'ಸ್ನೇಹದ ಕಡಲಲ್ಲಿ' ಹೊಸ ಧಾರಾವಾಹಿಯಲ್ಲಿ ವಿಲನ್ ಲುಕ್ ಕೊಟ್ಟ ಅಭಿಜ್ಞಾ ಭಟ್; ಪಾತ್ರ ಯಾವುದು?
ವಿನೂತನ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ವಾಹಿನಿಗಳ ಪೈಕಿ ಸ್ಟಾರ್ ಸುವರ್ಣವೂ ಒಂದು. ಈಗಾಗಲೇ ಕೌಟುಂಬಿಕ ಕಥಾಹಂದರವನ್ನೊಳಗೊಂಡ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನೇ ಉಣಬಡಿಸುತ್ತಿದೆ ಸ್ಟಾರ್ ಸುವರ್ಣ ವಾಹಿನಿ. ಇದೀಗ ಆ ಸಾಲಿಗೆ ಹೊಸದಾಗಿ ಸೇರಲಿದೆ 'ಸ್ನೇಹದ ಕಡಲಲ್ಲಿ' ಧಾರಾವಾಹಿ.
ಚಂದು ಗೌಡ ಹಾಗೂ ಕಾವ್ಯಾ ಮಹಾದೇವ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿರುವ 'ಸ್ನೇಹದ ಕಡಲಲ್ಲಿ' ಧಾರಾವಾಹಿಯ ಮೊದಲನೇ ಪ್ರೋಮೋ ಸಾಕಷ್ಟು ಸದ್ದು ಮಾಡಿತ್ತು. ಮೊದಲ ಪ್ರೋಮೋದ ಬಳಿಕ ಇದೀಗ ಸ್ಟಾರ್ ಸುವರ್ಣ ವಾಹಿನಿಯು ಎರಡನೇ ಪ್ರೋಮೋವನ್ನು ಬಿಡುಗಡೆ ಮಾಡಿದ್ದು ಅದು ಕೂಡಾ ವೀಕ್ಷಕರ ಮನ ಸೆಳೆದಿದೆ.

ಇನ್ನು ಎರಡನೇ ಪ್ರೋಮೋದಲ್ಲಿ ನಾಯಕ ತನ್ನ ಅಗಲಿರುವ ತಂದೆಯ ಶ್ರಾದ್ಧ ಮಾಡುತ್ತಿರುತ್ತಾನೆ. ಅಪ್ಪ, ಪ್ರತಿ ಮಗನ ಮೊದಲ ಹೀರೋ, ಆದರೆ, ನಮ್ಮಪ್ಪ ನನ್ನ ಪಾಲಿಗೆ ವಿಲನ್ ಆಗಿ ಉಳಿದುಬಿಟ್ಟರು" ಎಂದು ಧಾರಾವಾಹಿಯ ಪ್ರೋಮೋ ಶುರುವಾಗುತ್ತದೆ. ತಂದೆಯ ಶ್ರಾದ್ಧ ಮಾಡುವಾಗ ಮಲ ತಂಗಿ ಬಂದು ನಮ್ಮಪ್ಪನ ಕಾರ್ಯ ಮಾಡುವುದಕ್ಕೆ ನೀನ್ಯಾರೋ? ಬದುಕಿದ್ದಾಗ ಒಂದು ದಿನಾನೂ ಬರಲಿಲ್ಲ. ಈವಾಗ ಆಸ್ತಿಗೋಸ್ಕರ ಬಂದಿದ್ದೀಯಾ ಎಂದು ಹೇಳುತ್ತಾಳೆ.
ಆಗ ನಾಯಕ "ಸತ್ತಿದ್ದು ನಮ್ಮಪ್ಪ. ಆದರೆ ನರಕ ಅನುಭವಿಸ್ತಾ ಇರೋದು ನಾನು. ಬದುಕಿದ್ದಾಗ ಅಂತೂ ನೆಮ್ಮದಿ ಕೊಡ್ಲಿಲ್ಲ. ಸತ್ ಮೇಲೇನೂ.. ನನ್ ಕುಟುಂಬ ಇದ್ರೂನೂ ನಾನು ಒಂಟಿನೇ" ಎಂದು ಹೇಳುತ್ತಾನೆ. ಆಗ ನಾಯಕಿ ಬಂದು ನನ್ನ ಕಷ್ಟಕ್ಕೆ ನೀವಿರುವಾಗ ನಿಮ್ಮ ದುಃಖದಲ್ಲಿ ನಾನು ಇರೋದಿಲ್ವಾ ಎಂದು ಹೇಳುತ್ತಾಳೆ. 'ಸ್ನೇಹದ ಕಡಲಲ್ಲಿ' ಧಾರಾವಾಹಿಯಲ್ಲಿ ನಾಯಕನ ಮಲತಂಗಿಯಾಗಿ ಇದೇ ಅಭಿಜ್ಞಾ ಭಟ್ ನಟಿಸಲಿದ್ದಾರೆ.
ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಆಕೆಯಿದ್ಜು ಆಕೆಯ ಪಾತ್ರದ ಹೆಸರೇನು ಎಂಬುದು ಇನ್ನು ಮುಂದೆ ತಿಳಿಯಬೇಕಾಗಿದೆ. ಅಂದ ಹಾಗೇ ಅಭಿಜ್ಞಾ ಭಟ್ ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗೌರಿಶಂಕರ' ಧಾರಾವಾಹಿಯಲ್ಲಿ ನಾಯಕ ಶಂಕರನ ತಂಗಿ ಐಶ್ವರ್ಯ ಆಗಿ ಅಭಿನಯಿಸುತ್ತಿದ್ದರು. ಇದೀಗ 'ಗೌರಿಶಂಕರ' ಧಾರಾವಾಹಿಯಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಅದರಲ್ಲಿ ಐಶೂ ಪಾತ್ರ ಮುಂದುವರಿಯಲಿದೆಯಾ ಎಂಬುದು ಇನ್ನು ತಿಳಿಯಬೇಕಿದೆ.
ಒಟ್ಟಿನಲ್ಲಿ ಹೊಸ ಧಾರಾವಾಹಿಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯಲಿರುವ ಅಭಿಜ್ಞಾ ಭಟ್ ಧಾರಾವಾಹಿಯ ಜೊತೆಗೆ ರಿಯಾಲಿಟಿ ಶೋವಿನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಶುರುವಾಗಿರುವ ಹೊಚ್ಚ ಹೊಸ ರಿಯಾಲಿಟಿ ಶೋ 'ಭರ್ಜರಿ ಬ್ಯಾಚುಲರ್ಸ್'ನಲ್ಲಿ ಈಕೆ ಮೆಂಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೇ ನೋಡಿದರೆ ಅಭಿಜ್ಞಾ ಭಟ್ ಅವರಿಗೆ ರಿಯಾಲಿಟಿ ಶೋ ಹೊಸದೇನಲ್ಲ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸೀಸನ್ 4'ರ ಸ್ಪರ್ಧಿಯಾಗಿ ಅಭಿಜ್ಞಾ ಭಟ್ ಕಿರುತೆರೆಗೆ ಕಾಲಿಟ್ಟಿದ್ದರು. ಮಾತ್ರವಲ್ಲ ಆ ಶೋವಿನ ಫೈನಲಿಸ್ಟ್ ಪಟ್ಟವನ್ನು ಈಕೆ ಮುಡಿಗೇರಿಸಿಕೊಂಡಿದ್ದರು. ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕುಕ್ಕು ವಿಥ್ ಕಿರಿಕ್ಕು' ರಿಯಾಲಿಟಿ ಶೋವಿನಲ್ಲಿ ಸ್ಪರ್ಧಿಯಾಗಿ ಈಕೆ ಕಾಣಿಸಿಕೊಂಡರು.
'ರಾಮಚಾರಿ' ಧಾರಾವಾಹಿಯಲ್ಲಿ ದೀಪಾಳಾಗಿ ಕಿರುತೆರೆಗೆ ಕಾಲಿಟ್ಟಿದ್ದ ಅಭಿಜ್ಞಾ ಭಟ್ ಕಾಣಿಸಿಕೊಂಡಿದ್ದು ಪೋಷಕ ಪಾತ್ರದಲ್ಲಿ ಆದರೂ ನಟನೆಯ ಮೂಲಕ ಗಮನ ಸೆಳೆದ ಬೆಡಗಿ. ನಂತರ 'ಗೌರಿಶಂಕರ' ಧಾರಾವಾಹಿಯಲ್ಲಿ ಐಶೂ ಆಗಿ ನಟಿಸಿದ ಈಕೆ ಪಕ್ಕಾ ಹಳ್ಳಿ ಹುಡುಗಿಯಾಗಿ ಕಿರುತೆರೆಯಲ್ಲಿ ಮಿಂಚಿದರು. ಜೊತೆಗೆ ಆ ಪಾತ್ರಕ್ಕಾಗಿ ಮಂಡ್ಯ ಭಾಷೆಯನ್ನು ಆಕೆ ಕಲಿತಿದ್ದರು. ಇದೀಗ 'ಸ್ನೇಹದ ಕಡಲಲ್ಲಿ' ಧಾರಾವಾಹಿಯಲ್ಲಿ ನಟಿಸುತ್ತಿರುವ ಈಕೆ ಮುಂದೊಂದು ದಿನ ಹಿರಿತೆರೆಯಲ್ಲಿ ಕಾಣಿಸಿಕೊಂಡರೆ ಅಚ್ಚರಿಯೇನಿಲ್ಲ.


Click it and Unblock the Notifications











