3 ಲವ್ ಸ್ಟೋರಿ, 1 ರಹಸ್ಯ ಮದುವೆ ; 39ನೇ ವರ್ಷದಲ್ಲಿ ಉದ್ಯಮಿ ಜೊತೆ ಹಸೆಮಣೆ ಏರಲು ರೆಡಿಯಾದ ಬಿಗ್ ಬಾಸ್ ಸ್ಫರ್ಧಿ
ಪ್ರೀತಿಯ ಸುಖದ ಕ್ಷಣಗಳನ್ನು ಹೇಗೆ ಕೆಲವರು ಗುನುಗುತ್ತಿರುತ್ತಾರೋ ಹಾಗೇಯೇ ನೋವನ್ನು ಕೂಡ ಪದೇ ಪದೇ ಮನದೊಳಗೆ ಅನುಭವಿಸುತ್ತಿರುತ್ತಾರೆ. ಆಗಾಗ ಪ್ರೀತಿಯಲ್ಲಿ ಬೀಳುವುದು ಮತ್ತು ಪ್ರೀತಿಯಿಂದ ದೂರವಾಗುವುದು ಎಲ್ಲ ಸಾಮಾನ್ಯ ಈಗ. ಅನುಭವಗಳ ಮೂಲಕ ಪಾಠ ಕಲಿತರೂ ಪ್ರೀತಿಯ ವಿಷಯದಲ್ಲಿ ಮಾತ್ರ ತುಂಬಾ ಹರ್ಟ್ ಆಗಿ ಬಿಡುತ್ತಾರೆ. ಈ ನೋವು ಕೆಲವೊಮ್ಮೆ ಜೀವನಪೂರ್ತಿ ಕಾಡುತ್ತೆ. ಹಾಗಂಥ ಜೀವನ ಮುಗಿದೇ ಹೋಯ್ತು ಅಂತ ಅಲ್ಲ.
ಯಾಕೆಂದರೆ .. ಜೀವನ ನಿಂತ ನೀರಲ್ಲ. ಅದು ಸದಾ ಹರಿಯುತ್ತಲೇ ಇರುತ್ತೆ. ಹೀಗಾಗಿ ಹಲವರು ಹಳೆಯದೆಲ್ಲವನ್ನು ಮರೆಯುವ ಪ್ರಯತ್ನ ಮಾಡುತ್ತಾರೆ. ಆ ಪ್ರಯತ್ನದಲ್ಲಿಯೇ ಬದುಕಿನ ಬಂಡಿ ಎಳೆಯುತ್ತಾ ಹೊಸ ವ್ಯಕ್ತಿಗಳು ಮತ್ತು ಹೊಸ ಸನ್ನಿವೇಶಗಳನ್ನು ಸಂಧಿಸುತ್ತಾರೆ. ಆ ಪೈಕಿ ಬಣ್ಣದ ಲೋಕದಲ್ಲಿರುವವರು ಎಲ್ಲರಿಗಿಂತ ತುಸು ಮುಂದು ಇರುತ್ತಾರೆ. ಉದಾಹರಣೆಗೆ ಪವಿತ್ರಾ ಪುನಿಯಾ.

ಹೌದು, ಪವಿತ್ರಾ ಪುನಿಯಾ.. ಹಿಂದಿ ಕಿರುತೆರೆಯ ಖ್ಯಾತ ಹೆಸರು. ''ಯೇ ಹೈ ಮೊಹಬ್ಬತ್ತೇ''.. ''ನಾಗಿನ್ 3''.. ''ಲವ್ ಯೂ ಜಿಂದಗಿ''.. ''ಡಾಯನ್''.. ''ಇಶ್ಕ್ ಕೀ ದಾಸ್ತಾನ್''.. ಧಾರಾವಾಹಿಗಳ ಮೂಲಕ ಜನ ಮನ ಗೆದ್ದ ಪವಿತ್ರಾ ಪುನಿಯಾ ''ಬಿಗ್ ಬಾಸ್-14''ರ ಸ್ಫರ್ಧಿ ಕೂಡ ಹೌದು.
ಇಂಥಾ ಪವಿತ್ರಾ ಪುನಿಯಾ 2015ರಲ್ಲಿ ಸುಮಿತ್ ಮಹೇಶ್ವರಿ ಜೊತೆ ಮದುವೆಯಾಗಬೇಕಿತ್ತು. ನಿಶ್ಚಿತಾರ್ಥ ಕೂಡ ನಡೆದಿತ್ತು. ಆದರೆ.. ಆ ನಂತರ ಅದೇನಾಯ್ತು ಗೊತ್ತಿಲ್ಲ. ಈ ಸಂಬಂಧ ಮುರಿದು ಬಿತ್ತು. ಮದುವೆ ಮುರಿದು ಬಿದ್ದು 5 ವರ್ಷಗಳ ನಂತರ ಅಂದರೆ 2020ರಲ್ಲಿ ಸುಮಿತ್ ಏಕಾಏಕಿ ಪವಿತ್ರಾ ಪುನಿಯಾ ಅವರ ವಿರುದ್ದ ಹಲವು ಆರೋಪಗಳನ್ನು ಮಾಡಿದ್ದರು. ರಹಸ್ಯವಾಗಿ ಮದುವೆಯಾಗಿತ್ತು ಎಂದು ಬಾಂಬ್ ಎಸೆದಿದ್ದರು.
ಆ ನಂತರ ಈಜಾಜ್ ಖಾನ್ ಜೊತೆ ಪವಿತ್ರಾ ಪುನಿಯಾ ಪ್ರೀತಿಯಲ್ಲಿ ಬಿದ್ದರು. ''ಬಿಗ್ ಬಾಸ್ ಸೀಸನ್ 14'' ಇವರ ಪ್ರೇಮಕ್ಕೆ ಬುನಾದಿ ಹಾಕಿತ್ತು. ಆರಂಭದ ದಿನಗಳಲ್ಲಿ ''ಬಿಗ್ ಬಾಸ್''ನಲ್ಲಿ ಇಬ್ಬರು ದಿನ ನಿತ್ಯ ಜಗಳವೂ ಆಡಿದರು. ಆದರೆ ಆ ನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಹೀಗೆ ಪ್ರೀತಿಯ ಬಲೆಯಲ್ಲಿ ಸಿಲುಕಿದ ಇಬ್ಬರು ಒಂದಲ್ಲ, ಎರಡಲ್ಲ.. ನಾಲ್ಕು ವರ್ಷ ಜೊತೆಯಲ್ಲಿದ್ದರು. ಓಡಾಡಿದರು. ಎಲ್ಲರೆದುರು ತಮ್ಮ ಪ್ರೀತಿಯನ್ನು ಕೂಡ ಒಪ್ಪಿಕೊಂಡರು. ಇನ್ನೇನು ಇಬ್ಬರು ಮದುವೆಯಾಗುತ್ತಾರೆ ಎಂದೇ ಎಲ್ಲ ಅಂದುಕೊಂಡಿದ್ದರು. ಆದರೆ ಅಷ್ಟರಲ್ಲಿ ಇವರ ಸಂಬಂಧ ಮುರಿದು ಬಿತ್ತು.

ಈಜಾಜ್ ಖಾನ್ ಮತ್ತು ಪವಿತ್ರ ಪುನಿಯಾ ದೂರವಾದ ನಂತರ, ಹಲವರು.. ಇವರ ಪ್ರೀತಿಗೆ ಧರ್ಮ ಅಡ್ಡಿಯಾಯ್ತು ಎಂದು ಮಾತನಾಡಿದರು. ಈ ಮಾತುಗಳನ್ನು ಈಜಾಜ್ ಖಾನ್ ಆಗಲಿ ಪವಿತ್ರಾ ಪುನಿಯಾ ಆಗಲಿ ಒಪ್ಪಿಕೊಂಡಿಲ್ಲವಾದರೂ ಪವಿತ್ರಾ ಮಾತನಾಡಿದ್ದ ಮಾತುಗಳು ಪರೋಕ್ಷವಾಗಿ ಈ ಮಾತುಗಳನ್ನು ಪುಷ್ಠಿಕರಿಸುವಂತೆ ಇದ್ದವು. ಆ ನಂತರ ಪಾರಸ್ ಛಾಬ್ರಾ ಮತ್ತು ಪ್ರತೀಕ್ ಸೆಹಜ್‌ಪಾಲ್ ಅವರ ಜೊತೆ ಕೂಡ ಇವರ ಹೆಸರು ಥಳುಕು ಹಾಕಿಕೊಂಡಿತ್ತು.
ಹೀಗೆ ಮೂರು ಲವ್ & ಬ್ರೇಕಪ್ ಸ್ಟೋರಿ ಮತ್ತು ಒಂದು ರಹಸ್ಯ ಮದುವೆಯ ಹಿನ್ನೆಲೆ ಹೊಂದಿರುವ ಪವಿತ್ರಾ ಪುನಿಯಾ ಸದ್ಯ ಮದುವೆಯಾಗಲು ಅಣಿಯಾಗಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಕಳೆದ ಅಕ್ಟೋಬರ್ 22ರಂದು ಯುಎಸ್ ಮೂಲದ ಉದ್ಯಮಿ ಜೊತೆ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪವಿತ್ರ ಪುನಿಯಾ ಮುಂಬರುವ ಮಾರ್ಚ್‌ನಲ್ಲಿ ಸಪ್ತಪದಿಯನ್ನು ತುಳಿಯಲಿದ್ದಾರೆ. ಸದ್ಯ ಪವಿತ್ರಾ ಪುನಿಯಾ ಅವರಿಗೆ ಹಲವಾರು ಸ್ನೇಹಿತರು ಮತ್ತು ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.


Click it and Unblock the Notifications











