1100 ಸಂಚಿಕೆ ಪೂರೈಸಿದ ತೆಲುಗಿನ 'ತ್ರಿನಯಿನಿ' ಧಾರಾವಾಹಿ: ಸಂತಸ ಹಂಚಿಕೊಂಡ ಚಂದು ಗೌಡ
ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ತ್ರಿನಯಿನಿ' ಧಾರಾವಾಹಿಯು ಯಶಸ್ವಿ 1100 ಸಂಚಿಕೆ ಪೂರೈಸಿದೆ. 'ತ್ರಿನಯಿನಿ' ಧಾರಾವಾಹಿಯಲ್ಲಿ ನಾಯಕ ವಿಶಾಲ್ ಆಗಿ ಅಭಿನಯಿಸುತ್ತಿರುವ ಕನ್ನಡಿಗ ಚಂದು ಗೌಡ ಈ ಸುಂದರ ಜರ್ನಿಯ ಕುರಿತು ಸಂತಸ ವ್ತಕ್ಯಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮಾತ್ರವಲ್ಲದೇ ಫಿಲ್ಮಿಬೀಟ್‌ನಲ್ಲೂ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ ಚಂದು ಗೌಡ.
"ತ್ರಿನಯಿನಿ ಧಾರಾವಾಹಿ ಯಶಸ್ವಿ 1100 ಸಂಚಿಕೆ ಪೂರೈಸಿದೆ. ತುಂಬಾನೇ ಖುಷಿಯಾಗುತ್ತಿದೆ. ಲಕ್ಷ್ಮಿ ಬಾರಮ್ಮ ಧಾರಾವಾಹಿಯು ಸಾವಿರ ಸಂಚಿಕೆ ದಾಡಿತ್ತು. ಅದರ ನಂತರ ಇದೀಗ ತ್ರಿನಯಿನಿ ಸಾವಿರ ಸಂಚಿಕೆ ದಾಡಿದೆ. ಇಂತಹ ಒಂದು ಲೆಜೆಂಡರಿ ಸೀರಿಯಲ್, ಐಕಾನಿಕ್ ಸೀರಿಯಲ್‌ನಲ್ಲಿ ನಾನು ನಟಿಸುತ್ತಿದ್ದೇನೆ ಎನ್ನುವುದೇ ನನಗೆ ಖುಷಿ. ಮಾತ್ರವಲ್ಲ ಇದು ಕನ್ನಡಕ್ಕೆ ಡಬ್ ಆಗಿ ಇಲ್ಲಿಯೂ ಕೂಡಾ ಅಷ್ಟೇ ಜನಪ್ರಿಯತೆ ಗಿಟ್ಟಿಸಿಕೊಂಡಿದೆ" ಎಂದು ಫಿಲ್ಮಿಬೀಟ್ ಜೊತೆಗೆ ಸಂತಸ ವ್ಯಕ್ತಪಡಿಸುತ್ತಾರೆ ಚಂದು ಗೌಡ.

"ನಮ್ಮ ತ್ರಿನಯಿನಿ ಧಾರಾವಾಹಿಯು ತೆಲುಗಿನಲ್ಲಿ ಒಳ್ಳೆಯ ಟಿ ಆರ್ ಪಿ ಪಡೆಯುತ್ತಿದೆ. ಮಾತ್ರವಲ್ಲ ಕನ್ನಡದಲ್ಲೂ ಕೂಡಾ ಅಷ್ಟೇ, ಈ ಧಾರಾವಾಹಿಯು ಉತ್ತಮ ಟಿ ಆರ್ ಪಿ ಪಡೆಯುತ್ತಿದೆ. ಏಕಕಾಲಕ್ಕೆ ಎರಡು ಕಿರುತೆರೆಯಲ್ಲಿ ಜನಪ್ರಿಯತೆ ಪಡೆಯುತ್ತೇನೆ. ಒಂದೇ ಪಾತ್ರದ ಮೂಲಕ ಗುರುತಿಸಿಕೊಳ್ಳುತ್ತೇನೆ ಎಂದು ನಾನು ಯಾವತ್ತಿಗೂ ಅಂದುಕೊಂಡಿರಲಿಲ್ಲ. ಒಟ್ಟಿನಲ್ಲಿ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ನಮ್ಮ ಸೀರಿಯಲ್ ಸದ್ದು ಮಾಡುತ್ತಿದೆ" ಎಂದು ಚಂದು ಗೌಡ ಅವರು ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ.
"ವಿಶಾಲ್ ಪಾತ್ರ ಒಂದು ವಿಭಿನ್ನ ಪಾತ್ರ ಅಂತಲೇ ಹೇಳ್ಬಹುದು. ಆರಂಭದ ದಿನಗಳಲ್ಲಿ ವಿಶಾಲ್ ಆಗಿ ನಟಿಸುವುದು ನನಗೆ ತುಂಬಾ ಚಾಲೆಂಜಿಂಗ್ ಆಗಿತ್ತು. ಆದರೆ, ದಿನ ಕಳೆದಂತೆ ನಾನು ಅದಕ್ಕೆ ಸೆಟ್ ಆದೆ. ಚಂದು ವಿಶಾಲ್ ಪಾತ್ರ ಮಾಡ್ಬೇಕು ಅಂತಾದ್ರೆ ಅವನು ಸ್ವಲ್ಪ ಬದಲಾವಣೆ ಮಾಡ್ಬೇಕಿತ್ತು. ಅದು ಅಷ್ಟು ಸುಲಭದ ಮಾತಾಗಿರಲಿಲ್ಲ. ನಿಜವಾಗಿಯೂ ಅದೊಂದು ಕಠಿಣ ಪಾತ್ರವಾಗಿತ್ತು. ವಿಶಾಲ್ ಪಾತ್ರದಲ್ಲಿ ರಗಡ್ ಇತ್ತು. ಆಟಿಟ್ಯೂಡ್ ಇತ್ತು. ಅದನ್ನು ತೆರೆ ಮೇಲೆ ತರಬೇಕು ಎಂದರೆ ಕಷ್ಟ ಆಗ್ತಿತ್ತು." ಎಂದು ವಿಶಾಲ್ ಪಾತ್ರದ ಬಗ್ಗೆ ಫಿಲ್ಮಿಬೀಟ್ ಜೊತೆಗೆ ಮನ ಬಿಚ್ಚಿ ಮಾತನಾಡಿದ್ದಾರೆ ಚಂದು ಗೌಡ.

"ಕಿರುತೆರೆ ವೀಕ್ಷಕರು ಈಗಾಗಲೇ ವಿಶಾಲ್ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ನಾನು ಪ್ರಯತ್ನ ಪಟ್ಟಿದ್ದಕ್ಕೂ ಉತ್ತಮ ಪ್ರತಿಫಲ ದೊರಕಿದೆ. ಇದರ ಜೊತೆಗೆ ಜೀ ಕುಟುಂಬಂ ಅವಾರ್ಡ್ಸ್ ನಲ್ಲಿ ಎರಡು ಸಲ ಬೆಸ್ಟ್ ಆ್ಯಕ್ಟರ್ ಅವಾರ್ಡ್ ಬಂದಿದೆ. ಅದು ಇನ್ನೂ ಕೂಡಾ ಖುಷಿ ತಂದಿದೆ. ನಟನೆಯನ್ನು ಗುರುತಿಸಿ ಅದಕ್ಕೆ ಅವಾರ್ಡ್ ಸಿಕ್ಕಾಗಂತೂ ತುಂಬಾ ಸಂತಸವಾಗುತ್ತದೆ. ಒಟ್ಟಿನಲ್ಲಿ ತ್ರಿನಯಿನಿ ಧಾರಾವಾಹಿಯ ಭಾಗವಾಗಿರುವುದಕ್ಕೆ ಖುಷಿಯಾಗಿದೆ" ಎಂದು ಫಿಲ್ಮಿಬೀಟ್ ಜೊತೆಗೆ ಹೇಳಿಕೊಂಡಿದ್ದಾರೆ ಚಂದು ಗೌಡ.


Click it and Unblock the Notifications











