'ಪಾರು' ಮುಗಿದ ಬಳಿಕ 'ನಾ ನಿನ್ನ ಬಿಡಲಾರೆ' ಎನ್ನುತ ಭಯ ಹುಟ್ಟಿಸಲು ಬಂದ ಶರತ್ ಪದ್ಮನಾಭ್
ಶರತ್ ಪದ್ಮನಾಭ.. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪಾರು' ಧಾರಾವಾಹಿಯಲ್ಲಿ ನಾಯಕ ಆದಿತ್ಯ ಅರಸನಕೋಟೆಯಾಗಿ ಅಭಿನಯಿಸುತ್ತಿದ್ದ ಹ್ಯಾಂಡ್‌ಸಮ್ ಹುಡುಗ. ಬರೋಬ್ಬರಿ ಆರು ವರ್ಷಗಳ ಕಾಲ 'ಪಾರು' ಧಾರಾವಾಹಿಯ ಆದಿತ್ಯನಾಗಿ ಕಿರುತೆರೆ ವೀಕ್ಷಕರನ್ನು ರಂಜಿಸಿರುವ ಶರತ್ ಪದ್ಮನಾಭ ಅವರು ಮತ್ತೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ.
ಹೌದು, ಆರು ವರ್ಷಗಳ ಕಾಲ ಪ್ರಸಾರಗೊಂಡಿದ್ದ 'ಪಾರು' ಧಾರಾವಾಹಿಯು ಕಳೆದ ವರ್ಷ ಮುಕ್ತಾಯಗೊಂಡಿತ್ತು. 'ಪಾರು' ಧಾರಾವಾಹಿಯ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿರದ ಶರತ್ ಪದ್ಮನಾಭ ಅವರು ಇದೀಗ ಹೊಸ ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಯತ್ತ ಮರಳಲಿದ್ದಾರೆ. ಅಂದ ಹಾಗೇ ಶರತ್ ಪದ್ಮನಾಭ ಅವರು ಈ ಬಾರಿ ನಟಿಸುತ್ತಿರುವುದು ಹಾರರ್ ಧಾರಾವಾಹಿಯಲ್ಲಿ.

ಜೀ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ನಾ ನಿನ್ನ ಬಿಡಲಾರೆ'ಯಲ್ಲಿ ನಾಯಕನಾಗಿ ಅಭಿನಯಿಸುವ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಧಾರಾವಾಹಿಯ ಪ್ರೋಮೋ ಈಗಾಗಲೇ ಹೊರಬಂದಿದ್ದು, ಮತ್ತೆ ತಮ್ಮ ನೆಚ್ಚಿನ ನಟನನ್ನು ತೆರೆಯ ಮೇಲೆ ಕಂಡು ಸೀರಿಯಲ್ ಪ್ರಿಯರು ಸಂತಸಪಟ್ಟಿದ್ದಾರೆ.
ಇಂಜಿನಿಯರಿಂಗ್ ಪದವಿ ಪಡೆದಿರುವ ಶರತ್ ಪದ್ಮನಾಭ ಅವರು ಗ್ರಾಫಿಕ್ಸ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆಕಸ್ಮಿಕವಾಗಿ ದೊರೆತ ಅವಕಾಶದಿಂದ ನಟನೆಯ ನಂಟು ಬೆಳೆಸಿಕೊಂಡ ಶರತ್ ಪದ್ಮನಾಭ ಅವರು ನಟನಾಗಲು ಫೇಸ್ ಬುಕ್ ಕಾರಣ. ಫೇಸ್ ಬುಕ್‌ನಲ್ಲಿ ಶರತ್ ಪದ್ಮನಾಭ ಅವರ ಫೋಟೋ ನೋಡಿದ ದಿಲೀಪ್ ರಾಜ್ ನಟಿಸಲು ಅವಕಾಶ ನೀಡಿದರು. ಬಂದ ಅವಕಾಶವನ್ನು ಖುಷಿಯಿಂದ ಒಪ್ಪಿದ ಶರತ್ ಪದ್ಮನಾಭ ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ಮಿಂಚಿದ್ದಾರೆ.
ಯಾವಾಗ ನಟನಾ ಲೋಕದಿಂದ ಅಚಾನಕ್ ಆಗಿ ಅವಕಾಶಗಳು ಬಂದವೋ ಆಗ ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಳ್ಳುವ ನಿರ್ಧಾರ ಮಾಡಿದರು ಶರತ್ ಪದ್ಮನಾಭ. ನಟನಾಗುವ ನಿರ್ಧಾರ ಮಾಡಿದ ಬಳಿಕ ಹದಿನೈದು ದಿನಗಳ ಕಾಲ ನಟನೆಯ ಕುರಿತಾದ ತರಬೇತಿಯನ್ನು ಪಡೆದ ಶರತ್ ಅವರು ನಟನೆಯ ಆಗು ಹೋಗುಗಳನ್ನು ಅರಿತುಕೊಂಡರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜಸ್ಟ್ ಮಾತ್ ಮಾತಲ್ಲಿ' ಎಂಬ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಮೂಲಕ
ಕಿರುತೆರೆಗೆ ಕಾಲಿಟ್ಟರು.
ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ನಟಿಸಿ ಸೈ ಎನಿಸಿಕೊಂಡಿರುವ ಶರತ್ ಅವರು ಮುಂದೆ ಅದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪುಟ್ಮಲ್ಲಿ' ಧಾರಾವಾಹಿಯಲ್ಲಿ ಇವರು ನಾಯಕನಾಗಿ ಕಮಾಲ್ ಮಾಡಿದರು. ನಂತರ 'ಪಾರು' ಧಾರಾವಾಹಿಯ ಆದಿತ್ಯ ಆಗಿ ಬದಲಾದ ಶರತ್ ಅವರು ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದರು.
'ನೀವು ಕರೆ ಮಾಡಿರುವ ಚಂದದಾರರು' ಸಿನಿಮಾದಲ್ಲಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಕಾಣಿಸಿಕೊಂಡಿರುವ ಶರತ್ ಪದ್ಮನಾಭ ಅವರು ಅಲ್ಲೂ ಕೂಡಾ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡಿರುವ ಪ್ರತಿಭೆ. ಇದರ ಜೊತೆಗೆ 'ಅನೀಮಾ' ಸಿನಿಮಾದಲ್ಲಿಯೂ ಇವರು ನಾಯಕನಾಗಿ ನಟಿಸಲಿದ್ದು ಸಿನಿಮಾದ ಪೋಸ್ಟರ್ ಈಗಾಗಲೇ ಬಿಡುಗಡೆಗೊಂಡು ಸೋಶಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡಿದೆ. ಇದೀಗ ಹಾರರ್ ಧಾರಾವಾಹಿ 'ನಾ ನಿನ್ನ ಬಿಡಲಾರೆ' ಯ ನಾಯಕನಾಗಿ ಕಿರುತೆರೆಗೆ ಮತ್ತೆ ಮರಳಿದ್ದಾರೆ.


Click it and Unblock the Notifications











