ಇಷ್ಟು ದಿನ ಒಳ್ಳೆಯವರು.. ಈಗ ಕೆಟ್ಟವರು; 'ಬ್ಲಾಕ್ ರೋಸ್' ಅನುಷಾ ರಾವ್ ಏನಂತಾರೆ?
ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಕರಿಮಣಿ' ಎಂಬ ಧಾರಾವಾಹಿ ಪ್ರಸಾರವಾಗುತ್ತಿದ್ದು, ಕಿರುತೆರೆ ಪ್ರೇಕ್ಷಕರ ಅಭಿಮಾನಿಗಳ ಫೇವರಿಟ್ ಧಾರಾವಾಹಿಗಳಲ್ಲೊಂದಾಗಿದೆ. ಹೌದು ಕಳೆದ ಒಂದೆರಡು ವರ್ಷಗಳಿಂದಲೂ 'ಕರಿಮಣಿ' ಧಾರಾವಾಹಿ ಪ್ರಸಾರವಾಗುತ್ತಿದ್ದು ಬಹುದೊಡ್ಡ ಪ್ರೇಕ್ಷಕ ವೃಂದವನ್ನು ಪಡೆದಿದೆ.
ಹಲವಾರು ತಿರುವುಗಳೊಂದಿಗೆ ಈ ಧಾರಾವಾಹಿಯ ಕಥಾಹಂದರ ಮುಂದೆ ಸಾಗುತ್ತಿದ್ದು ಇದೀಗ 'ಬ್ಲಾಕ್ ರೋಸ್' ಎಂಬ ವಿಶೇಷ ಪಾತ್ರದ ಮೂಲಕ ಧಾರಾವಾಹಿ ಕಿರುತೆರೆ ವೀಕ್ಷಕರ ಮನ ಸೆಳೆದಿದೆ. ಬ್ಲಾಕ್ ರೋಸ್ ಎಂಬ ಪಾತ್ರ ಬೆಳದಿಂಗಳ ಬಾಲೆಯಂತೆ ಧಾರಾವಾಹಿಯ ಹೀರೋನನ್ನು ಬಹುವಾಗಿ ಕಾಡಿತ್ತು. ಇದೀಗ ಈ ಬ್ಲಾಕ್ ರೋಸ್ ಪಾತ್ರ ಯಾರೆಂದು ಪ್ರೇಕ್ಷಕರಿಗೆ ಗೊತ್ತಾಗಿದೆ.

ಧಾರಾವಾಹಿ ಕಥಾನಾಯಕನ ಮಲತಾಯಿ ಅರುಂಧತಿಯೇ ಬ್ಲಾಕ್ ರೋಸ್ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಪ್ರೇಕ್ಷಕರಿಗೆ ಅಭಿಮಾನಿಗಳಿಗೆ ಬಹು ದೊಡ್ಡ ಶಾಕ್ ಆಗಿದೆ. ಇಷ್ಟು ದಿನ ಬ್ಲಾಕ್ ರೋಸ್ ಯಾರು ಎಂದು ಹಲವು ರೀತಿಯ ಜಾಹೀರಾತುಗಳ ಮೂಲಕ ಪ್ರೇಕ್ಷಕರಲ್ಲಿ ಬಹಳಷ್ಟು ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿತ್ತು 'ಕರಿಮಣಿ' ಧಾರಾವಾಹಿ.
ಅಂದ ಹಾಗೆ ಬೇರೆಲ್ಲಾ ಧಾರವಾಹಿ ಕಥೆಗಳಿಗಿಂತಲೂ ವಿಭಿನ್ನವಾಗಿರುವ 'ಕರಿಮಣಿ' ಧಾರಾವಾಹಿಯಲ್ಲಿ, ಮಲತಾಯಿ ತನ್ನ ಮಲಮಗನ ಬಗ್ಗೆ ಬಹಳ ಪ್ರೀತಿ ಕನಿಕರದಿಂದ ಇರುವಂತೆ ತೋರಿಸಲಾಗಿತ್ತು. ಮಲತಾಯಿಯಾದರೂ ಇಷ್ಟು ಪ್ರೀತಿಯಿಂದ ಇದ್ದಾಳಲ್ಲ ಎಂದು ಪ್ರೇಕ್ಷಕರು ಖುಷಿ ಪಟ್ಟಿದ್ದರು. ಆದರೀಗ ಬ್ಲಾಕ್ ರೋಸ್ ಎಂಬ ವಿಲನ್ ಪಾತ್ರದ ಹಿಂದೆ ಮಲತಾಯಿ ಕೈವಾಡವಿದೆ ಎಂದು ತಿಳಿದು ಅಚ್ಚರಿಪಟ್ಟಿದ್ದಾರೆ.

ಹೀಗ್ಯಾಕೆ ಈ ಪಾತ್ರವನ್ನು ಹಾಳು ಮಾಡಿದ್ದೀರಿ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ ಕೂಡ. ಗಂಡಸಿನ ಧ್ವನಿಯಲ್ಲಿ ಮಾತನಾಡುತ್ತಾ ಧಾರಾವಾಹಿ ಕಥಾನಾಯಕನನ್ನು ಕಾಡುತ್ತಿದ್ದ ಬ್ಲಾಕ್ ರೋಸ್ ಅವನ ಪ್ರೀತಿಯ ಮಲತಾಯಿ ಎಂದು ತಿಳಿಯುತ್ತಿದ್ದಂತೆಯೇ ಧಾರಾವಾಹಿ ಕಥೆಯನ್ನೇ ಹಾಳು ಗೆಡವಿದ್ದೀರಿ ಎಂದು ಹಲವರು ಕಾಮೆಂಟ್‌ಗಳ ಮೂಲಕ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಅಂದ ಹಾಗೆ ಈ ಬ್ಲಾಕ್ ರೋಸ್ ಪಾತ್ರವನ್ನು ನಿರ್ವಹಿಸುತ್ತಿರುವ ನಟಿ ಅನುಷಾ ರಾವ್ ತಮ್ಮ ಅಭಿನಯ ಹಾಗೂ ಪಾತ್ರದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. "ಬ್ಲಾಕ್ ರೋಸ್ ಪಾತ್ರದ ಹಿಂದೆ ನನ್ನ ಪಾತ್ರವೇ ಸೇರಿಕೊಂಡಿದೆ ಎಂಬ ವಿಚಾರ ನನಗೆ ತಿಳಿದಿರಲಿಲ್ಲ. ತಿಳಿದಾಗ ಬಹಳ ಅಚ್ಚರಿಯಾಯಿತು. ಇಷ್ಟು ದಿನ ಒಳ್ಳೆಯ ಮಲತಾಯಿ ಎಂಬ ಕಾರಣಕ್ಕೆ ಪ್ರೇಕ್ಷಕರು ನನ್ನನ್ನು ಬಹುವಾಗಿ ಹೊಗಳುತ್ತಿದ್ದರು. ಆದರೀಗ ನಾನೇ ಬ್ಲಾಕ್ ರೋಸ್ ಎಂದು ತಿಳಿಯುತ್ತಿದ್ದಂತೆಯೇ ಪ್ರೇಕ್ಷಕರ ರಿಯಾಕ್ಷನ್ ಬದಲಾಗಿದೆ. ಇವಾಗ ಬಹಳಷ್ಟು ಕೆಟ್ಟ ಬೇಸರದ ಕಾಮೆಂಟ್‌ಗಳು ನನಗೆ ಸಿಗುತ್ತಿದೆ. ಇದನ್ನೆಲ್ಲ ನೋಡಿದಾಗ ಭಯವಾಗುತ್ತದೆ" ಎಂದಿದ್ದಾರೆ.
ಪ್ರೇಕ್ಷಕರು ಒಳ್ಳೆಯ ರೀತಿಯಲ್ಲಿ ಕಮೆಂಟ್ ಮಾಡಿದಾಗ ನನ್ನ ಪಾತ್ರಕ್ಕೆ ನಾನು ನ್ಯಾಯ ಒದಗಿಸುತ್ತಿದ್ದೇನೆ ಎಂಬ ಸಮಾಧಾನವಿತ್ತು. ಬ್ಲಾಕ್ ರೋಸ್ ಪಾತ್ರ ನಾನೇ ಎಂದು ತಿಳಿದಾಗ ಆಶ್ಚರ್ಯ ಜೊತೆಗೆ ಬಹಳಷ್ಟು ಭಯವಾಯಿತು. ಅದಕ್ಕೆ ಸರಿಯಾಗಿ ಇದೀಗ ಪ್ರೇಕ್ಷಕರ ರಿಯಾಕ್ಷನ್ ಕೂಡ ಬದಲಾಗುತ್ತಿದೆ. ಯಾರಿಗೂ ಈ ಪಾತ್ರ ಇಷ್ಟವಾಗುತ್ತಿಲ್ಲ. ನನಗೆ ಮೊದಲಿನಿಂದಲೂ ಕಾಮೆಂಟ್‌ಗಳನ್ನು ಓದುವ ಹುಚ್ಚಿದೆ. ಇತ್ತೀಚೆಗೆ ಬಹಳ ಕೆಟ್ಟ ಕಾಮೆಂಟ್‌ಗಳು ಸಿಕ್ಕಾಗ, ಯಾರಾದರೂ ನನ್ನನ್ನು ಹುಡುಕಿಕೊಂಡು ಬಂದು ಹೊಡೆಯುತ್ತಾರೇನೋ ಎಂಬ ಭಯವಾಗುತ್ತದೆ.
"ಆದರೂ ಪ್ರೇಕ್ಷಕರು ಈ ರೀತಿ ಪ್ರತಿಕ್ರಿಯಿಸುತ್ತಿದ್ದಾರೆ ಎಂದರೆ ನನ್ನ ಪಾತ್ರಕ್ಕೆ ನಾನು ನ್ಯಾಯ ಒದಗಿಸುತ್ತಿದ್ದೇನೆ ಎಂದೇ ಅರ್ಥಎಂದು ಸಮಾಧಾನವಾಗುತ್ತದೆ. ನಾನೇ ಧಾರಾವಾಹಿ ಕಥೆಯಲ್ಲಿ ವಿಲನ್ ಎಂದು ಗೊತ್ತಿದ್ದರೂ, ಒಳ್ಳೆಯ ರೀತಿಯಲ್ಲಿ ಇಷ್ಟು ದಿನ ಕಾಣಿಸಿಕೊಂಡು ಇದೀಗ ಕೆಟ್ಟ ವಿಲನ್ ಆಗಿ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳುತ್ತಿರುವುದು ನನಗೂ ಹೊಸತು ಎಂದಿದ್ದಾರೆ" ನಟಿ ಅನುಷಾ ರಾವ್.
ಮನೋಹರ್ ಜೋಶಿ ಎಂಬ ಛಾಯಾಗ್ರಾಹಕರನ್ನು ಮದುವೆಯಾಗಿರುವ ನಟಿ ಅನುಷಾ ರಾವ್ ಡ್ಯಾನ್ಸರ್ ಕೂಡ ಹೌದು. ಡ್ಯಾನ್ಸ್ ಅನ್ನೇ ತಮ್ಮ ಕೆರಿಯರ್ ಆಗಿ ರೂಪಿಸಿಕೊಳ್ಳಬೇಕೆಂಬ ಹಂಬಲವಿದ್ದ ಅನುಷ ರಾವ್ ಸಮಯವಿದೆ ಎಂಬ ಕಾರಣಕ್ಕೆ ಒಂದೆರಡು ಧಾರಾವಾಹಿ ಸಿನಿಮಾಗಳಲ್ಲಿ ಆಡಿಶನ್ ಕೊಟ್ಟಾಗ ಸೆಲೆಕ್ಟ್ ಆಗಿ ಈಗ ಅಭಿನಯವನ್ನೇ ತಮ್ಮ ವೃತ್ತಿಯಾಗಿಸಿಕೊಂಡಿದ್ದಾರೆ.


Click it and Unblock the Notifications











