ಬೆಂಗಳೂರಿನಲ್ಲಿ ಆ*ತ್ಮಹತ್ಯೆಗೆ ಶರಣಾದ ನೀನಾದೆ ನಾ ಖ್ಯಾತಿಯ ನಟಿ ನಂದಿನಿ ; ಕಿರುತೆರೆಗೆ ಆಘಾತ
ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯ ಕೂಡ ಮುಖ್ಯ. ಆದರೆ.. ದೈಹಿಕ ಆರೋಗ್ಯದ ಕುರಿತು ಇನ್ನಿಲ್ಲದಷ್ಟು ಕಾಳಜಿ ವಹಿಸುವ ನಾವು ಮಾನಸಿಕ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವುದಿಲ್ಲ. ಮಹತ್ವ ನೀಡುವುದಿಲ್ಲ. ಕೆಲವರು ತಮ್ಮ ಮಾನಸಿಕ ಆರೋಗ್ಯದ ಕುರಿತು ತಮ್ಮ ಖಿನ್ನತೆಯ ಕುರಿತು ಮಾತನಾಡಲು ಕೂಡ ಹಿಂಜರಿಯುತ್ತಾರೆ. ಇದೆಲ್ಲದರ ಪರಿಣಾಮ ಎಂಬಂತೆ ವಿಶ್ವದೆಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ...
ಕಾಯಿಲೆಗಳಲ್ಲಿ ''ಮಾನಸಿಕ ಖಿನ್ನತೆ''ಗೆ ಮೊದಲ ಸ್ಥಾನ ಇದೆ. ಇನ್ನು ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ ಪ್ರತಿ 20 ಜನರಲ್ಲಿ ಒಬ್ಬರಿಗೆ ಈ ಕಾಯಿಲೆ ಇದೆ. ಸಾವು, ಸೋಲು, ನಿರಾಶೆ, ಕಷ್ಟ, ನಷ್ಟಗಳಿಂದ ಅನೇಕರು ಖಿನ್ನತೆಗೊಳಗಾಗುತ್ತಾರೆ. ಹೀಗೆ ಖಿನ್ನತೆಗೊಳಗಾದವರು ಕೆಲ ಒಮ್ಮೆ ಖಿನ್ನತೆಯಿಂದ ಪಾರಾಗುತ್ತಾರೆ. ಕೆಲ ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಆದರೆ ಇನ್ನೂ ಕೆಲವೊಮ್ಮೆ ಈ ಖಿನ್ನತೆಯಿಂದ ಹೊರ ಬರಲು ಸಾಧ್ಯವಾಗದೇ ಒದ್ದಾಡುತ್ತಾರೆ. ಕೊನೆಗೆ ಜೀವನದಲ್ಲಿ ನಾನಾ ಸಮಸ್ಯೆಗಳಿಂದ ಬೇಸತ್ತು, ತಾಳ್ಮೆಯ ಕೊರತೆಯಿಂದ ಆತ್ಮ*ಹತ್ಯೆ ಮಾಡಿಕೊಳ್ಳುತ್ತಾರೆ. ಉದಾಹರಣೆಗೆ ನಂದಿನಿ.

ಹೌದು, ನಂದಿನಿ.. ಮೂಲತಃ ವಿಜಯನಗರ ಜಿಲ್ಲೆಯ ಕೊಟ್ಟೂರಿನವರು. ಮಾಡೆಲಿಂಗ್ ಲೋಕದಲ್ಲಿ ಮಿಂಚುತ್ತಲೇ ಕನ್ನಡದ ಕಿರುತೆರೆಯನ್ನು ಪ್ರವೇಶ ಮಾಡಿದ್ದ ನಂದಿನಿ ''ಜೀವ ಹೂವಾಗಿದೆ''.. ''ಸಂಘರ್ಷ''.. ''ನೀನಾದೆ ನಾ''.. ''ಮಧುಮಗಳು''.. ''ಅಣ್ಣ ತಂಗಿ'' ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ತಮ್ಮ ಅಭಿನಯದ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದರು.
ಆ ನಂತರ ತಮಿಳಿನತ್ತ ವಲಸೆ ಹೋಗಿದ್ದ ನಂದಿನಿ ಸದ್ಯ ''ಗೌರಿ'' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರು. ''ಕಲೈನರ್ ಟಿವಿ''ಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ನಂದಿನಿ ಅವರಿಗೆ ಅಪಾರವಾದ ಹೆಸರು ಮತ್ತು ಜನಪ್ರಿಯತೆಯನ್ನು ತಂದು ಕೊಟ್ಟಿತ್ತು. ''ಕನಕ'' ಮತ್ತು ''ದುರ್ಗಾ'' ಎಂಬ ಎರಡು ವಿಭಿನ್ನ ಪಾತ್ರಗಳನ್ನು ನಂದಿನಿ ಈ ಧಾರಾವಾಹಿಯಲ್ಲಿ ನಿರ್ವಹಿಸುತ್ತಿದ್ದರು. ದ್ವಿಪಾತ್ರದಲ್ಲಿ ಕಾಣಿಸಿಕೊಂಡು ತಮ್ಮ ಅಭಿನಯದ ಮೂಲಕ ತಮಿಳುನಾಡಿನೆಲ್ಲೆಡೆ ಮನೆ ಮಾತಾಗಿದ್ದರು.
ಸದ್ಯ ಇದೇ ಧಾರಾವಾಹಿಯ ಚಿತ್ರೀಕರಣ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿತ್ತು. ಆ ನಂತರ ಮತ್ತೆ ಚೆನ್ನೈಗೆ ಸ್ಥಳಾಂತರಗೊಂಡಿತ್ತು. ''ಗೌರಿ'' ಧಾರಾವಾಹಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ನಂದಿನಿ, ಬಿಡುವು ಮಾಡಿಕೊಂಡು ಬೆಂಗಳೂರಿಗೆ ಬಂದಿದ್ದರು. ಇದೇ ಸಮಯದಲ್ಲಿ ನಿನ್ನೆ (ಡಿಸೆಂಬರ್ 28 ) ರಾತ್ರಿ ರಾಜರಾಜೇಶ್ವರಿ ನಗರದಲ್ಲಿ ನೇಣಿಗೆ ನಂದಿನಿ ಕೊರಳೊಡ್ಡಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ನಂದಿನಿ ಈ ಆತುರದ ನಿರ್ಧಾರ ತೆಗೆದುಕೊಂಡಿದ್ದೇಕೆ..? ಆ*ತ್ಮಹತ್ಯೆಗೆ ಶರಣಾಗಿದ್ದೇಕೆ..? ಎನ್ನುವ ಪ್ರಶ್ನೆಗಳಿಗೆ ಉತ್ತರ ಸದ್ಯ ಗೊತ್ತಿಲ್ಲವಾದರೂ ನಂದಿನಿ ಅವರ ಈ ಅಕಾಲಿಕ ನಿಧನದಿಂದ ಕನ್ನಡ ಮತ್ತು ತಮಿಳು ಕಿರುತೆರೆ ಆಘಾತಕ್ಕೊಳಗಾಗಿದೆ. ನಂದಿನಿ ಆ*ತ್ಮಹತ್ಯೆ ಮಾಡಿಕೊಂಡಿರುವ ವಿಚಾರವನ್ನು ಮಾಧ್ಯಮಗಳಿಗೆ ಖಚಿತ ಪಡಿಸಿರುವ ಸಹನಟ ಸತೀಶ್, ನಂದಿನಿಗೆ ಇನ್ನೂ ಮದುವೆಯಾಗಿರಲಿಲ್ಲ. ಯಾಕೆ ಈ ತರಹದ ದುಡುಕಿನ ನಿರ್ಧಾರ ತೆಗೆದುಕೊಂಡರು ಗೊತ್ತಿಲ್ಲ ಎಂದು ಭಾವುಕರಾಗಿದ್ದಾರೆ. ನಂದಿನಿ ಅವರ ಸಾವಿನ ಸುದ್ದಿ ಕೇಳಿ ''ಗೌರಿ'' ತಂಡ ತೀವೃ ಆಘಾತಕ್ಕೊಳಗಾಗಿದೆ ಎಂದಿದ್ದಾರೆ. ''ಕಲೈನರ್'' ವಾಹಿನಿ ಕೂಡ ಸಾಮಾಜಿಕ ಜಾಲತಾಣದಲ್ಲಿ ನಂದಿನಿ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದೆ. ಅಭಿಮಾನಿಗಳು ಕೂಡ ಕಂಬನಿ ಮಿಡಿದಿದ್ದಾರೆ.
Disclaimer : ಆತ್ಮ*ಹತ್ಯೆ ಎಲ್ಲದಕ್ಕೂ ಪರಿಹಾರ ಅಲ್ಲ. ಆತ್ಮ*ಹತ್ಯೆ ತಡೆ ಸಹಾಯವಾಣಿ. ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ ಇಂತಿದೆ 080 - 25497777.


Click it and Unblock the Notifications











