ನಾಗಿಣಿ ವಿಲನ್ ಐಶ್ವರ್ಯ ಸಿಂಧೋಗಿ ಬಗ್ಗೆ ನಿಮಗೆಷ್ಟು ಗೊತ್ತು!
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಚಂದನವನದ ಉದಯೋನ್ಮುಖ ಪ್ರತಿಭೆ ಐಶ್ವರ್ಯ ಸಿಂಧೋಗಿ ಹೊಟೇಲ್ ಮ್ಯಾನೇಜಮೆಂಟ್‌ನಲ್ಲಿ ಪದವಿ ಪಡೆದಿದ್ದಾರೆ. ಅಮೇರಿಕದ ಅಮೇರಿಕನ್ ಕ್ಲಬ್ ನಲ್ಲಿ ಇಂಟರ್ನ್‌ಶಿಪ್ ಮುಗಿಸಿದ್ದಾರೆ. ಚಿತ್ರರಂಗಕ್ಕೆ ಬಂದ ಮೇಲೆ ಸಿನಿಮಾ ಧಾರಾವಾಹಿಗಳಲ್ಲಿ ಬ್ಯುಸಿಯಾದರು.
'ನಾಗಿಣಿ 2' ಧಾರಾವಾಹಿಯಲ್ಲಿ ಮಾಯಾಂಗನೆ ಪಾತ್ರದಲ್ಲಿ ಮಿಂಚಿದ ಐಶ್ವರ್ಯ ಹೆಸರಿಗೆ ತಕ್ಕಂತೆ ಸೌಂದರ್ಯದ ಐಶ್ವರ್ಯವನ್ನೇ ಹೊದ್ದುಕೊಂಡಿದ್ದಾರೆ. ಮುದ್ದಾಗಿ ಕಾಣುವ ಈ ಚೆಲುವೆ ಫಿದಾ ಆಗದ ಅಭಿಮಾನಿಗಳಿಲ್ಲ. ಈಕೆಯ ವಿಲನ್ ಪಾತ್ರಕ್ಕೆ ಅಭಿಮಾನಿಗಳಿದ್ದಾರೆ.
ಐಶ್ವರ್ಯ ಕೇವಲ ಧಾರಾವಾಹಿಗಳಲ್ಲಿ ಮಾತ್ರವಲ್ಲದೇ, ಸಿನಿಮಾಗಳಲ್ಲಿ ಹಾಗೂ ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದಾರೆ. ಆಗಾಗ ಡಿಫರೆಂಟ್ ಉಡುಗೆಗಳಲ್ಲಿ ಫೋಟೋಶೂಟ್ ಮಾಡಿಸುತ್ತಿರುತ್ತಾರೆ.
ಹಾಕಿ ಆಟಗಾರ್ತಿಯಾಗಿದ್ದ ಐಶ್ವರ್ಯ!
ಐಶ್ವರ್ಯ ಸಿಂಧೋಗಿ ಶಾಲಾ ಕಾಲೇಜು ದಿನಗಳಿಂದಲೂ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದರು. ರಾಜ್ಯಮಟ್ಟದ ಹಾಕಿ ಆಟಗಾರ್ತಿಯಾಗಿದ್ದರು. ಹೆಚ್ಚು ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದ ಐಶ್ವರ್ಯ ಇದರ ಜೊತೆಗೆ ಬೇರೆ ಬೇರೆ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು. ಶಾಲಾ ದಿನಗಳಲ್ಲಿ ನೃತ್ಯ ಕೂಡ ಕಲಿಯುತ್ತಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಐಶ್ವರ್ಯ ಡ್ಯಾನ್ಸ್ ಕ್ಲಾಸ್ ಅನ್ನು ಕೈ ಬಿಡಬೇಕಾಯ್ತು. ಫ್ಯಾಷನ್ ಶೋಗಳಲ್ಲೂ ಭಾಗವಹಿಸುತ್ತಿದ್ದರು. ಹೀಗಾಗಿಯೇ ಐಶ್ವರ್ಯ ಅವರು ನಟನೆಗೆ ಎಂಟ್ರಿಕೊಟ್ಟರು.
ಹಲವು ಸಿನಿಮಾಗಳಲ್ಲಿ ಐಶ್ವರ್ಯ ಅಭಿನಯ!
ಐಶ್ವರ್ಯ ಸಿಂಧೋಗಿ ನಟನೆಗೆ ಬಂದಿದ್ದು, ಸಿನಿಮಾ ನಾಯಕಿಯಾಗಿ. ಸೃಜನ್ ಲೋಕೇಶ್ ಅವರ ನಟನೆಯ ಸಿನಿಮಾ 'ಸಪ್ನೋಂಕಿ ರಾಣಿ' ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಇದಾದ ಮೇಲೆ 'ಸಿಂಹಾದ್ರಿ', 'ಮಟಾಷ್', 'ಸಂಯುಕ್ತ 2' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಐಶ್ವರ್ಯ ಸಿಂಧೋಗಿ ಅರ್ಜುನ್ ಗೌಡ ನಾಯಕನಾಗಿ ನಟಿಸಿರುವ 'ಡಾರ್ಕ್ ಕಾಮಿಡಿ' ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಶೂಟಿಂಗ್ ಮುಗಿದಿದ್ದು, ಬಿಡುಗಡೆಗೆ ಸಿದ್ಧವಾಗಿವೆ. ಇನ್ನು ಇದರ ಜೊತೆಗೆ ಲೋಹಿತ್ ನಿರ್ದೇಶನದ ಹಾರಾರ್ ಚಿತ್ರದಲ್ಲೂ ಐಶ್ವರ್ಯ ಅವರು ನಟಿಸಿದ್ದಾರೆ. 'ಸೈತಾನ್' ಚಿತ್ರದ ಶೂಟಿಂಗ್ ಕೂಡ ಮುಗಿದಿದ್ದು, ಉಳಿದ ಕೆಲಸಗಳು ಬಾಕಿ ಇವೆ ಎಂದು ಹೇಳಿದ್ದರು.

ಕಿರುತೆರೆಯಲ್ಲಿ ಕಮಾಲ್!
ಸಿನಿಮಾ ಲೋಕದಿಂದ ಐಶ್ವರ್ಯ ಕಿರುತೆರೆಗೆ ಎಂಟ್ರಿ ಕೊಟ್ಟರು. ಅವರ ಮೊದಲ ಧಾರಾವಾಹಿಯೇ ನಾಗಿಣಿ 2. ಈ ಧಾರಾವಾಹಿಯಲ್ಲಿ ಮಾಯಾಂಗನೆ ಪಾತ್ರದಲ್ಲಿ ಕಾಣಿಸಿಕೊಂಡರು. ವಿಲನ್ ಪಾತ್ರವಾದರೂ ಜನ ಐಶ್ವರ್ಯ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ಅಥಿತಿ ಪಾತ್ರದಲ್ಲಿ ನಟಿಸುವುದಕ್ಕಾಗಿ ಬಂದ ಮಾಯಾಂಗನೆ ಜನ ಮೆಚ್ಚಿಕೊಂಡ ಕಾರಣ ಧಾರಾವಾಹಿಯಲ್ಲಿ ಮುಂದುವರೆಯುತ್ತಿದ್ದಾರೆ. ಸುಮಾರು ಹತ್ತು ತಿಂಗಳ ಕಾಲ ಪಾತ್ರ ನಿರ್ವಹಿಸಿದ್ದಾರೆ. ಮತ್ತೆ ಮಾಯಾಂಗನೆ ಪಾತ್ರವನ್ನು ಧಾರಾವಾಹಿಯಲ್ಲಿ ಕರೆತರಲಾಯ್ತು. ಇನ್ನು ಇದಾದ ಬಳಿಕ ಐಶ್ವರ್ಯ ತನಿಷಾ ಹಾಗೂ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸಿದ್ದಾರೆ.
ಐಶ್ವರ್ಯ ಹೊಸ ಲುಕ್!
ಸಿನಿಮಾಗಳ ಜೊತೆಗೆ ಕಿರುತೆರೆಯಲ್ಲೂ ಸಕ್ರಿಯರಾಗಿರುವ ಐಶ್ವರ್ಯ ಸಿಂಧೋಗಿ, ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು. ಡ್ಯಾನ್ಸಿಂಗ್ ಚಾಂಪಿಯನ್ ಶಿಪ್ ರಿಯಾಲಿಟಿ ಶೋನಲ್ಲಿ ಕುಣಿದು ಸೈ ಎನಿಸಿಕೊಂಡಿದ್ದರು. ಡಿಫರೆಂಟ್ ಆಗಿ ಕಾಸ್ಟ್ಯೂಂ ಗಳನ್ನು ಧರಿಸುವ ಐಶ್ವರ್ಯ ಅವರು, ಆಗಾಗ ಫೋಟೋಶೂಟ್ ಮಾಡಿಸುತ್ತಿರುತ್ತಾರೆ. ಕಾಶ್ಮಿರೀ ಸ್ಟೈಲ್ ನಿಂದ ಹಿಡಿದು ದೇವಿ ಅವತಾರದಲ್ಲೂ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.


Click it and Unblock the Notifications











