುಖ್ಯಸ್ಥರು ಹಾಗೂ ಸದಸ್ಯರು ತಮ್ಮ ಹಕ್ಕುಗಳನ್ನು ಅರಿತುಕೊಂಡು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.


Click it and Unblock the Notifications











