ಐಂದ್ರಿತಾಗೆ ಕನ್ನಡ ಕಲಿಸಲು ಪಣ ತೊಟ್ಟ ನವರಸ ನಾಯಕ
'ಇದು ಅಮ್ಮಂದಿರ ಅಡ್ಡಾ" ಎಂಬ ಅಡಿಬರಹದಲ್ಲಿ ಮೂಡಿಬರುತ್ತಿರುವ ವಿಭಿನ್ನ ರಿಯಾಲಿಟಿ ಶೋ 'ಸೈ ಟು ಡ್ಯಾನ್ಸ್' ಇದೇ ವಾರದಿಂದ ರಂಗೇರಲಿದೆ. ಅಕ್ಟೋಬರ್ 31 ಹಾಗೂ ನವೆಂಬರ್ 1 ರಿಂದ ಶನಿವಾರ ಮತ್ತು ಭಾನುವಾರ ನಿಮ್ಮ ನೆಚ್ಚಿನ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಈಗಾಗಲೇ ಅಡಿಶನ್ ಮುಗಿಸಿರುವ 10 ಜನ ಅಮ್ಮಂದಿರು ವೇದಿಕೆಯಲ್ಲಿ ಕುಣಿಯಲು ಸಿದ್ದವಾಗಿ ನಿಂತಿದ್ದಾರೆ. ಈ ಅಮೋಘ ರಿಯಾಲಿಟಿ ಶೋ ಗೆ ನಟ ಜಗ್ಗೇಶ್ ಹಾಗೂ ನಟಿ ಐಂದ್ರಿತಾ ರೇ ಅವರು ಜಡ್ಜ್ ಆಗಿ ಆಗಮಿಸಿದ್ದಾರೆ.

ಅದ್ರಲ್ಲೂ ನವರಸ ನಾಯಕ ಜಗ್ಗೇಶ್ ಅವರ ಎಂಟ್ರಿ ಅಂತೂ ಸಖತ್ ಡಿಫರೆಂಟ್ ಆಗಿತ್ತು. 'ಬ್ಯಾಕ್ ಸ್ಟೇಜ್ ನಲ್ಲಿದ್ದ ನನ್ನನ್ನು ತುಂಬಾ ಜನ ನೋಡಿ ಗೇಲಿ ಮಾಡುತ್ತಿದ್ದರು. ಆದರೆ ಅದ್ಯಾವುದೇ ಮಾತಿಗೆ ಧೃತಿಗೆಡದೆ ಛಲದಂಕಮಲ್ಲನಂತೆ ಮುಂದೆ ಬಂದಿದ್ದೇನೆ. ಆ ಛಲವೇ ನನ್ನನ್ನ ಕಾಪಾಡಿದೆ ಎಂದು ತಮ್ಮ ಮನದಾಳದ ಮಾತನ್ನು ಜಗ್ಗೇಶ್ ಅವರು 'ಸೈ ಟು ಡಾನ್ಸ್' ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.[ಸುವರ್ಣ ವಾಹಿನಿಯಲ್ಲಿ ಅಮ್ಮಂದಿರಿಗಾಗಿ 'ಸೈ ಟು ಡ್ಯಾನ್ಸ್']
ಅಲ್ಲದೇ ನಾವು ಯಾವುದೇ ರೀತಿಯ ಕೆಲಸವನ್ನು ಮಾಡಲಿ ಮೊದಲಿಗೆ ನಮಗೆ ನಮ್ಮ ಮೇಲೆ ನಂಬಿಕೆ ಇರಬೇಕು, ಹಾಗೆ ನಮ್ಮ ಮೇಲೆ ವಿಶ್ವಾಸ ಇರಬೇಕು ಆವಾಗ ಮಾತ್ರ ನಾವು ಜಯಶಾಲಿಗಳಾಗುತ್ತೇವೆ ಎಂದು ಜಗ್ಗೇಶ್ ಅವರು 10 ಸ್ಪರ್ಧಿಗಳಿಗೂ ಕಿವಿ ಮಾತು ಹೇಳಿದ್ದಾರೆ.

'ಸೈ ಟು ಡಾನ್ಸ್' ವೇದಿಕೆಯಲ್ಲಿ ವರನಟ ಡಾ.ರಾಜ್ ಅವರನ್ನು ನೆನೆಸಿಕೊಂಡ ನಟ ಜಗ್ಗೇಶ್, 'ಅವರ ಆದರ್ಶವೇ ನನ್ನ ಉನ್ನತಿಗೆ ಮಾರ್ಗದರ್ಶನವಾಗಿದೆ', ಎಂದು ನುಡಿದರು. ಅಮ್ಮಂದಿರು ನೀಡಿದ ಪ್ರತಿಯೊಂದು ಪರ್ಫಾಮೆನ್ಸ್ ಗೆ ತಮ್ಮ ಮಿಮಿಕ್ರಿ ಶೈಲಿಯಲ್ಲಿ ಉತ್ತರ ನೀಡಿ, "ಐತಲಕಡಿ ಪಕಡಿ ಜುಮ್ಮಾ' ಎಂಬ ಹಾಡಿಗೆ ಹೆಜ್ಜೆ ಹಾಕಿದ ನವರಸ ನಾಯಕ ನೆರೆದಿದ್ದ ಎಲ್ಲರನ್ನು ರಂಜಿಸಿದ್ದಾರೆ.
ಜೊತೆಗೆ 'ಸೈ ಟು ಡಾನ್ಸ್' ಸೀಸನ್ ಫಿನಾಲೆ ಕೊನೆಗೊಳ್ಳುವ ಮುಂಚೆ ನಟಿ ಐಂದ್ರಿತಾ ರೈ ಅವರಿಗೆ ಸಂಪೂರ್ಣ ಕನ್ನಡ ಕಲಿಸಿ ಕೊಡುತ್ತೇನೆ ಎಂದು ಕನ್ನಡ ಪ್ರೇಮಿಯಾದ ನಟ ಜಗ್ಗೇಶ್ ಅವರು ಪಣತೊಟ್ಟಿದ್ದಾರೆ. ಹಾಗಾದ್ರೆ ಇನ್ನು ಮುಂದೆ ಐಂದ್ರಿತಾ ಅವರಿಗೆ ಜಗ್ಗೇಶ್ ಅವರು ಕನ್ನಡ ಶಿಕ್ಷಕರು ಅಂತಾಯ್ತು.


Click it and Unblock the Notifications











