ರಾಜೇಶ್ ಧ್ರುವ ಬಣ್ಣದ ಪಯಣಕ್ಕೆ ಹದಿನಾಲ್ಕು ವರ್ಷ; ಸಂತಸ ಹಂಚಿಕೊಂಡ ನಟ ಹೇಳಿದ್ದೇನು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶ್ರೀಗೌರಿ' ಧಾರಾವಾಹಿಯಲ್ಲಿ ಶರಣ ಆಗಿ ಅಭಿನಯಿಸುತ್ತಿರುವ ಹ್ಯಾಂಡ್ ಸಮ್ ಹುಡುಗನ ಹೆಸರು ರಾಜೇಶ್ ಧ್ರುವ. ಮೊದಲ ಬಾರಿಗೆ ಖಳನಾಯಕನಾಗಿ ತೆರೆ ಮೇಲೆ ಮೋಡಿ ಮಾಡುತ್ತಿರುವ ರಾಜೇಶ್ ಧ್ರುವ ಅವರು ಸಿಕ್ಕಾಪಟ್ಟೆ ಸಂತೋಷದಲ್ಲಿದ್ದಾರೆ.
ಈ ಖುಷಿಗೆ ಕಾರಣವೂ ಇದೆ. ಅದೇನಂತೀರಾ? ರಾಜೇಶ್ ಧ್ರುವ ಅವರ ನಟನಾ ಪಯಣಕ್ಕೆ ಇದೀಗ ಹದಿನಾಲ್ಕರ ಹರೆಯ. ತಮ್ಮ ಪಯಣದ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ.

"ಹದಿನಾಲ್ಕು ವರ್ಷದ ಬಣ್ಣದ ಪಯಣ ನನ್ನ ಬದುಕಿನಲ್ಲಿ ಸಾಕಷ್ಟು ಸುಂದರ ನೆನಪುಗಳನ್ನು ನೀಡಿದೆ. ನನ್ನ ಲುಕ್ ಆಗಿರಬಹುದು, ಆ್ಯಕ್ಟಿಂಗ್ ಸ್ಕಿಲ್ ಆಗಿರಬಹುದು, ನನ್ನ ಅಪಿಯರೆನ್ಸ್ ಆಗಿರಬಹುದು, ಗ್ಲಾಮರ್ ಆಗಿರಬಹುದು, ಮೆಚ್ಯೂರಿಟಿ ಆಗಿರಬಹುದು ಎಲ್ಲವೂ ಕೂಡಾ ಹಂತಹಂತವಾಗಿ, ತುಂಬಾ ಎಕ್ಸ್ ಪಿರಿಯೆನ್ಸ್ ಮಾಡ್ಕೊಂಡು ಹೋಗ್ತಾ ಇದೆ ಲೈಫ್. ಇಂಡಸ್ಟ್ರಿಯಿಂದ ನಾನು ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ ಮತ್ತು ಕಲಿಯುತ್ತಿದ್ದೇನೆ. ಸರಿ ಯಾವುದು ತಪ್ಪು ಯಾವುದು ಅನ್ನೋದು ತಿಳಿಯುತ್ತಿದೆ" ಎಂದು ಹದಿನಾಲ್ಕು ವರ್ಷದ ನಟನಾ ಪಯಣದ ಬಗ್ಗೆ ಮಾತನಾಡುತ್ತಾ ಹೇಳಿದ್ದಾರೆ ರಾಜೇಶ್ ಧ್ರುವ.
"ನಾನು ಮುಂದೆ ಮಾಡುವಂತಹ ಪ್ರತಿಯೊಂದು ದೊಡ್ಡ ದೊಡ್ಡ ಸಿನಿಮಾಗಳಿಗೆ ಮತ್ತು ಧಾರಾವಾಹಿಗಳಿಗೆ ಒಂದು ಫೌಂಡೇಶನ್ ಈ ಹದಿನಾಲ್ಕು ವರ್ಷ ಅಂತ ಹೇಳ್ಬಹುದು. ಈ ಹದಿನಾಲ್ಕು ವರ್ಷ ಎನ್ನುವುದು ಹದಿನಾಲ್ಕು ಫೌಂಡೇಶನ್ ಇದ್ದ ಹಾಗೆ. ಎಷ್ಟು ವರ್ಷ ಆಗುತ್ತೋ ಅಷ್ಟು ಫೌಂಡೇಶನ್ ಆಗುತ್ತೆ ಹೊರತು ಅದರ ಮೇಲೆ ಕಟ್ಟಡ ಕಟ್ಟುವ ಟೈಮ್ ನಮಗೆ ಯಾವಾಗ ಕೂಡಿ ಬರುತ್ತೋ ಎನ್ನುವುದು ನಮಗೆ ಗೊತ್ತಿಲ್ಲ. ಈಗಲೂ ಆ ಫೌಂಡೇಶನ್ ಅನ್ನೇ ಇಟ್ಟುಕೊಂಡು ಹೋಗ್ತಿದ್ದೀವಿ. ಇನ್ನು ಬಿಲ್ಡಿಂಗ್ ಕಟ್ಟುವುದಕ್ಕೆ ಸರಿಯಾದ ಪ್ಲಾನ್ ಸಿಕ್ಕಿಲ್ಲ. ಅದು ಸಿಕ್ಕಿದಾಗಲೇ ನಮ್ಮ ನಿಜವಾದ ಬೆಳವಣಿಗೆ ಆಗೋದು ಎನ್ನುವುದು ನನ್ನ ಒಂದು ಅಭಿಪ್ರಾಯ" ಎಂದು ಫಿಲ್ಮಿಬೀಟ್ ಕನ್ನಡದ ಜೊತೆಗೆ ರಾಜೇಶ್ ಧ್ರುವ ಹಂಚಿಕೊಂಡಿದ್ದಾರೆ.
"ನನ್ನನ್ನು ನಾನು ಹಿಂದೆ ತಿರುಗಿ ನೋಡಿದಾಗ ಒಂದು ಚಾನ್ಸ್‌ಗೆ ಕಷ್ಟಪಟ್ಟಿದ್ದು ಈಗ ಸಿನಿಮಾದ ತನಕ ಬಂದು ನಿಲ್ಲಿಸಿದೆ. ಯಾವ ಥಿಯೇಟರ್‌ನಲ್ಲಿ ನಾವು ಯಾರ ಸಿನಿಮಾವನ್ನು ನೋಡಿ ಮೆಚ್ಚಿಕೊಳ್ಳುತ್ತಿದ್ದೆವೋ, ಸೆಲೆಬ್ರಿಟ್ ಮಾಡುತ್ತಿದ್ದೆವೋ, ಈಗ ಅದೇ ಥಿಯೇಟರ್‌ನಲ್ಲಿ ನಾವು ಬಂದು ಸೇರ್ಕೊಂಡು ನಮ್ಮನ್ನು ನಾವು ನೋಡ್ಕೊಳ್ಳುವ ಥರ ಈಗ ಆಗಿದೀವಿ. ಅಂದ್ರೆ ಅದು ಕೂಡಾ ಒಂದು ಒಳ್ಳೆಯ ಬೆಳವಣಿಗೆಯೇ ಸರಿ. ಸೋ ಇದನ್ನೆಲ್ಲಾ ನೋಡ್ತಿದ್ರೆ ಖುಷಿ ಆಗುತ್ತೆ" ಎಂದು ತಮ್ಮ ಹದಿನಾಲ್ಕು ವರ್ಷದ ನಟನಾ ಜರ್ನಿಯ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆಗೆ ರಾಜೇಶ್ ಧ್ರುವ ಮಾತನಾಡಿದ್ದಾರೆ.
'ಹೀರೊ ನಂ 1' ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ರಾಜೇಶ್ ಧ್ರುವ ಮೊದಲ ಬಾರಿ ನಟನಾಗಿ ಕಾಣಿಸಿಕೊಂಡಿದ್ದು 'ಬದುಕು' ಧಾರಾವಾಹಿಯ ಮೂಲಕ. 'ಬದುಕು' ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ ರಾಜೇಶ್ ಧ್ರುವ ಅವರು ಮತ್ತೆ ಹಿಂತಿರುಗಿ ನೋಡಿದ್ದಿಲ್ಲ. ನಂತರ 'ಆಕಾಶದೀಪ', 'ಒಂದೇ ಗೂಡಿನ ಹಕ್ಕಿಗಳು', 'ಮಿಲನ', 'ಪ್ರೀತಿ ಎಂದರೇನು?', 'ಸರಯೂ', 'ಅಗ್ನಿಸಾಕ್ಷಿ', 'ನಂದಿನಿ', 'ಅರಮನೆ ಗಿಳಿ', 'ಅಣ್ಣ ತಂಗಿ' ಧಾರಾವಾಹಿಗಳಲ್ಲಿ ಅಭಿನಯಿಸಿರುವ ರಾಜೇಶ್ ಧ್ರುವ 'ಅಗ್ನಿಸಾಕ್ಷಿ' ಧಾರಾವಾಹಿಯ ಅಖಿಲ್ ಆಗಿ ಕರುನಾಡಿನಾದ್ಯಂತ ಗುರುತಿಸಿಕೊಂಡರು.
ನಟನೆಯ ಜೊತೆಗೆ ನಿರ್ದೇಶನದಲ್ಲಿ ಗುರುತಿಸಿಕೊಂಡಿರುವ ರಾಜೇಶ್ ಧ್ರುವ ಅವರು 'ಅನಿರೀಕ್ಷಿತ', 'ಆಮಂತ್ರಣ', 'ರೌದ್ರಂ', 'ತದ ನಂತರ' ಎಂಬ ಕಿರುಚಿತ್ರಗಳಿಗೆ ಸ್ವತಃ ತಾವೇ ಕಥೆ ಬರೆದು, ಸಂಭಾಷಣೆ ತಯಾರು ಮಾಡಿ ನಿರ್ದೇಶನ ಮಾಡಿದ್ದಾರೆ. ಇನ್ನು ಇದರ ಜೊತೆಗೆ 'ಶ್ರೀಬಾಲಾಜಿ ಫೋಟೋ ಸ್ಟುಡಿಯೋ' ಎನ್ನುವ ಸಿನಿಮಾದನ್ನು ನಿರ್ದೇಶಿಸುವ ಮೂಲಕ ಸ್ಯಾಂಡಲ್‌ವುಡ್‌ಗೂ ರಾಜೇಶ್ ಧ್ರುವ ಕಾಲಿಟ್ಟಿದ್ದಾರೆ. 'ಶ್ರೀಬಾಲಾಜಿ ಫೋಟೋ ಸ್ಟುಡಿಯೋ'ದಲ್ಲಿ ನಾಯಕರಾಗಿ ನಟಿಸಿರುವ ರಾಜೇಶ್ ಧ್ರುವ 'ಪೀಟರ್' ಎನ್ನುವ ಹೊಸ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಲಿದ್ದಾರೆ.
ಕಿರುತೆರೆ, ಹಿರಿತೆರೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರಾಜೇಶ್ ಧ್ರುವ ನೃತ್ಯದ ವಿವಿಧ ಪ್ರಕಾರಗಳಾಗಿರುವ ಹಿಪ್‌ಹಾಪ್, ಪಾಶ್ಚಾತ್ಯ, ಬಾಲಿವುಡ್ ಶೈಲಿಯ ನೃತ್ಯ ಕಲಿತಿದ್ದಾರೆ. ಇನ್ನು ಶಿರಸಿಯಲ್ಲಿ 'ಧ್ರುವ ಸ್ಕೂಲ್ ಆಫ್ ಡ್ಯಾನ್ಸ್' ಆರಂಭಿಸಿದ್ದ ಇವರು ನೃತ್ಯ ಪ್ರೇಮಿಗಳಿಗೆ ಡ್ಯಾನ್ಸ್ ಹೇಳಿ ಕೊಡುತ್ತಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ತಕಧಿಮಿತಾ ಡ್ಯಾನ್ಸ್ ರಿಯಾಲಿಟಿ ಶೋವಿನಲ್ಲಿ ಸ್ಪರ್ಧಿಯಾಗಿಯೂ ರಾಜೇಶ್ ಧ್ರುವ ಕಾಣಿಸಿಕೊಂಡಿದ್ದರು.


Click it and Unblock the Notifications











