ಬಿಗ್ ಬಾಸ್ ಓಟಿಟಿ ಸ್ಪರ್ಧಿ ಅರ್ಜುನ್ ರಮೇಶ್ ಬರೋಬ್ಬರಿ ಏಳು ಧಾರಾವಾಹಿಗಳನ್ನು ರಿಜೆಕ್ಟ್ ಮಾಡಿದ್ದೇಕೆ?
ಕನ್ನಡದ ಕಿರುತೆರೆ ನಟ ಅರ್ಜುನ್ ರಮೇಶ್ ಅವರು ಏಳು ಧಾರಾವಾಹಿಗಳನ್ನು ರಿಜೆಕ್ಟ್ ಮಾಡಿದ್ದಾರಂತೆ. ಯಾಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಬಹುದು! ಅಂದ ಹಾಗೆ ನಟ ಅರ್ಜುನ್ ರಮೇಶ್ ಅವರು ಹೊಸದೊಂದು ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದು ಆ ಪಾತ್ರಕ್ಕಾಗಿ ಏಳು ಬೇರೆ ಬೇರೆ ಧಾರಾವಾಹಿಗಳನ್ನು ರಿಜೆಕ್ಟ್ ಮಾಡಿದ್ದಾರೆ.
ಹೌದು, ಶಿವನ ಪಾತ್ರವನ್ನು ಮಾಡುತ್ತಿರುವ ನಟ ಅರ್ಜುನ್ ರಮೇಶ್ ಅವರು ಈ ಕಾರಣಕ್ಕೆ ಬೇರೆ ಪಾತ್ರಗಳನ್ನು ರಿಜೆಕ್ಟ್ ಮಾಡಿದ್ದಾರೆ. ಪೌರಾಣಿಕ ಪಾತ್ರ ಶಿವನಾಗಿ ತೆರೆ ಮೇಲೆ ನಟಿಸುವುದು ಅಷ್ಟು ಸುಲಭದ ಮಾತಲ್ಲ. ಇದೀಗ ಶಿವನ ಪಾತ್ರವನ್ನೇ ಮಾಡಲು ಹೊರಟಿರುವ ನಟ ಅರ್ಜುನ್ ರಮೇಶ್ ಅವರು ತಮ್ಮ ಅನುಭವವನ್ನು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

"ಸಾಮಾನ್ಯ ಜನರ ಪಾತ್ರವನ್ನು ಯಾರು ಬೇಕಾದರೂ ತೆರೆ ಮೇಲೆ ತರಬಹುದು. ಆದರೆ, ದೇವರ ಹಾಗೆ ನಟಿಸುವುದು ಅಥವಾ ಒಂದು ಪೌರಾಣಿಕ ಪಾತ್ರವನ್ನು ತೆರೆ ಮೇಲೆ ತರುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಪ್ರತಿಯೊಬ್ಬರಿಗೂ ಅವರದೇ ಆದ ನಂಬಿಕೆಗಳಿರುತ್ತದೆ. ಅದು ಯಾವುದಕ್ಕೂ ಧಕ್ಕೆ ಬಾರದಂತೆ ನಂಬಿಕೆ ಇಟ್ಟು ಇನ್ನೂ ಗಟ್ಟಿಯಾಗುವಂತಹ ರೀತಿಯಲ್ಲಿ ನಾವು ತರ ಮೇಲೆ ಕಾಣಿಸಿಕೊಳ್ಳಬೇಕಾಗುತ್ತದೆ. ಹಾಗಾಗಿ ಶಿವನ ಪಾತ್ರ ಸಿಕ್ಕಾಗ ನನಗೆ ಬಹಳ ಸಂತೋಷವಾಯಿತು. ಅದರಂತೆಯೇ ಒಂದಷ್ಟು ಜವಾಬ್ದಾರಿಯು ನನ್ನ ಮೇಲೆ ಬಂದಂತಾಯಿತು. ಒಬ್ಬ ನಟನಾಗಿ ನಾನು ಈ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸುವ ಜವಾಬ್ದಾರಿಯನ್ನು ಹೊಂದಿದ್ದೇನೆ" ಎಂದು ತಮ್ಮ ಹೊಸ ಪಾತ್ರದ ಅನುಭವದ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ್ದಾರೆ ನಟ ಅರ್ಜುನ್ ರಮೇಶ್.
"ವಿಶೇಷವೆಂದರೆ ಸಾಮಾನ್ಯವಾಗಿ ಪೌರಾಣಿಕ ಧಾರಾವಾಹಿಗಳನ್ನು ಮುಂಬೈಯಲ್ಲಿ ಅಥವಾ ಇನ್ಯಾರೋ ನಿರ್ದೇಶಕರು ನಿರ್ದೇಶಿಸುತ್ತಾರೆ. ಆದರೆ ಈ ಪೌರಾಣಿಕ ಧಾರಾವಾಹಿಯಲ್ಲಿ ಎಲ್ಲರೂ ಕನ್ನಡಿಗರೇ. ನಿರ್ದೇಶನದಿಂದ ಹಿಡಿದು ಎಲ್ಲಾ ನಟರು ಕನ್ನಡದವರು ಆಗಿರುವುದರಿಂದ ನನಗೆ ಈ ತಂಡದಲ್ಲಿ ಕೆಲಸ ಮಾಡಲು ಬಹಳ ಸಂತೋಷವಿದೆ. ನಮ್ಮ ಇಡೀ ತಂಡ ಈ ಧಾರಾವಾಹಿ ಏನು ಬಹಳ ಅಚ್ಚುಕಟ್ಟಾಗಿ ತೆರೆ ಮೇಲೆ ತರಲು ಒಟ್ಟಿಗೆ ಶ್ರಮಿಸುತ್ತಿರುವುದನ್ನು ಗಮನಿಸಿದಾಗೆಲ್ಲ ಈ ತಂಡದಲ್ಲಿ ಒಬ್ಬನಾಗಿರುವುದಕ್ಕೆ ನನಗೆ ಬಹಳ ಸಂತೃಪ್ತಿ ಎನಿಸುತ್ತದೆ" ಎಂದಿದ್ದಾರೆ ನಟ ಅರ್ಜುನ್ ರಮೇಶ್.

"ಸಾಮಾನ್ಯವಾಗಿ ಪೌರಾಣಿಕ ಪಾತ್ರಗಳಲ್ಲಿ ನಮ್ಮ ಮಾತುಕತೆ ಹಾಗೂ ಹಾವ ಭಾವ ಬಹಳ ವಿಭಿನ್ನವಾಗಿರಬೇಕು. ಹೆಚ್ಚಿನ ತಾಳ್ಮೆಯನ್ನು ನಾವು ನಮ್ಮಲ್ಲಿ ತೋರಿಸಬೇಕಾಗುತ್ತದೆ ಹಾಗೂ ಸ್ವಭಾವ ಬಹಳ ಸೌಮ್ಯವಾಗಿ ಕಾಣಬೇಕು. ನಾನು ವೈಯಕ್ತಿಕವಾಗಿ ಆಂಜನೇಯ ಸ್ವಾಮಿಯನ್ನು ಬಹಳ ಗಟ್ಟಿಯಾಗಿ ನಂಬುತ್ತೇನೆ. ನಾನು ಶಿವನ ಭಕ್ತನಲ್ಲದಿದ್ದರೂ ಈ ಧಾರಾವಾಹಿಯಲ್ಲಿ ಶಿವನ ಪಾತ್ರವನ್ನು ಮಾಡಲು ಆರಂಭ ಮಾಡಿದಾಗಿನಿಂದಲೂ ಶಿವ ದೇವರ ಮೇಲೆ ಪ್ರೀತಿ ಹಾಗೂ ಭಕ್ತಿ ಹೆಚ್ಚಿದೆ" ಎಂದು ತಮ್ಮ ನಂಬಿಕೆಯ ಬಗ್ಗೆಯೂ ನಟ ಅರ್ಜುನ್ ರಮೇಶ್ ಓಪನ್ ಆಗಿ ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ ಓಟಿಟಿಯಲ್ಲಿ ಕಾಣಿಸಿಕೊಂಡ ಆಗಿನಿಂದಲೂ ಅರ್ಜುನ್ ರಮೇಶ್ ಅವರ ಖ್ಯಾತಿ ಹೆಚ್ಚಿದ್ದು, ಇದೀಗ ಶಿವನ ಪಾತ್ರ ಸಿಕ್ಕಿರುವುದು ಅವರ ಕೆರಿಯರ್‌ನಲ್ಲಿಯೇ ಬಹುದೊಡ್ಡ ತಿರುವನ್ನು ಕೊಡಬಹುದಾಗಿದೆ. ಚಿಕ್ಕ ಪ್ರಾಜೆಕ್ಟ್ ಮಾಡಿದರೂ ಪರವಾಗಿಲ್ಲ. ನನ್ನನ್ನು ಜನ ಗುರುತಿಸುವಂತೆ ಆಗಬೇಕು ಎಂಬ ನಂಬಿಕೆ ಇರುವ ನಟ ಅರ್ಜುನ್ ರಮೇಶ್ ಅವರ ಪರಿಶ್ರಮಕ್ಕೆ ಅಭಿನಯಕ್ಕೆ ಬಹು ದೊಡ್ಡ ಅಭಿಮಾನಿ ಬಳಗವಿದೆ.


Click it and Unblock the Notifications











