"ನಟರಿಗೆ ಅವಕಾಶನೂ ಸಿಗ್ತಿದೆ.. ಪೈಪೋಟಿನೂ ಹೆಚ್ಚಿದೆ"; ಲೆಟೆಸ್ಟ್ ಟ್ರೆಂಡ್ ಬಗ್ಗೆ ನಟ ಹರೀಶ್ ರಾಜ್ ಕಮೆಂಟ್
ದಶಕಕ್ಕೂ ಹೆಚ್ಚಿನಿಂದಲೂ ಹರೀಶ್ ರಾಜ್ ಅವರು ಹಲವಾರು ಧಾರವಾಹಿಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಒಳ್ಳೊಳ್ಳೆಯ ಪಾತ್ರಗಳನ್ನು ಮಾಡಿ ಜನರನ್ನು ಮನರಂಜಿಸಿದ್ದಾರೆ. ಅದ್ಭುತ ನಟ ಎಂದೆನಿಸಿಕೊಂಡ ಇವರು ಮಿಮಿಕ್ರಿಗೂ ಎತ್ತಿದ ಕೈ. ನಟ ಅಷ್ಟೇ ಅಲ್ಲದೆ ನಿರ್ದೇಶಕರು ಹೌದು. ಕಳೆದ ವರ್ಷ ಮುಕ್ತಾಯಗೊಂಡ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಾಯಕನಾಗಿ ಮೋಡಿ ಮಾಡಿದ್ದರು ಹರೀಶ್ ರಾಜ್.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ವಿಶ್ವಾಸ್ ಆಲಿಯಾಸ್ ಆರ್ಯವರ್ಧನ್ ಆಗಿ ಹರೀಶ್ ರಾಜ್ ನಟಿಸಿದ್ದರು. 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರ್ಯವರ್ಧನ್ ಆಗಿ ಅಭಿನಯಿಸುತ್ತಿದ್ದ ಅನಿರುದ್ಧ್ ಜತ್ಕರ್ ಅವರು ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದರು. ಆಗ ಆ ಜಾಗಕ್ಕೆ ಬಂದವರೇ ಹರೀಶ್ ರಾಜ್. ಆರ್ಯವರ್ಧನ್ ಆಗಿ ಕಿರುತೆರೆಯಲ್ಲಿ ಮೋಡಿ ಮಾಡಿರುವ ಹರೀಶ್ ರಾಜ್ ಅವರು ಇದೀಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿಯೂ ಸ್ಪರ್ಧಿಸಿದ್ದ ಹರೀಶ್ ರಾಜ್ ತಮ್ಮ ನಟನೆಯ ಮೂಲಕ ಛಾಪನ್ನು ಮೂಡಿಸಿದ್ದರು. ಪ್ರಸ್ತುತ ನಟ ಹರೀಶ್ ಅವರು ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇಂದಿನ ನಟನ ಟ್ರೆಂಡ್ ಬಗ್ಗೆ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದ್ದಾರೆ.
"ಇಂದು ನಟನೆ ಎನ್ನುವುದು ಬರೀ ಟಿವಿ ಅಥವಾ ಚಲನಚಿತ್ರ, ಥಿಯೇಟರ್ ಗಳಿಗಷ್ಟೇ ಸೀಮಿತವಾಗಿಲ್ಲ. ಅದರ ಬದಲಿಗೆ ಓಟಿಟಿ ಪ್ಲಾಟ್ ಫಾರ್ಮ್ ಬಂದಿರುವುದರಿಂದ ಎಲ್ಲರೂ ತಮ್ಮ ಅಂಗೈ ಅಗಲದ ಫೋನ್‌ನಲ್ಲಿ ಎಲ್ಲವನ್ನು ನೋಡಬಹುದಾಗಿದೆ. ಹೀಗಿರುವಾಗ ಅವಕಾಶಗಳು ಹೆಚ್ಚು. ಜೊತೆಗೆ ಸ್ಪರ್ಧೆಯೂ ಜೋರು. ಈ ಕಾರಣದಿಂದಾಗಿ ಅದಕ್ಕೆ ಸರಿಯಾಗಿ ನಮ್ಮನ್ನು ನಾವು ತಯಾರು ಮಾಡಿಕೊಳ್ಳುವ ಅವಶ್ಯಕತೆಯೂ ಇದೆ" ಎಂದು ಖಾಸಗಿ ಸಂದರ್ಶನವೊಂದರಲ್ಲಿ ನಟ ಹರೀಶ್ ರಾಜ್ ಹಂಚಿಕೊಂಡಿದ್ದಾರೆ .

ಸೋಶಿಯಲ್ ಮೀಡಿಯಾ ಇತ್ತೀಚೆಗಿನ ದಿನಗಳಲ್ಲಿ ಬಹಳ ದೊಡ್ಡ ಪಾತ್ರವನ್ನು ನಿರ್ವಹಿಸುತ್ತಿದೆ. ನಟರ ಅಭಿನಯದ ಬಗ್ಗೆ ಕಮೆಂಟ್ ಮಾಡುವ ಅಥವಾ ಕಾಂಪ್ಲಿಮೆಂಟ್ ನೀಡುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರೇಕ್ಷಕರು, ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ಪಡೆದುಕೊಂಡಿದ್ದಾರೆ. ನಮ್ಮನ್ನು ನಾವು ಅರಿತುಕೊಳ್ಳಲು ನಮ್ಮ ನಟನಾ ಶಕ್ತಿಯನ್ನು ಹೆಚ್ಚಿಸಲು ಇದೊಂದು ಒಳ್ಳೆಯ ವೇದಿಕೆ. ಕಲಾವಿದರು ಹಾಗೂ ಪ್ರೇಕ್ಷಕರು ಒಬ್ಬರಿಂದ ಒಬ್ಬರು ಬಹಳಷ್ಟು ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ ಹರೀಶ್ ರಾಜ್.
ಇದರ ಜೊತೆಗೆ ತಮ್ಮ ಪ್ರಸ್ತುತ ಪ್ರಾಜೆಕ್ಟ್‌ಗಳ ಬಗ್ಗೆ ಮಾತನಾಡಿರುವ ಹರೀಶ್ ರಾಜ್ "ನಾನು ಸದ್ಯಕ್ಕೆ ಬಹಳಷ್ಟು ವಿಶೇಷ ವೈವಿಧ್ಯಮಯ ಪ್ರಾಜೆಕ್ಟ್‌ಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಮದನಿಕಾ ಸಿನಿಮಾದಲ್ಲಿ ಒಂದೊಳ್ಳೆಯ ಪಾತ್ರ ಸಿಕ್ಕಿದೆ. ಅದೇ ರೀತಿ ಪ್ರಥಮ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಫಸ್ಟ್ ನೈಟ್ ವಿತ್ ದೆವ್ವ' ಸಿನಿಮಾದಲ್ಲಿ ಕಂಪನಿ ಸಿಇಒ ಕಾಣಿಸಿಕೊಂಡಿದ್ದೇನೆ. ಇನ್ನು ಇದರ ಜೊತೆಗೆ 'ಪ್ರೇತ' ಸಿನಿಮಾದಲ್ಲಿ ಡಾಕ್ಟರ್ ಆಗಿ ನಟಿಸಲಿದ್ದೇನೆ" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ನಟ ಹರೀಶ್ ರಾಜ್.


Click it and Unblock the Notifications











