Yashwanth Gowda ; ರಾಯರ ದರ್ಶನ ಪಡೆದ ಅಣ್ಣಾವ್ರ ಅಭಿಮಾನಿ ಯಶವಂತ್ ಗೌಡ..!
ಕನ್ನಡ ಕಿರುತೆರೆಯ ಹಲವು ನಟ-ನಟಿಯರು ಪರಭಾಷೆಯಲ್ಲೇ ಹೆಚ್ಚಾಗಿ ಮಿಂಚುತ್ತಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಮೊದಲು ಕ್ಯಾಮಾರಾ ಫೇಸ್ ಮಾಡಿ ಒಂದೇ ಸೀರಿಯಲ್ ಗೆ ಹಿಟ್ ಆಗಿ ಪರಭಾಷೆಗೆ ಹಾರುತ್ತಾರೆ. ತೆಲುಗು ಮತ್ತು ತಮಿಳು ಕಿರುತೆರೆಯಲ್ಲಿ ಇರುವ ನಟ-ನಟಿಯರು ಹೆಚ್ಚಿನವರು ನಮ್ಮ ಕನ್ನಡದವರೇ.
ಇತ್ತೀಚೆಗಷ್ಟೇ ಭಾಗ್ಯಲಕ್ಷ್ಮೀ ಧಾರಾವಾಹಿಯ ನಟಿ ಭೂಮಿಕಾ ರಮೇಶ್ ಕೂಡ ತೆಲುಗಿಗೆ ಹಾರಿದ್ದಾರೆ. ಇವರಷ್ಟೇ ಅಲ್ಲದೇ, ವಿಜಯ್ ಸೂರ್ಯ, ಯಶ್ವಂತ್ ಗೌಡ, ದೀಪಕ್, ಚಂದ್ರು, ನಿಶಾ ರವಿಕೃಷ್ಣನ್, ಪವಿತ್ರಾ, ನೇಹಾ ಗೌಡ, ಪಲ್ಲವಿ, ಶೋಭಾ ಶೆಟ್ಟಿ ಹೀಗೆ ಸಾಕಷ್ಟು ನಟ-ನಟಿಯರು ತೆಲುಗಿನಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನದಿಂದ ತೆಲುಗಿಗೆ ಪಯಣ
ಕನ್ನಡ ಕಿರುತೆರೆಯಲ್ಲಿ ಮಿಂಚಿದ ಉದಯೋನ್ಮುಖ ನಟ ಯಶವಂತ್ ಕೂಡ ತೆಲುಗಿನಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ. ಅದು ಕೂಡ ನಿಶಾ ರವಿಕೃಷ್ಣನ್ ಅವರ ಜೋಡಿಯಾಗಿ ಅಮ್ಮಾಯಿಗಾರು ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಕನ್ನಡದಲ್ಲಿ ಪ್ರಸಾರವಾಗಿದ್ದ ಕನ್ಯಾಕುಮಾರಿ ಧಾರಾವಾಹಿಯಲ್ಲೂ ಯಶವಂತ್ ಅವರು ನಾಯಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇವರ ನಟನೆಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು.ಈ ಧಾರಾವಾಹಿಯ ಬಳಿಕ ತೆಲುಗಿನಿಂದ ಯಶವಂತ್ ಅವರಿಗೆ ಆಫರ್ ಬಂದಿತು. ಹಾಗಾಗಿ ಅಮ್ಮಾಯಿಗಾರು ಧಾರಾವಾಹಿಯಲ್ಲಿ ನಟಿಸಲು ಪ್ರಾರಂಭಿಸಿದರು.

ಅಪ್ಪಟ್ಟ ತೆಲುಗು ಹುಡುಗನಾದ ನಟ
ಸದ್ಯ ಯಶ್ವಂತ್ ಅವರಿಗೆ ತೆಲುಗು ಕಿರುತೆರೆಯಲ್ಲಿ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಇವರ ಹೆಸರಲ್ಲಿ ಸಾಕಷ್ಟು ಫ್ಯಾನ್ ಪೇಜ್ ಗಳು ಕೂಡ ಇವೆ. ಈಗಾಗಲೇ ತೆಲುಗು ಭಾಷೆಯನ್ನು ಕಲಿತಿರುವ ಯಶವಂತ್ ಅವರು ಅಪ್ಪಟ ಹೈದರಾಬಾದ್ ಹುಡುಗನಾಗಿ ಬಿಟ್ಟಿದ್ದಾರೆ. ಯಶವಂತ್ ಅವರಿಗೆ ಸಿನಿಮಾ ಎಂದರೆ ಹುಟ್ಟು ಪ್ರೀತಿ. ಎಲ್ಲಾ ಚಿತ್ರಗಳನ್ನು ಥಿಯೇಟರ್ ಗೆ ಹೋಗಿ ನೋಡುತ್ತಾರಂತೆ.
ಮೊಬೈಲ್ ಯುಗದಲ್ಲಿ ರೀಲ್ಸ್ ಮಾಡುತ್ತಿದ್ದ ಯಶವಂತ್ ಅವರು ಅದ್ಯಾರ ಕಣ್ಣಿಗೆ ಬಿದ್ದರೋ, ಸೀದಾ ಬಂದದ್ದು ಕನ್ಯಾಕುಮಾರಿ ಧಾರಾವಾಹಿ ಸೆಟ್ ಗೆ. ಇಲ್ಲಿಂದ ಯಶವಂತ್ ಅವರ ಆಕ್ಟಿಂಗ್ ಕೆರಿಯರ್ ಶುರುವಾಗಿದ್ದು, ಕನ್ನಡದ ಹರ ಹರ ಮಹಾದೇವ ಧಾರಾವಾಹಿಯಲ್ಲೂ ಕೂಡ ಯಶವಂತ್ ಬಣ್ಣ ಹಚ್ಚಿದ್ದಾರೆ. ಈಗ ತೆಲುಗಿನಲ್ಲಿ ಮುಂದುವರೆದಿದೆ. ಕನ್ನಡದಲ್ಲೂ ಉತ್ತಮ ಪಾತ್ರ ಸಿಕ್ಕರೆ ಖಂಡಿತವಾಗಿಯೂ ನಟಿಸುತ್ತೇನೆ ಎಂದು ಹೇಳುತ್ತಾರೆ ಯಶವಂತ್.

ಗಾಯಕನಾಗಲು ಹೋಗಿ ನಟನಾದ ಯಶ್ ಗೌಡ
ಯಶವಂತ್ ಅವರು ಡಾ ರಾಜ್ ಕುಮಾರ್ ಅವರ ಕಟ್ಟಾ ಅಭಿಮಾನಿಯಂತೆ. ರಾಜ್ ಕುಮಾರ್ ಅವರ ಎಲ್ಲಾ ಹಾಡುಗಳು ಯಶವಂತ್ ಅವರಿಗೆ ಕಂಠ ಪಾಠವಾಗಿದೆಯಂತೆ. ಇವರ ಮನೆಯ ದೇವರ ಫೋಟೋಗಳ ನಡುವೆ ಅಣ್ಣಾವ್ರ ಫೋಟೋ ಕೂಡ ಇದೆಯಂತೆ. ಗಾಯಕನಾಗುವ ಆಸೆ ಹೊಂದಿದ್ದ ಯಶವಂತ್ ಅವರು ಆರ್ಥಿಕ ಪರಿಸ್ಥಿತಿಯಿಂದಾಗಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿಕೊಂಡಿದ್ದರಂತೆ. ಎಲ್ಲಾದರೂ ಶೂಟಿಂಗ್ ನಡೆಯುತ್ತಿದ್ದರೆ, ಅಲ್ಲಿಗೆ ಹೋಗಿ ಗಂಟೆಗಟ್ಟಲೆ ನಿಂತು ಶೂಟಿಂಗ್ ಅನ್ನು ನೋಡುತ್ತಿದ್ದರಂತೆ. ನಟ ನಟಿಯರೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಿದ್ದರಂತೆ.
ಮಂತ್ರಾಲಯದಲ್ಲಿ ನಟ ಯಶವಂತ್
ಯಶ್ವಂತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಧಾರಾವಾಹಿ ಕಲಾವಿದರೊಂದಿಗೆ ರೀಲ್ಸ್ ಗಳನ್ನು ಮಾಡುತ್ತಿರುತ್ತಾರೆ. ಇದೀಗ ನಟ ಯಶ್ವಂತ್ ಅವರು ಮಂತ್ರಾಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಶೂಟಿಂಗ್ ನ ಬಿಡುವುನ ಸಮಯದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದಿದ್ದಾರೆ. ಮಂತ್ರಾಲಯದಲ್ಲಿ ರಾಯರ ದರ್ಶನ ಮಾಡಿ ಬಳಿ ಪಂಚಮುಖಿಗೆ ಭೇಟಿ ಕೊಟ್ಟು ಆಂಜನೇಯ ಸ್ವಾಮಿಗಳ ಕೃಪೆಗೆ ಪಾತ್ರರಾಗಿದ್ದಾರೆ. ಇದರ ಫೋಟೋಗಳನ್ನು ಯಶವಂತ್ ಅವರು ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.


Click it and Unblock the Notifications











