ಶ್ರಾವಣಿ ವಿಚಾರಕ್ಕೆ ನಟ ಮೋಹನ್ ಅವ್ರಿಗೆ ಜನ ರಸ್ತೆಯಲ್ಲೇ ಬೈದಿದ್ರಂತೆ..!
ಜೀ ಕನ್ನಡದಲ್ಲಿ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಅದ್ಭುತವಾದ ರೆಸ್ಪಾನ್ಸ್ ಪಡೆದುಕೊಳ್ತಿದೆ. ತಂದೆ-ಮಗಳ ಬಾಂಧವ್ಯದ ಕಥೆ ಇದಾಗಿದೆ. ಮಗಳು ತಂದೆಯ ಪ್ರೀತಿಗಾಗಿ ಕನವರಿಸುವ ಕಥೆ. ಅಕ್ಕನ ಕುತಂತ್ರಕ್ಕೆ ಬಲಿಯಾಗಿರುವ ವೀರೇಂದ್ರ ಸುಳ್ಳನ್ನೇ ಸತ್ಯವೆಂದು ನಂಬಿರುವ ಕಥೆ. ಸ್ವಂತ ಮಗಳನ್ನು ಮಗಳಲ್ಲವೆಂದು ನಂಬಿ ದ್ವೇಷಿಸುವ ಕಥೆ.
ಸದ್ಯ ಸಾಲಿಗ್ರಾಮದ ನೆಪ, ತಂದೆಯ ಪಿಎ ಸುಬ್ಬು ಬರ್ತ್ ಡೇ ನೆಪ ಎಲ್ಲದರಿಂದ ತಂದೆ-ಮಗಳು ಹತ್ತಿರವಾಗಿದ್ದಾರೆ. ಎಜ್ಯುಕೇಷನ್ ಮಿನಿಸ್ಟರ್ ಪಾತ್ರವನ್ನು ಅನುಭವಿ ನಟ ಮೋಹನ್ ಅವರು ನಿಭಾಯಿಸಿದ್ದಾರೆ. ತೆರೆಮೇಲೆ ಶ್ರಾವಣಿಯನ್ನು ದ್ವೇಷಿಸಿದರೂ, ರಿಯಲ್ ಆಗಿ ಯಾವ ಗುಣ ಇಷ್ಟ. ಹಾಗೇ ಸೆಟ್‌ನಲ್ಲಿ ಹೇಗೆಲ್ಲಾ ಇರ್ತಾರೆ ಎಂಬ ವಿಚಾರ ಮೋಹನ್ ನ್ಯೂಸ್ ಫಸ್ಟ್ ಸುದ್ದಿ ವಾಹಿನಿ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಸೀರಿಯಸ್ ಪಾತ್ರದಲ್ಲಿ ಮೋಹನ್
ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ನಟ ಮೋಹನ್ ಎಜ್ಯುಕೇಷನ್ ಮಿನಿಸ್ಟರ್ ಪಾತ್ರ ಮಾಡಿದ್ದಾರೆ. ಒಂದು ರೀತಿಯ ಗತ್ತಿನ ಪಾತ್ರ. ಯಾವಾಗಲೂ ಸೀರಿಯಸ್ ಆಗಿನೇ ಇರುವ ಪಾತ್ರವದು. ಆಗಾಗೊಮ್ಮೆ ನಗುವ ಪಾತ್ರ. ಅಷ್ಟು ಅನುಭವಿ ನಟರಾದರೂ ಕೂಡ ಡೈರೆಕ್ಟರ್ ಹೇಗೆ ಹೇಳುತ್ತಾರೆ ಅದರಂತೆಯೇ ಮಾಡುತ್ತಾರೆ. 'ನಾನು ಕೂಡ 64 ಸಿನಿಮಾಗಳಿಗೆ ಸ್ಕ್ರಿಪ್ಟ್ ಬರೆದಿದ್ದೀನಿ. ಹೀಗಾಗಿ ಟೋಟಲ್ ತಂಡ ಸ್ಕ್ರಿಪ್ಟ್ ಮಾಡುತ್ತಾರೆ. ಅವರಿಗೆ ಹೇಗೆ ಬರಬೇಕು ಎಂಬುದು ಗೊತ್ತಿರುತ್ತದೆ' ಎಂದಿದ್ದಾರೆ.
ಶ್ರಾವಣಿ ಎಫರ್ಟ್‌ಗೆ ಮೆಚ್ಚುಗೆ
ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ಶ್ರಾವಣಿ ಮತ್ತು ಸುಬ್ಬು ಬಹಳ ಮುಖ್ಯ. ಕಥೆಯಲ್ಲಿ ಶ್ರಾವಣಿಯನ್ನು ಕಂಡರೆ ವೀರೇಂದ್ರನಿಗೆ ಆಗೋದಿಲ್ಲ. ಆದರೆ ರಿಯಲ್ ಲೈಫ್‌ನಲ್ಲಿ ಎಷ್ಟು ಹೊಗಳುತ್ತಾರೆ ಗೊತ್ತಾ. 'ಅವಳಿಗೆ ಸ್ವಲ್ಪ ಭಾಷೆ ಸಮಸ್ಯೆ. ಆದರೆ ಅವಳು ಚೆನ್ನಾಗಿ ಪ್ರಿಪೇರ್ ಆಗ್ತಾಳೆ. ಬೆಳಗ್ಗೆ ಸ್ಕ್ರಿಪ್ಟ್ ಇಟ್ಕೊಂಡು ಕೂತ್ಕೊಂಡ್ರೆ ಸಂಜೆವರೆಗೂ ಪ್ರಾಕ್ಟೀಸ್ ಮಾಡ್ತಾನೆ ಇರ್ತಾಳೆ. ಅವಳ ಇನ್ವಾಲ್ಮೆಂಟ್ ನನಗೆ ತುಂಬಾನೇ ಇಷ್ಟ. ಭಾಷೆ ಸಮಸ್ಯೆ ಇದ್ರು ಚೆನ್ನಾಗಿ ಪ್ರಾಕ್ಟೀಸ್ ಮಾಡುತ್ತಾಳೆ' ಎಂದಿದ್ದಾರೆ.
ಸುಬ್ಬು ಮುಗ್ಧತೆಗೆ ಫಿದಾ
ಇನ್ನು ಈ ಧಾರಾವಾಹಿಯಲ್ಲಿ ಸುಬ್ಬು, ವೀರೇಂದ್ರನ ಪಿಎ. ರಿಯಲ್ ಲೈಫ್‌ನಲ್ಲಿ ಆ ರೀತಿಯ ಪಿಎ ಸಿಗುವುದು ಅಸಾಧ್ಯದ ಮಾತು. ತುಂಬಾ ಮುಗ್ಧತೆಯ ಪಾತ್ರವದು. ಆ ಪಾತ್ರ ನಿಭಾಯಿಸುವುದು ಅಷ್ಟು ಸುಲಭವಲ್ಲ. ಸುಬ್ಬು ಪಾತ್ರ ಮಾಡಿರುವ ಅಮೋಘ್ ಬಗ್ಗೆ ಮೋಹನ್ ಹೇಳಿದ್ದು ಹೀಗೆ, 'ಅಮೋಘ್ ಬಗ್ಗೆ ಹೇಳಲೇಬೇಕು. ನವರಸಗಳಲ್ಲಿ ಮುಗ್ದತೆಯನ್ನು ತೋರಿಸುವುದು ಇಲ್ಲ. ಅಣ್ಣಾವ್ರು ಮಾತ್ರ ತೋರಿಸ್ತಾ ಇದ್ರು.

ಅಮೋಘ್‌ಗೆ ಒಳ್ಳೆ ಭವಿಷ್ಯವಿದೆ
ನಾನು ಯಾವಾಗಲೂ ಅವ್ನಿಗೆ ಹೇಳ್ತಾ ಇರ್ತೀನಿ. ಬಂಗಾರದ ಮನುಷ್ಯ ಸಿನಿಮಾದಲ್ಲಿ ಒಂದು ಸಾಂಗ್ ಇದೆ. ನಮ್ಮ ರಾಜೀವಪ್ಪ ಒಬ್ಬ ಸಾಕು ಹಳ್ಳಿಯನ್ನ ಬೆಳಗೋಕೆ ಅಂತ. ಅಲ್ಲಿ ಆ ಮುಗ್ಧತೆ ಅಣ್ಣಾವ್ರದ್ದು ಚೆನ್ನಾಗಿದೆ. ಅದಕ್ಕಿಂತ ಆಕ್ಟಿಂಗ್ ಇನ್ನು ಇಲ್ಲ. ಅಮೋಘ್ ಇನೊಸೆಂಟ್ ಪಾತ್ರವನ್ನ ಅದ್ಭುತವಾಗಿ ಮಾಡ್ತಾ ಇದಾನೆ. ಡೆಡಿಕೇಟ್ ಆಗಿ ಮಾಡ್ತಾ ಇದಾನೆ. ಅವನಿಗೆ ಒಳ್ಳೆ ಭವಿಷ್ಯವಿದೆ' ಎಂದಿದ್ದಾರೆ.
ಶ್ರಾವಣಿ ವಿಚಾರಕ್ಕೆ ಬೈಗುಳ
'ಜನ ಧಾರಾವಾಹಿ ಪಾತ್ರಗಳನ್ನ ರಿಲೇಟ್ ಮಾಡಿಕೊಂಡು ಬಿಡ್ತಾರೆ. ಒಮ್ಮೆ ನಾನು ನಾಯಿನ ವಾಕಿಂಗ್ ಕರೆದುಕೊಂಡು ಹೋಗಿದ್ದೆ. ಆಗ ಜನ ನಿಲ್ಲಿಸಿ ನನ್ನನ್ನ ಬೈದಿದ್ದರು. ಏನ್ ಸರ್ ಅವಳು ನೋಡಿದರೆ ಪ್ರಾಣವನ್ನೆ ಇಟ್ಟುಕೊಂಡಿದ್ದಾಳೆ. ನೀವೂ ಅಷ್ಟೊಂದು ದ್ವೇಷ ಮಾಡುತ್ತೀರಿ ಅಂತ. ಅದು ಪಾತ್ರ ಕಣಮ್ಮ ಅಂದ್ರೆ ನೀವೂ ಸೀನಿಯರ್ ಆರ್ಟಿಸ್ಟ್ ಹೇಳಿ ಅಂತಾರೆ. ಪಾಪ ಅವರು ಮುಗ್ಧರು. ಧಾರಾವಾಹಿಯನ್ನ ನೋಡಿ ಜನ ಇಷ್ಟೊಂದು ಮುಳುಗಿದಾಗ ಖುಷಿಯಾಗುತ್ತೆ' ಎಂದು ಮೋಹನ್ ಹೇಳಿದ್ದಾರೆ.


Click it and Unblock the Notifications











