Shruti Naidu : ನಿರ್ಮಾಪಕಿ ಶ್ರುತಿ ನಾಯ್ಡು ರೋಚಕ ಜೀವನ ಕಥೆ!
ಬೆಂಗಳೂರಿಗೆ ಬರಿಗೈಯಲ್ಲಿ ಬಂದು ಇಂದು ದೊಡ್ಡಮಟ್ಟದಲ್ಲಿ ಸಾಧನೆ ಮಾಡಿರುವ ನಟಿ, ನಿರ್ದೇಶಕಿ ಹಾಗೂ ನಿರ್ಮಾಪಕಿ ಶ್ರುತಿ ನಾಯ್ಡು. ಇವರ ಬದುಕಿನ ಪಯಣ ಅಷ್ಟು ಸುಲಭವಾಗಿ ಏನು ಇರಲಿಲ್ಲ. ಇಂಜಿನಿಯರಿಂಗ್ ಅರ್ಧಕ್ಕೆ ಬಿಟ್ಟು ಕನಸಿನ ರಥ ಏರಿದ್ದ ಶ್ರುತಿ ನಾಯ್ಡು ಇಂದು ಸಕ್ಸಸ್ ಫುಲ್ ವುಮೆನ್.
ಮೈಸೂರಿನಲ್ಲಿ ಹುಟ್ಟಿ ಬೆಳೆದ ಶ್ರುತಿ ನಾಯ್ಡು ಕಳೆದ 20ಕ್ಕೂ ಅಧಿಕ ವರ್ಷಗಳಿಂದ ಕಿರುತೆರೆಯಲ್ಲಿದ್ದಾರೆ. ಸವಿರುಚಿ ಕಾರ್ಯಕ್ರಮದ ಮೂಲಕ ನಿರೂಪಕಿಯಾಗಿ ಶ್ರುತಿ ನಾಯ್ಡು ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆಗೆ ಸಾಕಷ್ಟು ಧಾರಾವಾಹಿಗಳನ್ನು ನೀಡಿದ ಡೈರೆಕ್ಟರ್ ಮತ್ತು ಪ್ರೊಡ್ಯುಸರ್.
ಹತ್ತಾರು ಧಾರಾವಾಹಿಗಳಲ್ಲಿ ನಟಿಸಿ, ಈಗ ನಟಿಸಿದ ಎರಡರಷ್ಟು ಸೀರಿಯಲ್‌ಗಳನ್ನು ನಿರ್ದೇಶಿಸಿ, ನಿರ್ಮಿಸಿದ್ದಾರೆ. ಕಿರುತೆರೆಯಲ್ಲೇ ಉಳಿಯದೇ ಸ್ಯಾಂಡಲ್‌ವುಡ್‌ಗೂ ಎಂಟ್ರಿಕೊಟ್ಟು ಸಿನಿಮಾ ಒಂದನ್ನು ನಿರ್ಮಿಸಿದ್ದಾರೆ. ಇನ್ನು ಶ್ರುತಿ ನಾಯ್ಡು ಸಾಧನೆ ಬಗ್ಗೆ ಇನ್ನಷ್ಟು ತಿಳಿಯೋಣ ಬನ್ನಿ..

ನಿರೂಪಕಿಯಾಗಿ ಬಂದ ಕೃಷ್ಣ ಸುಂದರಿ!
ಕಿರುತೆರೆಯಲ್ಲಿ ಸವಿರುಚಿ ಕಾರ್ಯಕ್ರಮದ ಮೂಲಕ ನಿರೂಪಣೆಯನ್ನು ಆರಂಭಿಸಿದ ಶ್ರುತಿ ನಾಯ್ಡು , ಕಾರ್ಯಕ್ರಮಕ್ಕೆ ಹೊಸ ಗೆಸ್ಟ್ ಕರೆಯುವುದು, ಮೆನು ರೆಡಿ ಮಾಡುವುದು, ಹೊಸ ಹೊಸ ರುಚಿಯನ್ನು ಸಿದ್ಧ ಪಡಿಸುವುದು ಎಲ್ಲವನ್ನೂ ಮಾಡುತ್ತಿದ್ದರು. ಆಗಲೇ ಶ್ರತಿ ಅವರ ಕೈಯಲ್ಲಿ ಹಣ ತುಂಬಲು ಶುರುವಾಗಿದ್ದು. ಇದೇ ಉತ್ಸಾಹದಲ್ಲಿ ಕೆಲಸ ಮಾಡುತ್ತಿದ್ದ ಶ್ರುತಿ ನಾಯ್ಡು ಅವರಿಗೆ ಇನ್ನೂ ಏನಾದರೂ ಮಾಡಬೇಕು ಅನ್ನೋ ತುಡಿತ ಸದಾ ಇರುತ್ತಿತ್ತು. ಆಗಲೇ ಶ್ರುತಿಗೆ 'ಪ್ರೀತಿ ಇಲ್ಲದ ಮೇಲೆ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಇಲ್ಲಿಂದ ಶ್ರುತಿ ನಾಯ್ಡು ಧಾರಾವಾಹಿಗಳಲ್ಲಿ ನಟಿಸಲು ಆರಂಭಿಸಿದರು.

ನಟಿಸುತ್ತಲೇ ನಿರ್ದೇಶನದ ಹಾದಿ ಹಿಡಿದ ಶ್ರುತಿ!
'ಪ್ರೀತಿ ಇಲ್ಲದ ಮೇಲೆ', 'ಮಂಥನ', 'ಮನೆಯೊಂದು ಮೂರು ಬಾಗಿಲು', 'ಕಿಚ್ಚು', 'ಮತ್ತೆ ಬರುವನು ಚಂದಿರ', ' ಕವಲುದಾರಿ', 'ಶರಪಂಜರ' ಸೇರದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಇನ್ನು 'ನಮ್ಮಮ್ಮ ಶಾರದೆ' ಧಾರಾವಾಹಿಯಲ್ಲಿ ನಟಿಸುವಾಗ ಒಂದು ಸೀನ್ ಅನ್ನು ನೋಡಿದ ಶೃತಿ ನಾಯ್ಡು ಈ ಸೀನ್ ಅನ್ನು ನಾನು ಡೈರೆಕ್ಟ್ ಮಾಡಬಹುದಾ ಎಂದು ರಮೇಶ್ ಇಂದಿರಾ ಅವರನ್ನು ಕೇಳುತ್ತಾರೆ. ಅಂದು ರಮೇಶ್ ಅವರಿಗೆ ಏನು ಅನ್ನಿಸಿತೋ ಏನೋ ಮಾಡಿ ಎಂದು ಬಿಟ್ಟರು. ನಂತರ ಸೀನ್ ನೋಡಿದ ವಾಹಿನಿಯ ಮುಖ್ಯಸ್ಥರೊಬ್ಬರು ರಮೇಶ್ ಅವರಿಗೆ ಕರೆ ಮಾಡುತ್ತಾರೆ. ಈ ಸೀನ್ ಅದ್ಭುತವಾಗಿದೆ ಎಂದು ಹೇಳಿದಾಗ ರಮೇಶ್ ಅದು ನಾನು ನಿರ್ದೇಶಿಸಿದ್ದಲ್ಲ, ಶ್ರುತಿ ನಾಯ್ಡು ಎಂದು ಹೇಳುತ್ತಾರೆ.

ಚೊಚ್ಚಲ ನಿರ್ದೇಶನದ ಧಾರಾವಾಹಿ ಚಿ.ಸೌ.ಸಾವಿತ್ರಿ!
ಶ್ರುತಿ ನಾಯ್ಡು ಮೊದಲ ನಿರ್ದೇಶನದ ಧಾರಾವಾಹಿ 'ಚಿ.ಸೌ.ಸಾವಿತ್ರಿ'. ಈ ಧಾರಾವಾಹಿಯನ್ನು ನಿರ್ದೇಶಿಸುವ ಮೂಲಕ ಶ್ರುತಿ ನಾಯ್ಡು ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದರು. ಬಳಿಕ ಸ್ವತ: ತಮ್ಮದೇ ಪ್ರೊಡಕ್ಷನ್ಸ್ ಮುಖಾಂತರ ರಿಯಾಲಿಟಿ ಶೋಗಳು ಹಾಗೂ ಧಾರಾವಾಹಿಗಳನ್ನು ನಿರ್ಮಿಸಿದರು. 'ದೇವಿ', 'ಪುನರ್ ವಿವಾಹ', 'ಅತಿ ಮಧುರ ಅನುರಾಗ', 'ಮಹಾದೇವಿ', 'ಮಹಾನದಿ', 'ಶ್ರೀರಸ್ತು ಶುಭಮಸ್ತು', 'ರಾಜಕುಮಾರಿ', 'ಪುನರವಿವಾಹ -2', 'ಬ್ರಹ್ಮಗಂಟು', 'ಸಂಜು ಮತ್ತು ನಾನು' ಸೇರಿದಂತೆ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿದರು. ಸದ್ಯ ಸ್ಟಾರ್ ಸುವರ್ಣದಲ್ಲಿ ಮೂಡಿ ಬರುತ್ತಿರುವ 'ಸಂಘರ್ಷ' ಹಾಗೂ 'ಮನಸೆಲ್ಲಾ ನೀನೆ' ಧಾರಾವಾಹಿಗಳೂ ಇವರದ್ದೆ.

ಚಂದನವನಕ್ಕೂ ಕಾಲಿಟ್ಟ ನಿರ್ಮಾಪಕಿ!
ಕಿರುತೆರೆಯಲ್ಲಷ್ಟೇ ಉಳಿಯದ ಶ್ರುತಿ ನಾಯ್ಡು ಸ್ಯಾಂಡಲ್‌ವುಡ್‌ಗೂ ಪಾದಾರ್ಪಣೆ ಮಾಡಿದರು. ನವರಸ ನಾಯಕ ಜಗ್ಗೇಶ್ ನಟಿಸುತ್ತಿರುವ 'ಪ್ರೀಮಿಯರ್ ಪದ್ಮಿನಿ' ಚಿತ್ರದ ಮೂಲಕ ಚಂದನವನಕ್ಕೆ ನಿರ್ಮಾಪಕಿಯಾಗಿದ್ದರು. ಅಲ್ಲದೆ ಚಿತ್ರಗಳಲ್ಲೂ ನಟಿಸಿರುವ ಶ್ರುತಿ ನಾಯ್ಡು, 'ಜೈ ಭಜರಂಗ ಬಲಿ' ಚಿತ್ರದಲ್ಲಿ ಅಜಯ ರಾವ್ ಅವರ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಒಂದೇ ಒಂದು ಅವಕಾಶಕ್ಕಾಗಿ ಅದೆಷ್ಟೋ ದಿನಗಳ ಕಾಲ ಅಲೆದಾಡಿದ್ದ ಶ್ರುತಿ ನಾಯ್ಡು ಈಗ ನೂರಾರು ಮಂದಿಗೆ ಕೆಲಸ ಕೊಟ್ಟಿದ್ದಾರೆ. ಇನ್ನು ಮೈಸೂರಿನಲ್ಲಿ ತಮ್ಮದೇ ಮೈಸೂರು ಮಿರ್ಚಿ ಎಂಬ ಹೋಟೆಲ್ ಉದ್ಯಮವನ್ನೂ ನಡೆಸುತ್ತಿದ್ದಾರೆ.


Click it and Unblock the Notifications











