ಮಲಯಾಳಂ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ಸ್ಕಂದ ಅಶೋಕ್; ಅದ್ಯಾವುದು ಗೊತ್ತೇ?
ಕಿರುತೆರೆಯ ಮೂಲಕ ನಟನೆಯ ನಂಟು ಬೆಳೆಸಿಕೊಂಡ ಅನೇಕರು ಹಿರಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ತೀರಾ ಮಾಮೂಲಿ ಸಂಗತಿ. ಆದರೆ ಈ ನಟನ ವಿಷಯದಲ್ಲಿ ಇದು ತದ್ವಿರುದ್ಧ. ಹೌದು, ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈ ಹ್ಯಾಂಡ್ ಸಮ್ ಹುಡುಗ ಇಂದು ಧಾರಾವಾಹಿಯ ಮೂಲಕ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆಯುತ್ತಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅವನು ಮತ್ತು ಶ್ರಾವಣಿ' ಧಾರಾವಾಹಿಯಲ್ಲಿ ನಾಯಕ ಅಭಿಮನ್ಯು ಆಗಿ ಅಭಿನಯಿಸುತ್ತಿರುವ ಸ್ಕಂದ ಅಶೋಕ್ shj ನಟನೆಯ ಮೂಲಕ ಮೋಡಿ ಮಾಡಿದ ಹುಡುಗ. ಮಲಯಾಳಂನ 'ನೋಟ್ ಬುಕ್' ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಮೂಲಕ ನಟನೆಯ ನಂಟು ಬೆಳೆಸಿಕೊಂಡ ಸ್ಕಂದ ಅಶೋಕ್ ಮೊದಲ ಸಿನಿಮಾಕ್ಕೆ ಏಷಿಯನೆಟ್ ಫಿಲಂ ನೀಡುವ ಹೊಸ ಮುಖ ಪ್ರಶಸ್ತಿ ಪಡೆದಿದ್ದರು.

ತದ ನಂತರ ಹಿಂತಿರುಗಿ ನೋಡದ ಸ್ಕಂದ ಅಶೋಕ್ ಮಲಯಾಳಂನ 'ಪಾಸಿಟಿವ್', ತೆಲುಗಿನ 'ಮಲ್ಲಿ ಮಲ್ಲಿ', ಮಲಯಾಳಂನ 'ಎಲೆಕ್ಟ್ರಾ', ತಮಿಳಿನ 'ಅಂಗುಸಂ' ಹಾಗೂ 'ಮುಪ್ಪರಿಮಾನಂ' ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು. 'ಚಾರುಲತಾ' ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಸ್ಕಂದ ಅಶೋಕ್ 'ಯೂ ಟರ್ನ್' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ಕಾನೂರಾಯಣ', 'ಜಿಗ್ರಿ ದೋಸ್ತ್', 'ದೇವಯಾನಿ', 'ಭೈರಾದೇವಿ' ಹಾಗೂ 'ರಣಾಂಗಣ' 'ಫ್ಲಾಟ್ ನಂ 9', 'ಬರ್ಬರಿಕಾ' ಹೀಗೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿರುವ ಕಾಫಿ ನಾಡಿನ ಕುವರ ಕಿರುತೆರೆಗೆ ಕಾಲಿಟ್ಟಿದ್ದು ರಮಣನಾಗಿ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾರಮಣ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಸ್ಕಂದ ಅಶೋಕ್ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನೆ, ಮನ ಸೆಳೆದರು. ಇದ್ದರೆ ಇಂತಹ ಗಂಡ ಬೇಕು ಎಂದು ಬಯಸಿದ ಹೆಣ್ ಮಕ್ಕಳಿಗೇನು ಕಡಿಮೆಯಿಲ್ಲ. ಸ್ಕಂದ ಅಶೋಕ್ ಅವರ ಮುದ್ದಾದ ನಟನೆಗೆ ಅದೆಷ್ಟೋ ಹೆಣ್ ಮಕ್ಕಳು ಫಿದಾ ಆಗಿದ್ದರೋ ಏನೋ?
'ರಾಧಾ ರಮಣ' ಧಾರಾವಾಹಿಯ ನಂತರ ಕೊಂಚ ಸಮಯ ಕಿರುತೆರೆಯಿಂದ ದೂರವಿದ್ದ ಸ್ಕಂದ ಅಶೋಕ್ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧೆ ಶ್ಯಾಮ' ಧಾರಾವಾಹಿಯಲ್ಲಿ ಅತಿಥಿ ಪಾತ್ರದ ಮೂಲಕ ಮೋಡಿ ಮಾಡಿದರು. ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರಸು' ಧಾರಾವಾಹಿಯಲ್ಲಿ ನಾಯಕ ಅರವಿಂದ ಆಗಿ ನಟಿಸಿ ಸೈ ಎನಿಸಿಕೊಂಡರು. ಮುಂದೆ ಕಾರಣಾಂತರಗಳಿಂದ ಆ ಧಾರಾವಾಹಿ ಮುಕ್ತಾಯಗೊಂಡಿತ್ತು.
ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅವನು ಮತ್ತು ಶ್ರಾವಣಿ'ಯಲ್ಲಿ ಅಭಿಮನ್ಯು ಆಗಿ ನಟಿಸುತ್ತಿರುವ ಸ್ಕಂದ ಅಶೋಕ್ ನಟಿಸಿದ್ದು ಕೂಡಾ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ಆದರೂ ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ.


Click it and Unblock the Notifications











