ನಿರ್ಮಾಪಕನಾಗಲು ಬಂದು ನಟರಾದ ಚಂದನ್ ಕಥೆ

*ನಿಮ್ಮ ಬಣ್ಣದ ಬದುಕು ಪ್ರಾರಂಭವಾಗಿದ್ದು ಹೇಗೆ?
ನನಗೆ ಮೊದಲಿನಿಂದಲೂ ನಾಟಕ, ಸಿನಿಮಾ ನೋಡುವ ಹವ್ಯಾಸವಿತ್ತು. ಅಷ್ಟೇ ಅಲ್ಲ, ಹೈಸ್ಕೂಲು, ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ನಾನು ಅಭಿನಯಿಸುತ್ತಿದ್ದೆ. ಸ್ಟಡಿ ಮಾಡುವಾಗ ಹಾಗೂ ಕೆಲಸಕ್ಕೆ ಸೇರಿದಾಗಲೂ ನನ್ನ ಆಸಕ್ತಿ, ಒಲವು ಸಂಪೂರ್ಣವಾಗಿ ನಟನೆಯ ಕಡೆಗೇ ಇತ್ತು. ಆದರೆ ಮನೆಯಲ್ಲಿ ಪೋಷಕರು ಅಕ್ಕನ ಮದುವೆಯಾಗುವ ವರೆಗೆ ಯಾವುದೇ ಕಾರಣಕ್ಕೆ ಕೆಲಸ ಬಿಡಬೇಡ ಎಂದು ಲಕ್ಷ್ಮಣ ರೇಖೆ ಹಾಕಿಬಿಟ್ಟಿದ್ದರು.
ಹೀಗಾಗಿ ಕೆಲಸ ಬಿಟ್ಟು ನಟಿಸುವ ಸಾಹಸ ಮಾಡಲಿಲ್ಲ. ಯಾವಾಗ ಅಕ್ಕನ ಮದುವೆ ಮುಗಿಯಿತೋ ಆಗ ನನ್ನೊಳಗಿದ್ದ ಕಲಾವಿದ ಜಾಗೃತನಾದ. ಸುವರ್ಣ ವಾಹಿನಿಯಲ್ಲಿ ಪ್ರಾರಂಭವಾದ 'ಪ್ಯಾಟೆ ಮಂದಿ ಕಾಡಿಗೆ ಹೋದ್ರು' ರಿಯಾಲಿಟಿ ಶೋ ಆಡಿಶನ್ ನಲ್ಲಿ ಭಾಗವಹಿಸಿದೆ, ಆಯ್ಕೆಯೂ ಆದೆ. ಅದು ಮುಗಿದ ಮೇಲೆ ಸೀರಿಯಲ್ ನಿರ್ಮಾಣ ಮಾಡುವ ನಿರ್ಧಾರ ಮಾಡಿ ಆಗ ಜೀ ಕನ್ನಡದಲ್ಲಿದ್ದ ಪರಮೇಶ್ವರ್ ಗುಂಡ್ಕಲ್ ಅವರನ್ನು ಸಂಪರ್ಕಿಸಿದೆ.
ಅವರು ತಮ್ಮ ಚಾನೆಲ್ ನಲ್ಲಿ ನಿರ್ಮಾಣವಾಗಲಿದ್ದ 'ರಾಧಾ ಕಲ್ಯಾಣ' ಧಾರಾವಾಹಿ ನಾಯಕನ ಪಾತ್ರ ಮಾಡುವಂತೆ ನನಗೆ ಆಫರ್ ನೀಡಿದರು. ಅವಕಾಶ ನಿರಾಕರಿಸದೇ ನಿರ್ಮಾಪಕನಾಗಲು ಹೋದವನು ನಟನಾದೆ. ಅಲ್ಲಿಂದ ಮುಂದೆ ನಟನಾಗಿಯೇ ಮುಂದುವರಿಯುತ್ತಿದ್ದೇನೆ. ಸದ್ಯದಲ್ಲೇ ಕಿರುತೆರೆಯಿಂದ ಸಿನಿಮಾಗೆ ಜಂಪ್ ಆಗಲಿದ್ದೇನೆ.
*ನಿಮ್ಮ ಧಾರಾವಾಹಿಯ ಅನುಭವ ಹೇಳಿ...
ನಾನು ಈ ಕ್ಷೇತ್ರಕ್ಕೆ ಹೊಸಬನಾದರೂ ನನಗೆ ನಟನೆಯಲ್ಲಿ ತುಂಬಾ ಒಲವಿತ್ತಾದ್ದರಿಂದ ಯಾವುದೇ ಸಮಸ್ಯೆಯಾಗಲಿಲ್ಲ.. ಧಾರಾವಾಹಿ ನಾಯಕನ ಪಾತ್ರವನ್ನು ಜನ ಮೆಚ್ಚಿದ್ದಾರೆ. ಇಲ್ಲಿಯವರೆಗೆ ಮಾಡಿರುವುದು ಒಂದೇ ಸೀರಿಯಲ್ ಆದರೂ, ಅದರಲ್ಲೂ ಈಗಷ್ಟೇ 300ರ ಗಡಿ ದಾಟುತ್ತಿರುವ ಈ ವೇಳೆಯಲ್ಲೇ ನನಗೆ ಈ ಮಟ್ಟಿಗೆ ಅಭಿಮಾನ ವರ್ಗ ಸೃಷ್ಟಿಯಾಗಿರುವುದು ನನ್ನೊಳಗಿನ ಕಲಾವಿದನಿಗೆ ನಿಜವಾಗಿಯೂ ಖುಷಿ ನೀಡಿದೆ. ನಿರ್ದೇಶಕರು ಹಾಗೂ ಸಂಪೂರ್ಣ ಚಿತ್ರತಂಡ ನನಗೆ ಸಹಕಾರ ನೀಡಿ ನನ್ನ ಈ ಪರಿಯ ಜನಪ್ರಿಯತೆಗೆ ನೆರವಾಗಿದೆ.
ಧಾರಾವಾಹಿ ನಟನಾದ ಮೇಲೆಯೇ ಜನಪ್ರಿಯತೆ ಹಾಗೂ ಅದನ್ನು ನಿಭಾಯಿಸುವ ಜವಾಬ್ಧಾರಿಯ ಅರಿವಾದದ್ದು. ಇತ್ತೀಚಿಗೆ ಉಡುಪಿ ಹಾಗೂ ಶಿವಮೊಗ್ಗದಲ್ಲಿ ನಡೆದ 'ರಾಧಾ ಕಲ್ಯಾಣ' ಧಾರಾವಾಹಿಯ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನನಗೆ ನಿಜವಾಗಿಯೂ ಅಚ್ಚರಿಯಾಯ್ತು. ಧಾರಾವಾಹಿಯೊಂದರ ಮೂಲಕ ನನ್ನನ್ನು ಅಷ್ಟೊಂದು ಜನರು ಇಷ್ಟಪಡುವುದನ್ನು ನೋಡಿ ಅಚ್ಚರಿಯಾಯ್ತು. ಮುಂದಿನ ಪುಟ ನೋಡಿ...


Click it and Unblock the Notifications











