'ನೀನಾದೆ ನಾ' ಸೀರಿಯಲ್‌ನಲ್ಲಿ ಖಡಕ್ ಪೋಲೀಸ್ ಅಧಿಕಾರಿ ಎಂಟ್ರಿ; ಯಾರೀ ನಟ?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳ ಪೈಕಿ 'ನೀನಾದೆ ನಾ' ಕೂಡಾ ಒಂದು. 'ನೀನಾದೆ ನಾ' ಧಾರಾವಾಹಿಯಲ್ಲಿ ಇದೀಗ ಹೊಸ ಅಧ್ಯಾಯ ಶುರುವಾಗಿದ್ದು, ಕಿರುತೆರೆ ವೀಕ್ಷಕರಿಗೆ ತಿಳಿದೇ ಇದೆ. ಅಂದಹಾಗೇ ಇದನ್ನು ಹಳೆಯ ಜೋಡಿಯ ಹೊಸ ಕಥೆ ಎಂದು ಹೇಳಿದರೂ ತಪ್ಪಾಗಲಾರದು. ಯಾಕೆಂದರೆ, ಈಗಾಗಲೇ ಈ ಧಾರಾವಾಹಿಯ ಹಳೆಯ ಅಧ್ಯಾಯವು ಸುಖಾಂತ್ಯ ಕಾಣುವ ಮೂಲಕ ಮುಕ್ತಾಯಗೊಂಡಿದ್ದು, ಹೊಸ ಅಧ್ಯಾಯ ಶುರುವಾಗಿದೆ.
ಅಂದ ಹಾಗೇ ಹೊಸ ಅಧ್ಯಾಯದಲ್ಲಿಯೂ ನಾಯಕ ವಿಕ್ರಮ್ ಪಾತ್ರದಲ್ಲಿ ದಿಲೀಪ್ ಶೆಟ್ಟಿ ಹಾಗೂ ನಾಯಕಿ ವೇದಳಾಗಿ ಖುಷಿ ಶಿವು ನಟಿಸುತ್ತಿರುವುದು ವಿಶೇಷ. ಹೀಗಿರುವಾಗ ಈ ಧಾರಾವಾಹಿಯಲ್ಲಿ ಇದೀಗ ಹೊಸ ಪಾತ್ರದ ಆಗಮನವಾಗಲಿದೆ. ರೌಡಿಯಾಗಿ ಗುರುತಿಸಿಕೊಂಡಿರುವ ನಾಯಕ ವಿಕ್ರಮ್‌ನ ಹುಟ್ಟಡಗಿಸಲು ಪೋಲೀಸ್ ಇನ್ಸ್ಪೆಕ್ಟರ್‌ನ ಆಗಮನವಾಗಿದೆ.

ಪೋಲೀಸ್ ಅಧಿಕಾರಿ ವಿಶ್ವ ಎನ್ನುವವರ ಆಗಮನವಾಗಿದ್ದು, ಆ ಪಾತ್ರದಲ್ಲಿ ಕಿರುತೆರೆ ನಟ ಅಥರ್ವ ಅವರು ಕಾಣಿಸಿಕೊಳ್ಳಲಿರುವುದು ವಿಶೇಷ. ಈಗಾಗಲೇ ಧಾರಾವಾಹಿಯು ಪ್ರೋಮೋವೊಂದನ್ನು ಬಿಡುಗಡೆ ಮಾಡಿದ್ದು, ಕಿರುತೆರೆ ವೀಕ್ಷಕರು ಹೊಸ ಪಾತ್ರದ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಅಷ್ಟಕ್ಕೂ ಪೋಲೀಸ್ ಅಧಿಕಾರಿ ವಿಶ್ವ ಆಗಿ ಅಭಿನಯಿಸುತ್ತಿರುವ ಅಥರ್ವ ಯಾರು ಎಂಬ ಕುತೂಹಲ ಕಿರುತೆರೆ ವೀಕ್ಷಕರಲ್ಲಿ ಮೂಡುವುದು ಸಹಜ. ಯಾಕೆಂದರೆ ಸದ್ಯ ಅಥರ್ವ ಅವರು ಕಿರುತೆರೆಯಲ್ಲಿ ಮದನ್ ಆಗಿ ಫೇಮಸ್ಸು!
ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯಲ್ಲಿ ನಾಯಕಿ ಶ್ರಾವಣಿಯ ಸೋದರತ್ತೆ ವಿಜಯಾಂಬಿಕೆಯ ಮಗ ಮದನ್ ಆಗಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಖಳನಾಯಕನಾಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಅಥರ್ವ ಅವರ ಖಡಕ್ ಲುಕ್‌ಗೆ ವೀಕ್ಷಕರು ಫಿದಾ ಆಗಿದ್ದಾರೆ.

ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಜಿಯಾ ರಾಮ್' ಧಾರಾವಾಹಿಯಲ್ಲಿ ನಾಯಕ ರಾಮ್ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟರು ನಟ ಅಥರ್ವ. ಮೂಲತಃ ರಂಗಭೂಮಿ ಕಲಾವಿದರಾಗಿರುವ ಅಥರ್ವ ಅವರು ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ನಟಿಸುವ ಸುವರ್ಣಾವಕಾಶವನ್ನು ಪಡೆದುಕೊಂಡರು. ತಮ್ಮ ನಟನೆಯ ಮೂಲಕ ವೀಕ್ಷಕರ ಮನ ಸೆಳೆದಿರುವ ಅಥರ್ವ ಅವರು ನಂತರ ನಟಿಸಿದ್ದು 'ಗೌರಿಶಂಕರ' ಧಾರಾವಾಹಿಯಲ್ಲಿ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗೌರಿಶಂಕರ' ಧಾರಾವಾಹಿಯಲ್ಲಿ ನಾಯಕ ಶಂಕರನ ಸ್ನೇಹಿತ ಮಂಜನಾಗಿ ನಟಿಸುವ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು ಅಥರ್ವ. ನಂತರ 'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯಲ್ಲಿ ಖಳನಾಯಕ ಮದನ್ ಆಗಿ ನಟಿಸಿರುವ ಅಥರ್ವ ಅಲ್ಲೂ ನಟನೆಯ ಮೂಲಕ ಸೈ ಎನಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ವಿಭಿನ್ನ ಪಾತ್ರದ ಮೂಲಕ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಹ್ಯಾಂಡ್ ಸಮ್ ಹುಡುಗ ಅಥರ್ವ ಅವರು ಮುಂದೊಂದು ದಿನ ಹಿರಿತೆರೆಯಲ್ಲಿ ಕಾಣಿಸಿಕೊಂಡರೆ ಆಶ್ಚರ್ಯವಿಲ್ಲ.


Click it and Unblock the Notifications











