'ನಾಗಿಣಿ 2' ಮುಗಿದ ಬಳಿಕ ಧಾರಾವಾಹಿ ಹೀರೊ ಬೇರೆ ಕೆಲಸ ಮಾಡೋಕೆ ನಿರ್ಧರಿಸಿದ್ದೇಕೆ? 'ಆಸೆ' ಸೀರಿಯಲ್ ಸಿಕ್ಕಿದ್ದೇಗೆ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ 'ನಾಗಿಣಿ 2'. ಅದರಲ್ಲಿ ನಾಯಕ ತ್ರಿಶೂಲ್ ಪಾತ್ರದಲ್ಲಿ ಅಭಿನಯಿಸಿದ್ದ ಹ್ಯಾಂಡ್ ಸಮ್ ಹುಡುಗ ನಿನಾದ್ ಹರಿತ್ಸ. ಸದ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಆಸೆ'ಯಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
'ಆಸೆ' ಧಾರಾವಾಹಿಯಲ್ಲಿ ನಾಯಕ ಸೂರ್ಯನ ಪಾತ್ರಕ್ಕೆ ನಿನಾದ್ ಜೀವ ತುಂಬುತ್ತಿದ್ದಾರೆ. ಅಂದ ಹಾಗೇ 'ನಾಗಿಣಿ 2' ಧಾರಾವಾಹಿ ಮುಕ್ತಾಯವಾದ ಬಳಿಕ ಕಿರುತೆರೆಯ ಬದಲು ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುವ ಮನಸ್ಸು ಮಾಡಿದ್ದರಂತೆ ನಿನಾದ್. ಆದರೆ, ಆ ಸಮಯದಲ್ಲಿ 'ಆಸೆ'ಯೆಂಬ ಧಾರವಾಹಿಯಲ್ಲಿ ನಟಿಸುವ ಅವಕಾಶ ಒದಗಿ ಬಂದಿತಂತೆ. ಧಾರಾವಾಹಿಯ ಕಥೆಯನ್ನು ಕೇಳಿ ಮೇಲೆ ಅವರು ತಮ್ಮ ಮನಸ್ಸು ಬದಲಿಸಬೇಕಾಯಿತಂತೆ.

'ಆಸೆ' ಧಾರವಾಹಿಯಲ್ಲಿ ನಿನಾದ್ ಹರಿತ್ಸ ಒಬ್ಬ ಸಾಮಾನ್ಯ ಕ್ಯಾಬ್ ಡ್ರೈವರ್ ಸೂರ್ಯ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಸದ್ಯ ನಿನಾದ್ ಅವರಿಗಂತೂ ಈ ಪಾತ್ರ ಬಹಳ ಹಿಡಿಸಿದೆಯಂತೆ. ಸಂತೋಷದ ವಿಚಾರವೆಂದರೆ ಎಷ್ಟೋ ಬಾರಿ ನಿನಾದ್, ಸೂರ್ಯ ಪಾತ್ರ ತಮಗೆಂದು ಹೇಳಿ ಮಾಡಿಸಿದಂತ ಪಾತ್ರವೇನೋ ಎಂದು ಯೋಚಿಸಿದ್ದು ಉಂಟಂತೆ.
ಸೂರ್ಯನ ಮುಗ್ಧತೆ, ಪ್ರಾಮಾಣಿಕತೆ ಕಂಡರೆ ನಿನಾದ್‌ಗೆ ಬಹಳ ಇಷ್ಟವಾಗುತ್ತದೆಯಂತೆ. ಅದು ಅಷ್ಟೇ ಅಲ್ಲದೆ ಸೂರ್ಯ ಪಾತ್ರ ನಿನಾದ್ ಅವರಿಗೆ ಬಹಳಷ್ಟು ಗುರುತು ಹಾಗೂ ಪಾಪ್ಯುಲಾರಿಟಿ ತಂದುಕೊಟ್ಟಿದೆಯಂತೆ. ನಿನಾದ್ ಅವರು ಎಲ್ಲೇ ಕಂಡರೂ, ಎಲ್ಲೇ ಓಡಾಡುವಾಗ ಧಾರಾವಾಹಿ ವೀಕ್ಷಕರು, ಅಭಿಮಾನಿಗಳು ಸೂರ್ಯ ಎಂದು ಗುರುತಿಸುತ್ತಾರೆಯಂತೆ. ಜೊಯೆಗೆ ಬಳಿ ಬಂದು ಮಾತನಾಡಿಸುತ್ತಾರೆಯಂತೆ.
ಪಾತ್ರದ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹೇಳುವುದು ಹಾಗೂ ನನ್ನ ಅಭಿನಯಕ್ಕೆ ಸಂತಸ ವ್ಯಕ್ತಪಡಿಸುವುದು ಆಶೀರ್ವಾದ ಮಾಡುವುದು ಇತ್ಯಾದಿಗಳು ಹೆಚ್ಚಾಗಿದೆ ಎಂದು ಹೇಳುತ್ತಾರೆ ನಿನಾದ್ ಹರಿತ್ಸ. ಜನರ, ಕಿರುತೆರೆ ವೀಕ್ಷಕರ ಹೊಗಳಿಕೆಯ ಮಾತುಗಳು ಕೂಡಾ ನಿನಾದ್‌ಗೆ ಬಹಳ ನೆಮ್ಮದಿ ಕೊಟ್ಟಿದೆ. ಸಾಮಾನ್ಯ ಜನರಿಗೆ ಬಹಳ ಹತ್ತಿರವಾಗುವಂತಹ ಪಾತ್ರ ಇದಾಗಿದ್ದು ಜನರು ಇದನ್ನು ಬಹಳ ಬೇಗ ಇಷ್ಟ ಪಡುತ್ತಿದ್ದಾರೆ ಎಂಬುದು ನಿನಾದ್ ಅವರ ಅಭಿಪ್ರಾಯ.

ಇನ್ನು 'ನಾಗಿಣಿ' ಧಾರಾವಾಹಿ ಮುಕ್ತಾಯದ ಬಳಿಕ ನಿನಾದ್ ಅವರು ತಮ್ಮ ತಲೆಯ ಕೂದಲನ್ನು ಉದ್ದ ಬಿಡಲಾರಂಭಿಸಿದರಂತೆ. ಆದರೆ 'ಆಸೆ' ಧಾರಾವಾಹಿಯ ಸೂರ್ಯ ಪಾತ್ರಕೋಸ್ಕರ ಅವರು ತಮ್ಮ ಉದ್ದ ಕೂದಲನ್ನು ಕತ್ತರಿಸಬೇಕಾಯಿತಂತೆ. ಎರಡು ವರ್ಷದಿಂದ ಬಹಳ ಪ್ರೀತಿಯಿಂದ ನಾನು ಕೂದಲು ಬಿಟ್ಟಿದ್ದೆ. ಆದರೆ ಈ ಧಾರಾವಾಹಿ ಪಾತ್ರಕ್ಕಾಗಿ ನನ್ನ ಕೂದಲನ್ನು ಕತ್ತರಿಸಬೇಕಾಯಿತು. ಇದು ಬಹಳ ನೋವಿನ ವಿಚಾರವಾದರೂ, ಧಾರಾವಾಹಿ ಹಾಗೂ ಅದರ ಪಾತ್ರದ ವಿಭಿನ್ನತೆಗೆ ನಾನು ಈ ತ್ಯಾಗ ಮಾಡಲು ಸಿದ್ಧನಿದ್ದೆ ಎಂದು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು ನಿನಾದ್ ಹರಿತ್ಸ.


Click it and Unblock the Notifications











