'ರಾಮಾಚಾರಿ'ಯ ರವಿ ಸಾಲಿಯಾನ್ ಕೇವಲ ನಟ ಮಾತ್ರವಲ್ಲ.. ಅತ್ಯದ್ಭುತ ಕಲಾಕಾರ!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ರಾಮಾಚಾರಿ' ಧಾರಾವಾಹಿಯೂ ಒಂದು. ಈ ಧಾರಾವಾಹಿಯಲ್ಲಿ ನಾಯಕ ರಾಮಾಚಾರಿ ತಂಗಿ ಶ್ರುತಿಯ ಪ್ರಿಯಕರ ಕಿರಣ್ ಆಗಿ ನಟಿಸಿ ವೀಕ್ಷಕರ ಮನ ಸೆಳೆದಿದ್ದಾರೆ ರವಿ ಸಾಲಿಯಾನ್. ನೆಗೆಟಿವ್ ರೋಲ್‌ನಲ್ಲಿ ವೀಕ್ಷಕರ ಮನ ಸೆಳೆದಿದ್ದ ರವಿ ಸಾಲಿಯಾನ್ ಈ ಹಿಂದೆ 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿಯೂ ಅಭಿನಯಿಸಿದ್ದರು.
'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ನಾಯಕ ಜಯಂತ್ ಬಾಲ್ಯದ ಸ್ನೇಹಿತ ಸಚಿನ್ ಆಗಿ ನಟಿಸುವ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು ರವಿ ಸಾಲಿಯಾನ್. ಸದ್ಯ ಪೋಷಕ ಪಾತ್ರಗಳ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ರವಿ ಸಾಲಿಯಾನ್ ನಟ ಮಾತ್ರವಲ್ಲ, ಅತ್ಯದ್ಭುತ ಕಲಾವಿದ ಕೂಡ ಹೌದು. ನಿರ್ಜೀವ ವಸ್ತುಗಳಿಗೆ ತನ್ನ ಕುಂಚದಿಂದ ಜೀವ ತುಂಬುವ ಕಲಾ ಮಾಂತ್ರಿಕ ಈತ ಎಂದು ಹೇಳಿದರೆ ತಪ್ಪಾಗಲಾರದು.

ಹೌದು, ಅಣ್ಣ ಬರೆಯುತ್ತಿದ್ದ ಚಿತ್ರಗಳನ್ನು ನೋಡುತ್ತಾ ಬೆಳೆದಿರುವ ರವಿ ಸಾಲಿಯಾನ್ ಅವರು ಈಗ ಕೈಯಲ್ಲಿ ಪೆನ್ಸಿಲ್ ಹಿಡಿದರೆ ಸಾಕು, ಒಂದು ಪರಿಪೂರ್ಣ ಕಲಾಕೃತಿ ಹೊರಹೊಮ್ಮುತ್ತದೆ. ಮಾತ್ರವಲ್ಲ ನಿರ್ಜೀವ ವಸ್ತುವಿಗೆ ಜೀವ ಬರುತ್ತದೆ. ಶಾಲಾ ಕಾಲೇಜು ದಿನಗಳಿಂದಲೂ ಚಿತ್ರಗಳನ್ನು ಬಿಡಿಸುತ್ತಿದ್ದ ರವಿ ಅವರು ಹತ್ತು ಹಲವು ಪ್ರಶಸ್ತಿಗಳನ್ನು ಪಡೆದಿರುವಂತಹ ಪ್ರತಿಭಾವಂತ.
ಐಟಿಐ ವಿದ್ಯಾಭ್ಯಾಸ ಪೂರೈಸಿದ ರವಿ ಸಾಲಿಯಾನ್ ಉದ್ಯೋಗ ಹುಡುಕುತ್ತಾ ಸೇರಿದ್ದು ಬೆಂಗಳೂರು. ಬಿಡದಿಯ ಟೊಯೊಟಾ ಕಂಪೆನಿಯಲ್ಲಿ ಕೆಲಸ ಮಾಡುತ್ತಾ ಜೊತೆಗೆ ಡಿಪ್ಲೋಮಾ ಪದವಿ ಪಡೆದರು. ಬೆಂಗಳೂರಿನಲ್ಲಿ ದೊರೆತಂತಹ ಅವಕಾಶಗಳು ರವಿ ಸಾಲಿಯಾನ್ ಅವರಲ್ಲಿನ ಚಿತ್ರಕಲೆಯ ಪ್ರೀತಿಯನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿತು. ಕಲಾ ಸಾಂಗತ್ಯದ ದಿನೇಶ್ ಅವರು ಶಾಲಾ ಪ್ರಾಜೆಕ್ಟ್‌ಗಳಿಗೆ ಚಿತ್ರ ಬಿಡಿಸುವ ಕೆಲಸ ನೀಡಿದ್ದು ಅವರ ಕಲಾ ಪ್ರೇಮಕ್ಕೆ ಪುಷ್ಠಿ ನೀಡಿತು.

ಅಂದ ಹಾಗೇ ರವಿ ಸಾಲಿಯಾನ್ ಅವರು ಪೋರ್ಟ್ರೈಟ್ ಗಳನ್ನೇ ಬಿಡಿಸುವುದು ಹೆಚ್ಚು. ಫೇಸ್‌ಬುಕ್‌ನಲ್ಲಿ ಇವರು ಬಿಡಿಸಿದ ಚಿತ್ರಗಳನ್ನು ಕಂಡು ತುಂಬಾ ಜನ ತಮಗೊಂದು ಚಿತ್ರಗಳನ್ನು ಬರೆದು ಕೊಡಿ ಎಂದು ಕೇಳುತ್ತಾರೆ. ಬರ್ತ್ ಡೇ, ಆ್ಯನಿವರ್ಸರಿ ಸೇರಿದಂತೆ ಅನೇಕ ಶುಭಸಮಾರಂಭಗಳಿಗೆ ಅವುಗಳನ್ನು ಉಡುಗೊರೆಯಾಗಿ ನೀಡುತ್ತಾರೆ
ಎಂದು ಫಿಲ್ಮ್‌ಬೀಟ್ ಜೊತೆಗೆ ಮಾತನಾಡಿದ ರವಿ ಸಾಲಿಯಾನ್ ಹೇಳಿದ್ದಾರೆ.
ಈಗಾಗಲೇ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಸುದೀಪ್, ಉಪೇಂದ್ರ ದರ್ಶನ್, ಮಾಸ್ಟರ್ ಆನಂದ್, ಪೃಥ್ವಿ ಅಂಬರ್, ಸಾರಾ ಅಣ್ಣಯ್ಯ, ವಿಜಯ್ ಸೂರ್ಯ, ವೈಷ್ಣವಿ ಗೌಡ, ಶ್ರಿನಾಥ್ ವಸಿಷ್ಠ, ಅನುಷ್ಕಾ ಶೆಟ್ಟಿ, ರಾಜೇಶ್ ಧ್ರುವ, ರಾಜ್ ಬಿ ಶೆಟ್ಟಿ, ರಕ್ಷಿತ್ ಶೆಟ್ಟಿ, ಆರೂರು ಜಗದೀಶ್, ಸಾಲು ಮರದ ತಿಮ್ಮಕ್ಕ, ಅನುರಾಗ್ ಠಾಕೂರ್, ವಿಜಯೇಂದ್ರ ಯಡಿಯೂರಪ್ಪ, ಟಿ.ಡಿ.ರಾಜೇಗೌಡ ಶೃಂಗೇರಿ, ಬಂಟ್ವಾಳ ಎಂ.ಎಲ್.ಎ ರಾಜೇಶ್ ನಾಯ್ಕ್ ಮುಂತಾದ ಕಲಾವಿದರುಗಳ ಚಿತ್ರವನ್ನು ಅತ್ಯದ್ಭುತವಾಗಿ ಬಿಡಿಸಿರುವ ರವಿ ಸಾಲಿಯಾನ್ ಅವರಿಗೆ ಬ್ರೆಜಿಲ್ ನ ಫಾಬಿಯೊ ರಾಂಗೆಲ್ ಅವರು ಮಾರ್ಗದರ್ಶಕರಾಗಿದ್ದರು. ಪೆನ್ಸಿಲ್ ಕಲೆಯಲ್ಲಿ ಪ್ರಸಿದ್ದಿ ಪಡೆದಿರುವ ಫಾಬಿಯೊ ರಾಂಗೆಲ್ ಚಿತ್ರಕಲೆಯ ಕುರಿತು ಸಲಹೆಗಳನ್ನು ನೀಡುತ್ತಿದ್ದರು.
ರಾಂಗೆಲ್ ಅವರಿಗೆ ಇಂಗ್ಲಿಷ್ ಬಾರದಿರುವ ಕಾರಣ ರವಿ ಅವರು ಗೂಗಲ್ ಟ್ರಾನ್ಸ್‌ಲೇಟ್‌ನಲ್ಲಿ ಪೋರ್ಚುಗೀಸ್ ಭಾಷೆಯಲ್ಲಿ ಸಂದೇಶ ಕಳಿಸುತ್ತಿದ್ದರು. ಅದಕ್ಕೆ ಅವರು ಪೋರ್ಚುಗೀಸ್ ಭಾಷೆಯಲ್ಲಿ ಕಳುಹಿಸುವ ಉತ್ತರವನ್ನು ಇಂಗ್ಲಿಷ್ ಭಾಷೆಗೆ ಬದಲಾಯಿಸಿ ಓದಿಕೊಳ್ಳುತ್ತಿದ್ದರು. ಹೀಗೆಯೇ ಅವರಿಂದ ಅನೇಕ ವಿಷಯಗಳನ್ನು ಕಲಿತಿರುವ ಇವರು ರಷ್ಯಾದ ವ್ಲಾಡಿಮಿರ್ ವೋಲ್ಲೇವ್ ಅವರಿಂದಲೂ ಕೆಲವು ವಿಚಾರಗಳನ್ನು ಕಲಿತಿದ್ದಾರೆ.


Click it and Unblock the Notifications











