"ನೀನು ಇಲ್ಲದೆ ನಾನು ನಟಿಯಾಗುವುದು ಹೇಗೆ?"; ದಿಲೀಪ್ ರಾಜ್ ಮಗಳು ಧೃತಿ ಭಾವುಕ ಪೋಸ್ಟ್
ಎರಡು ದಿನಗಳ ಹಿಂದೆ ಕನ್ನಡ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನರಾಗಿದ್ದರು. ನಟನಾಗಿ ಮಾತ್ರವಲ್ಲದೇ ಪತ್ನಿ ಜೊತೆ ಸೇರಿ ಕಿರುತೆರೆಯಲ್ಲಿ ನಿರ್ಮಾಪಕರಾಗಿ ಅವರು ಗುರ್ತಿಸಿಕೊಂಡಿದ್ದರು. ಒಳ್ಳೆ ಪ್ರತಿಭೆ ಇದ್ದರೂ ಉತ್ತಮ ಅವಕಾಶಗಳು ಸಿಗದೇ ಎಲೆಮರೆಯ ಕಾಯಿಯಂತೆ ಇದ್ದುಬಿಟ್ಟರು. ದಿಲೀಪ್ ರಾಜ್ ಅಗಲಿಕೆ ಚಿತ್ರರಂಗ, ಕಿರುತೆರೆಗೆ ಆಘಾತ ತಂದಿದೆ.
ದಿಲೀಪ್ ರಾಜ್ ಕಣ್ಮರೆ ಬಳಿಕ ಕುಟುಂಬಸ್ಥರು, ಆಪ್ತರ ನೋವು, ಹತಾಶೆ, ದುಃಖ ಹೇಳತೀರದು. ಪತ್ನಿ, ಮಕ್ಕಳು ಶೋಕಸಾಗರದಲ್ಲಿ ಮುಳುಗಿದಿದ್ದಾರೆ. ಪತ್ನಿ ಶ್ರೀವಿದ್ಯಾ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಪತಿಯನ್ನು ನೆನಪಿಸಿಕೊಳ್ಳುತ್ತಲೇ ಇದ್ದಾರೆ. ಇದೀಗ ಮಗಳು ಧೃತಿ ರಾಜ್ ಮಾಡಿರುವ ಪೋಸ್ಟ್ ವೈರಲ್ ಆಗ್ತಿದೆ. 'ನೀನಿಲ್ಲದೇ ನಾನು ಹೇಗೆ ನಟಿಯಾಗಲಿ' ಎಂದು ಆಕೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಐ ಟೇಕ್ ಇಟ್ ಬ್ಯಾಕ್ ಡ್ಯೂಡ್ ಎಂದು ಧೃತಿ ರಾಜ್ ಪೋಸ್ಟ್ ಮಾಡಿದ್ದಾಳೆ. "ನಾನು ಭೇಟಿಯಾದವರಲ್ಲಿ ನೀನು ಬಹಳ ಗ್ರೇಟ್. ನನ್ನ ಜೀವನದ 16 ವರ್ಷಗಳಿಂದ ನೀನು ಗೊತ್ತು, ನೀನು ಇಲ್ಲದೆ ನಾನು ನಟಿಯಾಗುವುದು ಹೇಗೆ ಎಂದು ನನಗೆ ಊಹಿಸಲೂ ಸಾಧ್ಯವಿಲ್ಲ. ನಾನು ಹೇಳಲು ಸಾಧ್ಯವಾಗದಷ್ಟು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇದನ್ನು ಹೇಗೆ ವಿವರಿಸಬೇಕೆಂದು ನನಗೆ ತಿಳಿದಿಲ್ಲ. ಆದರೆ ನೀನು ನನಗೆ ತುಂಬಾ ವಿಶೇಷ ಎಂದು ನಾನು ನಿನಗೆ ವಿವರಿಸುವ ಅಗತ್ಯವಿಲ್ಲ. ನಾನು ನಿನಗೆ ತುಂಬಾ ವಿಶೇಷ ಎಂದು ನನಗೆ ತಿಳಿದಿದೆ" ಎಂದಿದ್ದಾರೆ.
"ನಾನು ಎಂದಾದರೂ ನಟಿಯಾಗಿ ಬೆಳೆದರೆ ನಿನ್ನ ಹೆಸರನ್ನು ನನ್ನೊಂದಿಗೆ ತೆಗೆದುಕೊಂಡು ಹೋಗುತ್ತೇನೆ ಎಂದು ನಾನು ಭರವಸೆ ನೀಡುತ್ತೇನೆ. ನಮ್ಮಿಬ್ಬರ ಹೆಸರಿನ ಮೊದಲ DR (ದಿಲೀಪ್ ರಾಜ್, ಧೃತಿ ರಾಜ್) ಅಕ್ಷರಗಳು ಒಂದೇ. ನಿನ್ನನ್ನು ಪ್ರೀತಿಸುವುದಕ್ಕಿಂತ ಬೇರೆನು ಮಾಡಲು ಸಾಧ್ಯ. ನಾನು ನಿನ್ನನ್ನು ಸದಾ ಪ್ರೀತಿಸುತ್ತೇನೆ ಡ್ಯೂಡ್. ನಾನು ನಿನ್ನನ್ನು ಪ್ರೀತಿಸುತ್ತೇನೆ ಅಪ್ಪಾ" ಎಂದು ಧೃತಿ ಪೋಸ್ಟ್ ಮಾಡಿದ್ದಾರೆ. ಧೃತಿಗೆ ಅದಿತಿ ಎಂಬ ಸಹೋದರಿ ಇದ್ದಾಳೆ.

ನಟಿ ಅನು ಪ್ರಭಾಕರ್ ಸೇರಿ ಸಾಕಷ್ಟು ಜನ ಧೃತಿ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆದರೆ ಕಾಮೆಂಟ್ ಸೆಕ್ಷನ್ ಆಫ್ ಮಾಡಿರುವುದರಿಂದ ಯಾರೊಬ್ಬರು ಕಾಮೆಂಟ್ ಮಾಡಲು ಸಾಧ್ಯವಾಗಿಲ್ಲ. ಮಗಳನ್ನು ಬಣ್ಣದಲೋಕಕ್ಕೆ ಪರಿಚಯಿಸುವ ಆಸೆ ದಿಲೀಪ್ ರಾಜ್ ಅವರಿಗಿತ್ತು. ಆ ಕನಸು ನನಸಾಗುವ ಮುನ್ನ ಇಹಲೋಕ ತ್ಯಜಿಸಿದ್ದಾರೆ. ಕಾಲೇಜು ದಿನಗಳಲ್ಲಿ ದಿಲೀಪ್ ರಾಜ್ ಹಾಗೂ ಶ್ರೀವಿದ್ಯಾ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಪೋಷಕರ ವಿರೋಧದ ನಡುವೆ ಹಸೆಮಣೆ ಏರಿದ್ದರು. ಇನ್ನು 6 ತಿಂಗಳಲ್ಲಿ 25ನೇ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿತ್ತು.
ಅಪ್ಪನ ಜೊತೆಗಿನ ಸಾಕಷ್ಟು ಫೋಟೊ, ವಿಡಿಯೋಗಳನ್ನು ಧೃತಿ ರಾಜ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಶ್ರೀವಿದ್ಯಾ ಮಾಡಿದ್ದ ಪೋಸ್ಟ್ ಕೂಡ ಅಭಿಮಾನಿಗಳನ್ನು ಭಾವುಕರನ್ನಾಗಿಸಿತ್ತು. "ಇಷ್ಟು ಬೆಂಬಲ ನೀಡಿದ್ದಕ್ಕಾಗಿ ನಾನು ಎಲ್ಲರಿಗೂ ಕೃತಜ್ಞಳಾಗಿದ್ದೇನೆ. ದಿಲೀಪ್ ಯಾವಾಗಲೂ ಕಲೆ, ಸಿನಿಮಾ ಮತ್ತು ಇಲ್ಲಿ ನಮ್ಮ ದಯೆಯ ರೂಪದಲ್ಲಿ ನಮ್ಮೊಂದಿಗೆ ಇರುತ್ತಾನೆ. ನಾನು ಅವನನ್ನು ಶಾಂತಿಯಿಂದ ಹೋಗಲು ಬಿಟ್ಟು ಹೊಸ ಜೀವನವನ್ನು ಕಂಡುಕೊಳ್ಳಲು ನಿರ್ಧರಿಸಿದ್ದೇನೆ" ಎಂದಿದ್ದರು.
"ಒಂದು ವಿಷಯ ಖಚಿತ.. ನಾನು ಅವನನ್ನು ಮತ್ತೆ ನೋಡುವವರೆಗೂ ನನ್ನ ಆತ್ಮಕ್ಕೆ ಶಾಂತಿಯಿಲ್ಲ" ಎಂದು ಶ್ರೀವಿದ್ಯಾ ಭಾವುಕವಾಗಿ ಪೋಸ್ಟ್ ಮಾಡಿದ್ದರು. ಕೊರಿಯೋಗ್ರಫರ್ ಆಗುವ ಕನಸು ಕಂಡಿದ್ದ ದಿಲೀಪ್ ರಾಜ್ ಅಚಾನಕ್ ಆಗಿ ಒಮ್ಮೆ ನಾಟಕದಲ್ಲಿ ಲೀಡ್ ರೋಲ್ ಮಾಡುವಂತಾಗಿತ್ತು. ಬಳಿಕ ಧಾರಾವಾಹಿಯಲ್ಲಿ ನಟಿಸಿದ್ದರು. ಮೊದಲ ಬಾರಿಗೆ 500 ರೂ. ಸಂಭಾವನೆ ಸಿಕ್ಕಾಗ ನಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದುಕೊಂಡರು. ಬಳಿಕ ರಂಗಭೂಮಿ ಸೇರಿದರು. ಧಾರಾವಾಹಿ ಬಳಿಕ ಸಿನಿಮಾ ಅವಕಾಶಗಳು ಸಿಕ್ಕಿತ್ತು.


Click it and Unblock the Notifications