For Quick Alerts
  ALLOW NOTIFICATIONS  
  For Daily Alerts

  ಲೋಕೇಶ್ ಬಸವಟ್ಟಿ 'ಲಾಯರ್ ಗುಂಡಣ್ಣ'ನ ಗಮ್ಮತ್ತು

  By *ಶ್ರೀರಾಮ್ ಭಟ್
  |

  ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ '10-30'ಕ್ಕೆ ಪ್ರಸಾರ ಕಾಣುತ್ತಿರುವ ಧಾರಾವಾಹಿ 'ಪಾರ್ವತಿ ಪರಮೇಶ್ವರ'. ಫೈನಲ್ ಕಟ್ ಪ್ರೊಡಕ್ಷನ್ ನಿರ್ಮಾಣದ ಈ ಸೀರಿಯಲ್, ಬರೋಬ್ಬರಿ 750 ಸಂಚಿಕೆಗಳನ್ನು ಮೀರಿ ಜನಪ್ರಿಯತೆಯ ಜೊತೆಗೆ ಮುನ್ನಡೆಯುತ್ತಿದೆ. ಕರ್ನಾಟಕದ ತುಂಬೆಲ್ಲ ಪಾರ್ವತಿ ಪರಮೇಶ್ವರ ಸಿಕ್ಕಾಪಟ್ಟೆ ಫೇಮಸ್. ಈ ಧಾರಾವಾಹಿಯ 'ಲಾಯರ್ ಗುಂಡಣ್ಣ' ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿ ಎಲ್ಲರ ಗಮನಸೆಳೆಯುತ್ತಿರುವ ನಟ 'ಲೋಕೇಶ್ ಬಸವಟ್ಟಿ'. ಅವರು ಒನ್ ಇಂಡಿಯಾ ಕನ್ನಡಕ್ಕೆ (ಪಂಚ ಪ್ರಶ್ನೆಗಳಿಗೆ) ನೀಡಿದ ಸಂದರ್ಶನ ಇಲ್ಲಿದೆ, ಓದಿ...

  ಪ್ರಶ್ನೆ: ನಿಮ್ಮ ಹುಟ್ಟೂರು, ಮೂಲ ಹೆಸರು, ವಿದ್ಯಾಭ್ಯಾಸದ ಬಗ್ಗೆ ಹೇಳಿ...

  ಉತ್ತರ: ನಾನು ಹುಟ್ಟಿ ಬೆಳೆದದ್ದು ಚಾಮರಾಜನಗರ ಜಿಲ್ಲೆ ಬಸವಟ್ಟಿ ಗ್ರಾಮ. ತಂದೆ ನಂಜುಂಡಸ್ವಾಮಿ, ತಾಯಿ ಶಿವಗಂಗಮ್ಮ. ಡಿಪ್ಲೋಮಾ ಓದಿದ್ದೂ ಅಲ್ಲೇ. ಈಗ ಇರುವುದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ.

  ಪ್ರಶ್ನೆ: ಬಣ್ಣದ ಬದುಕಿಗೆ ಬಂದಿದ್ದು ಹೇಗೆ? ನಿಮಗೆ ಯಾರಾದರೂ ಗಾಡ್ ಫಾದರ್?

  ಉತ್ತರ: ಡಿಪ್ಲೋಮಾ ಕೊನೆಯ ವರ್ಷದಲ್ಲಿದ್ದಾಗಲೇ ಕ್ಯಾಂಪಸ್ ಸೆಲೆಕ್ಷನ್ ನ ಮೂಲಕ 'ಎಲ್ ಎನ್ ಟಿ' ಯಲ್ಲಿ ಕೆಲಸ ಸಿಕ್ಕಿತ್ತು. ಆದರೆ ನನ್ನ ಕನಸು ಮಾಡೆಲಿಂಗ್ ಆಗಿತ್ತು. ಜೊತೆಗೆ ನಾಟಕದ ಗೀಳೂ ಇತ್ತು. ಒಂದು ವರ್ಷ ಕೆಲಸದ ಜೊತೆ ನಾಟಕದಲ್ಲಿ ಅಭಿನಯವನ್ನೂ ಮಾಡಿದೆ. ಆಗ ಪರಿಚಯವಾಗಿ ಹತ್ತಿರವಾದವರು ನಟ ಮಂಡ್ಯ ರಮೇಶ್. ಅವರಿಗೆ ನನ್ನ ಮಾಡೆಲಿಂಗ್ ಮಾಡುವ ಕನಸನ್ನೂ ಹೇಳಿದ್ದೆ. ಆದರೆ ಅವರು "ಈಗ ಕೆಲಸ ಮುಂದುವರಿಸು, ನಾನು ಹೇಳಿದಾಗ ಬಾ" ಎಂದಿದ್ದರು.

  ಅವರು ಸಲಹೆಯನ್ನೂ ಮೀರಿ ಒಂದು ದಿನ, ಇರುವ ಕೆಲಸ ಬಿಟ್ಟು 'ಲಗೇಜ್' ಸಮೇತ ಅವರ ಮುಂದೆ ಹೋಗಿ ನಿಂತೆ. ಬರಹೇಳದೇ ಬಂದರೂ ಬಯ್ಯಲಿಲ್ಲ, ಹೋಗೆನ್ನಲಿಲ್ಲ. ಬದಲಿಗೆ ತಮ್ಮದೇ ಮನೆಯ ಮೇಲಿದ್ದ ರೂಂ ನಲ್ಲಿ ಆಸರೆ ಕೊಟ್ಟರು. ಅವರು ಹಾಗೂ ಅವರ ಶ್ರೀಮತಿ ಸರೋಜಾ ಹೆಗಡೆ ಇರಲು ನೆಲೆ ಮಾಡಿಕೊಟ್ಟಿದ್ದಲ್ಲದೇ ಮನೆಯ ಮಗನಂತೆ ಹೊಟ್ಟೆ-ಬಟ್ಟೆಗೂ ಕೊಟ್ಟು ಸಾಕಿದರು. ಅವರ ಜೊತೆ ನಾಟಕದಲ್ಲಿ ಅಭಿನಯಿಸುತ್ತಾ ಅವರು ನಡೆಸುತ್ತಿದ್ದ 'ನಟನಾ' ಸಂಸ್ಥೆಯಲ್ಲಿ ನನ್ನಿಂದಾದ ಕೆಲಸ ಮಾಡುತ್ತಾ ಕಲಾಸೇವೆಯಲ್ಲಿ ತೊಡಗಿಕೊಂಡೆ.

  ಪ್ರತೀ ವರ್ಷ ನಡೆಯುವ ಬೇಸಿಗೆ ಶಿಬಿರಕ್ಕೆ ಶುಲ್ಕ ಕೊಟ್ಟು ಬರುವ ಬಹಳಷ್ಟು ಮಕ್ಕಳ ಜೊತೆ, ಬರುತ್ತಿದ್ದ ಸಾಕಷ್ಟು ಅನಾಥ ಮಕ್ಕಳಿಗೆ ಉಚಿತವಾಗಿ ಶಿಬಿರದಲ್ಲಿ ನಾಟಕ, ಸಂಗೀತ, ಹೀಗೆ ಬಹಳಷ್ಟು ಕಲೆಗಳ ತರಬೇತಿ ಕೊಡುತ್ತಿದ್ದೆವು. ಹೀಗೆ ಕಳೆಯುತ್ತಿದ್ದಾಗ ಒಂದು ದಿನ ಕರ್ನಾಟಕ ಸರ್ಕಾರದ 'ಸುಮಕೆ ಸುರಭಿ ಬಂದ ಘಳಿಗೆ' ಎಂಬ 'ಕಿರುಚಿತ್ರ'ಕ್ಕಾಗಿ ಬಣ್ಣ ಹಚ್ಚಿ ಕ್ಯಾಮರಾ ಮುಂದೆ ನಿಂತೆ. ರಂಗಭೂಮಿಯಿಂದ ಕ್ಯಾಮರಾ ಮುಂದೆ ಅದೇ ನನ್ನ ಮೊದಲ ಎಂಟ್ರಿ.

  ನಂತರ 'ಸಿಲ್ಲಿ ಲಲ್ಲಿ' ಸೀರಿಯಲ್ ನಲ್ಲಿ ಕೆಲವು ಪಾತ್ರಗಳಲ್ಲಿ ಅಭಿನಯಿಸಿದೆ. 'ಪಾಯಿಂಟ್ ಪರಿಮಳಾ' ಎಂಬ ಧಾರಾವಾಹಿಯಲ್ಲಿ 'ಲಾಯರ್ ಅಸಿಸ್ಟಂಟ್' ಪಾತ್ರದಲ್ಲಿ 265 ಸಂಚಿಕೆಗಳಲ್ಲಿ ಅಭಿನಯಿಸುವ ಮೂಲಕ ಕಿರುತೆರೆಯನ್ನು ಒಪ್ಪಿ ಅಪ್ಪಿಕೊಂಡೆ. ಇದೀಗ 'ಪಾರ್ವತಿ ಪರಮೇಶ್ವರದಲ್ಲಿ 'ಲಾಯರ್ ಗುಂಡಣ್ಣ' ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. 750 ಸಂಚಿಕೆಗಳನ್ನು ದಾಟಿ ಮುನ್ನುಗ್ಗುತ್ತಿರುವ ಈ ಧಾರಾವಾಹಿಯ ಪಾತ್ರದ ಮೂಲಕ ಜನ ಹೊರಗಡೆ ಗುರುತಿಸುತ್ತಾರೆ, ತುಂಬಾ ಖುಷಿಯಾಗುತ್ತದೆ.

  ಒಟ್ಟಿನಲ್ಲಿ ನಾನು ನಟ ಎನಿಸಿಕೊಳ್ಳಲು ಕಾರಣರಾದ ನಟ ಮಂಡ್ಯ ರಮೇಶ್ ಅವರೇ ನನ್ನ ಗಾಡ್ ಫಾದರ್. ಅವರ ಪತ್ನಿ ಸರೋಜಾ ಹೆಗಡೆ, ನನ್ನ ಪಾಲಿನ ಅನ್ನಪೂರ್ಣೇಶ್ವರಿ.

  ಪ್ರಶ್ನೆ: ವೃತ್ತಿಜೀವನದ ಮರೆಯಲಾಗದ ಘಟನೆ, ಅನುಭವ?

  ಉತ್ತರ: ಕೆಲಸ ಬಿಟ್ಟು ಬಂದಾಗ ಇದ್ದ ತ್ರಿಶಂಖು ಸ್ಥಿತಿಯ ಮನೋಸ್ಥಿತಿಯನ್ನು ನಾನೆಂದೂ ಮರೆಯಲಾರೆ. ಹಾಗೇ ಮಂಡ್ಯ ರಮೇಶ್ ದಂಪತಿಗಳು ನೀಡಿದ ಊಟ, ಒಡನಾಟ ನನ್ನ ಪಾಲಿನ ಸವಿಸವಿ ನೆನಪು. ಕಲಾವಿದನಾಗುವ ದಾರಿಯಲ್ಲಿ ಆಗುವ ಯಾವುದೇ ಕೆಟ್ಟ ಘಟನೆ ಅಥವಾ ಅನುಭವವನ್ನು ನಾನು ಕಲಿಕೆಯೆಂದೇ ಅಂದುಕೊಳ್ಳುತ್ತೇನೆ. ಪ್ರತೀ ದಿನ ಹೊಸತು, ಹೊಸ ಕಲಿಕೆ ಪಡೆದುಕೊಳ್ಳುತ್ತೇನೆ. ಹಾಗಾಗಿ ನನ್ನ ಪಾಲಿಗೆ ಎಲ್ಲವೂ ಮರೆಯಲಾರದ, ಮರೆಯಬಾರದ ಘಟನೆಗಳೇ.

  ಪ್ರಶ್ನೆ: ಪಾರ್ವತಿ ಪರಮೇಶ್ವರ ಧಾರಾವಾಹಿಯ ಹೊರತಾಗಿ ಬೇರೇ ಯಾವುದರಲ್ಲಾದರೂ ನಟನೆ?

  ಉತ್ತರ: ಬೇರೆ ಧಾರಾವಾಹಿ ಹಾಗೂ ಸಿನಿಮಾಗಳಿಂದ ಬಹಳಷ್ಟು ಆಫರ್ ಬರುತ್ತವೆ. ಅದರಲ್ಲೂ ಹಾಸ್ಯ, ಲಾಯರ್ ಪಾತ್ರಗಳು ನನ್ನನ್ನೇ ಹುಡುಕಿಕೊಂಡು ಬರುತ್ತವೆ. ಆದರೆ ನಾನು ಈಗ 'ಪಾರ್ವತಿ ಪರಮೇಶ್ವರ' ಧಾರಾವಾಹಿಯ ರೆಗ್ಯುಲರ್ ಪಾತ್ರಧಾರಿಗಳಲ್ಲೊಬ್ಬ. ಸತತ ಚಿತ್ರೀಕರಣದ ನಡುವೆ ವೇಳೆ ಹೊಂದಿಸಲು ಸಾಧ್ಯವಾಗುವುದಿಲ್ಲ ಎಂಬುದಕ್ಕಿಂತ ಇಲ್ಲಿ ಕಮಿಟ್ ಆಗಿರುವ ನನಗೇ ಬೇರೆ ಕಡೆ ಹೋಗಲು ಮನಸ್ಸಿಲ್ಲ. ಲಾಯರ್ ಗುಂಡಣ್ಣ ಪಾತ್ರದಲ್ಲೇ ನೆಮ್ಮದಿ ಕಂಡುಕೊಂಡಿದ್ದೇನೆ.

  ಫೈನಲ್ ಕಟ್ ಪ್ರೊಡಕ್ಷನ್ ಇಡೀ ಟೀಮ್ ನನಗಿಷ್ಟ. ಸಿಹಿಕಹಿ ಚಂದ್ರು-ಗೀತಾ ದಂಪತಿ, ಸಂಚಿಕೆ ನಿರ್ದೇಶಕರಾದ ಫ್ರಥ್ವಿರಾಜ್ ಕುಲಕರ್ಣಿ ಹಾಗೂ ಕಥೆ, ಸಂಭಾಷಣೆಕಾರರಾದ ಎಂ ಎಸ್ ನರಸಿಂಹಮೂರ್ತಿ ಹಾಗೂ ಇಡೀ ತಂಡ ತುಂಬಾ ಚೆನ್ನಾಗಿ ನನ್ನನ್ನು ನೋಡಿಕೊಂಡಿದ್ದಾರೆ. ಹಾಗಾಗಿ ಈ ಧಾರಾವಾಹಿಗೇ ನನ್ನ ಸಂಪೂರ್ಣ ಆದ್ಯತೆ. ಕಲಾವಿದನಾಗಿ ನನಗೆ ಕಮಿಟ್ ಮೆಂಟ್ ತುಂಬಾ ಮುಖ್ಯ. ಇದ್ದಲ್ಲೇ ಬೆಳೆಯುವ ಅಭಿಲಾಷೆ ನನ್ನದು.

  ಪ್ರಶ್ನೆ: ಇಷ್ಟವಾದ ತಿಂಡಿ, ಡ್ರೆಸ್, ಹಾಗೂ ಹವ್ಯಾಸಗಳು?

  ಉತ್ತರ: ಟೊಮ್ಯಾಟೊ ಗೊಜ್ಜು ನೋಡಿದ್ರೆ ಮುಗೀತು, ಬಾಯಲ್ಲಿ ನೀರು. ಅದನ್ನು ನಾನೇ ಮಾಡುತ್ತೇನೆ ಕೂಡ. ಬಟ್ಟೆಯ ಬಗ್ಗೆ ಕ್ರೇಜ್ ಇಲ್ಲ. ಸ್ನೇಹಿತರ ಜೊತೆ ಹೋಗಿ ಅವರು ಇಷ್ಟಪಟ್ಟಿದ್ದನ್ನು ತಂದು ಹಾಕಿಕೊಳ್ಳುತ್ತೇನೆ. ಯಾವುದೇ ವಸ್ತುಗಳ ಬಗ್ಗೆ ಕ್ರೇಜ್ ಇಲ್ಲವೇ ಇಲ್ಲ. ಅಭಿಮಾನಿಗಳೇ ನನಗೆ ಎಲ್ಲವೂ...

  ಇಷ್ಟು ಹೇಳಿ ಮಾತು ಮುಗಿಸಿದರು ನಮ್ಮೆಲ್ಲರ ಲಾಯರ್ ಗುಂಡಣ್ಣ. 'ಅಭಿಮಾನಿಗಳೇ ನನಗೆ ಪಂಚಪ್ರಾಣ' ಎಂದು ಹೇಳುವ ಅವರಿಗೆ, ಅಭಿಮಾನಿಗಳಿಗೂ ಇವರೆಂದರೆ 'ಪಂಚಕಜ್ಜಾಯ' ಎಂಬುದು ತಿಳಿದಿದೆಯೋ ಏನೋ!...

  'ಪಾಯಿಂಟ್ ಪರಿಮಳಾ' ಧಾರಾವಾಹಿಯಲ್ಲಿ ಲಾಯರ್ ಅಸಿಸ್ಟಂಟ್ ಆಗಿದ್ದ ಲೋಕೇಶ್ ಬಸವಟ್ಟಿ, ಈಗ ಲಾಯರ್ ಆಗಿ 'ಭಡ್ತಿ' ಪಡೆದಿದ್ದಾರೆ. ಮುಂದೆ (ತೆರೆಯ ಮೇಲೆ) ಹೈಕೋರ್ಟ್, ಸುಪ್ರಿಮ್ ಕೊರ್ಟ್ ಜಡ್ಜ್ ಆದರೂ ಅಚ್ಚರಿಯಿಲ್ಲ, ಯಾವುದಕ್ಕೂ ಅವರ ಮೇಲೊಂದು ಕಣ್ಣಿಟ್ಟಿರಿ...

  ಇದು 'ಒನ್ ಇಂಡಿಯಾ ಕನ್ನಡ' ಓದುಗರಿಗೆ 'ಲಾಯರ್ ಗುಂಡಣ್ಣ, ಅಲ್ಲ.., ಲೋಕೇಶ್ ಬಸವಟ್ಟಿ ನೀಡಿದ ಸಂದರ್ಶನದ ಸವಿವರ...

  English summary
  Actor Lokesh Basavatti is acting lead role Lawyer Gundanna' in Zee Kannada Serial 'Parvati Parameshwara'. This is the exclusive interview of actor Lokesh Basavatti.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X