9 ವರ್ಷಗಳ ನಂತರ ಕಿರುತೆರೆಗೆ ಲಕ್ಷ್ಮೀ ಬಾರಮ್ಮ ಚಿನ್ನು ಕಂಬ್ಯಾಕ್ ; 'ಜಗದ್ಧಾತ್ರಿ'ಯ ನಾಯಕಿ ಯಾರು ? ಮೋಕ್ಷಿತಾನಾ ? ಕವಿತಾನಾ ?
ಸಾಮಾನ್ಯವಾಗಿ ಮದುವೆಯ ನಂತರ ನಾಯಕಿಯರು ಚಿತ್ರರಂಗದಿಂದ ದೂರವಾಗುತ್ತಾರೆ. ಅದೆಷ್ಟೇ ಎತ್ತರಕ್ಕೆ ಬೆಳೆದಿದ್ದರು ಕೂಡ ಮದುವೆಯಾದ ನಂತರ ಹೊಸ ಬದುಕಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿಯೇ ಮಗ್ನರಾಗಿ ಬಿಡುತ್ತಾರೆ. ಇನ್ನು, ಬಣ್ಣದ ಲೋಕ ಕೂಡ ಅಷ್ಟೇ. ಮದುವೆಯಾದರೆ ನಾಯಕಿಯರಿಗೆ ಕೊಡುವ ಗೌರವವೇ ಬೇರೆ. ಅದರಲ್ಲಿಯೂ ಮಕ್ಕಳಾದರೆ ಮುಗೀತು ಅವಕಾಶಗಳ ಬಾಗಿಲು ಸಂಪೂರ್ಣ ಮುಚ್ಚಿ ಹೋದಂತೆಯೇ. ಚಿತ್ರರಂಗ ಇವರನ್ನು ಸಂಪೂರ್ಣವಾಗಿ ಮರೆತೇ ಹೋಗುತ್ತೆ.
ಇದಕ್ಕೆ ಕೈಗನ್ನಡಿ ಎಂಬಂತೆ ಭಾಗ್ಯಶ್ರೀಯಿಂದ ಹಿಡಿದು ಟ್ವಿಂಕಲ್ ಖನ್ನಾವರೆಗೆ.. ಆಯೇಶ್ ಟಾಕೀಯಾ ಅವರಿಂದ ಹಿಡಿದು ಆಸಿನ್‌ವರೆಗೆ.. ಹಲವಾರು ನಾಯಕಿಯರು ಮದುವೆಯಾದ ನಂತರ ಕಣ್ಮರೆಯಾದ ಉದಾಹರಣೆಗಳಿವೆ. ಕನ್ನಡದಲ್ಲಿಯೂ ಹೀಗೆ ನೇಪರ್ಥಯಕ್ಕೆ ಸರಿದವರಿದ್ದಾರೆ. ಹಾಗಂಥ ಎಲ್ಲರು ಈ ಸಾಲಿಗೆ ಸೇರುವುದಿಲ್ಲ. ಬದಲಿಗೆ ಅಲ್ಲೊಬ್ಬರು.. ಇಲ್ಲೊಬ್ಬರು.. ಒಂದು ಗ್ಯಾಪ್‌ನ ನಂತರ ಮತ್ತೆ ತಮ್ಮ ತಮ್ಮ ಕೆಲಸಕ್ಕೆ ಮರಳುತ್ತಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯನ್ನು ನೀಡುತ್ತಾರೆ. ಉದಾಹರಣೆಗೆ ಕವಿತಾ ಗೌಡ.

ಹೌದು, ಕವಿತಾ ಗೌಡ.. ಕನ್ನಡ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಚಿನ್ನು. ''ಲಕ್ಷ್ಮೀ ಬಾರಮ್ಮ'' ಧಾರಾವಾಹಿಯ ಮೂಲಕ ಕನ್ನಡಿಗರ ಹೃದಯ ಗೆದ್ದು, ಕರುನಾಡಿನೆಲ್ಲೆಡೆ ಮನೆ ಮಾತಾದ ಕವಿತಾ ಗೌಡ ಆ ನಂತರ ''ವಿದ್ಯಾ ವಿನಾಯಕ'' ಧಾರಾವಾಹಿಯಲ್ಲಿ ಕೂಡ ಕಾಣಿಸಿಕೊಂಡಿದ್ದರು.
ಹೀಗೆ ಕಿರುತೆರೆಯಲ್ಲಿ ಮೋಡಿ ಮಾಡಿದ ಕವಿತಾ ಗೌಡ '' ಗುಬ್ಬಿ ಮೇಲೆ ಬ್ರಹ್ಮಾಸ್ತ್ರ'' ಚಿತ್ರದ ಮೂಲಕ ನಾಯಕಿಯೂ ಆದರು. ಇದರ ನಡುವೆ ''ಬಿಗ್ ಬಾಸ್'' ಕನ್ನಡ ಆರನೇ ಸೀಸನ್‌ನಲ್ಲಿ ಸ್ಫರ್ಧಿಯಾಗಿ ಕೂಡ ಭಾಗವಹಿಸಿದರು.
ಆದರೆ, ಖ್ಯಾತಿಯ ತುತ್ತ ತುದಿಯಲ್ಲಿದ್ದಾಗಲೇ ಕವಿತಾ ಗೌಡ, ''ಲಕ್ಷ್ಮೀ ಬಾರಮ್ಮ'' ಹೀರೋ ಚಂದನ್ ಗೌಡ ಮನ ಸೋತರು. 2021ರಲ್ಲಿ ಸಪ್ತಪದಿಯನ್ನು ತುಳಿದರು. 2024ರಲ್ಲಿ ತಾಯಿಯಾಗಿ ಬಡ್ತಿಯನ್ನು ಕೂಡ ಪಡೆದರು.
ಇಂಥಾ ಕವಿತಾ ಗೌಡ ಸದ್ಯ 09 ವರ್ಷಗಳ ನಂತರ ಕಿರುತೆರೆಗೆ ಮರಳಿದ್ದಾರೆ. ''ವಿದ್ಯಾ ವಿನಾಯಕ'' ನಂತರ ಹೊಸದೊಂದು ಧಾರಾವಾಹಿಯನ್ನು ಒಪ್ಪಿಕೊಂಡಿದ್ದಾರೆ. ಆ ಧಾರಾವಾಹಿಯ ಹೆಸರು ''ಜಗದ್ದಾತ್ರಿ''. ವಿಶೇಷ ಅಂದರೆ ಈ ಧಾರಾವಾಹಿಯಲ್ಲಿ ನಿಮ್ಮ ''ಪಾರು'' ಅಲಿಯಾಸ್ ಮೋಕ್ಷಿತಾ ಪೈ ಕೂಡ ಇದ್ದಾರೆ.

ಮೊನ್ನೆ ಮೊನ್ನೆಯವರೆಗೆ ಮೋಕ್ಷಿತಾ ಪೈ ಅವರದ್ದೇ ಪ್ರಮುಖ ಪಾತ್ರ, ಇವರೇ ಈ ಧಾರಾವಾಹಿಯ ಕಥಾನಾಯಕಿ ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ ಈಗ ಈ ಧಾರಾವಾಹಿಗೆ ಕವಿತಾ ಗೌಡ ಕೂಡ ಎಂಟ್ರಿ ಕೊಟ್ಟಿದ್ದಾರೆ.
ಇದರಿಂದ ಸಹಜವಾಗಿ ಮೋಕ್ಷಿತಾ ಪೈ ''ಜಗದ್ದಾತ್ರಿ''ಯ ನಾಯಕಿ ಆದರೆ ಕವಿತಾ ಗೌಡ ಅವರ ಪಾತ್ರವೇನು..? ಎನ್ನುವ ಪ್ರಶ್ನೆ ಸದ್ಯ ಇವರ ಅಭಿಮಾನಿಗಳನ್ನು ಕಾಡುತ್ತಿದೆ. ಈ ಪ್ರಶ್ನೆಗೆ ಉತ್ತರ ತಿಳಿಯಲು ಮುಂದೆ ಓದಿ.
ಜಗದ್ಧಾತ್ರಿಯ ನಾಯಕಿ ಯಾರು ? ಮೋಕ್ಷಿತಾನಾ ? ಕವಿತಾನಾ ?
ಅಂದ್ಹಾಗೇ ಹಲವರು ಕಾತುರದಿಂದ ಕಾಯುತ್ತಿರುವ ''ಜಗದ್ದಾತ್ರಿ'' ಸ್ವಮೇಕ್ ಅಲ್ಲ. ಬದಲಿಗೆ ರಿಮೇಕ್. ಈಗಾಗಲೇ ತೆಲುಗಿನಲ್ಲಿ ಭಾರೀ ಸದ್ದು ಮಾಡುತ್ತಿರುವ ಧಾರಾವಾಹಿ ಇದು. ಇದೇ ಧಾರಾವಾಹಿಯಲ್ಲಿ ಕನ್ನಡದ ''ಬ್ರಹ್ಮಗಂಟು'' ಖ್ಯಾತಿಯ ಪ್ರೀತಿ ಶ್ರೀನಿವಾಸ್ ನಾಯಕಿಗೆ ಸರಿ ಸಮಾನವಾದ ಪಾತ್ರವನ್ನು ಮಾಡುತ್ತಿದ್ದಾರೆ. ಆ ಪಾತ್ರದ ಹೆಸರು ಕೌಶಿಕಿ. ಇದೇ ಪಾತ್ರವನ್ನು ಕವಿತಾ ಗೌಡ ಕನ್ನಡದ ''ಜಗದ್ದಾತ್ರಿ''ಯಲ್ಲಿ ನಿರ್ವಹಿಸುತ್ತಿದ್ದಾರೆ ಎನ್ನುವ ಮಾತು ಸದ್ಯ ಕಿರುತೆರೆಯ ವಲಯದಲ್ಲಿ ಕೇಳಿ ಬರುತ್ತಿದೆ. ಇನ್ನು ತೆಲುಗಿನ ''ಜಗದ್ದಾತ್ರಿ'' ಕೇವಲ ಕನ್ನಡಕ್ಕೆ ಮಾತ್ರ ರಿಮೇಕ್ ಆಗಿಲ್ಲ. ಬೆಂಗಾಲಿ ಮತ್ತು ಹಿಂದಿಯಲ್ಲಿಯೂ ಕೂಡ ಸದ್ಯ ''ಜಗದ್ದಾತ್ರಿ''ಯದ್ದೇ ಸದ್ದು ಸುದ್ದಿ.
ಒಟ್ನಲ್ಲಿ ತಮ್ಮ ಪಾತ್ರದ ಕುರಿತು ಕವಿತಾ ಗೌಡ ಸದ್ಯ ಯಾವುದೇ ಗುಟ್ಟನ್ನು ಬಿಟ್ಟು ಕೊಟ್ಟಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಇವರ ಅಭಿಮಾನಿಗಳು ಸಂಭ್ರಮ ಪಡುತ್ತಿದ್ದಾರೆ. ಕೌಶಿಕಿಯ ಪಾತ್ರವನ್ನೇ ಕವಿತಾ ಗೌಡ ನಿರ್ವಹಿಸುವುದು ಎಂದು ಊಹೆ ಮಾಡುತ್ತಿದ್ದಾರೆ.
quote>


Click it and Unblock the Notifications