'ನಾತಿಚರಾಮಿ' ಧಾರಾವಾಹಿಯ ಅಗಸ್ತ್ಯನಾಗಿ ಕನ್ನಡ ಕಿರುತೆರೆಗೆ ಮತ್ತೆ ಮರಳಿದ ಈ ನಟ ಯಾರು ಗೊತ್ತೇ?
ವಿಭಿನ್ನ ರೀತಿಯ ಕಥಾ ಹಂದರವನ್ನೊಳಗೊಂಡ ಧಾರಾವಾಹಿಯ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುವ ವಾಹಿನಿಗಳ ಪೈಕಿ ಉದಯ ವಾಹಿನಿಯೂ ಒಂದು. ಇಂತಿಪ್ಪ ಉದಯ ವಾಹಿನಿಯಲ್ಲಿ ಇದೀಗ ಹೊಸ ಧಾರಾವಾಹಿಯು ಶುರುವಾಗಲಿದೆ. 'ನಾತಿಚರಾಮಿ' ಎನ್ನುವ ಧಾರಾವಾಹಿ ಇದೇ ಸೋಮವಾರದಂದು ಶುರುವಾಗಲಿದ್ದು, ಅದರಲ್ಲಿ ನಾಯಕ ಅಗಸ್ತ್ಯನಾಗಿ ನಟ ಯಶವಂತ್ ಅಭಿನಯಿಸಲಿದ್ದಾರೆ.
'ನಾತಿಚರಾಮಿ' ಧಾರಾವಾಹಿಯ ನಾಯಕ ಅಗಸ್ತ್ಯನಿಗೆ ತಾಯಿಯಿಲ್ಲ. ತಾಯಿಯ ಪ್ರೀತಿಯಿಂದ ವಂಚಿತನಾಗಿರುವ ಅಗಸ್ತ್ಯನಿಗೆ ದೇವರ ಮೇಲೆ ವಿಪರೀತ ಕೋಪ. ತನ್ನಿಂದ ತಾಯಿಯ ಪ್ರೀತಿಯನ್ನು ಕಸಿದುಕೊಂಡಿದ್ದು ಈ ದೇವರೇ ಎಂದು ನಂಬಿರುವ ಅಗಸ್ತ್ಯನ ಬದುಕಿನಲ್ಲಿ ಬನಶಂಕರಮ್ಮನ ಭಕ್ತೆ, ದೈವಭಕ್ತೆಯಾಗಿರುವ ಹುಡುಗಿಯ ಆಗಮನವಾದರೆ ಏನಾಗುತ್ತದೆ ಎಂಬುದೇ ಧಾರಾವಾಹಿಯ ಕಥಾ ಹಂದರ.

ಈಗಾಗಲೇ ಧಾರಾವಾಹಿಯ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆಯಾಗಿದ್ದು ಸಕತ್ ಸದ್ದು ಮಾಡುತ್ತಿದೆ. ಜೊತೆಗೆ ವಿಭಿನ್ನ ಕಥಾಹಂದರದ 'ನಾತಿಚರಾಮಿ' ಧಾರಾವಾಹಿಯನ್ನು ನೋಡಿ ಕಣ್ತುಂಬಿಸಿಕೊಳ್ಳಲು ಕಿರುತೆರೆ ವೀಕ್ಷಕರು ಕೂಡಾ ಕಾತರದಿಂದ ಕಾಯುತ್ತಿದ್ದಾರೆ. ಅಗಸ್ತ್ಯ ಪಾತ್ರದಲ್ಲಿ ಕಿರುತೆರೆಯಲ್ಲಿ ಮೋಡಿ ಮಾಡಲಿರುವ ಯಶವಂತ್ ಅವರಿಗೆ ಇದು ಎರಡನೇ ಧಾರಾವಾಹಿ ಹೌದು.
ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ಯಾಕುಮಾರಿ' ಧಾರಾವಾಹಿಯಲ್ಲಿ ನಾಯಕ ಚರಣ್ ಆಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು ನಟ ಯಶವಂತ್. ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ನಟಿಸಿದ ಯಶವಂತ್ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ಮುಂದೆ ತೆಲುಗು ಕಿರುತೆರೆಗೆ ಹಾರಿದ ಯಶವಂತ್ ರಾಜು ಪಾತ್ರದ ಮೂಲಕ ವೀಕ್ಷಕರ ಮನ ಸೆಳೆದರು.
ತೆಲುಗಿನ 'ಅಮ್ಮಾಯಿಗಾರು' ಧಾರಾವಾಹಿಯಲ್ಲಿ ನಾಯಕ ರಾಜು ಆಗಿ ಅಭಿನಯಿಸಿದ ಯಶವಂತ್ ಅಲ್ಲೂ ಕೂಡಾ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡಿದ್ದಾರೆ. ತೆಲುಗು ಧಾರಾವಾಹಿಯಲ್ಲಿ ಕನ್ನಡತಿ ನಿಶಾ ರವಿಕೃಷ್ಣನ್ ಅವರಿಗೆ ಜೋಡಿಯಾಗಿ ನಟಿಸಿರುವ ಯಶವಂತ್ ಈ ವರ್ಷದ ಜೀ ತೆಲುಗು ಕುಟುಂಬಂ ಅವಾರ್ಡ್‌ನಲ್ಲಿ 'ರೊಮ್ಯಾಂಟಿಕ್ ಕಪಲ್' ಅವಾರ್ಡ್ ಪಡೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೇ 'ಪಾಪ್ಯುಲರ್ ಫೇಸ್ ಅಫ್ ಪ್ರೈಮ್ ಟೈಮ್ ಮೇಲ್' ಪ್ರಶಸ್ತಿ ಪಡೆದಿರುವ ಯಶವಂತ್ ಇದೀಗ ಅಗಸ್ತ್ಯ ಆಗಿ ಕನ್ನಡ ಕಿರುತೆರೆಗೆ ಮರಳುತ್ತಿದ್ದಾರೆ. ಕನ್ನಡ, ತೆಲುಗು ಕಿರುತೆರೆಗಳಲ್ಲಿ ನಟನಾ ಛಾಪನ್ನು ಪಸರಿಸುತ್ತಿರುವ ಯಶವಂತ್ ಅವರು ನಟನೆಗೆ ಕಾಲಿಡಲು ವರನಟ ಡಾ. ರಾಜ್ ಕುಮಾರ್ ಮತ್ತು ಯಶವಂತ್ ಅವರು ನಂಬಿದ ದೇವರೇ ಪ್ರಮುಖ ಕಾರಣ. ರಾಜ್ ಕುಮಾರ್ ಅವರು ಯಶವಂತ್ ಅವರ ಪಾಲಿಗೆ ಆರಾಧ್ಯಾ ದೈವ ಹೌದು.
ಅಂದ ಹಾಗೇ ಯಶವಂತ್ ಅವರು ನಟನಾಗಿದ್ದಾರೆ ಎಂದರೆ ಅದಕ್ಕೆ ರೀಲ್ಸ್ ಕೊಡುಗೆಯೂ ಇದೆ ಎಂದು ಹೇಳಬಹುದು. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದ ಯಶವಂತ್ ಆಗಾಗ ರೀಲ್ಸ್ ಮಾಡಿ ಹಾಕುತ್ತಿದ್ದರು. ಅದನ್ನು ನೋಡಿದ ನಿರ್ದೇಶಕರು ನಟಿಸುವ ಅವಕಾಶ ನೀಡಿದರು. ಒಟ್ಟಿನಲ್ಲಿ ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಯಶವಂತ್ ಮುಂದೊಂದು ದಿನ ಹಿರಿತೆರೆಯಲ್ಲಿ ಕಂಡರೆ ಆಶ್ಚರ್ಯವೇನಿಲ್ಲ.


Click it and Unblock the Notifications











