Muddumanigalu: ಭೂಮಿ ಪಾತ್ರ ನನ್ನ ಜೀವನಕ್ಕೆ ಹತ್ತಿರವಾದ ಪಾತ್ರ ಎಂದ ನಟಿ ಐಶ್ವರ್ಯಾ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮುದ್ದುಮಣಿಗಳು' ಧಾರಾವಾಹಿಯಲ್ಲಿ ನಾಯಕಿ ಮುದ್ದುಲಕ್ಷ್ಮಿ ಮಗಳು ಭೂಮಿಯಾಗಿ ಅಭಿನಯಿಸುತ್ತಿರುವ ಐಶ್ವರ್ಯಾ ಮನೋಜ್ಞ ನಟನೆಯ ಮೂಲಕ ಸೀರಿಯಲ್ ವೀಕ್ಷಕರ ಮನ ಸೆಳೆದ ಚೆಂದುಳ್ಳಿ ಚೆಲುವೆ. ಕನ್ನಡದ ಜೊತೆಗೆ ಪರಭಾಷೆಯ ಕಿರುತೆರೆಯಲ್ಲಿಯೂ ಅಭಿನಯಿಸುತ್ತಿರುವ ಐಶ್ವರ್ಯಾಗೆ ಏಕಕಾಲದಲ್ಲಿ ತೆಲುಗು ಹಾಗೂ ಕನ್ನಡದಲ್ಲಿ ಅವಕಾಶ ಅಭಿನಯಿಸುವ ಅವಕಾಶ ಸಿಕ್ಕಾಗ ಸಹಜವಾಗಿ ಖುಷಿಯಾಗಿತ್ತಂತೆ.
ಮಾತ್ರವಲ್ಲ ಏಕಕಾಲಕ್ಕೆ ಎರಡು ಭಾಷೆಯ ಕಿರುತೆರೆಯನ್ನು ನಿಭಾಯಿಸುವುದು ಹೇಗೆ ಎಂಬುದು ಒಂದು ಗೊಂದಲವಿದ್ದೇ ಇತ್ತಂತೆ. ಆದರೂ ಮಾತೃಭಾಷೆಯಲ್ಲಿ ಅವಕಾಶ ಸಿಕ್ಕಾಗ ಬಿಡಲು ಮನಸಾಗದೆ ಎರಡನ್ನು ಮ್ಯಾನೇಜ್ ಮಾಡುವುದಾಗಿ ಪಣತೊಟ್ಟು ಇದೀಗ ತೆಲುಗು ಹಾಗೂ ಕನ್ನಡ ಕಿರುತೆರೆ ಎರಡರಲ್ಲೂ ಜನಪ್ರಿಯತೆ ಪಡೆದುಕೊಂಡಿದ್ದಾರೆ ನಟಿ ಐಶ್ವರ್ಯಾ.
ಭೂಮಿ ನನ್ನ ಜೀವನಕ್ಕೆ ಹತ್ತಿರವಾದ ಪಾತ್ರ
'ಮುದ್ದುಮಣಿಗಳು' ಧಾರಾವಾಹಿಯ ತಮ್ಮ ಭೂಮಿ ಪಾತ್ರದ ಬಗ್ಗೆ ಮಾತನಾಡಿದ್ದ ಈಕೆ ಸದಾ ಖುಷಿ ಖುಷಿಯಿಂದ ಲವಲವಿಕೆಯಿಂದ ಇರುವ ಈ ಪಾತ್ರ ಬಹಳ ವಿಶೇಷವಾಗಿದೆ. ಭೂಮಿ ಪಾತ್ರಕ್ಕೆ ಧಾರಾವಾಹಿಯಲ್ಲಿ ಒಬ್ಬಳು ಅಕ್ಕ ಇದ್ದಾಳೆ.
ಸದಾ ತಂಗಿಯ ಯೋಗಕ್ಷೇಮ ಖುಷಿಯನ್ನೇ ಬಯಸುವ ಆ ಅಕ್ಕನ ಪಾತ್ರ ಜೊತೆಗೆ ಭೂಮಿ ಹಾಗೂ ಅವಳಕ್ಕನ ಬಾಂಧವ್ಯ ನನಗೆ ಬಹಳ ಹಿಡಿಸಿತು. ಅಂತೆಯೇ ನನಗೆ ನಿಜ ಜೀವನದಲ್ಲೂ ಒಬ್ಬರು ಅಕ್ಕ ಇದ್ದಾರೆ. ನನಗೂ ಅವರಿಗೂ ಒಂದೊಳ್ಳೆಯ ಬಾಂಧವ್ಯವಿದೆ. ಎಲ್ಲ ಕಾರಣಗಳಿಗೆ ನನಗೆ ಈ ಪಾತ್ರ ಬಹಳ ಹತ್ತಿರವಾಗಿದೆ ಎಂದಿದ್ದರು.

ಸದ್ಯಕ್ಕಂತೂ 'ಮುದ್ದುಮಣಿಗಳು' ಧಾರಾವಾಹಿ ಬಹಳಷ್ಟು ಟ್ವಿಸ್ಟ್ ಪಡೆದುಕೊಂಡು ಪ್ರೇಕ್ಷಕರ ಕುತೂಹಲ ಕೆರಳಿಸಿದೆ. ಮುದ್ದುಲಕ್ಷ್ಮಿ ಜಾಹ್ನವಿಯಾಗಿ ಮರುಜನ್ಮ ಪಡೆದಿದ್ದು ಇದು ಪ್ರೇಕ್ಷಕರಿಗೂ ಧಾರಾವಾಹಿ ಪಾತ್ರಗಳ ನಡುವೆಯೂ ಬಹಳ ಭಾವನಾತ್ಮಕ ಸಂಬಂಧವನ್ನು ಬೆಸೆದಿದೆ ಎಂದರೆ ತಪ್ಪಾಗಲಾರದು.
ವೀಕ್ಷಕರು ಕೂಡಾ ಮೆಚ್ಚಿಕೊಂಡಿದ್ದಾರೆ
'ಮುದ್ದು ಮಣಿಗಳು' ಧಾರಾವಾಹಿಗೆ ಈ ರೀತಿಯ ಒಂದು ಟ್ವಿಸ್ಟ್ ಬೇಕಿತ್ತು. ಇದೀಗ ಪ್ರೇಕ್ಷಕರಿಗೂ ಪಾತ್ರಗಳಿಗೂ ಒಂದೊಳ್ಳೆಯ ಬೆಸುಗೆ ಬೆಸೆದಿದೆ. ತಾಯಿ ಮಕ್ಕಳ ಬಾಂಧವ್ಯದ ಬಗ್ಗೆಯೂ ಅದ್ಭುತವಾಗಿ ಕಥೆ ತೋರಿಸಿಕೊಡುತ್ತಾ ಬಂದಿದೆ. ಸೀರಿಯಲ್ ವೀಕ್ಷಕರು ಕೂಡಾ ಅಷ್ಟೇ.. ಈ ಮುಂದುವರಿದ ಅಧ್ಯಾಯವನ್ನು ಮನಸಾರೆ ಮೆಚ್ಚಿಕೊಂಡಿದ್ದಾರೆ.

ಇಂದು ನಾನು ಹೊರಗೆ ಹೋದಾಗ ಎಷ್ಟೋ ಜನರು ನನ್ನನ್ನು ನಿಜವಾಗಿಯೂ ಭೂಮಿ ಎಂದುಕೊಂಡು ಮಾತನಾಡುತ್ತಾರೆ. ಮಾತ್ರವಲ್ಲ ಜೊತೆಗೆ ನನ್ನ ಕಷ್ಟ ಕಂಡಿರುವ ಅವರು ಸಂತೈಸಿದ್ದಾರೆ. ಈ ಎಲ್ಲಾ ವಿಚಾರಗಳು ನನಗಿನ್ನಷ್ಟು ಖುಷಿಕೊಡುತ್ತದೆ ಎಂದು ಹೇಳಿಕೊಂಡಿದ್ದರು ಐಶ್ವರ್ಯಾ.


Click it and Unblock the Notifications











