ಚಾಂದಿನಿ ಅವತಾರವೆತ್ತಿ ಕಿರುತೆರೆಗೆ ಬಂದ ಬಿಗ್‌ಬಾಸ್ ಚೈತ್ರಾ ಹಳ್ಳಿಕೇರಿ: ರೀಲ್ ರಿಯಲ್-ಲೈಫ್‌ಗಿದೆ ಸಾಮ್ಯತೆ
ನಟಿ, ನಿರ್ದೇಶಕಿ ಸ್ವಪ್ನ ಕೃಷ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಅಂತರಪಟ' ಧಾರಾವಾಹಿ ಸದ್ದು ಮಾಡುತ್ತಿದೆ. ಈ ಸೀರಿಯಲ್‌ನಲ್ಲಿ ಬ್ಯುಸಿನೆಸ್ ವುಮೆನ್ ಚಾಂದಿನಿ ಪಾತ್ರದ ಮೂಲಕ ಚೈತ್ರಾ ಹಳ್ಳಿಕೇರಿ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದಾರೆ .
ಇತ್ತೀಚೆಗಷ್ಟೇ ಪ್ರಸಾರ ಆಗುತ್ತಿರುವ 'ಅಂತರಪಟ' ಧಾರಾವಾಹಿಯಲ್ಲಿ ಸ್ತ್ರೀ ಸಬಲೀಕರಣವನ್ನೇ ಮುಖ್ಯ ಅಂಶವನ್ನಾಗಿಟ್ಟುಕೊಂಡು ಕಥೆಯನ್ನು ಹೇಳುತ್ತಿರುವುದು ವೀಕ್ಷಕರ ಬಹಳಷ್ಟು ಮೆಚ್ಚುಗೆಯನ್ನು ಗಳಿಸುತ್ತಿದೆ.

ಸ್ವಾವಲಂಬಿ ಮಹಿಳೆಯಾಗಿ ಮೋಡಿ
ಚೈತ್ರಾ ಹಳ್ಳಿಕೇರಿ ಈ ಧಾರಾವಾಹಿಯಲ್ಲಿ ಚಾಂದಿನಿ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಈ ಪಾತ್ರ ಕೂಡ ಮಹಿಳಾ ಸಬಲೀಕರಣವನ್ನೇ ಸಾರುತ್ತದೆ. ಸ್ವಾವಲಂಬಿ ಮಹಿಳೆಯಾಗಿರುವ ಚಾಂದಿನಿ ತನ್ನ ಬ್ಯುಸಿನೆಸ್ ಅನ್ನು ತಾನೇ ಪರಿಶ್ರಮದಿಂದ ಮುಂದೆ ತಂದಿರುವಂತಹ ದಿಟ್ಟೆ. ಜೊತೆಗೆ "ಅಂತರಪಟ" ಧಾರಾವಾಹಿಯ ಮುಖ್ಯ ಪಾತ್ರಧಾರಿ ಆರಾಧನಾಳ ಬ್ಯುಸಿನೆಸ್ ಗುರುವಾಗಿಯೂ ಕಾಣಿಸಿಕೊಳ್ಳಲಿದ್ದಾರಂತೆ.
ಚಾಂದಿನಿಗೂ ಚೈತ್ರಗೂ ಇದೆ ಸಾಮ್ಯತೆ
ಇನ್ನು ಚೈತ್ರಾ ಅವರಿಗೆ ಚಾಂದಿನಿ ಪಾತ್ರ ತುಂಬಾನೇ ಹಿಡಿಸಿದೆ. ಇದರಲ್ಲಿ ಅಭಿನಯ ಮಾಡುವುದು ಅಂತ ಏನೂ ಇಲ್ಲ. ಚೈತ್ರಾ ಆಗಿದ್ದರೆ ಅಷ್ಟೇ ಸಾಕು ಅನ್ನೋದು ಚೈತ್ರಾ ಹಳ್ಳಿಕೇರಿ ಅಭಿಪ್ರಾಯ. ಚಾಂದಿನಿ ಪಾತ್ರದ ಅದೆಷ್ಟೋ ಭಾವಗಳು ತನ್ನ ಜೀವನದ್ದೂ ಹೌದು ಎಂದು ಚೈತ್ರಾ ಹಳ್ಳಿಕೇರಿ ಹೇಳುತ್ತಾರೆ. ಚಾಂದಿನಿ ಪಾತ್ರಕ್ಕೆ ಜೀವ ತುಂಬಲು ಚೈತ್ರಾ ಹೆಚ್ಚೇನು ಶ್ರಮ ಪಡಬೇಕಾಗಿಲ್ಲ. ಯಾಕಂದ್ರೆ, ಅವರ ರಿಯಲ್ ಲೈಫ್ ಕೂಡ ಹಾಗೇ ಇದೆ.

ನಟಿಸಲು ಕಷ್ಟವಿಲ್ಲ ಎಂದ ಚೈತ್ರಾ
ಇದರ ಜೊತೆಗೆ ಚಾಂದಿನಿ ಪಾತ್ರದ ನಡಿಗೆ, ತೊಡುಗೆ, ಹೇರ್ ಸ್ಟೈಲ್ ಯಾವುದರಲ್ಲೂ ಹೆಚ್ಚಿನ ಬದಲಾವಣೆಗಳು ಏನೂ ಇಲ್ಲ. ಒಟ್ಟಿನಲ್ಲಿ ಚೈತ್ರಾ ಹಳ್ಳಿಕೆರೆ ನಿಜ ಜೀವನದಲ್ಲಿ ಹೇಗಿರುತ್ತಾರೋ ಹಾಗೆಯೇ ಸೀರಿಯಲ್‌ನಲ್ಲೂ ಇರುವ ಕಾರಣ ಆಕೆಗೆ ನಟಿಸಲು ಕಷ್ಟವಾಗುತ್ತಿಲ್ಲ.
ತೆಲುಗು ಕಿರುತೆರೆಯಲ್ಲೂ ಬ್ಯುಸಿ
ಸದ್ಯಕ್ಕೆ 'ನಾಗಪಂಚಮಿ' ಎಂಬ ತೆಲುಗು ಧಾರಾವಾಹಿಯಲ್ಲೂ ಕಾಣಿಸಿಕೊಳ್ಳುತ್ತಿರುವ ಚೈತ್ರಾ ಹಳ್ಳಿಕೇರಿ ಇದೀಗ ಕನ್ನಡಕ್ಕೆ ಮತ್ತೆ ವಾಪಸ್ ಆಗಿರುವುದು ಪ್ರೇಕ್ಷಕರಿಗಂತೂ ಖುಷಿ ತಂದಿದೆ. ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಚೈತ್ರಾಗೆ ಕನ್ನಡದ ಧಾರಾವಾಹಿಯಲ್ಲಿ ನಟಿಸಬೇಕೆಂಬ ಆಸೆ ಬಹುದಿನಗಳಿಂದೂ ಇತ್ತು. ಗೆಳತಿ ಸ್ವಪ್ನಾ ಕೃಷ್ಣ ಈ ಪಾತ್ರದಲ್ಲಿ ನಟಿಸುವಂತೆ ಹೇಳಿದ್ದರು. ಕಥೆ, ಪಾತ್ರದ ಜೊತೆಗೆ ಟೈಮಿಂಗ್ಸ್ ಕೂಡ ಸರಿ ಹೊಂದಿದ್ದರಿಂದ ಚಾಂದಿನಿಯಾಗಿ ನಟಿಸುತ್ತಿದ್ದಾರೆ.
ಕನ್ನಡ ಧಾರಾವಾಹಿಯಲ್ಲಿ ನಟಿಸಲು ಖುಷಿ
ಚೈತ್ರಾ ಹಳ್ಳಿಕೇರಿ ಪರಭಾಷೆಯ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಆದರೂ, ಕನ್ನಡದ ಭಾಷೆಯ ಧಾರಾವಾಹಿ ಹಾಗೂ ಬ್ಯಾನರ್‌ನಲ್ಲಿ ನಟಿಸಲು ಖುಷಿ ಕೊಡುತ್ತದಂತೆ. ಈ ಪಾತ್ರ ಸಿಕ್ಕಿರುವುದಕ್ಕೆ ಚೈತ್ರಾ ಹಳ್ಳಿಕೇರಿ ತುಂಬಾನೇ ಸಂತೋಷದಲ್ಲಿದ್ದಾರೆ. ಈ ಹಿಂದೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ 'ಮರಳಿ ಮನಸ್ಸಾಗಿದೆ' ಧಾರಾವಾಹಿಯಲ್ಲಿ ನಾಯಕ ವಿಕ್ರಾಂತ್‌ನ ದೊಡ್ಡಮ್ಮನ ಪಾತ್ರಕ್ಕೆ ಜೀವ ತುಂಬಿದ್ದರು.


Click it and Unblock the Notifications











