ಮನದ ಕಡಲು ಚಿತ್ರದ ಹೀರೋ ಬಗ್ಗೆ ನಿಮಗೆಷ್ಟು ಗೊತ್ತು ?
ಚಿಕ್ಕಂದಿನಿಂದಲೂ ನಾಟಕ, ನಟನೆ ಇತ್ಯಾದಿಯಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿದ್ದ ಸುಮುಖ ಇದೀಗ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಇವರ ತಂದೆ ತಾಯಿ ಕಲಾವಿದರಾದ ಶಶಿಕುಮಾರ್ ಹಾಗೂ ನಂದಿನಿ. ಕುಟುಂಬವೇ ನಟನೆಯಲ್ಲಿ ಇರುವುದರಿಂದ ಚಿಕ್ಕ ವಯಸ್ಸಿನಿಂದಲೂ ಸುಮುಖನಿಗೆ ನಟನೆಯ ರುಚಿ ಹತ್ತಿತ್ತು. ಹಲವು ನಾಟಕ, ರಂಗ ತರಬೇತಿ ಶಿಬಿರಗಳಲ್ಲಿ ಪಾಲ್ಗೊಳ್ಳುತ್ತಿದ್ದ ಸುಮುಖ ಪಿಯುಸಿ ಮುಗಿಯುತ್ತಿದ್ದಂತೆ, ಮುಂಬೈ ಗೆ ಹೋದರು.
ಮುಂಬೈನಲ್ಲಿ ಸತತವಾಗಿ ಹತ್ತು ವರ್ಷಗಳ ಕಾಲ ನಟನೆ ಇತ್ಯಾದಿಯಲ್ಲೇ ತೊಡಗಿದ್ದ ಸುಮುಖ ಇದೀಗ ಕನ್ನಡ ಸಿನಿರಂಗಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಪರಿಚಯ ಮಾಡಿಕೊಂಡ ನಟ ಸುಮುಖ ನಾನು ಮುಂಬೈನಲ್ಲಿ ಕಳೆದ ಹತ್ತು ವರ್ಷಗಳ ಕಾಲ ನಟನ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದೇನೆ. ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಹಲವು ನಾಟಕಗಳಲ್ಲಿ ನಟಿಸಿದ್ದೇನೆ. ಖಾಸಗಿ ಚಾನೆಲ್ ಒಂದರಲ್ಲಿ ಸ್ಟೇಜ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದೇನೆ. ಫಿಸಿಕ್ಸ್ ಟೀಚರ್ ಎಂಬ ಚಿತ್ರವನ್ನು ನಿರ್ದೇಶಿಸಿದ್ದೇನೆ ಹಾಗೂ ನಟಿಸಿದ್ದೇನೆ ಕೂಡ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಸುಮುಖನ ನಿರ್ದೇಶನದ "ಫಿಸಿಕ್ಸ್ ಟೀಚರ್" ಕೊರೋನಾ ಸಮಯದಲ್ಲಿ ಬಿಡುಗಡೆಗೊಂಡಿತು. ಆದರೆ ಈ ಸಿನಿಮಾ ನಿರ್ದೇಶಿಸುವಾಗ ತಮಗೆ ಸಿನಿ ಕ್ಷೇತ್ರದಲ್ಲಿ ಅನುಭವ ಸಾಲದು ಎಂಬ ಅರಿವಾಗಿ ಸಿನಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದರು. ಈ ನಡುವೆ ಸಿನಿಮಾಗಳಿಗೆ ಹೋಗಲು ಬಹಳಷ್ಟು ಮಾತುಕತೆಗಳು ನಡೆಯುತ್ತಿತ್ತು. ಆದರೆ ಯಾವುದೂ ಒದಗಿ ಬರಲಿಲ್ಲ. ಇದೇ ಸಮಯದಲ್ಲಿ ನಿರ್ದೇಶಕ ಯೋಗರಾಜ್ ಭಟ್ ಅವರ "ಮನದ ಕಡಲು" ಸಿನಿಮಾ ಕೈಸೇರಿತು.
ಮುಂಗಾರು ಮಳೆ ಸಿನಿಮಾ ರೀತಿಯಲ್ಲೇ ಹೊಸಬರನ್ನು ಹಾಕಿಕೊಂಡು ಮನದ ಕಡಲು ಸಿನಿಮಾ ಮಾಡುವ ಯೋಚನೆಯಲ್ಲಿದ್ದರೂ ನಿರ್ದೇಶಕ ಯೋಗರಾಜ ಭಟ್. ಇದಕ್ಕೆ ಸರಿಯಾಗಿ ಮನದ ಕಡಲು ಸಿನಿಮಾಗೆ ಹೊಸ ಮುಖಗಳನ್ನು ಹುಡುಕುತ್ತಿದ್ದವರಿಗೆ ಆಡಿಶನ್ ಆದರೂ ಯಾರು ಸೆಟ್ಟಾಗಲಿಲ್ಲ. ಕೊನೆಗೂ ಸುಮುಖ ಪರಿಚಯವಾಗಿ ಆಡಿಶನ್ ನಲ್ಲೂ ಸೆಲೆಕ್ಟ್ ಆಗಿದ್ದರಿಂದ ಸುಮುಖ ನಾಯಕನಟನಾಗಿ "ಮನದ ಕಡಲು" ಸಿನಿಮಾಗೆ ಆಯ್ಕೆಯಾದರು.
18 ವರ್ಷಗಳ ಹಿಂದೆ ಕನ್ನಡ ಸಿನಿ ರಂಗದಲ್ಲೇ ಹೊಸ ಅಲೆ ಮೂಡಿಸಿದ್ದ "ಮುಂಗಾರು ಮಳೆ" ಸಿನಿಮಾ ಇಂದಿಗೂ ಪ್ರೇಕ್ಷಕರ ಫೇವರೆಟ್. ಇದೀಗ ಯೋಗರಾಜ ಭಟ್ ಹಾಗೂ ಕೃಷ್ಣಪ್ಪ ಅವರ ಕಾಂಬಿನೇಷನ್ ನಲ್ಲಿ "ಮನದ ಕಡಲು" ಸಿನಿಮಾ ನಿರ್ಮಾಣವಾಗಿದ್ದು ಇದಕ್ಕೆ ಸುಮುಖ ಅವರು ನಾಯಕನಟನಾಗಿ ಆಯ್ಕೆ ಆಗಿರುವುದರಿಂದ ಅವರ ಮೇಲೆ ಜವಾಬ್ದಾರಿ ಹೆಚ್ಚೇ ಇದೆ. ಹಲವು ವರ್ಷಗಳಿಂದ ಸುಂಕ ರಂಗ ತರಬೇತಿ ಮುಂತಾದ ನಟನಾ ವಿಚಾರಗಳಲ್ಲಿ ತೊಡಗಿಕೊಂಡಿರುವುದರಿಂದ ಸಿನಿಮಾಗೆ ಬಹಳ ಸಹಾಯವಾಗಿದೆ ಎಂದು ಹೇಳಿದ್ದಾರೆ.
ಹಲವು ವರ್ಷಗಳ ರಂಗ ತರಬೇತಿ ನನಗೆ ಬಹಳ ಸಹಾಯಕ್ಕೆ ಬಂದಿದೆ. ಅಷ್ಟೇ ಅಲ್ಲದೆ ಫಿಸಿಕ್ಸ್ ಟೀಚರ್ ಸಿನಿಮಾ ಮಾಡಿ ಅನುಭವವಾಗಿರುವುದರಿಂದ, ಒಬ್ಬ ನಟನಿಂದ ಪ್ರೇಕ್ಷಕರು ಹಾಗೂ ನಿರ್ದೇಶಕರು ಯಾವ ವಿಚಾರಗಳನ್ನು ಬಯಸುತ್ತಾರೆ ಎಂಬ ಅರಿವಾಗಿದೆ ಎಂದಿದ್ದಾರೆ ನಟ ಸುಮುಖ.
ನಟ, ನಿರ್ದೇಶಕ ಯೋಗರಾಜ್ ಭಟ್ ಅವರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಅವರೊಂದಿಗೆ ಕೆಲಸ ಮಾಡುವಾಗ ಹಲವಾರು ವಿಚಾರಗಳನ್ನು ಕಲಿತಿದ್ದೇನೆ. "ಮನದ ಕಡಲು" ಸಿನಿಮಾದಲ್ಲಿ ಅಡ್ವೆಂಚರಸ್ ಆಗಿರುವ ಪಾತ್ರ ನನಗೆ ಸಿಕ್ಕಿದ್ದು, ಈ ಬಗ್ಗೆ ಬಹಳ ಖುಷಿ ಇದೆ. ನನಗೆ ಫ್ಯಾಮಿಲಿ ಡ್ರಾಮಾ ಗಳೇ ಹೆಚ್ಚು ಇಷ್ಟ. ಫೈಟಿಂಗ್ ಸೀನ್ ಗಳು ಅಷ್ಟಕ್ಕಷ್ಟೇ.
ಸಿನಿಮಾ ನೋಡಿ ಮಕ್ಕಳಿಂದ ಹಿಡಿದು ಎಲ್ಲರೂ ಖುಷಿ ಪಡಬೇಕು. ಇಂದು ಸಿನಿ ಕ್ಷೇತ್ರದಿಂದ ಮಾದರಿಯಾಗಿ ಯಾವ ನಟ ಅಥವಾ ಪಾತ್ರವನ್ನು ನೋಡಲು ಸಾಧ್ಯವಾಗುತ್ತಿಲ್ಲ. ನಾನು ಆ ಜಾಗವನ್ನು ತುಂಬುವ ಹಂಬಲದಲ್ಲಿದ್ದೇನೆ. ಸದ್ಯಕ್ಕೆ ಮನದ ಕಡಲು ಸಿನಿಮಾದಲ್ಲಿ ಲವ್ಲಿ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ. ಇನ್ನೊಂದು ಸಿನಿಮಾ ಕೈ ಸೇರಿದೆ ಅದರ ಘೋಷಣೆ ಸದ್ಯದಲ್ಲೇ ಆಗಲಿದೆ ಎಂದಿದ್ದಾರೆ ನಟ ಸುಮುಖ.


Click it and Unblock the Notifications











