Actor Ram Pawan Shet: ಖಳನಾಯಕನಾಗಿ ಮಿಂಚಿದ ಬಳಿಕ ಇನ್ಸ್‌ಪೆಕ್ಟರ್ ಆಗಿ ಬದಲಾದ ರಾಮ್ ಪವನ್ ಶೇಠ್
ರಾಮ್ ಪವನ್ ಶೇಟ್ ಕಿರುತೆರೆ ವೀಕ್ಷಕರಿಗೆ ತೀರಾ ಪರಿಚಿತ ಮುಖವಾಗಿದ್ದರೂ ಅಪರಿಚಿತ ಹೆಸರು ಎಂದರೆ ತಪ್ಪಾಗಲಾರದು. ಯಾಕೆಂದರೆ ಕಿರುತೆರೆ ಜಗತ್ತಿನಲ್ಲಿ ಅವರು ರಣಧೀರನಾಗಿ ಫೇಮಸ್ಸು! ಹೌದು, ಇತ್ತೀಚೆಗಷ್ಟೇ ಸುಖಾಂತ್ಯ ಕಾಣುವ ಮೂಲಕ ಮುಕ್ತಾಯಗೊಂಡ 'ಗಿಣಿರಾಮ' ಧಾರಾವಾಹಿಯಲ್ಲಿ ಖಳನಾಯಕ ರಣಧೀರನಾಗಿ ಅಬ್ಬರಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ರಾಮ್ ಪವನ್ ಶೇಟ್ ಕಿರುತೆರೆಯಿಂದ ಹಿರಿತೆರೆಗೆ ಹಾರಿದ್ದಾರೆ.
'ರುದ್ರ ಗರುಡ ಪುರಾಣ ' ಸಿನಿಮಾದಲ್ಲಿ ನಟಿಸುವ ಮೂಲಕ ಹಿರಿತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು ಇನ್ಸ್‌ಪೆಕ್ಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. "ಇದೇ ಮೊದಲ ಬಾರಿಗೆ ನಾನು ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇದಕ್ಕಿಂತ ಮೊದಲು ಖಳನಾಯಕನಾಗಿ ನಟಿಸಿ ಸೈ ಎನಿಸಿಕೊಂಡಿದ್ದೆ. ಇದೀಗ ಮಗದೊಂದು ಚಾಲೆಂಜಿಗ್ ಆದ ಪಾತ್ರಕ್ಕೆ ಜೀವ ತುಂಬುತ್ತಿರುವುದು ಸಂತಸ ತಂದಿದೆ" ಎಂದು ಫಿಲ್ಮಿಬೀಟ್ ಜೊತೆಗೆ ಸಂತಸ ಹಂಚಿಕೊಂಡಿದ್ದಾರೆ ರಾಮ್ ಪವನ್ ಶೇಟ್.

ಜನ ಮೆಚ್ಚಿದ ಶಕುನಿ ರಾಮ್ ಪವನ್ ಶೇಟ್
'ಪ್ರೀತಿಯಿಂದ' ಧಾರಾವಾಹಿಯಲ್ಲಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡ ರಾಮ್ ಪವನ್ ಶೇಠ್ ಮುಂದೆ ಬದಲಾಗಿದ್ದು ಕಿರಣ್ ಆಗಿ. 'ಮನೆದೇವ್ರು' ಧಾರಾವಾಹಿಯಲ್ಲಿ ನಾಯಕನ ಚಿಕ್ಕಪ್ಪನ ಮಗ ಕಿರಣ್ ಆಗಿ ನಟಿಸಿದ್ದ ರಾಮ್ ಪವನ್ ಶೇಟ್ ಎರಡನೇ ಧಾರಾವಾಹಿಯಲ್ಲಿ ಖಳನಾಯಕನಾಗಿ ನಟಿಸಿ ಸೈ ಎನಿಸಿಕೊಂಡರು. ಮಾತ್ರವಲ್ಲದೇ ಅನುಬಂಧ ಅವಾರ್ಡ್ಸ್ ನಲ್ಲಿ ಜನ ಮೆಚ್ಚಿದ ಶಕುನಿ ಪ್ರಶಸ್ತಿಯನ್ನು ಕೂಡಾ ಇವರು ಪಡೆದುಕೊಂಡರು. ಮುಂದೆ 'ಜೋಡಿಹಕ್ಕಿ' ಧಾರಾವಾಹಿಯಲ್ಲಿ ನಾಯಕನ ಅಣ್ಣನಾಗಿ ಕೆಲವು ಸಂಚಿಕೆಗಳಲ್ಲಿ ಇವರು ಮೋಡಿ ಮಾಡಿದ್ದರು.
ಖಾಯಂ ಆಯ್ತು ಖಳನಾಯಕನ ಪಾತ್ರ
'ಮನೆದೇವ್ರು' ಧಾರಾವಾಹಿಯಲ್ಲಿ ಖಳನಾಯಕನಾಗಿ ನಟಿಸಿದ ರಾಮ್ ಪವನ್ ಶೇಠ್‌ಗೆ ಮುಂದೆ ಅಂತಹುದೇ ಪಾತ್ರಗಳಲ್ಲಿ ನಟಿಸುವ ಅವಕಾಶಗಳು ದೊರಕಿದವು. 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಖಳನಾಯಕ ಧೀರಜ್ ಆಗಿ ಅಭಿನಯಿಸಿದ ಇವರು ಮುಂದೆ 'ಗಿಣಿರಾಮ'ದಲ್ಲಿಯೂ ಖಳನಾಯಕನಾಗಿ ಅಬ್ಬರಿಸಿದರು.

ಹಿರಿತೆರೆಗೂ ಕಾಲಿಟ್ಟ ರಾಮ್ ಪವನ್ ಶೇಠ್
ಲೂಸ್ ಮಾದ ಯೋಗಿ ನಟನೆಯ 'ಕಿರಿಕ್ ಶಂಕರ್' ಸಿನಿಮಾದಲ್ಲಿ ಯೋಗಿ ಗೆಳಯನಾಗಿ ನಟಿಸುವ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ ರಾಮ್ ಪವನ್ ಶೇಠ್ ಮೊದಲ ಬಾರಿಗೆ ಮಾಸ್ ಅವತಾರ ಬಿಟ್ಟು ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ 'ಕಾಕ್ರೋಚ್' ಹಾಗೂ ಓಂ ಪ್ರಕಾಶ್ ರಾವ್ ಅವರ 'ಫೀನಿಕ್ಸ್' ಸಿನಿಮಾದಲ್ಲಿಯೂ ರಾಮ್ ಪವನ್ ಶೇಠ್ ಅಭಿನಯಿಸಲಿದ್ದು ಮೂರೂ ಸಿನಿಮಾಗಳಲ್ಲಿಯೂ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.


Click it and Unblock the Notifications











