ರಾಜಿ ಮಾಡಿಕೊಳ್ಳದಿದ್ದರೆ... ; ಕುಂಕುಮ್ ಭಾಗ್ಯ ಸಂಚಿತಾ ದುರಂತ ಅಂತ್ಯ, ಕಿರುತೆರೆಯ ಕರಾಳ ಮುಖ ಬಿಚ್ಚಿಟ್ಟ ಖ್ಯಾತ ನಟಿ
ಕಿರುತೆರೆಯಲ್ಲಿ ಒಮ್ಮೊಮ್ಮೆ ಪ್ರೇಕ್ಷಕರ ಹೃದಯ ಗೆದ್ದ ಪಾತ್ರಗಳು ಏಕಾಏಕಿ ಕಣ್ಮರೆಯಾಗುತ್ತಾವೆ. ಇನ್ನೂ ಕೆಲ ಒಮ್ಮೆ ಆ ಪಾತ್ರಧಾರಿಗಳೇ ಬದಲಾಗುತ್ತಾರೆ. ಆ ಜಾಗಕ್ಕೆ ಬೇರೊಬ್ಬರು ಬರುತ್ತಾರೆ. ಹೀಗಾದಾಗ ನೋಡುಗರಲ್ಲಿ ಗೊಂದಲ ಸೃಷ್ಟಿಯಾಗುತ್ತೆ. ತಮ್ಮ ಇಷ್ಟದ ಕಲಾವಿದ ಇದ್ದಕ್ಕಿದ್ದಂತೆ ಧಾರಾವಾಹಿಯಿಂದ ಹೊರ ಬಂದಿದ್ದೇಕೆ..? ಪಾತ್ರದಿಂದ ಹೊರ ನಡೆದಿದ್ದೇಕೆ ? ಎನ್ನುವ ಪ್ರಶ್ನೆಗಳು ಹಲವರನ್ನು ಕಾಡಲು ಶುರುಮಾಡುತ್ತಾವೆ.
ಯಾಕೆಂದರೆ ಎಲ್ಲರೂ ಭಾವನೆಗಳನ್ನು ಕಡೆಗಣಿಸಿ ಸಂಭಾವನೆ ವಿಚಾರಕ್ಕೆ ಹೊರ ಬಂದಿರುವುದಿಲ್ಲ. ಬೇರೆ ಒಳ್ಳೆಯ ಪಾತ್ರ ಸಿಕ್ತು ಎಂದು ಬದುಕು ನೀಡಿದ ಧಾರಾವಾಹಿಗೆ ಗುಡ್ ಬೈ ಹೇಳಿರುವುದಿಲ್ಲ. ತೆರೆಮರೆಯ ಹಿಂದೆ ಇಲ್ಲಿ ಹಲವಾರು ಕಥೆಗಳಿರುತ್ತಾವೆ. ಕೆಲವೊಮ್ಮೆ 18 ಗಂಟೆ ಬೆವರು ಸುರಿಸಿ ಕೆಲಸ ಮಾಡಿದರೂ ಕೂಡ ಇಲ್ಲಿ ಕೆಲ ನಿರ್ಮಾಣ ಸಂಸ್ಥೆಗಳು ಕಲಾವಿದರನ್ನು ಕಾಲ ಕಸದಂತೆ ನೋಡುತ್ತವೆ.

ಇಷ್ಟೇ ಅಲ್ಲ ಮತ್ತೂ ಕೆಲವೊಮ್ಮೆ ರಾತ್ರೋರಾತ್ರಿ ಇಲ್ಲಿ ಪಾತ್ರಧಾರಿಗಳನ್ನೇ ಬದಲಿಸಲಾಗುತ್ತೆ. ಯಾವ ಮುನ್ಸೂಚನೆಯನ್ನು ಕೂಡ ಇಲ್ಲಿ ಕೊಡುವುದಿಲ್ಲ. ಇದಕ್ಕೆ ಕೆಲ ಬಾರಿ ಈಗೋ ಕಾರಣವಾದರೆ,ಇನ್ನೂ ಕೆಲ ಸಲ ಷರತ್ತುಗಳಿರುತ್ತವೆ. ನಾವು ಹೇಳಿದಂತೆ ಕೇಳದಿದ್ದರೆ, ನಿನ್ನ ಬದಲು ಕೆಲಸ ಮಾಡಲು ಕ್ಯೂನಲ್ಲಿ ಹಲವರು ನಿಂತಿದ್ದಾರೆ ಎನ್ನುವ ಬೆದರಿಕೆಯನ್ನು ಕೂಡ ಇಲ್ಲಿ ಹಾಕಲಾಗುತ್ತೆ.
ಹೀಗೆ ಕೆಲಸದಲ್ಲಿ ಅಭದ್ರತೆ, ಆರ್ಥಿಕ ಶೋಷಣೆ, ಮಾನಸಿಕ ಮತ್ತು ದೈಹಿಕ ಹಿಂಸೆ, ಕಿರುಕುಳ, ಇವೆಲ್ಲದರಿಂದ ಇಲ್ಲಿ ನರಳುವ ಹಲವರು ಮಾನಸಿಕ ಖಿನ್ನತೆಗೆ ಜಾರುತ್ತಾರೆ. ಆತುರದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದಕ್ಕೆ ಸಂಚಿತಾ ಉಗಾಲೆ ಅವರ ಆತ್ಮ*ಹತ್ಯೆಯೇ ಸದ್ಯದ ಉದಾಹರಣೆ. ಹೀಗಂತ ಆಂಚಲ್ ಖುರಾನ ಹೇಳಿದ್ದಾರೆ.
ಹೌದು, ಇನ್ನೂ ಬದುಕಿ ಬಾಳಬೇಕಿದ್ದ ''ಕುಂಕುಮ್ ಭಾಗ್ಯ'' ಧಾರಾವಾಹಿ ಖ್ಯಾತಿಯ ಸಂಚಿತಾ ಉಗಾಲೆ, ಶವವಾಗಿ ಪತ್ತೆಯಾಗಿದ್ಧಾರೆ. ಇವರ ಈ ದುರಂತ ಅಂತ್ಯದಿಂದ ಕಿರುತೆರೆ ಲೋಕ ದಿಗ್ಬ್ರಾಂತಗೊಂಡಿದೆ. ಕಣ್ಣೀರು ಹಾಕುತ್ತಿದೆ. ಆ ಪೈಕಿ MTV ರೋಡೀಸ್ ಸೀಸನ್ 8ರ ಸ್ಫರ್ಧಿ ಮತ್ತು ಸಪ್ನೆ ಸುಹಾನೆ ಲಡಕ್ಪನ್ ಕೆ..ಬಡೇ ಅಚ್ಚೆ ಲಗ್ತೇ ಹೈ 2.. ಸೇರಿ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಆಂಚಲ್ ಖುರಾನಾ ಭಾವುಕ ಪೋಸ್ಟ್ ಹಂಚಿಕೊಂಡಿದ್ಧಾರೆ. ಕಿರುತೆರೆಯ ಕಲಾವಿದರು ಎದುರಿಸುತ್ತಿರುವ ಗಂಭೀರ ಸಮಸ್ಯೆ ಕುರಿತು ಮಾತನಾಡುತ್ತಾ ಭಾವುಕರಾಗಿದ್ದಾರೆ.
ಈ ಕುರಿತು ಮಾತನಾಡಿರುವ ಆಂಚಲ್ ಖುರಾನಾ, ಪ್ರೇಕ್ಷಕರಿಗೆ ಮನರಂಜನೆ ಬೇಕು, ವಾಹಿನಿಗಳಿಗೆ ಟಿಆರ್‌ಪಿ ಬೇಕು ಮತ್ತು ನಿರ್ಮಾಪಕರಿಗೆ ಖರ್ಚು-ವೆಚ್ಚದ ಮೇಲೆ ಕಡಿವಾಣ ಹಾಕಬೇಕು. ಆದರೆ ಈ ಎಲ್ಲದರ ನಡುವೆ ಕಲಾವಿದರ ಮೇಲೆ ಎಂತಹ ಮಾನಸಿಕ ಮತ್ತು ವೃತ್ತಿಪರ ಒತ್ತಡ ಬೀಳುತ್ತದೆ ಎಂಬುದರ ಕಡೆಗೆ ಯಾರೂ ಗಮನ ಹರಿಸುವುದಿಲ್ಲ ಎಂದು ಹೇಳಿದ್ದಾರೆ.

ಕಿರುತೆರೆಯಲ್ಲಿ ಕಲಾವಿದರನ್ನು ಚಿಕ್ಕ ಚಿಕ್ಕ ವಿಷಯಕ್ಕೆ ಪ್ರಾಜೆಕ್ಟ್‌ದಿಂದ ಹೊರ ಹಾಕಲಾಗುತ್ತೆ ಎಂದು ಹೇಳಿರುವ ಆಂಚಲ್ ಖುರಾನಾ, ಕೆಲವೊಮ್ಮೆ ಕಾಂಪ್ರಮೈಸ್ ಆಗದಿದ್ದರೆ ಅಥವಾ ಮಾತು ಕೇಳದಿದ್ದರೆ ಪ್ರಾಜೆಕ್ಟ್‌ದಿಂದ ಕಿತ್ತೆಸೆಯಲಾಗುತ್ತೆ ಎಂದಿದ್ದಾರೆ. ರಾಜಿಯಾಗದೇ ಇದ್ದರೆ, ಮಾತು ಕೇಳದೇ ಇದ್ದರೆ, ಅವರ ಜಾಗಕ್ಕೆ ಮತ್ತೊಬ್ಬ ಕಲಾವಿದರನ್ನು ಆಯ್ಕೆ ಮಾಡಲಾಗುತ್ತದೆ ಎಂದಿರುವ ಆಂಚಲ್, ಮಾನಸಿಕವಾಗಿ ಇಂತಹ ಪರಿಸ್ಥಿತಿಗಳು ಕಲಾವಿದರ ಒತ್ತಡವನ್ನು ಹೆಚ್ಚಿಸುತ್ತವೆ ಎಂದಿದ್ಧಾರೆ.
ಆಡಿಷನ್‌ಗಳು, ತಿರಸ್ಕಾರಗಳು ಮತ್ತು ಅಸ್ಥಿರ ವೃತ್ತಿಜೀವನ ಇಷ್ಟೇ ಅಲ್ಲ ಅಭಿನಯ ಕ್ಷೇತ್ರದಲ್ಲಿರುವ ತೀವ್ರ ಸ್ಪರ್ಧಾತ್ಮಕ ವಾತಾವರಣದ ಬಗ್ಗೆಯೂ ಉಲ್ಲೇಖ ಮಾಡಿರುವ ಆಂಚಲ್, ಅನೇಕ ಕಲಾವಿದರು ಪ್ರತಿದಿನ ಆಡಿಷನ್ ನೀಡುತ್ತಾರೆ ಆದರೆ ಅವರಿಗೆ ನಿರಂತರವಾಗಿ ಸಿಗುವುದು ನಿರಾಸೆ ಮಾತ್ರ ಎಂದು ಹೇಳಿದ್ಧಾರೆ.
ಹೊರಗಿನಿಂದ ಆಕರ್ಷಕವಾಗಿ ಕಾಣುವ ಈ ಕ್ಷೇತ್ರದಲ್ಲಿ ವೃತ್ತಿಜೀವನದ ಅನಿಶ್ಚಿತತೆ, ಕೆಲಸದ ಅಸ್ಥಿರತೆ ಮತ್ತು ಭವಿಷ್ಯದ ಬಗೆಗಿನ ಆತಂಕಗಳು ಅನೇಕ ಕಲಾವಿದರನ್ನು ಕಾಡುತ್ತಿರುತ್ತವೆ ಎಂದು ಹೇಳಿರುವ ಆಂಚಲ್ ಕಲಾವಿದರಿಗೆ 'ಧೈರ್ಯವಾಗಿರಿ' ಎಂದು ಸಲಹೆ ನೀಡುತ್ತಾರೆ. ಆದರೆ ನಿರಂತರ ಹೋರಾಟದಿಂದ ಮಾನಸಿಕ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ಪ್ರತಿಯೊಬ್ಬರೂ ನಿರ್ಲಕ್ಷಿಸುತ್ತಾರೆ ಎಂದು ಭಾವುಕರಾಗಿದ್ದಾರೆ.
ತಮ್ಮದೇ ಆದ ವೈಯಕ್ತಿಕ ಅನುಭವ ಕೂಡ ಹಂಚಿಕೊಂಡಿರುವ ಆಂಚಲ್, ತಾವು ಕೂಡ ತೀವ್ರ ಒತ್ತಡ ಎದುರಿಸಿರುವುದಾಗಿ ಹೇಳಿದ್ಧಾರೆ. ಖಿನ್ನತೆಗೆ ಒಳಗಾಗಿದ್ದೆ ಎಂದಿದ್ಧಾರೆ. ಹೊರಗಿನಿಂದ ಎಲ್ಲವೂ ಸರಿಯಾಗಿ ಕಾಣಿಸುತ್ತಿದ್ದರೂ, ಕಲಾವಿದರ ಮನಸ್ಸಿನಲ್ಲಿ ದೊಡ್ಡ ಬಿರುಗಾಳಿಯೇ ಎದ್ದಿರುತ್ತೆ ಎಂದಿದ್ಧಾರೆ.
ಮುಂದುವರೆದು ಎಂತಹದ್ದೇ ಕಷ್ಟದ ಪರಿಸ್ಥಿತಿ ಎದುರಾದರೂ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿರುವ ಆಂಚಲ್ ಖುರಾನಾ, ಅವಶ್ಯಕತೆ ಎನಿಸಿದರೆ ಕುಟುಂಬಸ್ಥರು, ಸ್ನೇಹಿತರು ಅಥವಾ ನಂಬಿಕಸ್ಥ ವ್ಯಕ್ತಿಗಳ ಸಹಾಯವನ್ನು ಪಡೆಯಿರಿ ಎಂದಿದ್ದಾರೆ. ನಿಮಗೆ ನೀವು ಸಮಯ ನೀಡಿ ಎಂದು ವಿನಂತಿ ಮಾಡಿದ್ಧಾರೆ.
Disclaimer : ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರ ಅಲ್ಲ. ಆತ್ಮಹತ್ಯೆ ತಡೆ ಸಹಾಯವಾಣಿ. ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ ಇಂತಿದೆ 080 - 25497777.


Click it and Unblock the Notifications