'ನಾಗಿಣಿ' ಹೀರೋ ನಿನಾದ್ ಮದುವೆ: ಲವ್ ಕಮ್ ಮದುವೆ ಸ್ಟೋರಿ ಬಗ್ಗೆ ಇಲ್ಲಿದೆ ಮಾಹಿತಿ!
ಕನ್ನಡ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿರುವ ಹೆಸರಾಂತ ಧಾರಾವಾಹಿಗಳಲ್ಲಿ 'ನಾಗಿಣಿ 2' ಕೂಡ ಒಂದು. ಈ ಸೀರಿಯಲ್ ನಲ್ಲಿ ನಾಗಿಣಿ ಮತ್ತು ನಾಗರಾಜ ಇಬ್ಬರೂ ಪ್ರಮುಖ. ನಾಯಕ ನಟ ನಾಗರಾಜ ಪಾತ್ರಧಾರಿ ತ್ರಿಶೂಲ್ ಬಗ್ಗೆ ನಿಮಗೆ ಗೊತ್ತೇ ಇರುತ್ತೆ.
ಅಂದರೆ ಧಾರಾವಾಹಿಯಲ್ಲಿನ ತ್ರಿಶೂಲ್ ಪಾತ್ರದ ಪರಿಚಯ ನಿಮಗೆ ಇದ್ದೇ ಇರುತ್ತೆ. ತ್ರಿಶೂಲ್ ಅವರು ತಮ್ಮ ನಿಜ ಜೀವನದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ತ್ರಿಶೂಲ್ ನಿಜವಾದ ಹೆಸರು ನಿನಾದ್. ಅವರು ಸದ್ಯ ಮದುವೆ ಆಗುವ ಸಿಹಿ ಸುದ್ದಿ ಕೊಟ್ಟಿದ್ದಾರೆ.
ನಿನಾದ್ ಅವರು ಸದ್ಯ ಮದುವೆಗೆ ಅಣಿಯಾಗಿದ್ದಾರೆ. ತಾವು ಪ್ರೀತಿಸಿದ, ಇಷ್ಟ ಪಟ್ಟ ಗೆಳತಿ ಜೊತೆಗೆ ಸಪ್ತಪದಿ ತುಳಿಯುತ್ತಿದ್ದಾರೆ. ಮದುವೆ ನಿಶ್ಚಿತಾರ್ಥ ನೆರವೇರಿದ್ದು, ಮದುವೆ ಕೂಡ ಫಿಕ್ಸ್ ಆಗಿದೆ. ಇವರ ಲವ್ ಮತ್ತು ಮ್ಯಾರೇಜ್ ಸ್ಟೋರಿ ಬಗ್ಗೆ ಮುಂದೆ ಓದಿ.

ನಿನಾದ್ ಬಾಳಿಗೆ ಬೆಳಕಾಗುತ್ತಿದ್ದಾರೆ ರಮ್ಯಾ!
ನಿನಾದ್ ಮದುವೆ ಆಗುತ್ತಿರುವ ಹುಡುಗಿಯ ಹೆಸರು ರಮ್ಯಾ. ರಮ್ಯಾ ಅವರಿಗೆ ಸಿನಿಮಾ, ಸೀರಿಯಲ್ ನಂಟಿಲ್ಲ. ಅವರು ಸೀದಾ ಸಾದ ಸಿ.ಎ ಓದುತ್ತಿರುವ ಹುಡುಗಿ. ಇಬ್ಬರಿಗೂ ಹಲವು ವರ್ಷಗಳಿಂದ ಪರಿಚಯ ಇದ್ದು, ಮನೆಯವರ ಒಪ್ಪಿಗೆಯ ಮೇರೆಗೆ ಅರೇಂಜ್ ಮ್ಯಾರೇಜ್ ಆಗ್ತಿದ್ದಾರೆ. ಇದು ಲವ್ ಮ್ಯಾರೇಜ್ ಎನ್ನುವುದಕ್ಕಿಂತಲೂ ಅರೇಂಜ್ ಮ್ಯಾರೇಜ್ ಎನ್ನಬಹುದು ಹಾಗೆ ನಡೆಯುತ್ತಿದೆ ಎನ್ನುತ್ತಾರೆ ನಟ ನಿನಾದ್.

ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ, ಮದುವೆ ಆಗ್ತಿದ್ದಾರೆ!
ನಿನಾದ್ ಅವರು ಹೇಳುಗ ಹಾಗೆ. ರಮ್ಯಾ ಮತ್ತು ನಿನಾದ್ ಇಬ್ಬರು ಒಬ್ಬ ಕಾಮನ್ ಫ್ರೆಂಡ್ ಮೂಲಕ ಪರಿಚಯ ಆಗಿದ್ದಾರೆ. ನಂತರ ಅವರ ಸ್ನೇಹ ಪ್ರೀತಿಯಾದ ಬಳಿಕ , ಇಬ್ಬರೂ ಒಟ್ಟಿಗೆ ಕೂಡಿ ಬಾಳಲು ನಿರ್ಧರಿಸಿದ್ದಾರೆ. ಇಬ್ಬರ ಮನೆಯಲ್ಲೂ ಇವರ ಪ್ರೀತಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈಗ ಈ ಜೋಡಿ ವೈವಾಹಿಕ ಬಾಳಿಗೆ ಕಾಲಿಡಲು ಸಜ್ಜಾಗಿದೆ. ರಮ್ಯಾ ಅವರು ಈಗ ಬಾಳ ಸಂಗಾತಿ ಆಗುತ್ತಿರುವ ಬಗ್ಗೆ ನಿನಾದ್ ಅವರು ಸಂತಸ ವ್ಯಕ್ತ ಪಡಿಸಿದ್ದಾರೆ.

ಇದೇ ವರ್ಷ ರಮ್ಯಾ- ನಿನಾದ್ ಮದುವೆ!
ಸದ್ಯ ಈ ಜೋಡಿಯ ಮದುವೆ ನಿಶ್ಚಿತಾರ್ಥ ಕಾರ್ಯ ನೆರವೇರಿದೆ. ಫೆಬ್ರವರಿ 7ರಂದು ಕುಟುಂಬಸ್ಥರು, ಗುರು ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿದೆ. ಮದುವೆ ಕೂಡ ಇದೇ ವರ್ಷ ನಡೆಯಲಿದೆ. ಸದ್ಯಕ್ಕೆ ಮದುವೆ ದಿನಾಂಕ ರಿವೀಲ್ ಮಾಡಿಲ್ಲ. ಆದರೆ ಇನ್ನೂ 5 ರಿಂದ 6 ತಿಂಗಳಲ್ಲಿ ಮದುವೆ ನಡೆಯಲಿದೆ. ಬೆಂಗಳೂರಿನಲ್ಲಿಯೇ ಮದುವೆ ನಡೆಯಲಿದೆ. ಮದುವೆ ದಿನಾಂಕವನ್ನು ಕೂಡ ಈ ಜೋಡಿ ಆದಷ್ಟು ಬೇಗ ಪ್ರಕಟಿಸಲಿದೆ.

ನಿನಾದ್‌ಗೆ ಹೆಚ್ಚಾಗಿದೆ ಸಿನಿಮಾ, ವೆಬ್ ಸೀರೀಸ್ ಆಫರ್!
ನಟ ನಿನಾದ್ ಅವರಿಗೆ ಬೇಡಿಕೆ ಹೆಚ್ಚಾಗಿದೆ. ನಾಗಿಣಿ ಧಾರಾವಾಹಿ ಮೂಲಕ ಜನಮನ ಗೆದ್ದ ನಿನಾದ್ ಅವರಿಗೆ ಸಿನಿಮಾ ಮತ್ತು ವೆಬ್ ಸರಣಿಯ ಆಫರ್‌ಗಳು ಬರ್ತಿವೆ. ಆದರೆ ಸದ್ಯ ನಾಗಿಣಿ ಧಾರಾವಾಹಿಯಲ್ಲಿ ನಿನಾದ್ ಬ್ಯೂಸಿ ಇದ್ದಾರೆ. ಹಾಗಾಗಿ ಈ ಧಾರಾವಾಹಿ ಮುಗಿದ ಬಳಿಕ ಹೊಸ ಪ್ರಾಜೆಕ್ಟ್ ಶುರುಮಾಡಲಿದ್ದಾರೆ. ನಾಗಿಣಿ ಧಾರಾವಾಹಿ ಎಂದರೆ ನಿನಾದ್ ಅವರಿಗೆ ಅಪಾರ ಗೌರವ. ಯಾಕೆಂದರೆ ಇದು ಅವರ ಮೊದಲ ಹೆಜ್ಜೆ. ಹಾಗಾಗಿ ಅದನ್ನು ಬಿಟ್ಟು ಬೇರೆ ಪ್ರಾಜೆಕ್ಟ್ ಮಾಡಲು ಅವರು ಸಿದ್ಧರಿಲ್ಲ. ಒಂದು ವೇಳೆ ಸಾಧ್ಯವಾದರೆ ನಾಗಿಣಿ ಧಾರಾವಾಹಿ ಜೊತೆ ಜೊತೆಗೆ ಸಿನಿಮಾದಲ್ಲಿ ನಟಿಸು ಯೋಜನೆಯಲ್ಲಿದ್ದಾರೆ. ಸದ್ಯಕ್ಕೆ ಆ ಬಗ್ಗೆ ಇನ್ನು ನಿರ್ಧಾರ ಮಾಡಿಲ್ಲ ಅಂತೆ ನಿನಾದ್. ಅದೇನೆ ಇದ್ರು, ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ನಿನಾದ್ ಮತ್ತು ರಮ್ಯಾ ಅವರಿಗೆ ಶುಭವಾಗಲಿ ಎಂದು ಹರಸೋಣ.


Click it and Unblock the Notifications











