ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕನ್ನಡದ ಕಿರುತೆರೆ ನಟ ತಾರಕ್ ಪೊನ್ನಪ್ಪ; ಯಾವುದದು?
ಕನ್ನಡ ಕಿರುತೆರೆ ನಟ ತಾರಕ್ ಪೊನ್ನಪ್ಪ ಇತ್ತೀಚೆಗಷ್ಟೇ 'ಉಧೋ ಉಧೋ ಶ್ರೀ ರೇಣುಕಾ ಎಲ್ಲಮ್ಮ' ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಈ ಧಾರಾವಾಹಿಯಲ್ಲಿ ರೇಣು ಮಹಾರಾಜನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟ ತಾರಕ್ ಪೊನ್ನಪ್ಪ ಅವರು ಬೇರೆ ಸಿನಿಮಾ ಹಾಗೂ ಧಾರಾವಾಹಿಗಳ ಕಮಿಟ್‌ಮೆಂಟ್‌ನಿಂದಾಗಿ ಈ ಧಾರಾವಾಹಿಯಿಂದ ಹೊರ ನಡೆದಿರುವುದಾಗಿ ಹೇಳಿಕೊಂಡಿದ್ದರು.
ಈಗ ತಾರಕ್ ಪೊನ್ನಪ್ಪ ತೆಲುಗು ಚಿತ್ರರಂಗದಲ್ಲಿ ಒಂದಷ್ಟು ಹೆಸರು ಮಾಡುವ ಲಕ್ಷಣಗಳು ಕಾಣುತ್ತಿವೆ. ಹೌದು ಕನ್ನಡ ನಟ ತಾರಕ್ ಹೊನ್ನಪ್ಪ ಅವರು ಈಗಾಗಲೇ ಮೂರು ಚಿತ್ರಗಳಲ್ಲಿ ನಟಿಸಿದ್ದು, ಇನ್ನು ಹೆಚ್ಚಿನ ಪ್ರಾಜೆಕ್ಟ್‌ಗಳು ಅವರ ಕೈ ಸೇರುತ್ತಿವೆ. ಮುಖ್ಯವಾಗಿ ತೆಲುಗು ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವಡೆಗೆ ಕೈ ಹಾಕಿರುವ ತಾರಕ್ ಪೊನ್ನಪ್ಪ ಅವರು ಈಗಾಗಲೇ ಟಾಲಿವುಡ್ ನಟ ಅಲ್ಲು ಅರ್ಜುನ್ ಅವರೊಂದಿಗೆ ನಟಿಸುತ್ತಿದ್ದಾರೆ.

ಹೌದು, 'ದೇವರ', 'ಪುಷ್ಪ 2' ಹಾಗೂ ಇನ್ನೊಂದು ಚಿತ್ರದಲ್ಲಿ ನಟಿಸುತ್ತಿರುವ ನಟ ತಾರಕ್ ಪೊನ್ನಪ್ಪ, 'ಪುಷ್ಪ 2' ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ ತಾರಕ್ ಅವರು "ನಾನು ಒಂದಷ್ಟು ನಟನೆಯ ಸ್ಕಿಲ್‌ಗಳನ್ನು ಅಲ್ಲು ಅರ್ಜುನ್ ಅವರಿಂದ ಪಡೆದುಕೊಂಡಿದ್ದೇನೆ. ವಿಲನ್ ಪಾತ್ರ ಸಿಕ್ಕಿದೆ. ನನಗೆ ಡಾನ್ಸ್ ಹಾಗೂ ಫೈಟಿಂಗ್, ಸ್ಟಂಟ್‌ಗಳು ಅಷ್ಟಾಗಿ ಬರುವುದಿಲ್ಲ. ನಟ ಅಲ್ಲು ಅರ್ಜುನ್ ಅವರು ನನಗೆ ಚೆನ್ನಾಗಿ ಟ್ರೈನ್ ಮಾಡಿದ್ದಾರೆ. ಫೈಟಿಂಗ್, ಸ್ಟಂಟ್‌ಗಳಲ್ಲಿ ಯಾವ ರೀತಿ ಬಾಡಿ ಪೋಸಿಶನ್ ಇರಬೇಕು ಎಂದು ಇತ್ಯಾದಿಗಳನ್ನು ಹೇಳಿಕೊಟ್ಟಿದ್ದಾರೆ. ಈ ವಿಚಾರಗಳಲ್ಲಿನ ಅವರ ಜ್ಞಾನಕ್ಕೆ ನಾನು ಮನಸೋತಿದ್ದೇನೆ. ಅಂತಹ ನಟರೊಂದಿಗೆ ಕೆಲಸ ಮಾಡಲು ಸಿಕ್ಕ ಅವಕಾಶದ ಬಗ್ಗೆ ಖುಷಿ ಇದೆ" ಎಂದಿದ್ದಾರೆ.
ಇನ್ನು ಕನ್ನಡದ ನಟನಾಗಿ ತೆಲುಗಿನಲ್ಲಿ ತಮ್ಮ ಹೆಸರು ಮಾಡುತ್ತಿರುವುದರ ಬಗ್ಗೆ ಮಾತನಾಡಿ "ಕನ್ನಡದ ಕಲಾವಿದರಿಗೆ ಬೇರೆ ಬೇರೆ ರಾಜ್ಯಗಳಲ್ಲಿ ಕ್ಷೇತ್ರಗಳಲ್ಲಿ ಬಹಳಷ್ಟು ಸ್ಕೋಪ್ ಇದೆ. ಇದಕ್ಕೆ ಮುಖ್ಯ ಕಾರಣ ನಾವು ಬೇರೆ ಬೇರೆ ವಿಚಾರಗಳಲ್ಲಿ ಬಳಸಿಕೊಂಡಿರುವ ಸ್ಕಿಲ್ಸ್. ಈ ರೀತಿಯಾಗಿ ನಾವು ನಮ್ಮ ರಾಜ್ಯದಿಂದ ಹೊರಗಡೆಗೂ ಒಂದಷ್ಟು ಹೆಸರು ಹಾಗೂ ಹಣ ಮಾಡುವ ಅವಕಾಶವಾಗಿದೆ" ಎಂದಿದ್ದಾರೆ.

ಇದರ ಜೊತೆಗೆ "ಪ್ಯಾನ್ ಇಂಡಿಯಾ ಚಿತ್ರಗಳು ಇಂದು ಬಹಳ ಮುಖ್ಯವಾದ ಅಂಶವಾಗಿದ್ದು ಹಲವಾರು ಕಲಾವಿದರಿಗೆ ಅವಕಾಶಗಳನ್ನು ಕಲ್ಪಿಸಿಕೊಡುತ್ತಿದ್ದೆ. ನಮ್ಮ ಬಳಿ ಸ್ಕಿಲ್ಸ್ ಇದ್ದರೆ ಸಾಕು, ನಮ್ಮ ಬ್ಯಾಗ್ರೌಂಡ್ ಬಗ್ಗೆ ಯಾವುದೇ ಡೈರೆಕ್ಟರ್ ಅಥವಾ ಪ್ರೊಡ್ಯೂಸರ್ ಚಿಂತಿಸುವುದಿಲ್ಲ. ಹಾಗಾಗಿ ಸ್ಕಿಲ್ಸ್ ಇದ್ದಾಗ ಮಾತ್ರ ನಾವು ಪಾನ್ ಇಂಡಿಯಾ ಅಥವಾ ಇನ್ನು ದೊಡ್ಡ ಮಟ್ಟಿನಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಲು ಸಾಧ್ಯ" ಎಂದು ನಟ ತಾರಕ್ ಪೊನ್ನಪ್ಪ ಹೇಳಿಕೊಂಡಿದ್ದಾರೆ.


Click it and Unblock the Notifications











