ಪಂಚಪ್ರಶ್ನೆಗಳಿಗೆ 'ಪರಮೇಶ್ವರ' ರವಿತೇಜ ಉತ್ತರ

ಪ್ರಶ್ನೆ: ನಿಮ್ಮ ಸ್ವಂತ ಊರು, ಒರಿಜಿನಲ್ ಹೆಸರು, ವಿದ್ಯಾಭ್ಯಾಸದ ಬಗ್ಗೆ (ಬಯೋಡಾಟ) ಹೇಳಿ...
ಉತ್ತರ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೇರಿಕೆ ನನ್ನ ಹುಟ್ಟೂರು. ಈಗಿರುವುದು ಬೆಂಗಳೂರಿನ ನಂದಿನಿ ಲೇ ಔಟ್. ನನ್ನ ಮೂಲಹೆಸರು ರವಿ, ಈಗ ರವಿತೇಜ. ಓದಿದ್ದು ಬೆಳ್ತಂಗಡಿ, ಮೂಡಿಗೆರೆ, ಸಕಲೇಶಪುರ ಹಾಗೂ ಹಾಸನದಲ್ಲಿ. ಪದವಿ ಓದಿ ಬಣ್ಣದ ಬದುಕಿನ ವೃತ್ತಿಯಲ್ಲಿದ್ದೇನೆ.
ಪ್ರಶ್ನೆ: ಬಣ್ಣದ ಬದುಕು ಪ್ರಾರಂಭವಾದದ್ದು ಹೇಗೆ?ಯಾರಾದರೂ ಗಾಡ್ ಫಾದರ್? ಮೊದಲ ಧಾರಾವಾಹಿ ಅಥವಾ ಚಿತ್ರ...?
ಉತ್ತರ: ಬಣ್ಣದ ಬದುಕಿಗೆ ನನ್ನನ್ನು ಪರಿಚಯಿಸಿ ನನ್ನ ಇಂದಿನ ಸಾಧನೆಗೆ ಕಾರಣರಾದವರಲ್ಲಿ ಪ್ರಮುಖರು- ಉಷಾ ಭಂಡಾರಿ ಹಾಗೂ ದಿವಂಗತ ಮೈನಾ ಚಂದ್ರು. ಅವರಿಬ್ಬರೂ ನನ್ನ 'ಗಾಡ್ ಮದರ್, ಫಾದರ್'. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಕುಬೇರಪ್ಪ ಅಂಡ್ ಸನ್ಸ್' ಹಾಸ್ಯ ಧಾರಾವಾಹಿಗೆ 'ಸ್ಕ್ರಿಪ್ಟ್ ರೈಟರ್' ಆಗಿ ಹೋದ ನಾನು ಅಲ್ಲಿಯ ತಂಡದವರ ಸಲಹೆ ಮೇರಗೆ ಮೊದಲು ಬಣ್ಣ ಹಚ್ಚಿದ್ದು. ನಂತರ ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಸಾಕಷ್ಟು ಪಾತ್ರಗಳು ಹುಡುಕಿಕೊಂಡು ಬಂದವು.
ಪ್ರಶ್ನೆ: ವೃತ್ತಿಜೀವನದ ಮರೆಯಲಾಗದ ಅನುಭವ?
ಉತ್ತರ: ಓಹ್, ಹೇಳಲೇಬೇಕು. ಅದು ಬೆಂಗಳೂರಿಗೆ ಬಂದ ಹೊಸದು. ನನ್ನ ಕಾಲೇಜ್ ಲೆಕ್ಚರರ್ ಉಷಾ ಭಂಡಾರಿಯವರು 'ಮೈನಾ' ಎಂದು ಹೆಸರು ಹೇಳಿ ನಂಬರ್ ಕೊಟ್ಟು ಕಳುಹಿಸಿದ್ದರು. ನಾನು 'ಕುಬೇರಪ್ಪ ಸನ್ಸ್ ಟೀಮ್' ಇದ್ದಲ್ಲಿಗೆ ಬಂದು 'ಮೈನಾ ಮೇಡಮ್' ಭೇಟಿಯಾಗಬೇಕಿತ್ತು ಅಂದೆ. ಅಲ್ಲೇ ಇದ್ದ 'ಮೈನಾ ಚಂದ್ರು' ಸಾಕಷ್ಟು ನಕ್ಕು ನಂತರ ನಾನೇ ನೀವು ಹೇಳುವ 'ಮೈನಾ ಮೇಡಮ್, ಅಲ್ಲಲ್ಲ... ಮೈನಾ ಚಂದ್ರು' ಅಂದ್ರು. ನನಗೆ ಮುಜುಗರ, ಸಂತೋಷ ಒಟ್ಟಿಗೆ ಆದ ಆ ಸಂದರ್ಭ ನನಗೆ ಇಂದಿಗೂ ಆಗಾಗ ಕಾಡುವ ನೆನಪು.
ಜೊತೆಗೆ ನನ್ನ ಎಲ್ಲಾ ಸಾಧನೆಗೆ, ಜೀವನದ ನೆಮ್ಮದಿಗೆ ಕಾರಣಕರ್ತರು ನನ್ನ ನಾಲ್ಕು ಮಿತ್ರರು. ಅವರಿಲ್ಲದೇ ನಾನಿಲ್ಲ. ಅವರ ಹೆಸರು-ರತನ್, ಹುರ್ಡಿ ಗಿರಿ, ಸುಕೃತ್ ಹಾಗೂ ಶಿವು.
ಪ್ರಶ್ನೆ: ಪಾರ್ವತಿ ಪರಮೇಶ್ವರ ಧಾರಾವಾಹಿಯ ಹೊರತಾಗಿ ಸದ್ಯಕ್ಕೆ ಬೇರೇನು ಮಾಡುತ್ತಿದ್ದೀರಿ?
ಉತ್ತರ: ನನಗೆ ಸಾಕಷ್ಟು ಧಾರಾವಾಹಿ, ರಿಯಾಲಿಟಿ ಶೋ ಹಾಗೂ ಸಿನಿಮಾ ಪಾತ್ರಗಳ ಆಫರ್ ಬರುತ್ತಿವೆ. ಆದರೆ ಬ್ಯುಸಿ ಶೆಡ್ಯೂಲ್ ನಲ್ಲಿ ಕೆಲಸ ಮಾಡುತ್ತಿರುವ ಕಾರಣ ಅದನ್ನೆಲ್ಲಾ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸದ್ಯಕ್ಕೆ ಪರಮೇಶ್ವರನ ಪಾತ್ರದಲ್ಲಿ ತುಂಬಾ ಖುಷಿಯಾಗಿದ್ದೇನೆ. ಬರುವ ಮಾರ್ಚ್ ನಲ್ಲಿ ಚಿತ್ರವೊಂದನ್ನು ನಿರ್ದೇಶಿಸುವ 'ಪ್ಲಾನ್' ಇದೆ.
ಪ್ರಶ್ನೆ: ಇಷ್ಟವಾದ ತಿಂಡಿ, ಡ್ರೆಸ್, ಹಾಗೂ ಹವ್ಯಾಸಗಳು?
ಉತ್ತರ: ರೊಟ್ಟಿ-ಪಲ್ಯ, ಪಲಾವ್ ಇಷ್ಟ. ಜೀನ್ಸ್-ಟೀ ಶರ್ಟ್ ಧರಿಸಿದಾಗ ಕಂಫರ್ಟ್ ಅನಿಸಿಕೆ. ಪ್ರವಾಸಕ್ಕೆ ಹೋದಾಗ ಸಾಕಷ್ಟು ದೇವರ ಫೋಟೋ ಹಾಗೂ ಪ್ರತಿಮೆಗಳನ್ನು ತರುವುದು ನನ್ನ ಹವ್ಯಾಸ.
ಇಷ್ಟನ್ನೂ ಇಷ್ಟಪಟ್ಟು ಹೇಳಿ ನಕ್ಕರು, ನಮ್ಮೆಲ್ಲರ ಪರಮೇಶ್ವರ. ಪಾತ್ರದ ಮೂಲಕ ಎಲ್ಲರನ್ನೂ ನಗಿಸುತ್ತಾ, ಕಲೆಯ ಮೂಲಕ ಜೀವನದ ಸಾರ್ಥಕತೆ ಕಂಡುಕೊಳ್ಳುತ್ತಿರುವ ರವಿತೇಜ ಅವರಿಗೆ ಒನ್ ಇಂಡಿಯಾ ಕನ್ನಡದ ಪರವಾಗಿ 'ಆಲ್ ದಿ ಬೆಸ್ಟ್'.


Click it and Unblock the Notifications











