For Quick Alerts
  ALLOW NOTIFICATIONS  
  For Daily Alerts

  ಪಂಚಪ್ರಶ್ನೆಗಳಿಗೆ 'ಪಾರ್ವತಿ' ಗಾನಶ್ರೀ ಗಾನಾ ಬಜಾನಾ

  By * ಶ್ರೀರಾಮ್ ಭಟ್
  |

  ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ '10-30'ಕ್ಕೆ ಪ್ರಸಾರವಾಗುತ್ತಿರುವ ಫೈನಲ್ ಕಟ್ ಪ್ರೊಡಕ್ಷನ್ ರವರ 'ಪಾರ್ವತಿ ಪರಮೇಶ್ವರ' ಧಾರಾವಾಹಿ ಮನೆಮನೆ ಮಾತು. ಅದರಲ್ಲಿ 'ಪಾರ್ವತಿ'ಯಾಗಿ ಎಲ್ಲರ ಗಮನ ಸೆಳೆಯುತ್ತಿರುವ ನಟಿ ಗಾನಶ್ರೀ. ಸಿನಿಮಾ ಹಾಗೂ ಸೀರಿಯಲ್ ಎರಡರಲ್ಲೂ ನಟಿಸುತ್ತಿರುವ ಈ ಪ್ರತಿಭೆ, ಮನೆಮನೆಯಲ್ಲೂ ಫೇಮಸ್. ಗಾನಶ್ರೀ, ಒನ್ ಇಂಡಿಯಾ ಕನ್ನಡ'ಕ್ಕೆ ನೀಡಿದ ಸಂದರ್ಶನವಿದು......

  ಪ್ರಶ್ನೆ: ನಿಮ್ಮ ಸ್ವಂತ ಊರು, ಒರಿಜಿನಲ್ ಹೆಸರು, ವಿದ್ಯಾಭ್ಯಾಸದ ಸಂಕ್ಷಿಪ್ತ ಬಯೋಡಾಟ ಹೇಳಿ...

  ಉತ್ತರ: ಹುಟ್ಟೂರು ಮಂಗಳೂರು. ಬೆಳೆದದ್ದು, ಪದವಿವರೆಗೆ ಓದಿದ್ದು, ಎಲ್ಲಾ ಅಮ್ಮನ ಊರು ದಾವಣಗೆರೆಯಲ್ಲಿ. ನಂತರ ಬಣ್ಣದ ಬದುಕಿಗೆ ಅಡಿಯಿಟ್ಟು ಸೇರಿದ್ದು ಬೆಂಗಳೂರು.

  ಪ್ರಶ್ನೆ: ಬಣ್ಣದ ಬದುಕಿಗೆ ಬಂದಿದ್ದು ಹೇಗೆ? ಯಾರಾದರೂ ಗಾಡ್ ಫಾದರ್?

  ಉತ್ತರ: ಮೊದಲಿನಿಂದಲೂ ನನಗೆ ಸ್ಟೇಜ್ ಫಿಯರ್ ಇರಲಿಲ್ಲ. ಓದಿವಾಗ ಕೂಡ ನಾನು ಸಾಕಷ್ಟು ಸ್ಟೇಜ್ ಶೋಗಳಲ್ಲಿ ಭಾಗಿಯಾಗಿದ್ದೇನೆ. ಮೊದಲು ಬಣ್ಣ ಹಚ್ಚಿದ್ದು ನಿರ್ಮಾಪಕ ಹಾಗೂ ಫೈನಾನ್ಸಿಯರ್ ಮಹೇಶ್ ಆರ್ ಕೊಠಾರಿ ನಿರ್ಮಾಣದ 'ಭಯ' ಎಂಬ ಸಿನಿಮಾದಲ್ಲಿ. ಅವರೇ ನನ್ನ ಗಾಡ್ ಫಾದರ್. ಇವತ್ತು ಗಾನಶ್ರೀ ಕಲಾವಿದೆ ಆಗಿದ್ದಾಳೆಂದರೆ ಅದಕ್ಕೆ ಮಹೇಶ್ ಕೊಠಾರಿ ಕಾರಣ. ಅವರಿಗೆ ನನ್ನ 'ಸಲಾಮ್'.

  ನಂತರ ಕೆಲವು ಸಿನಿಮಾಗಳಲ್ಲಿ ನಟಿಸಿದೆ. ಉದಯ ಟಿವಿಯಲ್ಲಿ 'ಹೃದಯದಿಂದ', 'ನಿಮ್ಮಿಂದ ನಿಮಗಾಗಿ' ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ ಕೆಲಸ ಮಾಡಿದ್ದೇನೆ. ನಂತರ ಬಂದಿದ್ದು ಸಾಲಾಗಿ ಸೀರಿಯಲ್ ಆಫರ್. ಮನೆಬೆಳಕು, ಎಸ್ ಎಸ್ ಎಲ್ ಸಿ ನನ್ಮಕ್ಳು, ಚೌಚೌ ಬಾತ್, ಮನೆಯೊಂದು ಮೂರು ಬಾಗಿಲು, ಇದ್ದರೆ ಇರಬೇಕು ನಿನ್ನಂಗ, ತ್ರೀ ಈಡಿಯಟ್ಸ್, ರಂಗೋಲಿ, ಕುರುಕ್ಷೇತ್ರ, ಪರಮೇಶಿ ಪರದಾಟ, ಹೀಗೆ ಬಹಳಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದೇನೆ.

  ಈಗ 'ಪಾರ್ವತಿ ಪರಮೇಶ್ವರ'ದಲ್ಲಿ ಪ್ರಮುಖ ಪಾತ್ರವಾದ 'ಪಾರ್ವತಿ'ಯಾಗಿ ಅಭಿನಯಿಸುತ್ತಿದ್ದೇನೆ. 750 ಸಂಚಿಕೆಗಳನ್ನು ದಾಟಿ ಮುನ್ನುಗ್ಗುತ್ತಿರುವ ಈ ಧಾರಾವಾಹಿ ಪಾತ್ರದ ಮೂಲಕ ಜನ ಗುರುತಿಸುತ್ತಾರೆ, ಖುಷಿಯಾಗುತ್ತದೆ.

  ಪ್ರಶ್ನೆ: ವೃತ್ತಿಜೀವನದ ಮರೆಯಲಾಗದ ಅನುಭವ?

  ಉತ್ತರ: ಬಹಳಷ್ಟು ಅನುಭವಗಳಾಗಿವೆ. ಸಾಕಷ್ಟು ಪಾಠ ಕಲಿತಿದ್ದೇನೆ. ಮರೆಯಲಾಗದ ಅನುಭವಗಳು ಎರಡು. ಅದರಲ್ಲೊಂದು 'ಮೈ ಗ್ರೀಟಿಂಗ್ಸ್' ಚಿತ್ರದ ಚಿತ್ರೀಕರಣದ ವೇಳೆ ಆದ ಅವಘಡ. ಡ್ಯುಯೆಟ್ ಸಾಂಗ್ ಶೂಟಿಂಗ್ ವೇಳೆ ನೀರಿಗೆ ಇಳಿದಿದ್ದ ನಾನು ಇಳಿಜಾರಿನಲ್ಲಿ ಆಯತಪ್ಪಿ ಆಳವಾದ ನೀರಿಗೆ ಬಿದ್ದು ಒದ್ದಾಡುತ್ತಿದ್ದೆ. ಆಗ ಬಂದ ಕ್ಯಾಮೆರಾ ಅಸಿಸ್ಟಂಟ್ ಒಬ್ಬರು ನನ್ನನ್ನು ಸಾವಿನಿಂದ ಪಾರು ಮಾಡಿದ್ರು.

  ನಂತರ 'ಮೂರು ಮನಸ್ಸು' ಚಿತ್ರೀಕರಣ ಮುಗಿಸಿ ಬೆಟ್ಟ ಇಳಿಯುತ್ತಿರುವಾಗ ಜಾರಿ ಪ್ರಪಾತಕ್ಕೆ ಉರುಳುತ್ತಿದ್ದೆ. ಸಿಕ್ಕ ಯಾವುದೋ ಮರವನ್ನು ಹಿಡಿದು ನೇತಾಡುತ್ತಿದ್ದ ನನ್ನನ್ನು ಕಂಡ ಕ್ಯಾಮರಾಮನ್ ಒಬ್ಬರು ಬಚಾವ್ ಮಾಡಿದ್ರು. ಈ ಎರಡು ಘಟನೆಗಳನ್ನು ನನಗೆ ಮರೆಯಲು ಸಾಧ್ಯವೇ ಇಲ್ಲ.

  ಪ್ರಶ್ನೆ: ಪಾರ್ವತಿ ಪರಮೇಶ್ವರ ಧಾರಾವಾಹಿಯ ಹೊರತಾಗಿ ಸದ್ಯಕ್ಕೆ ಬೇರೇನು ಮಾಡುತ್ತಿದ್ದೀರಿ?

  ಉತ್ತರ: ಬೇರೆ ಧಾರಾವಾಹಿ ಹಾಗೂ ಸಿನಿಮಾಗಳಿಂದ ಆಫರ್ ಬರುತ್ತಿವೆ. ಆದರೆ ನಾನು ಈ ಧಾರಾವಾಹಿಯ ಪ್ರಮುಖ ಪಾತ್ರಧಾರಿಗಳಲ್ಲೊಬ್ಬಳು. ಹಾಗಾಗಿ ಸತತ ಚಿತ್ರೀಕರಣದ ನಡುವೆ ವೇಳೆ ಹೊಂದಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಕಮಿಟ್ ಆಗಿದ್ದೇನೆ. ಅತಿ ಆಸೆ ಪಟ್ಟು ಹೆಸರು ಕೆಡಿಸಿಕೊಳ್ಳಲು ಇಷ್ಟವಿಲ್ಲ. ಹಾಗಾಗಿ ಪಾರ್ವತಿ ಪಾತ್ರದಲ್ಲೇ ನೆಮ್ಮದಿ ಕಂಡುಕೊಂಡಿದ್ದೇನೆ.
  ಫೈನಲ್ ಕಟ್ ಪ್ರೊಡಕ್ಷನ್ ಬ್ಯಾನರ್ ನ ಸಿಹಿಕಹಿ ಚಂದ್ರು-ಗೀತಾ ದಂಪತಿ, ಸಂಚಿಕೆ ನಿರ್ದೇಶಕರಾದ ಫ್ರಥ್ವಿರಾಜ್ ಕುಲಕರ್ಣಿ ಹಾಗೂ ಕಥೆ, ಸಂಭಾಷಣೆಕಾರರಾದ ಎಂ ಎಸ್ ನರಸಿಂಹಮೂರ್ತಿ ಹಾಗೂ ಇಡೀ ತಂಡದ ಜೊತೆ ಕೆಲಸ ಮಾಡಲು ಸಖತ್ ಖುಷಿ. ಹಾಗಾಗಿ ಈ ಧಾರಾವಾಹಿಗೇ ನನ್ನ ಮೊದಲ ಆದ್ಯತೆ.

  ಪ್ರಶ್ನೆ: ಇಷ್ಟವಾದ ತಿಂಡಿ, ಡ್ರೆಸ್, ಹಾಗೂ ಹವ್ಯಾಸಗಳು?

  ಉತ್ತರ: ಯಾವುದೇ ಪಲ್ಯ ಅಂದ್ರೆ ತುಂಬಾ ಇಷ್ಟ. ಫಿಂಗರ್ ಚಿಪ್ಸ್ ಅಂದ್ರೆ ಪಂಚಪ್ರಾಣ. ಡ್ರೆಸ್ ನಲ್ಲಿ- ಜೀನ್ಸ್-ಟೀ ಶರ್ಟ್ ನನಗಿಷ್ಟ. ವಾಚ್, ಸ್ಯಾಂಡಲ್ಸ್ ಹಾಗೂ ಪೆನ್ ಗಳೆಂದರೆ ಕ್ರೇಜ್. ಕಾಸು ಕೊಟ್ಟು ನೋಡಿ, ಅವೆಲ್ಲಾ ತಂದು ಮನೆ ತುಂಬಿಸಿಕೊಳ್ಳುತ್ತೇನೆ.

  ಹೀಗೆ ತಮ್ಮ ಇಂಪಾದ ಧ್ವನಿಯಲ್ಲಿ ಹೇಳಿ ಮುಗಿಸಿ, ಮುಗುಳ್ನಕ್ಕರು ಗಾನಶ್ರೀ. ನಮ್ಮ-ನಿಮ್ಮೆಲ್ಲರ 'ಪಾರ್ವತಿ' ಗಾನಶ್ರೀ ತಮ್ಮ ಪಾತ್ರದ ಮೂಲಕ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತಾ, ನಟಿಯಾಗಿ ಜೀವನ ಹಾಗೂ ವೃತ್ತಿಯಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ. ಇದು 'ಒನ್ ಇಂಡಿಯಾ ಕನ್ನಡ' ಓದುಗರಿಗೆ ಗಾನಶ್ರೀ ಸಂದರ್ಶನದ ಸವಿಗಾನ...

  English summary
  Actress Ganashri is acting lead role 'Parvati' in Zee Kannada Serial 'Parvati Parameshwara'. She is acting in many Serials as well as Movies. This is the exclusive interview of Ganashri.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X