ರಕ್ಷಿತ್ ಅರಸ್ ಗೋಪಾಲ್ ಕಿರುತೆರೆ ಜರ್ನಿ ಬಲು ರೋಚಕ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮತ್ತೆ ವಸಂತ' ಧಾರಾವಾಹಿಯಲ್ಲಿ ನಾಯಕ ವಸಂತ ಆಗಿ ನಟಿಸಿ ವೀಕ್ಷಕರ ಮನ ಸೆಳೆದಿರುವ ರಕ್ಷಿತ್ ಅರಸ್ ಗೋಪಾಲ್ ಅವರಿಗೆ ಎಳವೆಯಿಂದಲೂ ನಟನೆ ಎಂದರೆ ತುಂಬಾ ಇಷ್ಟ. ತಾನೊಬ್ಬ ನಟನಾಗಬೇಕು, ಬಣ್ಣದ ಲೋಕದಲ್ಲಿ ಮಿಂಚಬೇಕು ಎಂಬ ಮಹಾದಾಸೆ ಹೊಂದಿದ್ದ ರಕ್ಷಿತ್ ಅರಸ್ ವಿದ್ಯಾಭ್ಯಾಸದ ಬಳಿಕ ನಟನೆಯ ಕಲಿಯುವ ನಿರ್ಧಾರ ಮಾಡಿದರು. ಮಂಡ್ಯ ರಮೇಶ್ ಅವರ ನಟನಾ ಸಂಸ್ಥೆ ಸೇರಿದ ರಕ್ಷಿತ್ ಅರಸ್ ನಟನೆಯ ರೀತಿ ನೀತಿಗಳನ್ನು ಹಂತಹಂತವಾಗಿ ತಿಳಿಯತೊಡಗಿದರು.
ಮುಂದೆ ಒಂದಷ್ಟು ನಾಟಕಗಳಲ್ಲಿ ನಟಿಸಿದರು. ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಗೆ ತೆರಳಿ ನಟನೆಯ ಕುರಿತಾದ ಕೋರ್ಸ್ ಗೆ ಸೇರಿದ ರಕ್ಷಿತ್ ಅರಸ್ ಗೋಪಾಲ್, ನಟರಾಜ್ ಹೊನ್ನವಳ್ಳಿ ಅವರ ಮಾರ್ಗದರ್ಶನದಲ್ಲಿ ಮತ್ತಷ್ಟು ಪಕ್ವವಾದರು. ನಾಟಕದ ಜೊತೆಗೆ ಮೈಮ್ ಹಾಗೂ ಯಕ್ಷಗಾನವನ್ನು ಕಲಿತರು. ಕೋರ್ಸ್ ಮುಗಿದದ್ದೇ ಶಾಲಾ ವಿದ್ಯಾರ್ಥಿಗಳಿಗೆ ನಾಟಕಗಳನ್ನು ಕಲಿಸುತ್ತಿದ್ದ ರಕ್ಷಿತ್ ಅರಸ್ ಧಾರಾವಾಹಿಗಳ ಆಡಿಶನ್‌ಗಳಿಗೆ ಹೋಗಲಾರಂಭಿಸಿದರು
ಶ್ರುತಿ ನಾಯ್ಡು ನಿರ್ದೇಶನದ 'ಮಹಾದೇವಿ' ಧಾರಾವಾಹಿಯ ಮೂಲಕ ಕಿರುತೆರೆ ಜಗತ್ತಿಗೆ ಕಾಲಿಟ್ಟ ರಕ್ಷಿತ್ ಗೋಪಾಲ್ ಅರಸ್, ಶ್ರುತಿ ನಾಯ್ಡು ಅವರಿಂದ ನಟನೆಯ ಬಗ್ಗೆ ಮತ್ತಷ್ಟು ತಿಳಿದರು. ಮಹಾದೇವಿ ಧಾರಾವಾಹಿಯ ನಂತರ ಧೀರಜ್ ಆಗಿ ಬದಲಾದ ರಕ್ಷಿತ್ ಅದೇ ಪಾತ್ರದ ಮೂಲಕ ಕಿರುತೆರೆಯಲ್ಲಿ ಮನೆ ಮಾತಾದರು. ಖಾಸಗಿ ವಾಹಿನಿಯಲ್ಲಿ ರಘುಚರಣ್ ನಿರ್ದೇಶನದಲ್ಲಿ ಪ್ರಸಾರವಾಗುತ್ತಿದ್ದ 'ಮಾಂಗಲ್ಯಂ ತಂತು ನಾನೇನಾ' ಧಾರಾವಾಹಿಯಲ್ಲಿ ನಾಯಕ ತೇಜಸ್ವಿ ಅಣ್ಣ ಧೀರಜ್ ಆಗಿ ಅಭಿನಯಿಸಿ ಕಿರುತೆರೆ ಲೋಕದಲ್ಲಿ ಮನೆ ಮಾತಾದ ರಕ್ಷಿತ್, ''ಧೀರಜ್ ಪಾತ್ರ ನನಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದೆ. ಮಾತ್ರವಲ್ಲ ಅದು ತುಂಬಾ ಚಾಲೆಂಜಿಗ್ ಆಗಿದ್ದ ಪಾತ್ರ. ಯಾಕೆಂದರೆ ಒಂದೇ ಪಾತ್ರದಲ್ಲಿ ಸಾಕಷ್ಟು ಏರಿಳಿತವಿತ್ತು. ಎರಡು ಶೇಡ್ ಇರುವ ಈ ಪಾತ್ರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಿಗುತ್ತಿದುದು ಬೈಗಳುಗಳ ಸುರಿಮಳೆ. ಅಷ್ಟರ ಮಟ್ಟಿಗೆ ಆ ಪಾತ್ರ ಜನಪ್ರಿಯತೆ ಗಳಿಸಿತ್ತು. ಇದೀಗ ಧಾರಾವಾಹಿ ಮುಗಿದರೂ ಜನ ಆ ಪಾತ್ರವನ್ನು ಮರೆತಿಲ್ಲ'' ಎನ್ನುತ್ತಾರೆ.

ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಯಜಮಾನಿ ಧಾರಾವಾಹಿಯಲ್ಲಿ ನಟಿಸಿದ್ದ ರಕ್ಷಿತ್ ಪೋಷಕ ಪಾತ್ರಗಳ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು. ಇದೀಗ 'ಮತ್ತೆ ವಸಂತ' ಧಾರಾವಾಹಿಯಲ್ಲಿ ನಾಯಕ ವಸಂತ ಆಗಿ ಅಭಿನಯಿಸುವ ಮೂಲಕ ಮೊದಲ ಬಾರಿ ನಾಯಕನಾಗಿ ಕಮಾಲ್ ಮಾಡುತ್ತಿದ್ದಾರೆ. ವಸಂತನಾಗಿ ಮನೆ ಮಾತಾಗಿರುವ ರಕ್ಷಿತ್ ತಮ್ಮ ಬಾಲ್ಯದ ಕನಸು ನನಸು ಮಾಡಿದ ಸಂತಸದಲ್ಲಿದ್ದಾರೆ.


Click it and Unblock the Notifications











