ಪ್ರಪ್ರಥಮ ಬಾರಿಗೆ ಕನ್ನಡದ ರಿಯಾಲಿಟಿ ಶೋ ನಲ್ಲಿ ಕಾಣಿಸಿಕೊಂಡಿರುವ ನಟಿ ಅಮೂಲ್ಯ ಗೌಡ
ಕನ್ನಡದ ಮಲ್ಟಿ ಟ್ಯಾಲೆಂಟೆಡ್ ನಟಿ, ಮಾಡೆಲ್, ಟ್ರಾಕ್ ಸಿಂಗರ್ ಹಾಗೂ ನಿರೂಪಕಿ ಅಮೂಲ್ಯ ಗೌಡ ಪ್ರಪ್ರಥಮ ಬಾರಿಗೆ ರಿಯಾಲಿಟಿ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು! ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ರಿಯಾಲಿಟಿ ಶೋ 'ಭರ್ಜರಿ ಬ್ಯಾಚುಲರ್'ನಲ್ಲಿ ಕಾಣಿಸಿಕೊಂಡಿರುವ ನಟಿ ಅಮೂಲ್ಯ ಗೌಡ ಅವರು ತಮ್ಮ ಟ್ಯಾಲೆಂಟ್ ಅನ್ನು ಪ್ರದರ್ಶಿಸಲು ಮುಂದಾಗಿದ್ದಾರೆ.
'ಭರ್ಜರಿ ಬ್ಯಾಚುಲರ್' ರಿಯಾಲಿಟಿ ಶೋ ಪ್ರೀಮಿಯರ್ ಆದ ನಂತರ ಮುಂದಿನ ಸಂಚಿಕೆಯಲ್ಲಿ ಸರ್ಪ್ರೈಸ್ ಆಗಿ ಶೋಗೆ ಎಂಟ್ರಿ ನೀಡಿರುವ ಅಮೂಲ್ಯ ಗೌಡ ಇದೇ ಮೊದಲ ಬಾರಿಗೆ ರಿಯಾಲಿಟಿ ಶೋ ಒಂದರ ಭಾಗವಾಗುತ್ತಿದ್ದಾರೆ.

ಅಮೂಲ್ಯ ಗೌಡ ಮೊದಲ ರಿಯಾಲಿಟಿ ಶೋ
ಎಲ್ಲವೂ ಕ್ಷಣಮಾತ್ರದಲ್ಲಿ ಆದಂತಾಯಿತು ಎನ್ನುತ್ತಾರೆ ಅಮೂಲ್ಯ ಗೌಡ. ಮೊದಲಿಗೆ ಟೀಮ್‌ನೊಂದಿಗೆ ಅಮೂಲ್ಯ ಗೌಡ ಮೀಟಿಂಗ್ ಇತ್ತು. ಅದಾದ ನಂತರ ಅವರು ಭರ್ಜರಿ ಬ್ಯಾಚುಲರ್‌ಗೆ ಆಯ್ಕೆಯಾದರು. ಆ ಬಳಿಕವಷ್ಟೇ ಶೂಟಿಂಗ್‌ನಲ್ಲಿ ಭಾಗವಹಿಸಿದರು. ಆಕೆಯದು ಈ ಶೋಗೆ ಸರ್ಪ್ರೈಸ್ ಎಂಟ್ರಿ. ಇದು ಅಮೂಲ್ಯ ಕೆರಿಯರ್‌ನ ಮೊದಲ ರಿಯಾಲಿಟಿ ಶೋ ಆದ್ದರಿಂದ ಬಹಳಷ್ಟು ಹಿಂಜರಿಕೆಯೂ ಮನದಲ್ಲಿತ್ತು. ಮಾತ್ರವಲ್ಲದೇ ಆಕೆ ತನ್ನ ಎಂಟ್ರಿಗಾಗಿ ಗಂಟೆಗಳ ಕಾಲ ಕ್ಯಾನ್ವಾಸ್ ನಲ್ಲಿ ಕೂತು ಕಾದಿದ್ದರು.
ಅಮೂಲ್ಯ ಗೌಡ ಎಂಟ್ರಿ ಸಖತ್
ಸಂತಸದ ಸಂಗತಿ ಎಂದರೆ, ಅಮೂಲ್ಯ ಎಂಟ್ರಿ ಬಂದಾಗ ಬಹಳಷ್ಟು ವಿಶೇಷವಾಗಿ ತಂಡ ಅದನ್ನು ನಿಯೋಜಿಸಿತ್ತು. ಒಂದು ಹಾರ್ಟ್ ಶೇಪಿನ ಬಲೂನಿನ ಒಳಗೆ ಆಕೆ ಎಂಟ್ರಿ ಕೊಟ್ಟರು. ಇದು ಬಹಳಷ್ಟು ಅನಿರೀಕ್ಷಿತವಾದ್ದರಿಂದ 'ಭರ್ಜರಿ ಬ್ಯಾಚುಲರ್' ಕಾರ್ಯಕ್ರಮದ ಇತರೆ ಕಂಟೆಸ್ಟೆಂಟ್‌ಗಳಿಗೂ ಹಾಗೂ ವೀಕ್ಷಕರಿಗೂ ತುಂಬಾ ದೊಡ್ಡ ಸರ್ಪ್ರೈಸ್ ಆಗಿತ್ತು.
ನವಾಜ್ ಶ್ರದ್ಧೆ ಇರುವ ನಟ
ನವಾಜ್ ತುಂಬಾ ಒಳ್ಳೆಯ ಹುಡುಗ, ಶ್ರದ್ಧೆ ಇರುವ ನಟ ಎಂಬುದು ಅಮೂಲ್ಯ ಅವರ ಮಾತು. ನವಾಜ್ ಅವರನ್ನು ಇತ್ತೀಚೆಗೆ ಒಂದು ಒಂದು ರೆಡ್ ಕಾರ್ಪೆಟ್ ಇವೆಂಟ್‌ನಲ್ಲಿ ಅಮೂಲ್ಯ ಭೇಟಿಯಾಗಿದ್ದರು. ಅದಾದ ಮೇಲೆ ಈ ಶೋನಲ್ಲಿ ನವಾಜ್ ಮೆಂಟರ್ ಆಗಿ ಸಿಕ್ಕಿರುವುದು ಅಮೂಲ್ಯಗೆ ಬಹಳ ಖುಷಿ ತಂದಿದೆಯಂತೆ. ನವಾಜ್ ಕಲಿಕೆಯಲ್ಲಿ ತುಂಬಾ ಡೆಡಿಕೇಟೆಡ್ ಆಗಿದ್ದು ಅವರ ಸೆನ್ಸ್ ಆಫ್ ಹ್ಯೂಮರ್ ಕೂಡಾ ಅಮೂಲ್ಯ ಗೌಡಗೆ ಹಿಡಿಸಿದೆಯಂತೆ.
ನಾನು ಏನೆಂದು ತೋರಿಸಲು ಒಂದು ಅವಕಾಶ
ಬೆರಳೆಣಿಕೆ ಧಾರಾವಾಹಿಗಳಲ್ಲಿ ನಟಿಸಿರುವ ಅಮೂಲ್ಯ ಗೌಡರನ್ನು ಜನ ಇಲ್ಲಿಯ ತನಕ ಬೇರೆ ಬೇರೆ ಪಾತ್ರಗಳಲ್ಲಿ ನೋಡಿರುತ್ತಾರೆ. ಆದರೆ ಇದೇ ಮೊದಲ ಬಾರಿಗೆ ಜನರಿಗೆ ಅಮೂಲ್ಯಳನ್ನು ನೈಜವಾಗಿ ನೋಡುವ ಅವಕಾಶ ಕಿರುತೆರೆ ನೀಡಿದೆ. ಮಾತ್ರವಲ್ಲದೇ ಇಲ್ಲಿಯ ತನಕ ಬೇರೆ ವೇರೆ ರೀತಿಯ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಅಮೂಲ್ಯಗೆ ತನ್ನ ಪ್ರತಿಭೆ ಏನು ಎಂಬುದನ್ನು ಜನರಿಗೆ ತಿಳಿಸುವ ಆಸೆಯಿತ್ತು. ಅದಕ್ಕೆ ಇದೀಗ ಅವಕಾಶ ದೊರಕಿದೆ.
ಅಮೂಲ್ಯ ಆಗಿ ಜನ ಗುರುತಿಸಲಿದ್ದಾರೆ
ಯಾವುದೇ ಕಲಾವಿದನಿಗೆ ಆತನ ಕಲೆಗೆ ಸರಿಯಾದ ಬೆಲೆ ಹಾಗೂ ವೇದಿಕೆ ಸಿಕ್ಕಾಗ ಬಹಳಷ್ಟು ತೃಪ್ತಿ ದೊರೆಯುತ್ತದೆ. ಅಮೂಲ್ಯ ಗೌಡಗೂ ಅಷ್ಟೇ. ಈ ರೀತಿ ಹೊಸ ರಿಯಾಲಿಟಿ ಶೋ ಅಲ್ಲಿ ಬಂದಿರುವುದು ಆಕೆಗಂತೂ ಸಕತ್ ಖುಷಿ ಕೊಟ್ಟಿದೆಯಂತೆ. ಇದುವರೆಗೂ ಜನ ಆಕೆಯನ್ನು 'ನನ್ನರಸಿ ರಾಧೆ' ಧಾರಾವಾಹಿ ಅಶ್ವಿನಿ ಎಂದೇ ಗುರುತಿಸುತ್ತಿದ್ದರು. ಈ ರೀತಿ ಆಕೆ ಆ ಪಾತ್ರಕ್ಕೆ ಬಹಳಷ್ಟು ನ್ಯಾಯ ದೊರಕಿಸಿದ್ದಾರೆ ಎಂಬ ಖುಷಿ ಆಕೆಗಿತ್ತು. ಇದೀಗ ಅಮೂಲ್ಯ ಗೌಡ ಆಗಿಯೂ ಜನರು ಗುರುತಿಸುವ ಕಾಲ ಬಂದಿದೆ.


Click it and Unblock the Notifications











