ಇವತ್ತು ಸಣ್ಣಕ್ಕಿ ಅನ್ನ ತಿಂತಾ ಇದ್ದೀವಿ ಅಂದ್ರೆ ಅದು ಇವರ ಭಿಕ್ಷೆ; ಅನುಬಂಧ ವೇದಿಕೆಯಲ್ಲಿ ದೊಡ್ಡಣ್ಣ ಮಾತು
ಕಲರ್ಸ್ ಕನ್ನಡ ವಾಹಿನಿಯಲ್ಲಿ ವರ್ಷದ ಹಬ್ಬ ಶುರುವಾಗಿದೆ. ಅನುಬಂಧ ಅವಾರ್ಡ್ ಕಾರ್ಯಕ್ರಮ ಎಂದರೆ ಇಡೀ ಕಲರ್ಸ್ ಕನ್ನಡದ ಬಳಗಕ್ಕೆ ಇನ್ನಿಲ್ಲದ ಸಂತಸ. ಎಲ್ಲರು ಒಟ್ಟಿಗೆ ಸೇರಬಹುದೆಂಬ ಖುಷಿ. ಅವಾರ್ಡ್ ಕಾರ್ಯಕ್ರಮದಲ್ಲಿ ಜನರೇ ಆಯ್ಕೆ ಮಾಡಿದಂತ ಪಾತ್ರಗಳಿಗೆ ಅವಾರ್ಡ್ ಕೂಡ ಸಿಗಲಿದೆ.
ಕಳೆದ ಎರಡು ದಿನ ಅಂದರೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ಅನುಬಂಧ ಅವಾರ್ಡ್ ಕಾರ್ಯಕ್ರಮ ಪ್ರಸಾರವಾಗಿದೆ. ಈ ವೇಳೆ ವೇದಿಕೆ ಮೇಲೆ ಹಲವು ವಿಚಾರಗಳನ್ನು ಆರ್ಟಿಸ್ಟ್ ಗಳು ಹಂಚಿಕೊಂಡಿದ್ದಾರೆ. ಇಂಡಸ್ಟ್ರಿಗೆ ಬಂದ ರೀತಿ, ಬಂದಾಗ ಸಿಕ್ಕ ಸಪೋರ್ಟ್ ಹೀಗೆ ಎಲ್ಲಾ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆದರೆ ದೊಡ್ಡಣ್ಣ ಅವರು ತಮ್ಮ ಹಳೆಯ ದಿನಗಳನ್ನು ನೆನೆದಿದ್ದಾರೆ. ಮೈಸೂರು ಮಹಾರಾಜರ ನಿಸ್ವಾರ್ಥ ಸಹಾಯವನ್ನು ತೆರೆದಿಟ್ಟಿದ್ದಾರೆ.

ವೇದಿಕೆಗೆ ಯದುವೀರ್ ಒಡೆಯರ್
ಕಲರ್ಸ್ ಕನ್ನಡದಲ್ಲಿ ಅನುಬಂಧ ಅವಾರ್ಡ್ ಕಾರ್ಯಕ್ರಮಕ್ಕೆ ಮೈಸೂರು ಮಹಾರಾಜರು ಹಾಗೂ ಸಂಸದರನ್ನು ಆಹ್ವಾನ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಬಂದ ಸಂಸದರಿಗೆ ತಾರಾ ಅನುರಾಧ ಸ್ವಾಗತ ಕೋರಿದರು. ಅದ್ದೂರಿಯಾಗಿ ಅವರನ್ನು ವೇದಿಕೆಗೆ ಬರಮಾಡಿಕೊಂಡರು. ಬರುವ ಹಾದಿಯಲ್ಲಿ ಸ್ವರ್ಗದಂತೆ ಅಲಂಕಾರವನ್ನು ಮಾಡಿದ್ದರು. ವಾದ್ಯಗಳ ಮೇಳದೊಂದಿಗೆ, ಕಳಸಗಳ ಜೊತೆಗೆ ಸ್ವಾಗತ ಕೋರಿದರು.
ಸಂಸದರಿಂದ ದೊಡ್ಡಣ್ಣಗೆ ಅವಾರ್ಡ್
ಅನುಬಂಧ ಅವಾರ್ಡ್ ಕಾರ್ಯಕ್ರಮಕ್ಕೆ ಬಂದಿದ್ದ ಯದುವೀರ್ ಒಡೆಯರ್ ಅವರಿಗೆ ಸನ್ಮಾನ ಕೂಡ ಮಾಡಿದರು. ಅಷ್ಟೇ ಅಲ್ಲದೆ ಅವರಿಂದ ಹಿರಿಯರಿಗೆ, ಕಲಾವಿದೆಯರಿಗೆ ಅವಾರ್ಡ್ ಅನ್ನು ಕೊಡಿಸಿದರು. ಅದರಲ್ಲೂ ಹಿರಿಯ ನಟ ದೊಡ್ಡಣ್ಣ ಅವರಿಗೆ ಅವಾರ್ಡ್ ನೀಡಿ ಗೌರವಿಸಿದರು. ಕಲರ್ಸ್ ಕನ್ನಡ ವಾಹಿನಿಯ ಕೆಂಡಸಂಪಿಗೆ ಧಾರಾವಾಹಿಯಲ್ಲಿ ಮಾವನ ಪಾತ್ರ ಮಾಡಿದ್ದಾರೆ. ಅನುಬಂಧದಲ್ಲಿ ಅವಾರ್ಡ್ ಕೂಡ ಪಡೆದಿದ್ದಾರೆ.

ಯದುವೀರ್ ವಂಶದ ಬಗ್ಗೆ ಗುಣಗಾನ
ಯದುವೀರ್ ಒಡೆಯರ್ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದರಾಗಿದ್ದಾರೆ. ಮಹಾರಾಜ ವಂಶಸ್ಥರು ರಾಜ್ಯಕ್ಕೆ ಏನೆಲ್ಲಾ ಸಹಾಯ ಮಾಡಿದ್ದಾರೆಂಬುದನ್ನು ದೊಡ್ಡಣ್ಣ ವೇದಿಕೆ ಮೇಲೆ ತಿಳಿಸಿದ್ದಾರೆ. 'ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ರಾಜಪರಂಪರೆ ಎಂಥದ್ದು ಅಂದ್ರೆ ಈ ಮಣ್ಣಲ್ಲಿ ನಮಗೆ ಆಶ್ರಯ, ಅನ್ನ, ವಿದ್ಯೆ, ಬೆಳಕು, ಆರೋಗ್ಯ ಕೊಟ್ಟಂತ ವಂಶ ಯಾವುದಾದ್ರು ಇದೆ ಅಂದ್ರೆ ಅದು ಯದು ವಂಶ. ಸುಮಾರು 70 ವರ್ಷದಿಂದ ನಮ್ಮ ಅಮ್ಮ ನಂಜಮ್ಮ, ಜೊತೆಗೆ ನಮ್ಮ ದೊಡ್ಡಮ್ಮ ನಾಗಮ್ಮ ಅಂತ. ಅವ್ರು ಹೆಂಗೆ ಕನ್ನಂಬಾಡಿ ಕಟ್ಟಿದ್ರು ಅಂತ, ಮನೆಯಲ್ಲಿದ್ದ ಒಡವೆಗಳನ್ನು ಮಾರಿ ಬ್ರಿಟಿಷ್ ಸಾಮ್ರಾಜ್ಯದವರು ಪರವಾನಗಿ ಕೊಡದೆ ಇದ್ರು ಹೋರಾಟ ನಡೆಸಿ, ನಾನು ಕಟ್ಟಿಸ್ತೀನಿ ಅಂತ ಕಟ್ಟಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರ್' ಎಂದು ಇತಿಹಾಸ ಹೇಳಿದ್ದಾರೆ.
ವೀಕ್ಷಕರಿಂದ ಬಹುಪರಾಕ್
'ಅವ್ರೇನಾದರೂ ಕನ್ನಂಬಾಡಿ ಕಟ್ಟೆ ಕಟ್ಟಿಸದೇ ಇದ್ದರೆ,ನಾವೆಲ್ಲ ಏನಾಗಿರ್ತಾ ಇದ್ವಿ ಕಂದ. ಇವತ್ತಿನವರೆಗೂ ಹೊಗೆಸೊಪ್ಪು ಬೆಳೆದುಕೊಂಡು ಇರಬೇಕಾಗಿತ್ತು ಅಂತ ನಮ್ಮ ತಾಯಿ ಮತ್ತು ದೊಡ್ಡಮ್ಮ ಹೇಳ್ತಾ ಇದ್ರು. ಇವತ್ತೇನಾದರು ಸಣ್ಣ ಅಕ್ಕಿ ಅನ್ನ ಊಟ ಮಾಡ್ತೀವಿ ಅಂದ್ರೆ ಯದುವಂಶದವರು ಕೊಟ್ಟ ಭಿಕ್ಷೆ' ಎಂದು ಮಹಾರಾಜ ವಂಶಸ್ಥರನ್ನು ದೊಡ್ಡಣ್ಣ ಹೊಗಳಿದ್ದಾರೆ. ಕಮೆಂಟ್ ಬಾಕ್ಸ್‌ನಲ್ಲಿ ವೀಕ್ಷಕರು ಕೂಡ ಮಹಾರಾಜ ವಂಶಸ್ಥರಿಗೆ ಜೈಕಾರ ಹಾಕಿದ್ದಾರೆ.


Click it and Unblock the Notifications











