"ಡ್ರಿಪ್ಸ್ ಹಾಕಿದ್ದಾರೆ.. ಶೂಟಿಂಗ್ ಕಷ್ಟ ಎಂದ್ರೂ ನಮಗೆ ಗೊತ್ತಿಲ್ಲ ಶೂಟಿಂಗ್‌ಗೆ ಬನ್ನಿ ಅಂದ್ರು" ನಟಿ ಭವ್ಯಾ ಗೌಡ
'ಗೀತಾ' ಧಾರಾವಾಹಿ ಖ್ಯಾತಿಯ ನಟಿ ಭವ್ಯಶ್ರೀ ಗೌಡ ಶೂಟಿಂಗ್ ಸಮಯದ ಕಷ್ಟಗಳನ್ನು ಬಿಚ್ಚಿಟ್ಟಿದ್ದಾರೆ. ಇತ್ತೀಚೆಗೆ ಸ್ಟಾರ್ ಸುವರ್ಣ ವಾಹಿನಿಯ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮಕ್ಕೆ ಭೇಟಿ ನೀಡಿದ ನಟಿ ಭವ್ಯಾ ಗೌಡ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
"ಶೂಟಿಂಗ್ ಎನ್ನುವುದು ರೀಲ್ಸ್ ಮಾಡಿದಷ್ಟು ಸುಲಭವಲ್ಲ. ಯಾವುದೋ ವಿಡಿಯೋಗೆ ಲಿಪ್ ಸಿಂಕ್ ಮಾಡುವುದೇ ಬೇರೆ, ಆ್ಯಕ್ಟಿಂಗ್‌ನಲ್ಲಿ ಪ್ರತಿ ಮಾತಿಗೂ ಭಾವನೆಗಳನ್ನು ತೋರಿಸಬೇಕು. ಆಂಗಲ್ ಸರಿ ಇದೆಯಾ ಎಂದು ನೋಡಬೇಕು, ವಾಯ್ಸ್ ಓವರ್ ಕೊಡಬೇಕು. ಹೀಗೆ ಸಾವಿರ ಜವಾಬ್ದಾರಿಗಳು ನಮ್ಮ ಮೇಲಿರುತ್ತದೆ. ಎಷ್ಟೋ ಬಾರಿ 48ಗಂಟೆ ಗಳ ಕಾಲ ಕೆಲಸ ಮಾಡಿದ್ದಿದೆ" ಎಂದು ಸುವರ್ಣ ಸೂಪರ್ ಸ್ಟಾರ್ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ ಭವ್ಯಾ ಗೌಡ.

"ನಮ್ಮ ನೆಂಟರು ಕೆಲವರು ನಿಮ್ಮ ಮಗಳು ತಿಂಗಳಿಗೆ 10 ಲಕ್ಷ ರೂಪಾಯಿ ದುಡಿಯುತ್ತಾರಂತೆ ಹೌದಾ? ಎಂದೆಲ್ಲ ಕೇಳಿದ್ದರು. ದುಡಿಮೆ ಹಿಂದಿನ ಕಷ್ಟಗಳು ಪ್ರೇಕ್ಷಕರಿಗೆ ಕಾಣುವುದಿಲ್ಲ. ಒಂದೊಮ್ಮೆ ತುಮಕೂರಿನಲ್ಲಿ ಫುಡ್ ಪಾಯಿಸನ್ ಆಗಿತ್ತು. ಡಾಕ್ಟರ್ ಬಳಿ ಹೋಗಿ ಡ್ರಿಪ್ಸ್ ಹಾಕಿಸಿಕೊಂಡು ಬಂದಿದ್ದೆ. ನಾಲ್ಕು ಗಂಟೆಗೆ ರೂಮಿನಲ್ಲಿದ್ದೆ 5:30 ಶೂಟಿಂಗ್ ಎಂದು ಬಿಟ್ಟರು. ಡ್ರಿಪ್ಸ್ ಹಾಕಿಸಿಕೊಂಡಿದ್ದೇನೆ ಶೂಟಿಂಗ್ ಕಷ್ಟ ಎಂದರೂ ಅದೆಲ್ಲ ನಮಗೆ ಗೊತ್ತಿಲ್ಲ ಬನ್ನಿ ಎಂದರು. ಆಗ ಹೋಗಲೇ ಬೇಕಾಯಿತು.
ಶೂಟಿಂಗ್ ವೇಳೆ ಫೈಟಿಂಗ್ ಸೀನ್‌ನಲ್ಲಿ ಕೈಗೆ ಹಾಕಿದ್ದ ಡ್ರಿಪ್ಸ್ ಬಿದ್ದು ತುಂಬಾ ರಕ್ತ ಬಂದಿತ್ತು. ಎಷ್ಟೋ ಬಾರಿ ಇದನ್ನೆಲ್ಲ ಯಾರು ಗಮನಿಸುವುದಿಲ್ಲ ಅಥವಾ ಇಂಥದಕ್ಕೆ ಪ್ರಾಮುಖ್ಯತೆ ಕೊಡುವುದಿಲ್ಲ ಆದರೆ ಇಂಥ ಸಣ್ಣ ಪುಟ್ಟ ನೋವುಗಳು ನಮ್ಮನ್ನು ತುಂಬಾ ಭಾದಿಸುತ್ತವೆ." ಎಂದು ತಮಗಾದ ಕಷ್ಟವನ್ನು ಹೊರ ಹಾಕಿದ್ದಾರೆ ಗೀತಾ ಖ್ಯಾತಿಯ ಭವ್ಯಾ ಗೌಡ.

"ಗೀತಾ ಸೀರಿಯಲ್ ಆರಂಭದ ದಿನಗಳಲ್ಲಿ ತುಂಬಾ ಟ್ರೋಲ್ ಆಗುತ್ತಿತ್ತು. ಸಣ್ಣ ಪುಟ್ಟ ವಿಚಾರಗಳಿಗೂ ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದರು. ಆಗ ನನಗೆ ಧಾರಾವಾಹಿ ಸಹವಾಸವೇ ಬೇಡ ಎಂದೆನಿಸಿತ್ತು. ಆಗಲ್ಲ ಸರ್ ನಾನು ಈ ಧಾರಾವಾಹಿ ಬಿಡ್ತೀನಿ ಅಂತ ನಮ್ಮ ಡೈರೆಕ್ಟರ್ ಹತ್ತಿರ ಹೇಳಿದಾಗ, ಈಗ ನೀನು ನಿಂತು ನನ್ನ ಬಳಿ ಮಾತನಾಡುವುದನ್ನು ಜನ ಟ್ರೋಲ್ ಮಾಡುತ್ತಾರೆ ಅಂತ ವಿಚಾರಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು ಎಂದಿದ್ದರು. ಆದರೂ ಗೀತಾ ಸೀರಿಯಲ್ ಆರಂಭದಲ್ಲಿ ಈ ಟ್ರೋಲ್ ಗಳನ್ನು ಸಹಿಸಲಾಗದೆ ಮೂರು ತಿಂಗಳು ಡಿಪ್ರೆಷನ್ನಲ್ಲಿದ್ದೆ. ನಮ್ಮ ಡೈರೆಕ್ಟರ್ ನ ಪಾಸಿಟಿವ್ ಮಾತುಗಳೇ ನನ್ನನ್ನು ಪ್ರೋತ್ಸಾಹಿಸಿದ್ದು" ಎಂದಿದ್ದಾರೆ ನಟಿ ಭವ್ಯಾ ಗೌಡ.
ಈ ರೀತಿಯಾಗಿ ಶೂಟಿಂಗ್ ಹಾಗೂ ನಟನೆಯ ಇನ್ನೊಂದು ಮುಖವನ್ನು ಪ್ರೇಕ್ಷಕರಿಗೆ ತೆಗೆದಿಟ್ಟಿದ್ದಾರೆ ನಟಿ ಭವ್ಯಾ ಗೌಡ. ಶೂಟಿಂಗ್ ಹಿಂದಿನ ಕಷ್ಟಗಳು, ಟ್ರೋಲಿನಿಂದ ಆಗುವ ಮಾನಸಿಕ ಹಿಂಸೆ ಹಾಗೂ ತಮ್ಮ ಅನುಭವಗಳನ್ನು ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಹಂಚಿಕೊಂಡಿದ್ದಾರೆ.


Click it and Unblock the Notifications











