ತಾಯಿಯಾದ ಬಳಿಕ ಮತ್ತೆ ಕಿರುತೆರೆಗೆ ಮರಳುತ್ತಿರೋ ನಟಿ ಅದಿತಿ ಪ್ರಭುದೇವ: ಯಾವುದಾ ಶೋ?
ಕಿರುತೆರೆ ಹಾಗೂ ಹಿರಿತೆರೆ ಪ್ರೇಕ್ಷಕರಿಗಂತೂ ನಟಿ ಅದಿತಿ ಪ್ರಭುದೇವ ಚಿರಪರಿಚಿತೆ. ಒಂದು ಬಹುದೊಡ್ಡ ಬ್ರೇಕ್ ನಂತರ ಇದೀಗ ಅದಿತಿ ಪ್ರಭುದೇವ ಮತ್ತೆ ಕಿರುತೆರೆಗೆ ಕಾಲಿಡುತ್ತಿದ್ದಾರೆ. ಹೌದು 'ರಾಜ ರಾಣಿ' ಸೀಸನ್ ಮೂರರಲ್ಲಿ ನಟಿ ಅದಿತಿ ಪ್ರಭುದೇವ ಕಾಣಿಸಿಕೊಳ್ಳುತ್ತಿದ್ದಾರೆ .
ಅಂದ'ಹಾಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ರಾಜಾರಾಣಿ' ರಿಯಾಲಿಟಿ ಶೋ ಈಗಾಗಲೇ ಎರಡು ಸೀಸನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ನಟ ನಿರ್ದೇಶಕ ಸೃಜನ್ ಲೋಕೇಶ್ ನಟಿ ತಾರಾ ಹಾಗೂ ನಿರೂಪಕಿ ಅನುಪಮ ಗೌಡ ಎರಡು ಸೀಸನ್‌ನಲ್ಲಿ ಇದ್ದರು. ಇದೀಗ 'ರಾಜ ರಾಣಿ ರೀಲೋಡೆಡ್' ಎಂಬ ಶೀರ್ಷಿಕೆಯಲ್ಲಿ ಮೂರನೇ ಸೀಸನ್ ಆರಂಭವಾಗಲಿದ್ದು, ಇದರಲ್ಲಿ ಅದಿತಿ ಪ್ರಭುದೇವ ಸೇರಿಕೊಳ್ಳಲಿದ್ದಾರೆ. ಈ ವಿಚಾರವನ್ನು ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಶೇರ್ ಮಾಡಿಕೊಂಡು ಅಭಿಮಾನಿಗಳಿಗೆ ಪ್ರೇಕ್ಷಕರಿಗೆ ನಟಿ ಅದಿತಿ ಪ್ರಭುದೇವ ಸಿಹಿ ಸುದ್ದಿ ನೀಡಿದ್ದಾರೆ.

'ರಾಜರಾಣಿ' ರಿಯಾಲಿಟಿ ಶೋ ಸೆಲೆಬ್ರಿಟಿ ದಂಪತಿಗಳನ್ನು ಇಟ್ಟುಕೊಂಡು ಡಿಸೈನ್ ಮಾಡಿರುವಂತಹ ಕಾರ್ಯಕ್ರಮವಾಗಿದೆ. 'ರಾಜರಾಣಿ ಸೀಸನ್ 1'ರಲ್ಲಿ ನಟಿ ನೇಹಾ ಗೌಡ ಹಾಗೂ ಅವರ ಪತಿ ಚಂದನ್ ವಿನ್ನರ್ಸ್ ಆಗಿದ್ದರು. ಅಂತೆಯೇ ಸೀಸನ್ 2 ನಲ್ಲಿ ನಟಿ ಕಾವ್ಯಾ ಮಹದೇವ್ ಹಾಗೂ ಕುಮಾರ್ ದಂಪತಿ ಗೆದ್ದಿದ್ದರು.
ಇದರ ಬೆನ್ನಲ್ಲೇ ಇದೀಗ 'ರಾಜ ರಾಣಿ ರೀಲೋಡೆಡ್' ಎಂಬ ಶೀರ್ಷಿಕೆ, ಹಾಗೂ ಪ್ರೋಮೋದಲ್ಲೂ ಏನೋ ವಿಶೇಷತೆ ಇದೆ ಎಂದೆಲ್ಲಾ ಹೇಳಿರುವ ಈ ತಂಡ ಯಾವ ರೀತಿ ಈ ಹೊಸ ಸೀಸನ್ ಅನ್ನು ತೆರೆ ಮೇಲೆ ತರಲಿದೆ ಎಂಬುದರ ಬಗ್ಗೆ ಬಹಳಷ್ಟು ಜನರಿಗೆ ಈಗಾಗಲೇ ಕುತೂಹಲಗಳಿವೆ. ಅದೇನೇ ಇರಲಿ ನಟಿ ಅದಿತಿ ಪ್ರಭುದೇವ ಈ ಮೂಲಕ ಕಿರುತೆರೆಗೆ ವಾಪಸ್ ಆಗುತ್ತಿರುವುದಂತೂ ಪ್ರೇಕ್ಷಕರಿಗೆ ಅಭಿಮಾನಿಗಳಿಗೆ ಬಹಳಷ್ಟು ಸಂತಸ ತಂದಿದೆ.
ನಟಿ ಅದಿತಿ ಪ್ರಭುದೇವ ನಾಗಕನ್ನಿಕೆ ಧಾರಾವಾಹಿಯಿಂದ ನಟನೆಯಲ್ಲಿ ಹೆಚ್ಚು ಹೆಸರು ಮಾಡಿದರು ನಂತರ 'ಸಿಂಗಂ', 'ಓಲ್ಡ್ ಮಾಂಕ್', 'ರಂಗನಾಯಕಿ', 'ತೋತಾಪುರಿ', 'ಲವ್ ಯು ಅಭಿ', ಸೇರಿದಂತೆ ಹಲವಾರು ಸಿನಿಮಾಗಳ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ.

ಯಶಸ್ ಪಟ್ಲ ಎಂಬುವವರನ್ನು ಮದುವೆಯಾದ ಇವರು ನಂತರ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ದೈನಂದಿನ ವಿಚಾರಗಳೊಂದಿಗೆ, ಗಿಡಗಳ ಬಗ್ಗೆ, ಅಡುಗೆ ಕುರಿತು ಜೊತೆಗೆ ಪೌಷ್ಟಿಕ ಆಹಾರ ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ವಿಚಾರಗಳ ಕುರಿತು ವಿಡಿಯೋ ಹಾಗೂ ರೀಲ್ಸ್ ಮಾಡಿ ಜನರಿಗೆ ಹತ್ತಿರವಾಗಿದ್ದಾರೆ. ಇತ್ತೀಚೆಗೆ ಅವರ ಸೀಮಂತದ ಸಮಯದಲ್ಲಿನ ಒಂದು ವಿಡಿಯೋ ಬಹಳ ವೈರಲ್ ಆಗಿತ್ತು.
ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಪ್ರಭುದೇವ ತಮ್ಮ ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನಕ್ಕೆ ಹೆಚ್ಚು ಸಮಯ ಮೀಸಲಿಟ್ಟಿದ್ದರು. ಇದೀಗ ಮತ್ತೆ ವೃತ್ತಿ ಜೀವನ ನಡೆಗೆ ಹೆಚ್ಚು ಫೋಕಸ್ ಮಾಡಿರುವ ಇವರು 'ರಾಜ ರಾಣಿ ರೀಲೋಡ್' ಸೀಸನ್ ಮೂಲಕ ಕಿರುತೆರೆ ಗೆ ವಾಪಸ್ ಆಗುತ್ತಿದ್ದಾರೆ. ಇನ್ನೇನು ಸದ್ಯದಲ್ಲೇ ಈ ಹೊಸ ಸೀಸನ್ ಶುರುವಾಗಲಿದ್ದು ಅದಿತಿ ಪ್ರಭುದೇವ ಅವರು ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಈಗ ಕುತೂಹಲ.


Click it and Unblock the Notifications











