ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ 'ಲಕ್ಷ್ಮೀ ಬಾರಮ್ಮ' ಖ್ಯಾತಿಯ ನಟ ಚಂದು: ಹುಡುಗಿ ಯಾರು?
ಕೊರೊನಾ ವೈರಸ್ ಹಾವಳಿಯ ನಡುವೆಯೂ ಈ ವರ್ಷ ಸ್ಯಾಂಡಲ್ ವುಡ್ ನಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಈಗಾಗಲೇ ಸಾಕಷ್ಟು ನಟಿ-ನಟಿಯರು ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟ ಚಂದು ಬಿ ಗೌಡ ಅವರ ಸರದಿ. ಹೌದು, ನಟ ಚಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಹುಕಾಲದ ಗೆಳತಿ ಶಾಲಿನಿ ನಾರಾಯಣ್ ಜೊತೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ.
ಕನ್ನಡ ಕಿರುತೆರೆ ಮತ್ತು ಬೆಳ್ಳಿ ಪರದೆಮೇಲೆ ಮಿಂಚುತ್ತಿರುವ ನಟ ಚಂದು ಇದೇ ತಿಂಗಳು ಅಕ್ಟೋಬರ್ 29ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕೊರೊನಾ ವೈರಸ್ ಕಾರಣ ಸರಳವಾಗಿ ವಿವಾಹವಾಗುತ್ತಿದ್ದಾರೆ. ಕುಟುಂಬದವರು ಮತ್ತು ತೀರ ಆಪ್ತರ ಸಮ್ಮುಖದಲ್ಲಿ ಚಂದು ಬಹುಕಾಲದ ಗೆಳತಿ ಶಾಲಿನಿ ಅವರಿಗೆ ಮಾಂಗಲ್ಯಧಾರಣೆ ಮಾಡಲಿದ್ದಾರೆ. ಮುಂದೆ ಓದಿ..

ಚಂದು-ಶಾಲಿನಿ ಅವರದ್ದು ನಾಲ್ಕು ವರ್ಷದ ಪ್ರೀತಿ
ಸರಳ ಮದುವೆಗೆ ಚಂದು ವಿಶೇಷವಾದ ಪ್ಲಾನ್ ಮಾಡಿದ್ದಾರಂತೆ. ವಿಭಿನ್ನವಾದ ಮಂಟಪ ತಯಾರಾಗುತ್ತಿದೆಯಂತೆ. ಅಂದ್ಹಾಗೆ ಶಾಲಿನಿ ಮಾಡಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಇಬ್ಬರದ್ದು 4 ವರ್ಷದ ಪ್ರೀತಿ. ಸ್ನೇಹಿತರ ಮೂಲಕ ಶಾಲಿನಿ ಪರಿಚಯವಾಗಿದ್ದಾರೆ. ಇಬ್ಬರಿಗೂ ಸ್ನೇಹವಾಗಿ, ಬಳಿಕ ಪ್ರೀತಿಗೆ ತಿರುಗಿದೆ. ಇಬ್ಬರ ಪ್ರೀತಿಗೆ ಮನೆಯವರಿಂದ ಗ್ರೀನ್ ಸಿಗ್ನಲ್ ಸಹ ಸಿಕ್ಕಿದೆ. ಈಗ ಹಸೆಮಣೆ ಏರಲು ರೆಡಿಯಾಗಿದ್ದಾರೆ.

ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿರುವ ಚಂದು
ಚಂದು ನಟನೆಗೆ ಶಾಲಿನಿ ಅವರ ಬೆಂಬಲವೂ ಕಾರಣ. ಬ್ಯುಸಿ ಶೆಡ್ಯೂಲ್ ನಲ್ಲಿ ಸಾಕಷ್ಟು ಸಹಕರಿಸುತ್ತಾರಂತೆ. ಚಂದು ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಚಂದನ್ ಪಾತ್ರದ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದಾರೆ. ಕನ್ನಡ ಕಿರುತೆರೆ ಮಾತ್ರವಲ್ಲದೆ ತೆಲುಗು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ತೆಲುಗಿನ ಸೂಪರ್ ಹಿಟ್ ತ್ರಿನಯನಿ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಬೇರೆ ಭಾಷೆಯಲ್ಲೂ ಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ.

ಸಿನಿಮಾದಲ್ಲೂ ಚಂದು ಅಭಿನಯ
ಧಾರಾವಾಹಿ ಮಾತ್ರವಲ್ಲದೆ ಬೆಳ್ಳಿ ಪರದೆಮೇಲು ಮಿಂಚಿದ್ದಾರೆ. ಸದ್ಯ ದರ್ಶನ್ ನಟನೆಯ ರಾಬರ್ಟ್ ಸಿನಿಮಾದಲ್ಲಿ ಚಂದು ಅಭಿನಯಿಸಿದ್ದಾರೆ. ಮೊದಲ ಬಾರಿಗೆ ಚಂದು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಚಂದು, ಕುಷ್ಕ, ಜಾಕ್ ಪಾಟ್, ಕಮರೊಟ್ಟು ಚಕ್ ಪೋಸ್ಟ್, ಶ್ರೀ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಅಭಿಮಾನಿಗಳ ಅಭಿನಂದನೆ
ಬ್ಯುಸಿ ಕೆಲಸದ ನಡುವೆ ಹಸೆಮಣೆ ಏರುತ್ತಿರುವ ಚಂದು ಮದುವೆಗೆ ಕೇವಲ ನಾಲ್ಕೈದು ದಿನ ಮಾತ್ರ ರಜೆ ಪಡೆದಿದ್ದಾರಂತೆ. ಆರತಕ್ಷತೆ ಸಮಾರಂಭ ಸಹ ಇಟ್ಟುಕೊಂಡಿಲ್ಲ. ಸರಳವಾಗಿ ಶಾಸ್ತ್ರೋಕ್ತವಾಗಿ ಚಂದು ಮದುವೆಯಾಗುತ್ತಿದ್ದಾರೆ. ಚಂದು ಮತ್ತು ಶಾಲಿನಿಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.


Click it and Unblock the Notifications