"ಈವೆಂಟ್ ಬಳಿಕ ಓನರ್ ಜೊತೆ ಡಿನ್ನರ್‌ಗೆ ಬಂದ್ರೆ, ಹೆಚ್ಚು ಹಣ ಕೊಡ್ತಾರೆ ಅಂದ್ರು": ಕಹಿ ಅನುಭವ ಬಿಚ್ಚಿಟ್ಟ ಅನುಪಮಾ ಗೌಡ
ನಟಿ, ನಿರೂಪಕಿ ಅನುಪಮಾ ಗೌಡ ಕನ್ನಡ ಸಿನಿರಸಿಕರಿಗೆ ಚಿರಪರಿಚಿತ ಹೆಸರು. ನಟಿಯಾಗುವ ಆಸೆಯಿಂದ ಬಂದ ಅನುಪಮಾ ನಿರೂಪಕಿಯಾಗಿ ಗಮನ ಸೆಳೆದರು. ಇವತ್ತಿಗೂ ಆಕೆಗೆ ಒಳ್ಳೆ ನಟಿಯಾಗಬೇಕು ಎನ್ನುವ ತುಡಿತ ಇದೆ. ಮೂರ್ನಾಲ್ಕು ಧಾರಾವಾಹಿಗಳಲ್ಲಿ ನಟಿಸಿರುವ ಆಕೆಗೆ ಕೆಲ ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ.
ಚಿತ್ರರಂಗದಲ್ಲಿರುವ ಕಾಸ್ಟಿಂಗ್ ಕೌಚ್ ಎನ್ನುವ ಹೀನ ಸಂಸ್ಕೃತಿ ಬಗ್ಗೆ ಸಾಕಷ್ಟು ನಟ, ನಟಿಯರು ಮಾತನಾಡಿದ್ದಾರೆ. ನಟಿಯರಿಗೆ ಈ ರೀತಿಯ ಕಹಿ ಅನುಭವ ಹೆಚ್ಚಾಗಿ ಆಗಿರುತ್ತದೆ. ಇದನ್ನು ಕೆಲವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ನಟಿ ಅನುಪಮಾ ಗೌಡ ಕೂಡ ತಮಗೆ ಎದುರಾದ ಇಂತಹ ಸನ್ನಿವೇಶಗಳ ಬಗ್ಗೆ ಮಾತನಾಡಿದ್ದಾರೆ. ರಾಪಿಡ್ ರಶ್ಮಿ ಪಾಡ್‌ಕಾಸ್ಟ್‌ನಲ್ಲಿ ಆಕೆ ಪ್ರತಿಕ್ರಿಯಿಸಿದ್ದಾರೆ.

"ನಟನೆ ನನ್ನ ಮೊದಲ ಆದ್ಯತೆ. ನಿರೂಪಣೆ ನಂತರ. ಆದರೆ ನಟನೆಯಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಇವತ್ತಿಗೂ ಅನಿಸುತ್ತದೆ. ಧಾರಾವಾಹಿಗಳಲ್ಲಿ ನಟಿಸುವಂತೆ ಕೇಳುತ್ತಾರೆ. ಕೆಲವರು ಇವತ್ತಿಗೂ ನನ್ನ ಪಾತ್ರಗಳನ್ನು ನೆನಪಿಟ್ಟುಕೊಂಡಿದ್ದಾರೆ. ಚಿತ್ರರಂಗಕ್ಕೆ ಬರುವ ಉದ್ದೇಶ ಇರಲಿಲ್ಲ. ಇಲ್ಲಿ ಏನೇನೋ ಕೇಳುತ್ತಾರೆ. ಅವರನ್ನು ಭೇಟಿ ಆಗಬೇಕು, ಇವರ ಜೊತೆ ಮಾತನಾಡಬೇಕು ಎಂದು ಹೇಳುತ್ತಾರೆ. ಕಾಸ್ಟಿಂಗ್ ಕೌಚ್ ಎನ್ನುವುದು ಇತ್ತೀಚೆಗೆ ಕೇಳಿಲ್ಲ. ಆದರೆ ಮೀಟು ಅಭಿಯಾನ ಬಂದಾಗ ಶಾಕ್ ಆಗಿತ್ತು"
"ನನಗೂ ಇಂತಹ ಅನುಭವ ಆಗಿದೆ. ಒಮ್ಮೆ ನಿರ್ದೇಶಕರೊಬ್ಬರು ಕಥೆ ಹೇಳಬೇಕು ಎಂದಾಗ ಸ್ವಲ್ಪ ಅಡ್ಜೆಟ್ ಮಾಡ್ಕೊಬೇಕು ಅಂದ್ರು. ಏನು ಅಡ್ಜೆಟ್ ಮಾಡ್ಕೊಬೇಕು ಎಂದಾಗ ಎಲ್ಲಾ ಗೊತ್ತಲ್ವಾ ನಿಮ್ಗೆ ಎಂದಿದ್ದರು. ಇದು 'ಅಕ್ಕ' ಧಾರಾವಾಹಿ ಮಾಡುವಾಗ ನಡೆದಿದ್ದು. ಆಗಷ್ಟೆ 'ಡಾರ್ಲಿಂಗ್' ಚಿತ್ರದಲ್ಲಿ ಕೃಷ್ಣ ಸಹೋದರಿ ಪಾತ್ರದಲ್ಲಿ ನಟಿಸಿದ್ದೆ. ಆ ಬಳಿಕ ಒಂದು ಚಿತ್ರಕ್ಕೆ ಕೇಳಿದರು. ಹೊಸಬರ ತಂಡ. ಪ್ರೊಡ್ಯೂಸರ್ ಜೊತೆ ಗೊತ್ತಲ್ವಾ? ಎಂದು ಕೇಳಿದರು. ನಾನು ಅಂತಹ ಸಿನ್ಮಾ ಬೇಡ ಎಂದೆ"
"ಆ ಘಟನೆಗೂ ಮುನ್ನ ಇಂಥದ್ದೆ ಒಂದು ಘಟನೆ ಆಗಿತ್ತು. ಸಾಮ್ ದುಬೈ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಬರಬೇಕು. ಆ ಬಗ್ಗೆ ಮಾತನಾಡಲು ಕಾಫಿಡೇ ಅಲ್ಲಿ ಭೇಟಿ ಆಗಿದ್ದರು. ಈವೆಂಟ್ ಬಳಿಕ ಓನರ್ ಜೊತೆ ನೀವು ಡಿನ್ನರ್‌ಗೆ ಬರಬೇಕು ಅಂದ್ರು. ನಾನು ಓನರ್ ಜೊತೆ ಯಾಕೆ ಡಿನ್ನರ್‌ಗೆ ಎಂದು ಕೇಳಿದೆ. ಗೊತ್ತಲ್ಲ, ಇದಕ್ಕಿಂತ ಹೆಚ್ಚು ಹಣ ಕೊಡುತ್ತಾರೆ. ಹೇ ಎಷ್ಟು ಜನ ಮಾಡ್ತಾರೆ. ನಿಮಗೆ ಗೊತ್ತಿಲ್ವಾ? ಅಂದ್ರು. ಆತ ಒಂದಷ್ಟು ಹೆಸರುಗಳನ್ನು ಹೇಳಿದ್ದ" ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

"ಆತ ಹೇಳಿದ ಹೆಸರುಗಳನ್ನು ಕೇಳಿ ಶಾಕ್ ಆಗಿತ್ತು. ಅವತ್ತು ಕಾಫಿಡೇಯಿಂದ ಎದ್ದು ಹೊರ ಬರಲು ಕಷ್ಟವಾಯಿತು. ಬಹಳ ಅತ್ತಿದ್ದೆ. ಕಲಾವಿದರನ್ನೇ ಯಾಕೆ ಹೀಗೆ ಕೇಳುತ್ತಾರೆ? ನಡೆಸಿಕೊಳ್ಳುತ್ತಾರೆ ಎಂದು ಬೇಸರವಾಗಿತ್ತು. 2 ವರ್ಷದ ಹಿಂದೆ ಯಾರೋ ಹೇರ್ ಡ್ರೆಸರ್ ಎಂದು ಹೇಳಿ ಕರೆ ಮಾಡಿದ್ದರು. ಆಕೆ ಮೈಸೂರಿಂದ ಫೋನ್ ಮಾಡಿ, ಒಬ್ಬರು ನಿಮ್ಮನ್ನು ಕೇಳುತ್ತಿದ್ದಾರೆ. ಇಷ್ಟು ಕೊಡ್ತಾರಂತೆ ಎಂದು ಆಕೆ ಮೆಸೇಜ್ ಸಹ ಮಾಡಿದ್ದಳು. ನಾನು ಬೈದಿದ್ದೆ. ಕಾಲ್ ರೆಕಾರ್ಡ್ ಮಾಡಿದ್ದೆ" ಎಂದು ವಿವರಿಸಿದ್ದಾರೆ.
ಚಿತ್ರರಂಗದಲ್ಲಿ ಅಂತಹವರು ಯಾರು ಇಲ್ಲ. ಕೆಲವರು ಧೈರ್ಯ ಇಲ್ಲದೇ ಸೋತಿರಬಹುದು. ಹಾಗಂತ ಇಲ್ಲಿ ಧೈರ್ಯ ಇಲ್ಲದವರು ಇಲ್ಲ. ಪ್ರತಿಭೆ ನೋಡಿ ಅವಕಾಶ ಕೊಡಿ. ಇಲ್ಲದಿದ್ದರೆ ಬದುಕಲು ಸಾವಿರ ದಾರಿ ಇದೆ. ಹೀಗೆ ಬದುಕಬೇಕಾ? ಬಿಟ್ಟು ಹೋಗಲು ಸಿದ್ಧರಿರಬೇಕು ಎಂದು ಅನುಪಮಾ ಹೇಳಿದ್ದಾರೆ.
ಅನುಮಪಾ ತಮ್ಮ ಸಂಭಾವನೆ ಬಗ್ಗೆಯೂ ಮಾತನಾಡಿದ್ದಾರೆ. ಹಳ್ಳಿ ದುನಿಯಾ ಕಾರ್ಯಕ್ರಮ ನಿರೂಪಣೆಗೆ 35 ಸಾವಿರ ರೂ. ಸಂಭಾವನೆ ಸಿಕ್ಕಿತ್ತು. ಅದು ಆ ಕಾಲಕ್ಕೆ ದೊಡ್ಡ ಮೊತ್ತ ಎಂದಿದ್ದಾರೆ. ಬಳಿಕ ನನ್ನ ಮೊದಲ ಧಾರಾವಾಹಿ(ಅಣ್ಣ-ತಂಗಿ)ಗೆ ದಿನಕ್ಕೆ 2,500 ರೂ. ಸಂಭಾವನೆ ಇತ್ತು. ಆ ನಂತರ 1900 ರೂ. ಸಂಭಾವನೆ ಕೆಲಸ ಮಾಡಿದೆ. ಯಾಕೋ ಗೊತ್ತಿಲ್ಲ ಬಳಿಕ ಸಂಭಾವನೆ ಕಮ್ಮಿ ಆಗುತ್ತಾ ಬಂತು ಎಂದು ವಿವರಿಸಿದ್ದಾರೆ. ಅಕ್ಕ ಧಾರಾವಾಹಿಗೆ ದಿನಕ್ಕೆ 2000 ರೂ. ಸಂಭಾವನೆ ಎಂದು ವಿವರಿಸಿದ್ದಾರೆ.


Click it and Unblock the Notifications











