ಜನನಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸಿದ ವರ್ಷಿಕಾ ನಾಯಕ್
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಜನನಿ' ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ಬರೋಬ್ಬರಿ 750 ಸಂಚಿಕೆಗಳನ್ನು ಪೂರೈಸಿರುವ ಈ ಧಾರಾವಾಹಿ ಸುಖಾಂತ್ಯ ಕಾಣುವ ಮೂಲಕ ತನ್ನ ಪಯಣ ನಿಲ್ಲಿಸಿದೆ.
"ಉದಯ ಟಿವಿಯ ಜನಪ್ರಿಯ ಧಾರಾವಾಹಿಯಾದ ಜನನಿ ಶುಭಾಂತ್ಯಗೊಂಡಿದೆ. ಸತತ ಎರಡೂವರೆ ವರ್ಷಗಳ ಕಾಲ ಪ್ರೇಕ್ಷಕರ ಪ್ರೀತಿ, ಪ್ರೋತ್ಸಾಹಗಳಿಂದ 750 ರ ಗಡಿ ದಾಟಿದೆ. ಇಷ್ಟು ವರ್ಷಗಳ ಕಾಲ ಉದಯ ವಾಹಿನಿಗೆ ವೀಕ್ಷಕರು ನೀಡಿದ ಪ್ರೀತಿ, ಹಾರೈಕೆಗಳು ಸದಾ ಕಾಲ ಇರಲೆಂದು ಆಶಿಸುವ ಉದಯ ವಾಹಿನಿ ಹಾಗೂ ಜನನಿ ಧಾರಾವಾಹಿಯ ತಂಡ" ಎಂದು ಉದಯ ಟಿವಿ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಕೂಡಾ ಹಾಕಿದ್ದಾರೆ.

ಅಂದ ಹಾಗೇ 'ಜನನಿ' ಧಾರಾವಾಹಿಯಲ್ಲಿ ನಾಯಕಿ ಜನನಿಯಾಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದ ಬೆಡಗಿ ಹೆಸರು ವರ್ಷಿಕಾ ನಾಯಕ್. ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಿದ ವರ್ಷಿಕಾ ನಾಯಕ್ ಅವರಿಗೆ ಸಣ್ಣ ವಯಸ್ಸಿನಿಂದಲೂ ನಟಿಯಾಗಬೇಕು, ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಮಹಾದಾಸೆಯಿತ್ತು.
ಇನ್ನು ವರ್ಷಿಕಾ ನಾಯಕ್ ಅವರ ನಟನಾ ಪಯಣ ಶುರುವಾಗಿದ್ದು ವೀಣಾ ಪಾತ್ರದ ಮೂಲಕ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಇವಳೇ ವೀಣಾಪಾಣಿ' ಧಾರಾವಾಹಿಯಲ್ಲಿ ನಾಯಕಿ ವೀಣಾಳಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಡ ವರ್ಷಿಕಾ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆದುಬಿಟ್ಟರು.
ತದ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅರಮನೆ ಗಿಳಿ' ಧಾರಾವಾಹಿಯಲ್ಲಿ ಈಕೆ ಬಣ್ಣ ಹಚ್ಚಿದರು. 'ಅರಮನೆ ಗಿಳಿ' ಧಾರಾವಾಹಿಯಲ್ಲಿ ನಾಯಕಿ ಮೀರಾಳಾಗಿ ನಟಿಸಿದ ವರ್ಷಿಕಾ ನಂತರ ಕಾಣಿಸಿಕೊಂಡಿದ್ದು ರಾಧಿಕಾಳಾಗಿ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರುಕ್ಕು' ಧಾರಾವಾಹಿಯಲ್ಲಿ ನಾಯಕಿ ರುಕ್ಕುವಿನ ತಂಗಿ ರಾಧಿಕಾಳಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡರು.

ನಂತರ 'ಜನನಿ' ಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸಿದ ವರ್ಷಿಕಾ ನಾಯಕ್ ಸ್ಯಾಂಡಲ್‌ವುಡ್‌ನಲ್ಲಿ ಮೋಡಿ ಮಾಡಿದ್ದಾರೆ. ಹೌದು, 'ನೀ ಕಣಜ' ಎನ್ನುವ ಸಿನಿಮಾದಲ್ಲಿ ಬಣ್ಣ ಹಚ್ಚಿರುವ ವರ್ಷಿಕಾ ತಮಿಳಿನ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಇನ್ನು ನಟನೆಯ ಹೊರತಾಗಿ ವರ್ಷಿಕಾ ನಾಯಕ್ ಅವರು ನೃತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ಬರೋಬ್ಬರಿ ಹತ್ತು ವರ್ಷಗಳ ಕಾಲ ಹಿಪ್ ಹಾಪ್ ನೃತ್ಯವನ್ನು ಕರಗತ ಮಾಡಿಕೊಂಡಿರುವ ಈಕೆ ಚಿತ್ರಕಲಾವಿದೆ ಎಂದು ಹೇಳಿದರೆ ತಪ್ಪಾಗಲಾರದು. ಚಿತ್ರಗಳನ್ನು ಬಿಡಿಸುವ ಹವ್ಯಾಸವಿರುವ ವರ್ಷಿಕಾ ನಾಯಕ್ ಫ್ಯಾಷನ್ ಡಿಸೈನಿಂಗ್ ನಲ್ಲಿ ಡಿಪ್ಲೋಮಾ ಪದವಿಯನ್ನು ಪಡೆದಿರುವ ಬೆಡಗಿ. ಇದೀಗ ಈಕೆಯ ನಟನೆಯ ಜನನಿ ಧಾರಾವಾಹಿ ಮುಕ್ತಾಯಗೊಂಡಿದ್ದು ಮತ್ತೆ ಕಿರುತೆರೆಗೆ ಮರಳುತ್ತಾರಾ ಅನ್ನೋದು ತಿಳಿಯಬೇಕಿದೆ.


Click it and Unblock the Notifications











