9 ವರ್ಷದ ಕಾನೂನು ಸಮರ, 5 ಕೇಸ್ : ಚೈತ್ರಾ ಕುಂದಾಪುರ ನಿರ್ದೋಷಿ, ಇಲ್ಲಿದೆ ವಿವರ
ಹಿಂದೂತ್ವವನ್ನು ಕಣ ಕಣದಲ್ಲಿ ತುಂಬಿಕೊಂಡು, ಕರಾವಳಿಯ ಫೈರ್ ಬ್ರ್ಯಾಂಡ್ ಎಂದೇ ಕರುನಾಡಿನೆಲ್ಲೆಡೆ ಹೆಸರುವಾಸಿಯಾದವರು ಚೈತ್ರಾ ಕುಂದಾಪುರ. ಮಂಗಳೂರಿನ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪಡೆದು ಆ ನಂತರ ನಿರೂಪಕಿಯಾಗಿಯೂ ಕೆಲಸವನ್ನು ಮಾಡಿದ ಚೈತ್ರಾ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮತಿಯ ಸದಸ್ಯೆ ಕೂಡ ಆಗಿದ್ದವರು.
ಇನ್ನೂ ಪ್ರೇಮ ಪಾಶ ಎಂದ ಕೃತಿಯ ಲೇಖಕಿ ಕೂಡ ಆಗಿರುವ ಚೈತ್ರಾ ಕುಂದಾಪುರ ಬಿಗ್ ಬಾಸ್ ಸ್ಫರ್ಧಿಯೂ ಹೌದು. ಇಂಥಾ ಚೈತ್ರಾ ಕುಂದಾಪುರ ಅವರ ವಿರುದ್ದ 9 ವರ್ಷಗಳ ಹಿಂದೆ ಅಂದರೆ 2018ರಲ್ಲಿ ಒಂದಲ್ಲ, ಎರಡಲ್ಲ, ಐದು ಪ್ರಕರಣಗಳು ದಾಖಲಾಗಿದ್ದವು. ಆಗ ಸಮಾಜ ಇವರನ್ನು ಅಪರಾಧಿಯಂತೆ ನೋಡಿತ್ತು. ಆದರೆ.. ಈಗ 9 ವರ್ಷದ ನಂತರ ಸತ್ಯ ಅನಾವರಣವಾಗಿದೆ. ಚೈತ್ರಾ ಕುಂದಾಪುರ ನಿರ್ದೋಷಿ ಎಂದು ನ್ಯಾಯಾಲಯವೇ ತೀರ್ಪು ನೀಡಿದೆ.

ಹೌದು, ಅದು 2018.. ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭ. ಆ ಸಮಯದಲ್ಲಿ ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಇಕ್ಬಾಲ್ ಅನ್ಸಾರಿ ಮತ್ತು ಬಿಜೆಪಿಯ ಪರಣ್ಣ ಮುನವಳ್ಳಿ ನಡುವೆ ಭಾರಿ ಪೈಪೋಟಿ ಇತ್ತು. ಜಿದ್ದಾಜಿದ್ದಿನ ರಣರಂಗ ಅದು.
ಇಂತಹ ಸಮಯದಲ್ಲಿ ಆಗ ತಾನೇ ಮುನ್ನೆಲೆಗೆ ಬರುತ್ತಿದ್ದ ಚೈತ್ರಾ ಕುಂದಾಪುರ, ಹಿಂದುತ್ವ ಹಾಗೂ ಬಿಜೆಪಿ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಲು ಗಂಗಾವತಿ ಕ್ಷೇತ್ರಕ್ಕೆ ಧುಮುಕಿದ್ದರು. ಭರ್ಜರಿ ಪ್ರಚಾರವನ್ನು ಕೂಡ ಮಾಡಿದ್ದರು.
ಆದರೆ, ಇದೇ ಸಮಯದಲ್ಲಿ ಚೈತ್ರಾ ವಿರುದ್ದ ಹತ್ತಾರು ಆರೋಪವನ್ನು ಮಾಡಲಾಗಿತ್ತು.ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಸೌಹಾರ್ದತೆ ಕೆಡಿಸುವ ಭಾಷಣ ಹಾಗೂ ಪರಸ್ಪರ ನಿಂದನೆಯ ಆರೋಪದಡಿ ಚೈತ್ರಾ ವಿರುದ್ಧ ಗಂಗಾವತಿಯಲ್ಲಿ ಬರೋಬ್ಬರಿ 5 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಸದ್ಯ ಇದೇ ಹೋರಾಟದಲ್ಲಿ ಚೈತ್ರಾ ಕುಂದಾಪುರಗೆ ಗೆಲುವು ಸಿಕ್ಕಿದ್ದು, ಚೈತ್ರಾ ಕುಂದಾಪುರ ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಈ ಹಿನ್ನೆಲೆ ಭಾವುಕರಾಗಿರುವ ಚೈತ್ರಾ ಕುಂದಾಪುರ ತಮ್ಮ ಮನದ ಮಾತುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ, ಚೈತ್ರಾ ಕುಂದಾಪುರ ಹೇಳಿದ್ದೇನು..? ಎಂದು ತಿಳಿಯಲು ಮುಂದೆ ಓದಿ.

ಚೈತ್ರಾ ಕುಂದಾಪುರ ಬರಹ
9 ವರ್ಷಗಳ ಹೋರಾಟದ ಬಳಿಕ ನಿರ್ದೋಷಿ ಎಂಬ ಜಯ ಸಿಕ್ಕಿದೆ. "ಏ ಆ ಹೆಣ್ಣುಮಗಳಿಗಿರುವ ಧೈರ್ಯ ನಮ್ಮೂರಲ್ಲಿ ಯಾವ ಗಂಡಸರಿಗೂ ಇಲ್ಲಾ ಬಿಡ್ ಲೇ " ಅಂತಾ ಪ್ರಾರಂಭವಾದ ಹೋರಾಟವೊಂದು ಸುದೀರ್ಘ 9 ವರ್ಷಗಳ ಕಾನೂನು ಹೋರಾಟದೊಂದಿಗೆ ಇಂದು ತಾರ್ಕಿಕ ಅಂತ್ಯ ಕಂಡಿದೆ''.
''ನನ್ನ ಸಾಮಾಜಿಕ ಬದುಕಿಗೆ ಶಕ್ತಿ ತುಂಬಿದ ಹನುಮ ಹುಟ್ಟಿದ ನಾಡು ಗಂಗಾವತಿಯ ಜೊತೆಗೆ ನನಗಿದ್ದ ಕೊನೆಯ ಬಂಧವೊಂದು ಖುಷಿ ಕೊಡುತ್ತಾ ಕಳಚಿಕೊಂಡಿದೆ. 9 ವರ್ಷಗಳು ಬರೋಬ್ಬರಿ 5 ಕೇಸುಗಳು.. ಹಾ ಇವೆಲ್ಲವೂ ಒಂದು ಚಿಂತನೆಗಾಗಿ, ಪಕ್ಷಕ್ಕಾಗಿ ಹಾಕಿಸಿಕೊಂಡದ್ದು.. ಕುಂದಾಪುರದಿಂದ ಕೊಪ್ಪಳಕ್ಕೆ ನಿರಂತರ ಓಡಾಟ... ರಾಜಕೀಯ ಪಿತೂರಿಗಳ ನಡುವೆ ಬದುಕು ಕಲಿಸಿದ ಸಂಗತಿಗಳು ಇವು''
'' ಲಕ್ಷಾಂತರ ಜನರ ಪ್ರೀತಿ ಅಭಿಮಾನ ಕೊಟ್ಟ ಹೋರಾಟವಿದು. ನಂಬಿದ್ದವರೇ ನಮ್ಮನ್ನು ಸ್ವಾರ್ಥಕ್ಕೆ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಲಿಸಿದ ಹೋರಾಟವಿದು. ಈ ಸಂಚಿನಲ್ಲಿ ಭಾಗವಾದವರು ತಮ್ಮ ರಾಜಕೀಯ ಭವಿಷ್ಯವನ್ನೇ ಕಳೆದುಕೊಂಡು ಮೂಲೆ ಗುಂಪಾಗಿದ್ದು ನ್ಯಾಯಕ್ಕೆ ದೇವರು ಕೊಟ್ಟ ತೀರ್ಮಾನವಷ್ಟೇ. ಆದರೆ ಲಕ್ಷಾಂತರ ಜನರಿಂದ ವಯಸ್ಸಿನ ಹಂಗಿಲ್ಲ ನಾನು ಇಂದು "ಅಕ್ಕಾ " ಎಂದು ಕರೆಸಿಕೊಳ್ಳುತ್ತಿದ್ದೇನೆ ಎಂದು ಚೈತ್ರಾ ಕುಂದಾಪುರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಚೈತ್ರಾ ಮತ್ತೊಮ್ಮೆ ಕರುನಾಡಿನೆಲ್ಲೆಡೆ ಚರ್ಚೆಗೀಡಾಗಿದ್ದಾರೆ.


Click it and Unblock the Notifications