ಕಿರುತೆರೆಯ ಈ 'ಮುದ್ದುಲಕ್ಷ್ಮಿ' ಈಗ 'ಸೂರ್ಯವಂಶ'ದ ಸುರಭಿ; ಈ ನಟಿಯ ಹಿನ್ನೆಲೆಯೇನು?
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಸೂರ್ಯವಂಶ'ವೂ ಒಂದು. ಇತ್ತೀಚೆಗಷ್ಟೇ ಶುರುವಾಗಿರುವ ಈ ಧಾರಾವಾಹಿಯು ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. 'ಸೂರ್ಯವಂಶ' ಧಾರಾವಾಹಿಯಲ್ಲಿ ನಾಯಕ ಸೂರ್ಯನಾಗಿ ಅನಿರುದ್ಧ್ ಜತ್ಕರ್ ನಟಿಸುತ್ತಿದ್ದರೆ, ನಾಯಕಿ ಸುರಭಿಯಾಗಿ ಅಶ್ವಿನಿ ಅಭಿನಯಿಸುತ್ತಿದ್ದಾರೆ.
ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ಅಶ್ವಿನಿ ಕಿರತೆರೆ ವೀಕ್ಷಕರಿಗೆ ಕೊಂಚ ಅಪರಿಚಿತ ಹೆಸರು ಎಂದೆನಿಸಬಹುದು. ಆದರೆ, ಅಪರಿಚಿತ ಮುಖವಲ್ಲ. ಯಾಕೆಂದರೆ ಕಿರುತೆರೆ ಜಗತ್ತಿನಲ್ಲಿ ಆಕೆ ಮುದ್ದುಲಕ್ಷ್ಮಿಯಾಗಿ ಫೇಮಸ್ಸು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ 'ಮುದ್ದುಲಕ್ಷ್ಮಿ' ಯೂ ಒಂದು.

'ಮುದ್ದುಲಕ್ಷ್ಮಿ' ಧಾರಾವಾಹಿಯಲ್ಲಿ ನಾಯಕಿ ಲಕ್ಷ್ಮಿ ಆಲಿಯಾಸ್ ಮುದ್ದು ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಅಶ್ವಿನಿ ವೀಕ್ಷಕರ ಪಾಲಿಗೆ ಮನೆ ಮಗಳಾಗಿದ್ದರು ಎಂದರೆ ತಪ್ಪಾಗಲಾರದು. 'ಮುದ್ದುಲಕ್ಷ್ಮಿ' ಧಾರಾವಾಹಿಯು ಸುಖಾಂತ್ಯ ಕಾಣುವ ಮೂಲಕ ಮುಕ್ತಾಯಗೊಂಡದ್ದೇ ಅದರ ಹೊಸ ಅಧ್ಯಾಯ 'ಮುದ್ದುಮಣಿಗಳು' ಶುರುವಾಯಿತು. 'ಮುದ್ದುಮಣಿಗಳು' ಧಾರಾವಾಹಿಯಲ್ಲಿ ಈಕೆ ಜಾಹ್ನವಿಯಾಗಿ ಕಾಣಿಸಿಕೊಂಡಿದ್ದರಲ್ಲದೇ ಅಲ್ಲೂ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯೂ ಆದರು.
ಇದೀಗ 'ಸೂರ್ಯವಂಶ' ಧಾರಾವಾಹಿಯ ಸುರಭಿಯಾಗಿ ನಟಿಸುತ್ತಿರುವ ಅಶ್ವಿನಿ ಅವರ ಕಿರುತೆರೆ ಪಯಣ ಶುರುವಾಗಿದ್ದು ನಿರೂಪಕಿಯಾಗಿ ಎಂಬ ವಿಚಾರ ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಹೌದು, ಮ್ಯೂಸಿಕ್ ಚಾನೆಲ್ ಒಂದರಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟ ಅಶ್ವಿನಿ ಮೊದಲ ಬಾರಿ ಬಣ್ಣ ಹಚ್ಚಿದ್ದು 'ಅನುರಾಗ ಸಂಗಮ' ಧಾರಾವಾಹಿಯಲ್ಲಿ. ಛಾಯಾ ಪಾತ್ರದ ಮೂಲಕ ಕಿರುತೆರೆಗೆ ಕಾಲಿಟ್ಟು ತಮ್ಮ ನಟನೆಯ ಮೂಲಕ ವೀಕ್ಷಕರ ಮನ ಸೆಳೆದ ಅಶ್ವಿನಿ ನಂತರ ಕಾಣಿಸಿಕೊಂಡಿದ್ದು ಖಳನಾಯಕಿಯಾಗಿ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ ಒಂದಾದ 'ಕುಲವಧು' ಧಾರಾವಾಹಿಯಲ್ಲಿ ಖಳನಾಯಕಿ ಶಶಿಕಲಾ ಆಗಿ ಈಕೆ ಮೋಡಿ ಮಾಡಿದರು. ನಂತರ ಪೌರಾಣಿಕ ಧಾರಾವಾಹಿ 'ಗಿರಿಜಾ ಕಲ್ಯಾಣ'ದ ಭಾಗವಾದ ಈಕೆ ಮುಂದೆ ಭಡ್ತಿ ಪಡೆದುದು ಮುದ್ದುವಾಗಿ. 'ಮುದ್ದುಲಕ್ಷ್ಮಿ' ಧಾರಾವಾಹಿಯಲ್ಲಿ ನಾಯಕಿ ಮುದ್ದುವಾಗಿ ಕಾಣಿಸಿಕೊಂಡ ಈಕೆ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಮುದ್ದು ಪಾತ್ರದ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.
ಅಶ್ವಿನಿ ಅವರು ಕನ್ನಡ ಕಿರುತೆರೆಯಲ್ಲಿ ಮಾತ್ರವಲ್ಲದೇ ಪರಭಾಷೆಯ ಕಿರುತೆರೆಯಲ್ಲಿಯೂ ನಟನಾ ಛಾಪನ್ನು ಪಸರಿಸಿದ್ದಾರೆ. ಹೌದು ತೆಲುಗು ಕಿರುತೆರೆಗೆ ಪಾದಾರ್ಪಣೆ ಮಾಡಿದ ಈಕೆ ಅಲ್ಲೂ ವೀಕ್ಷಕರ ಮನ ಸೆಳೆದಿದ್ದಾರೆ. ಜೆಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಮಟ್ಟಿಗಾಜಲು'ವಿನಲ್ಲಿ ಚಿಟ್ಟಿಯಾಗಿ ಈಕೆ ಅಭಿನಯಿಸಿದ್ದರು.


Click it and Unblock the Notifications











